ಕರ್ನಾಟಕ

karnataka

ಕೇಂದ್ರದಿಂದ ಮತ್ತೊಂದು ದಿಟ್ಟ ನಿರ್ಧಾರ.. ಪೀಪಲ್ಸ್​ ಆ್ಯಂಟಿ ಫ್ಯಾಸಿಸ್ಟ್​ ಫ್ರಂಟ್ ಸಂಘಟನೆ ನಿಷೇಧ

By

Published : Jan 7, 2023, 7:24 AM IST

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆ- ಪೀಪಲ್ಸ್​ ಆ್ಯಂಟಿ ಫ್ಯಾಸಿಸ್ಟ್​ ಫ್ರಂಟ್ ಸಂಘಟನೆ ನಿಷೇಧ- ಪಿಎಎಫ್‌ಎಫ್ ನಿಷೇಧಿಸಿದ ಆದೇಶಿಸಿದ ಕೇಂದ್ರ ಸರ್ಕಾರ- ಹೊರ ನಾಗರಿಕರಿಗೆ ಬೆದರಿಕೆ ಹಾಕುತ್ತಿರುವ ಸಂಘಟನೆಗೆ ಅಂಕುಶ

Govt bans PAFF
ಪೀಪಲ್ಸ್​ ಆ್ಯಂಟಿ ಫ್ಯಾಸಿಸ್ಟ್​ ಫ್ರಂಟ್ ಸಂಘಟನೆ ನಿಷೇಧ

ನವದೆಹಲಿ:ದೇಶಾದ್ಯಂತ ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿರುವ ಆರೋಪದ ಮೇಲೆ ಪಿಎಫ್​ಐ ಸಂಘಟನೆಯನ್ನು ನಿಷೇಧಿಸಿದ ಬೆನ್ನಲ್ಲೇ, ಉಗ್ರ ಸಂಘಟನೆಯಾದ ಜೈಶ್​ ಎ ಮೊಹಮದ್​ ಜೊತೆ ಗುರುತಿಸಿಕೊಂಡಿರುವ ಪೀಪಲ್ಸ್​ ಆ್ಯಂಟಿ ಫ್ಯಾಸಿಸ್ಟ್​ ಫ್ರಂಟ್​(ಪಿಎಎಫ್‌ಎಫ್) ಅನ್ನು ಕೇಂದ್ರ ಸರ್ಕಾರ ಶುಕ್ರವಾರ ನಿಷೇಧಿಸಿ ಮಹತ್ವದ ಆದೇಶ ಹೊರಿಡಿಸಿದೆ. ಜಮ್ಮು ಕಾಶ್ಮೀರದಲ್ಲಿ ಹೊರಗಿನ ರಾಜ್ಯಗಳ ಜನರು, ಅಧಿಕಾರಿಗಳು, ಕಾಶ್ಮೀರಿ ಪಂಡಿತರು, ಭದ್ರತಾ ಪಡೆಗಳಿಗೆ ಬೆದರಿಕೆ ಹಾಕುತ್ತಿರುವ ಪಿಎಎಫ್‌ಎಫ್ ಸಂಘಟನೆಯನ್ನು ಮಟ್ಟಹಾಕಲು ಸರ್ಕಾರ ಈ ದಿಟ್ಟ ನಿರ್ಧಾರ ಕೈಗೊಂಡಿದೆ. ಅಲ್ಲದೇ ಲಷ್ಕರ್ ಎ ತೊಯ್ಬಾದ ಸದಸ್ಯನಾಗಿರುವ ಅರ್ಬಾಜ್ ಅಹ್ಮದ್ ಮಿರ್‌ನನ್ನು ಉಗ್ರ ಎಂದು ಗುರುತಿಸಲಾಗಿದೆ. ಈತ ಸದ್ಯ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ.

