ಕರ್ನಾಟಕ

karnataka

ರಾಷ್ಟ್ರಪತಿ ಚುನಾವಣೆ: ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು ಎನ್​ಡಿಎ ಅಭ್ಯರ್ಥಿ

By

Published : Jun 21, 2022, 9:39 PM IST

Updated : Jun 25, 2022, 12:43 PM IST

ರಾಷ್ಟ್ರಪತಿ ಚುನಾವಣೆ: ಎನ್​ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಆಯ್ಕೆ
ರಾಷ್ಟ್ರಪತಿ ಚುನಾವಣೆ: ಎನ್​ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಆಯ್ಕೆ ()

ರಾಷ್ಟ್ರಪತಿ ಚುನಾವಣೆ ಸಂಬಂಧ ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ಎನ್​ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಲಾಗಿದೆ.

ನವದೆಹಲಿ:ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್​ಡಿಎ ಅಚ್ಚರಿಯ ಅಭ್ಯರ್ಥಿಯನ್ನು ಘೋಷಿಸಿದೆ. ಜಾರ್ಖಂಡ್​ ಮಾಜಿ ರಾಜ್ಯಪಾಲೆ, ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ಅವರನ್ನು ಅಭ್ಯರ್ಥಿಯನ್ನಾಗಿ ಪ್ರಕಟಿಸಿದೆ. ಈ ಮೂಲಕ ಪ್ರತಿಪಕ್ಷಗಳಿಗೆ ಚೆಕ್​ಮೇಟ್​ ನೀಡಲಾಗಿದೆ. ಮುರ್ಮು ಅವರು ಇದೇ 25 ರಂದು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.

ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಕುರಿತಾಗಿ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸಂಜೆ ನಡೆದ ಸಂಸದೀಯ ಮಂಡಳಿಯ ಸಭೆಯಲ್ಲಿ ಒಮ್ಮತದಿಂದ ದ್ರೌಪದಿ ಮುರ್ಮು ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಸಂಸದೀಯ ಮಂಡಳಿಯ ಇತರ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ ಅವರ ಹೆಸರನ್ನು ಸೂಚಿಸಲಾಗಿದೆ.

ಬಿಜೆಪಿಯಿಂದ ಮತ್ತೊಂದು ಅಚ್ಚರಿ:ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸಲಿದೆ ಎಂದೇ ಭಾವಿಸಲಾಗಿತ್ತು. ಇಂದು ಬೆಳಿಗ್ಗೆ ಅಮಿತ್ ಶಾ ಮತ್ತು ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿದ್ದರು. ಇದು ಊಹಾಪೋಹಗಳಿಗೆ ರೆಕ್ಕೆಪುಕ್ಕ ನೀಡಿತ್ತು.

ಆದರೆ, ಮಂಗಳವಾರ ಸಂಜೆ ನಡೆದ ಸಂಸದೀಯ ಮಂಡಳಿ ಸಭೆಯಲ್ಲಿ ದ್ರೌಪದಿ ಮುರ್ಮು ಅವರ ಹೆಸರನ್ನು ಅಂತಿಮಗೊಳಿಸಿ ಅಚ್ಚರಿಗೆ ದೂಡಿದೆ. ಈ ಹಿಂದಿನ ಚುನಾವಣೆಯಲ್ಲೂ ಕೂಡ ದ್ರೌಪದಿ ಮುರ್ಮು ಅವರ ಹೆಸರು ಮುನ್ನೆಲೆಗೆ ಬಂದಿತ್ತು.

ರಾಷ್ಟ್ರಪತಿ ಚುನಾವಣೆ: ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು ಎನ್​ಡಿಎ ಅಭ್ಯರ್ಥಿ

ಪ್ರತಿಪಕ್ಷಗಳಿಗೆ ಚೆಕ್​ಮೇಟ್​:ಕಳೆದ ಚುನಾವಣೆಯಲ್ಲಿ ದಲಿತ ಸಮುದಾಯದ ರಾಮನಾಥ್​​ ಕೋವಿಂದ್​ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸಿ ಪ್ರತಿಪಕ್ಷಗಳಿಗೆ ಶಾಕ್​ ನೀಡಿತ್ತು. ಈ ಬಾರಿ ಆದಿವಾಸಿ ಜನಾಂಗದ ಮಹಿಳೆಗೆ ಮಣೆ ಹಾಕುವ ಮೂಲಕ ಮತ್ತೊಮ್ಮೆ ವಿಪಕ್ಷಗಳಿಗೆ ಚೆಕ್​ಮೇಟ್​ ನೀಡಿದೆ.

