ಕರ್ನಾಟಕ

karnataka

ಬೆಂಗಾವಲು ಕಾರು ಡಿಕ್ಕಿ ಹೊಡೆದು ವಿದ್ಯಾರ್ಥಿ ಸಾವು: ಬಿಜೆಪಿ ಸಂಸದನ ವಿರುದ್ಧ ಕೇಸ್​ ದಾಖಲು

By

Published : Nov 27, 2022, 9:45 PM IST

ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಬಿಜೆಪಿ ಸಂಸದ ಹರೀಶ್ ದ್ವಿವೇದಿ ಅವರ ಬೆಂಗಾವಲು ಕಾರು ಡಿಕ್ಕಿ ಹೊಡೆದು ವಿದ್ಯಾರ್ಥಿಯೊಬ್ಬ ಸಾವಿಗೀಡಾಗಿರುವ ಘಟನೆ ಜರುಗಿದೆ.

bjp-mps-convoy-runs-over-boy-in-ups-basti-case-registered-against-dwivedi
ಬೆಂಗಾವಲು ಕಾರು ಡಿಕ್ಕಿ ಹೊಡೆದು ವಿದ್ಯಾರ್ಥಿ ಸಾವು: ಬಿಜೆಪಿ ಸಂಸದನ ವಿರುದ್ಧ ಕೇಸ್​ ದಾಖಲು

ಬಸ್ತಿ (ಉತ್ತರ ಪ್ರದೇಶ): ಬಿಜೆಪಿ ಸಂಸದ ಹರೀಶ್ ದ್ವಿವೇದಿ ಅವರ ಬೆಂಗಾವಲು ಕಾರು ಡಿಕ್ಕಿ ಹೊಡೆದ ಪರಿಣಾಮ ಒಂಬತ್ತು ವರ್ಷದ ಬಾಲಕನೋರ್ವ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ. ಮೃತ ಬಾಲಕನ ತಂದೆ ನೀಡಿದ ದೂರಿನ ಆಧಾರದ ಮೇಲೆ ಬಿಜೆಪಿ ಸಂಸದ ಹರೀಶ್ ದ್ವಿವೇದಿ ಸೇರಿ ಇತರರ ವಿರುದ್ಧ ಕೇಸ್​ ದಾಖಲಾಗಿದೆ.

ಇಲ್ಲಿನ ಪಟೇಲ್ ಚೌಕ್ ಬಳಿಯ ಬಸಿಯಾ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಈ ಘಟನೆ ಜರುಗಿದೆ. 2ನೇ ತರಗತಿ ವಿದ್ಯಾರ್ಥಿ ಅಭಿಷೇಕ್ ಶಾಲೆಯಿಂದ ಮನೆಗೆ ಬರಲು ರಸ್ತೆ ದಾಟುತ್ತಿದ್ದಾಗ ಸಂಸದರ ಬೆಂಗಾವಲಿನ ಫಾರ್ಚುನರ್​ ಕಾರು ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಆಸ್ಪತ್ರೆಯವರು ಹೆಚ್ಚಿನ ಚಿಕಿತ್ಸೆಗಾಗಿ ಲಖನೌದ ಮತ್ತೊಂದು ಆಸ್ಪತ್ರೆಗೆ ತೆಗೆದುಕೊಂಡು ಹೋಗುವಂತೆ ಹೇಳಿದ್ದಾರೆ. ಆಗ ಆಸ್ಪತ್ರೆಗೆ ರವಾನಿಸುತ್ತಿದ್ದಾಗ ಮಾರ್ಗ ಮಧ್ಯೆಯಲ್ಲಿ ವಿದ್ಯಾರ್ಥಿ ಕೊನೆಯುಸಿರೆಳೆದಿದ್ದಾನೆ.

ಈ ಘಟನೆ ಸಂಬಂಧ ಮೃತ ಬಾಲಕನ ತಂದೆ ಶತ್ರುಘ್ನ ರಾಜ್​ಭರ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೇ, ಬಾಲಕ ಸಾವಿಗೆ ಕಾರಣವಾದ ಕಾರು ಸಂಸದ ಹರೀಶ್ ದ್ವಿವೇದಿ ಅವರದ್ದೇ ಎಂದು ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಇದರ ನಡುವೆ ಘಟನಾ ಸ್ಥಳವನ್ನು ಹರೀಶ್ ದ್ವಿವೇದಿ ಪರಿಶೀಲನೆ ಮಾಡುತ್ತಿರುವ ಸಿಸಿಟಿವಿ ದೃಶ್ಯಗಳು ಪತ್ತೆಯಾಗಿವೆ.

ಸದ್ಯ ಬಾಲಕನ ತಂದೆಯ ದೂರಿನ ಮೇರೆಗೆ ಸಂಸದ ಹರೀಶ್ ದ್ವಿವೇದಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಡಿಎಸ್ಪಿ ಅಲೋಕ್ ಪ್ರಸಾದ್ ತಿಳಿಸಿದ್ದಾರೆ.

ಇದನ್ನೂ ಓದಿ:ಟೈರ್ ಸ್ಫೋಟಗೊಂಡು ಗುದ್ದಿದ ಬಿಎಂಡಬ್ಲ್ಯೂ ಕಾರು: ಸ್ಪೋರ್ಟ್ಸ್ ಸೈಕಲ್​ ಸವಾರ ದುರ್ಮರಣ

ABOUT THE AUTHOR

...view details