ಪಿಎಎಫ್‌ಎಫ್ ಮೇಲಿರುವ ಆರೋಪಗಳೇನು?:ರಾಜಕೀಯ, ಸಾಮಾಜಿಕ ಸಂಘಟನೆಯಾಗಿ ಗುರುತಿಸಿಕೊಂಡಿದ್ದ ಪಿಎಎಫ್‌ಎಫ್ ಉಗ್ರ ಸಂಘಟನೆಯಾದ ಜೈಶ್​ ಎ ಮೊಹಮದ್​ ಉಗ್ರ ಸಂಘಟನೆಯ ಜೊತೆ ತಳುಕು ಹಾಕಿಕೊಂಡಿದ್ದು, ಜಮ್ಮು ಕಾಶ್ಮೀರದಲ್ಲಿ ರಕ್ತಕ್ರಾಂತಿ ನಡೆಸುತ್ತಿದೆ ಎಂಬ ಗಂಭೀರ ಆರೋಪವಿದೆ. ಇದು ಜಮ್ಮು ಮತ್ತು ಕಾಶ್ಮೀರದಲ್ಲಿರುವ ಇತರ ರಾಜ್ಯಗಳ ಭದ್ರತಾ ಪಡೆಗಳು, ರಾಜಕೀಯ ನಾಯಕರು ಮತ್ತು ನಾಗರಿಕರಿಗೆ ಕಣಿವೆ ತೊರೆಯಲು ಸತತವಾಗಿ ಬೆದರಿಕೆ ಹಾಕುತ್ತಿದೆ.

ಇತರೆ ಸಂಘಟನೆಗಳೊಂದಿಗೆ ಸೇರಿಕೊಂಡು ಪಿಎಎಫ್‌ಎಫ್ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಹಿಂಸಾತ್ಮಕ ಭಯೋತ್ಪಾದಕ ಕೃತ್ಯಗಳನ್ನು ರೂಪಿಸಲು ಸಕ್ರಿಯವಾಗಿ ಪಿತೂರಿ ನಡೆಸುತ್ತಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಉಗ್ರ ಚಟುವಟಿಕೆಗಳಿಗಾಗಿ ಅಮಾಯಕ ಯುವಕರ ನೇಮಕಾತಿ ಮತ್ತು ಬಂದೂಕು, ಮದ್ದುಗುಂಡು ಮತ್ತು ಸ್ಫೋಟಕಗಳ ಸಂಗ್ರಹಣೆ ಮತ್ತು ನಿರ್ವಹಣೆ ಮಾಡುತ್ತಿದೆ. ಇವುಗಳ ಬಳಕೆಗಾಗಿ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದೆ. ಇತರೆ ರಾಜ್ಯಗಳಲ್ಲಿ ಭಯೋತ್ಪಾದಕ ಹಿಂಸಾಚಾರ ನಡೆಸಲು ಪಿರೂರಿ ನಡೆಸುತ್ತಿದೆ. ಹೀಗಾಗಿ 1967 ರ ಕಾನೂನುಬಾಹಿರ ಚಟುವಟಿಕೆ ಕಾಯ್ದೆಯಡಿ ನಿಷೇಧಿಸಿ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.

ಕಣಿವೆಯ ಅರ್ಬಾಜ್​ ಉಗ್ರನೆಂದು ಘೋಷಣೆ:ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ಜಮ್ಮು ಕಾಶ್ಮೀರದ ಅರ್ಬಾಜ್​ ಅಹ್ಮದ್​ ಮಿರ್​ನನ್ನು ಉಗ್ರ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಈತ ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಲಷ್ಕರ್ ಎ ತೊಯ್ಬಾದ ಸಕ್ರಿಯ ಸದಸ್ಯನಾಗಿದ್ದಾನೆ. ಹಲವಾರು ಹತ್ಯೆಗಳಲ್ಲಿ ಈತ ಭಾಗಿಯಾಗಿದ್ದಾನೆ. ಕೆಲವು ತಿಂಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ಮಹಿಳಾ ಶಿಕ್ಷಕಿ ರೈನ್ ಬಾಲಾ ಹತ್ಯೆಯ ಪ್ರಮುಖ ಸಂಚುಗಾರನಾಗಿದ್ದಾನೆ. ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆಯನ್ನು ಸೃಷ್ಟಿ ಮಾಡುವಲ್ಲಿ ಮಿರ್ ತೊಡಗಿಸಿಕೊಂಡಿದ್ದಾನೆ. ಗಡಿಯಾಚೆಯಿಂದ ಅಕ್ರಮ ಶಸ್ತ್ರಾಸ್ತ್ರ ಅಥವಾ ಮದ್ದುಗುಂಡು, ಸ್ಫೋಟಕಗಳನ್ನು ಸಾಗಿಸುವ ಮೂಲಕ ಭಯೋತ್ಪಾದಕರಿಗೆ ನೆರವಾಗಿದ್ದಾನೆ ಎಂದು ಸಚಿವಾಲಯ ತಿಳಿಸಿದೆ.