ದ್ರೌಪದಿ ಮುರ್ಮು ಯಾರು?:ಎನ್​ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಅವರು ಒಡಿಶಾದ ಸರಳ ಸಂತಾಲ್ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಒಡಿಶಾದ ರೈರಂಗಪುರದಲ್ಲಿ ಜಿಲ್ಲಾ ಮಂಡಳಿಯ ಕೌನ್ಸಿಲರ್ ಆಗಿ 1997ರಲ್ಲಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ ಮುರ್ಮು ಅವರು, ಎರಡು ಬಾರಿ ಬಿಜೆಪಿ ಶಾಸಕರಾಗಿ, ಒಂದು ಬಾರಿ ರಾಜ್ಯ ಸಚಿವರಾಗಿ ಕೆಲಸ ಮಾಡಿದ್ದಾರೆ.

ಜಾರ್ಖಂಡ್‌ನ ರಾಜ್ಯಪಾಲರಾಗಿಯೂ 2015 ರಿಂದ 2020 ರವರೆಗೆ ಕಾರ್ಯನಿರ್ವಹಿಸಿದ್ದಾರೆ. ಅವರು ತಮ್ಮ ಅಧಿಕಾರಾವಧಿಯಲ್ಲಿ ಎಂದಿಗೂ ವಿವಾದಗಳಿಗೆ ಸಿಲುಕಿದವರಲ್ಲ. ಬುಡಕಟ್ಟು ವ್ಯವಹಾರಗಳು, ಶಿಕ್ಷಣ, ಕಾನೂನು ಮತ್ತು ಸುವ್ಯವಸ್ಥೆ, ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಅವರು ಹೆಚ್ಚಿನ ಆಸ್ಥೆ ವಹಿಸಿದವರು. ಒಡಿಶಾ ವಿಧಾನಸಭೆಯಿಂದ ದ್ರೌಪದಿ ಮುರ್ಮು ಅವರಿಗೆ ಅತ್ಯುತ್ತಮ ಶಾಸಕಿ ಪ್ರಶಸ್ತಿಯನ್ನೂ ನೀಡಲಾಗಿದೆ.

ರಾಷ್ಟ್ರಪತಿ ಚುನಾವಣೆ: ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು ಎನ್​ಡಿಎ ಅಭ್ಯರ್ಥಿ

ಬಿಜೆಪಿ ನೇತೃತ್ವದ ಎನ್‌ಡಿಎ ರಾಷ್ಟ್ರಪತಿ ಚುನಾವಣೆಯಲ್ಲಿ ಸಂಖ್ಯಾಬಲದಲ್ಲಿ ಅಲ್ಪ ಹಿನ್ನಡೆಯಲ್ಲಿದ್ದು, ಒಡಿಶಾದ ಬಿಜೆಡಿ ಮತ್ತು ಆಂಧ್ರಪ್ರದೇಶದ ವೈಎಸ್‌ಆರ್ ಕಾಂಗ್ರೆಸ್‌ ಪಕ್ಷಗಳ ಬೆಂಬಲ ಪಡೆದರೆ ಗೆಲುವು ಖಚಿತವಾಗಲಿದೆ.

ಚುನಾವಣೆ ಮಾಹಿತಿ:ಪ್ರಸ್ತುತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರವಧಿ ಜುಲೈ 24 ರಂದು ಕೊನೆಗೊಳ್ಳಲಿದೆ. ಜೂನ್​ 15 ರಂದು ಅಧಿಸೂಚನೆ, ನಾಮಪತ್ರ ಸಲ್ಲಿಕೆಗೆ ಜೂನ್​ 29 ಕೊನೆ ದಿನ. ಜೂನ್​ 30 ನಾಮಪತ್ರ ಪರಿಶೀಲನೆ, ಜುಲೈ 18 ರಂದು ಮತದಾನ, ಜುಲೈ 21 ರಂದು ಮತಎಣಿಕೆ ನಡೆಯಲಿದೆ.

ಇದನ್ನೂ ಓದಿ:ಅಗ್ನಿವೀರರಿಗೆ ಸರ್ಕಾರಿ ಉದ್ಯೋಗ 'ಖಾತ್ರಿ': ಹರಿಯಾಣ ಸಿಎಂ ಬಂಪರ್ ಆಫರ್​

Last Updated :Jun 25, 2022, 12:43 PM IST

ABOUT THE AUTHOR

...view details