ಕರ್ನಾಟಕ

karnataka

ತೆಲಂಗಾಣದಲ್ಲಿ ಸಿಎಂ ಕೆಸಿಆರ್, ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿಗೆ ಸೋಲುಣಿಸಿದ ಬಿಜೆಪಿ ನಾಯಕ ಇವರೇ!

By PTI

Published : Dec 4, 2023, 11:31 AM IST

Telangana assembly elections results: ತೆಲಂಗಾಣದ ಕಾಮರೆಡ್ಡಿ ಕ್ಷೇತ್ರದಲ್ಲಿ ಸಿಎಂ ಕೆಸಿಆರ್ ಹಾಗು ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಅವರಿಗೆ ಸೋಲುಣಿಸಿದವರು ಬಿಜೆಪಿಯ ವೆಂಕಟ ರಮಣ ರೆಡ್ಡಿ.

Venkata Ramana Reddy
ವೆಂಕಟ ರಮಣ ರೆಡ್ಡಿ

ಹೈದರಾಬಾದ್:ಕಾಮರೆಡ್ಡಿ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮತ್ತು ಬಿಆರ್‌ಎಸ್ ಮುಖ್ಯಸ್ಥ ಕೆ.ಚಂದ್ರಶೇಖರ್ ರಾವ್ ಮತ್ತು ತೆಲಂಗಾಣ ಪಿಸಿಸಿ (ಪ್ರದೇಶ ಕಾಂಗ್ರೆಸ್ ಸಮಿತಿ) ಮುಖ್ಯಸ್ಥ ರೇವಂತ್ ರೆಡ್ಡಿ ಅವರನ್ನು ಸೋಲಿಸುವ ಮೂಲಕ ಬಿಜೆಪಿಯ ಕೆ.ವೆಂಕಟ ರಮಣ ರೆಡ್ಡಿ ಪ್ರಬಲ ನಾಯಕನಾಗಿ ಹೊರಹೊಮ್ಮಿದ್ದಾರೆ.

ಕೆವಿಆರ್ ಎಂದೇ ಜನಪ್ರಿಯರಾಗಿರುವ ಕಟಿಪಲ್ಲಿ ವೆಂಕಟ ರಮಣ ರೆಡ್ಡಿ ಅವರು ತೆಲಂಗಾಣದ ಪ್ರತಿಷ್ಠಿತ ಕಾಮರೆಡ್ಡಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಇದು ಮುಖ್ಯಮಂತ್ರಿ ಹಾಗೂ ಬಿಆರ್‌ಎಸ್​ ವರಿಷ್ಠ ಕೆ. ಚಂದ್ರಶೇಖರ ರಾವ್ (ಕೆಸಿಆರ್) ಹಾಗೂ ರಾಜ್ಯ ಕಾಂಗ್ರೆಸ್ ವರಿಷ್ಠ ಎ.ರೇವಂತ್​ ರೆಡ್ಡಿ ಸ್ಪರ್ಧಿಸಿದ್ದ ವಿಧಾನಸಭಾ ಕ್ಷೇತ್ರವಾಗಿದೆ. ವೆಂಕಟ ರಮಣ ರೆಡ್ಡಿ ಅವರು ಪ್ರತಿಸ್ಪರ್ಧಿ ಕೆಸಿಆರ್ ಅವರನ್ನು 6,741 ಮತಗಳ ಅಂತರದಿಂದ ಸೋಲಿಸಿದ್ದಾರೆ. ಇವರಿಗೆ ಒಟ್ಟು 66,652 ಮತ ಚಲಾವಣೆಯಾಗಿತ್ತು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ವೆಂಕಟ ರಮಣ ರೆಡ್ಡಿ, "ಈ ಭಾಗದಲ್ಲಿ ದೊಡ್ಡ ನಾಯಕರು ಸ್ಪರ್ಧಿಸಿದ್ದರು. ಆ ಇಬ್ಬರ ವಿರುದ್ಧ ಗೆದ್ದಿರುವುದು ನನ್ನ ಅದೃಷ್ಟ ಎಂದೇ ಭಾವಿಸುತ್ತೇನೆ. ಹಣ, ಮದ್ಯ ಇಲ್ಲದಿದ್ದರೂ ಜನ ನನಗೆ ಮತ ಹಾಕಿದ್ದಾರೆ. ಜನರು ಭ್ರಷ್ಟರಲ್ಲ, ನಾಯಕರು ಎಂದು ನಾನು ಯಾವಾಗಲೂ ನಂಬುತ್ತೇನೆ. ಕೆಸಿಆರ್ ಮತ್ತು ರೇವಂತ್ ರೆಡ್ಡಿ ಇಬ್ಬರನ್ನೂ ಎದುರಾಳಿಗಳೆಂದು ಪರಿಗಣಿಸಿದ್ದೇನೆ" ಎಂದು ಹೇಳಿದ್ದಾರೆ.

ಮಾಜಿ ಸಚಿವ ಸಿ.ಎನ್.ಅಶ್ವಥ್‌ ನಾರಾಯಣ್‌ ಟ್ವೀಟ್:ತೆಲಂಗಾಣದಲ್ಲಿ ಬಿಜೆಪಿ ಅಭ್ಯರ್ಥಿ ಕಾಟಿಪಲ್ಲಿ ವೆಂಕಟ ರಮಣ ರೆಡ್ಡಿ ಅವರು ಸಿಎಂ ಕೆ.ಚಂದ್ರಶೇಖರ ರಾವ್ ಮತ್ತು ರೇವಂತ್ ರೆಡ್ಡಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅವರಿಗೆ ಅಭಿನಂದನೆ ತಿಳಿಸುತ್ತೇನೆ. ನಿಮ್ಮ ಈ ಗೆಲುವು ತೆಲಂಗಾಣದಲ್ಲಿ ಬಿಜೆಪಿಯ ಹೊಸ ಯುಗಕ್ಕೆ ನಾಂದಿ ಹಾಡಿದೆ. ಇದು ಜನರ ಅಧಿಕಾರದ ವಿಜಯವನ್ನು ಸಂಕೇತಿಸುತ್ತದೆ ಎಂದು ಕರ್ನಾಟಕದಮಾಜಿ ಸಚಿವ ಸಿ.ಎನ್.ಅಶ್ವಥ್‌ ನಾರಾಯಣ್‌ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ರಾಜ್ಯದ 119 ವಿಧಾನಸಭಾ ಸ್ಥಾನಗಳಲ್ಲಿ ಕಾಂಗ್ರೆಸ್​ 64 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಬಿಆರ್​ಎಸ್​ 39, ಬಿಜೆಪಿ 8, ಎಂಐಎಂ 7, ಇತರೆ ಓರ್ವ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಭಾರತ ರಾಷ್ಟ್ರ ಸಮಿತಿಯ (ಬಿಆರ್​ಎಸ್​) ಸುಮಾರು 10 ವರ್ಷದ ಆಡಳಿತ ಕೊನೆಗೊಂಡಿತು.

ಇದನ್ನೂ ಓದಿ:ತೆಲಂಗಾಣ ಅಚ್ಚರಿ ಫಲಿತಾಂಶ: ಹಾಲಿ ಸಿಎಂ ಕೆಸಿಆರ್​, ಸಿಎಂ ಆಕಾಂಕ್ಷಿ ರೇವಂತ್ ವಿರುದ್ಧ ಬಿಜೆಪಿಗೆ ಗೆಲುವು!

ABOUT THE AUTHOR

...view details