ಪಿಎಫ್​ಐ ಬ್ಯಾನ್​ ಮಾಡಿದ್ದ ಕೇಂದ್ರ ಸರ್ಕಾರ:ಕಳೆದ ವರ್ಷ ಕೇಂದ್ರ ಸರ್ಕಾರವು PFI (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಮತ್ತು ಅದರ ಸಹವರ್ತಿಗಳು ಅಥವಾ ಅಂಗಸಂಸ್ಥೆಗಳಿಗೆ ಅಂಕುಶ ಹಾಕಿ, ಈ ಸಂಘಟನೆಗಳು ಕಾನೂನುಬಾಹಿರ. ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಂದಿನ 5 ವರ್ಷಗಳವರೆಗೆ ನಿಷೇಧವಿರಲಿದೆ ಎಂದು ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿತ್ತು. ಉಗ್ರ ಚಟುವಟಿಕೆ ನಡೆಸುತ್ತಿರುವ ಗಂಭೀರ ಆರೋಪದ ಮೇಲೆ ಪಾಪ್ಯುಲರ್​ ಫ್ರಂಟ್​ ಆಫ್​ ಇಂಡಿಯಾ(ಪಿಎಫ್​ಐ) ಸಂಘಟನೆಯ ಮೇಲೆ ಕೇಂದ್ರ ಸರ್ಕಾರ ಅಂಕುಶ ಹಾಕಿದೆ. ಐದು ವರ್ಷಗಳ ಕಾಲ ಪಿಎಫ್​ಐ ಬ್ಯಾನ್​ ಮಾಡಿ ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿದೆ. ಅಲ್ಲದೇ, ಅದರ ಅಂಗಸಂಸ್ಥೆಗಳನ್ನು ಕಾನೂನುಬಾಹಿರ ಸಂಘಟನೆ ಎಂದು ನಿಷೇಧ ಹೇರಿದೆ.

ಸರ್ಕಾರದ ಅಧಿಸೂಚನೆಯಲ್ಲೇನಿತ್ತು?:PFI ಮತ್ತು ಅದರ ಅಂಗಸಂಸ್ಥೆಗಳು ಕಾನೂನುಬಾಹಿರ ಕೆಲಸಗಳಲ್ಲಿ ತೊಡಗಿಸಿಕೊಂಡಿವೆ. ದೇಶದ ಸಮಗ್ರತೆ, ಸಾರ್ವಭೌಮತೆ ಮತ್ತು ಭದ್ರತೆಗೆ ಪೂರ್ವಾಗ್ರಹ ಚಟುವಟಿಕೆಗಳು ಮತ್ತು ಸಾರ್ವಜನಿಕ ಶಾಂತಿ ಮತ್ತು ದೇಶದ ಕೋಮು ಸೌಹಾರ್ದತೆಗೆ ಭಂಗ ತರುವ ಮತ್ತು ದೇಶದಲ್ಲಿ ಉಗ್ರತ್ವವನ್ನು ಬೆಂಬಲಿಸುವ ಕೆಲಸವನ್ನು ಮಾಡುತ್ತಿವೆ. ಸಮಾಜದ ಒಂದು ವಿಭಾಗವು ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ದುರ್ಬಲಗೊಳಿಸಲು ಕೆಲಸ ಮಾಡುತ್ತಿದೆ ಮತ್ತು ದೇಶದ ಸಾಂವಿಧಾನಿಕ ಅಧಿಕಾರ ಹಾಗೂ ಸಾಂವಿಧಾನಿಕ ಸಂಸ್ಥೆಗಳಿಗೆ ಸಂಪೂರ್ಣ ಅಗೌರವವನ್ನು ತೋರಿಸುತ್ತದೆ ಎಂದು ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಿದೆ.

ಓದಿ:Big News: ಪಿಎಫ್​ಐಗೆ ಕೇಂದ್ರದ ಅಂಕುಶ.. ಸಂಘಟನೆ ನಿಷೇಧಿಸಿ ಮಹತ್ವದ ಆದೇಶ

ABOUT THE AUTHOR

...view details