ಕರ್ನಾಟಕ

karnataka

Bihar firing: ಕೋರ್ಟ್ ಆವರಣಕ್ಕೆ ನುಗ್ಗಿ ಕೈದಿಗಳ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು

By ETV Bharat Karnataka Team

Published : Aug 26, 2023, 5:43 PM IST

Firing in Samastipur court premises: ಹಾಡಹಗಲೆ ಕೋರ್ಟ್ ಆವರಣಕ್ಕೆ ನುಗ್ಗಿದ ದುಷ್ಕರ್ಮಿಗಳು ಕೈದಿಗಳಿಬ್ಬರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.

Bihar: Firing in Samastipur court premises, two prisoners injured
Bihar: Firing in Samastipur court premises, two prisoners injured

ಸಮಸ್ತಿಪುರ (ಬಿಹಾರ):ಹಾಡಹಗಲೇ ಬಿಹಾರದ ಸಮಸ್ತಿಪುರ ನ್ಯಾಯಾಲಯದ ಆವರಣಕ್ಕೆ ನುಗ್ಗಿದ ಶಸ್ತ್ರಸಜ್ಜಿತ ದುಷ್ಕರ್ಮಿಗಳು, ಇಬ್ಬರು ಕೈದಿಗಳ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡು ಹಾರಿಸಿದ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ದೂಧಪುರ ನಿವಾಸಿಗಳಾದ ಪ್ರಭಾತ್ ಚೌಧರಿ ನೀಮ್ ಚಕ್ರ ಮತ್ತು ಪ್ರಭಾತ್ ಕುಮಾರ್ ಎಂಬುವರ ಮೇಲೆ ದಾಳಿ ನಡೆದಿದೆ. ದುಷ್ಕರ್ಮಿಗಳ ಗುಂಡಿನಿಂದ ಗಂಭೀರವಾಗಿ ಗಾಯಗೊಂಡಿರುವ ಕೈದಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮದ್ಯ ಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ಕೈದಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು. ಪೊಲೀಸ್ ಸಿಬ್ಬಂದಿ ಅವರನ್ನು ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದಂತೆಯೇ ಶಸ್ತ್ರಸಜ್ಜಿತ ದುಷ್ಕರ್ಮಿಗಳು ನ್ಯಾಯಾಲಯದ ಆವರಣಕ್ಕೆ ನುಗ್ಗಿದ್ದಲ್ಲದೇ ಇಬ್ಬರ ಮೇಲೆ ಗುಂಡು ಹಾರಿಸಿದ್ದಾರೆ. ನ್ಯಾಯಾಲಯದಲ್ಲಿ ಇದ್ದಕ್ಕಿದ್ದಂತೆ ಗುಂಡಿನ ಸದ್ದು ಕೇಳುತ್ತಿದ್ದಂತೆ ಜನರು ದಿಕ್ಕಾಪಾಲಾಗಿ ಓಡಾಡತೊಡಗಿದರು. ಕೆಲಕ್ಷಣ ನ್ಯಾಯಾಲಯದಲ್ಲಿ ಗೊಂದಲದ ವಾತಾವರಣ ಉಂಟಾಗಿತ್ತು.

ಗದ್ದಲದ ನಡುವೆ ಶೂಟರ್‌ಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಗೊಂಡ ಕೈದಿಗಳನ್ನು ಚಿಕಿತ್ಸೆಗಾಗಿ ಸದರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಬಂದ ಸದರ್ ಡಿಎಸ್ಪಿ ಸಂಜಯ್ ಕುಮಾರ್ ಪಾಂಡೆ ಪರಿಶೀಲನೆ ನಡೆಸಿದರು. ಡಿಎಸ್ಪಿ ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಈ ವೇಳೆ ಸ್ಥಳದಲ್ಲಿದ್ದರು.

ಇದನ್ನೂ ಓದಿ:MP crime: ಗುಂಡು ಹಾರಿಸಿ ಇಬ್ಬರ ಹತ್ಯೆಗೈದ​ ಬ್ಯಾಂಕ್‌ ಸೆಕ್ಯೂರಿಟಿ ಗಾರ್ಡ್! ಗರ್ಭಿಣಿ ಸೇರಿ 6 ಜನರಿಗೆ ಗಾಯ

ಗುಂಡು ಹಾರಿಸಿ ಇಬ್ಬರ ಹತ್ಯೆ: ಇತ್ತೀಚೆಗೆ ಮಧ್ಯಪ್ರದೇಶದ ಇಂದೋರ್​ನಲ್ಲಿ​ಯೂ ಇಂತಹದ್ದೇ ಘಟನೆ ನಡೆದಿತ್ತು. ಸಾಕುನಾಯಿಗಳ ವಿಚಾರವಾಗಿ ನಡೆದ ಜಗಳದಲ್ಲಿ ಬ್ಯಾಂಕ್​ ಸೆಕ್ಯೂರಿಟಿ ಗಾರ್ಡ್​ವೊಬ್ಬ ಗುಂಡು ಹಾರಿಸಿ ಇಬ್ಬರನ್ನು ಕೊಲೆಗೈದ ಘಟನೆ ನಡೆದಿತ್ತು. ಘಟನೆಯಲ್ಲಿ ಓರ್ವ ಗರ್ಭಿಣಿ ಸೇರಿ ಆರು ಮಂದಿ ಗಾಯಗೊಂಡಿದ್ದರು. ಘಟನೆ ಬಳಿಕ ಆರೋಪಿ ಸೆಕ್ಯೂರಿಟಿ ಗಾರ್ಡ್​ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದರು. ರಾಹುಲ್ ವರ್ಮಾ (28) ಹಾಗೂ ಈತನ ಸೋದರಮಾವ ವಿಮಲ್ ಅಮ್ಚಾ (35) ಮೃತ ದುರ್ದೈವಿಗಳಾಗಿದ್ದು ಗುಂಡು ಹಾರಿಸಿದ ಆರೋಪಿ ರಾಜ್​ಪಾಲ್ ಸಿಂಗ್ ರಾಜಾವತ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಅಮರೇಂದ್ರ ಸಿಂಗ್ ಮಾಹಿತಿ ಘಟನೆ ಬಳಿಕ ಹಂಚಿಕೊಂಡಿದ್ದರು.

ಇದನ್ನೂ ಓದಿ:ಗ್ಯಾಂಗ್​ಸ್ಟರ್​ ಅತೀಕ್​ ಅಹ್ಮದ್​ ಹತ್ಯೆಯ ಭಯಾನಕ ವಿಡಿಯೋ: ಘಟನೆಯ ಇಂಚಿಂಚು ಮಾಹಿತಿ ಇಲ್ಲಿದೆ

ಉತ್ತರಪ್ರದೇಶದ ಪ್ರಯಾಗ್‌ರಾಜ್​ನಲ್ಲಿಯೂ ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿಯಾಗಿದ್ದ ಅತೀಕ್ ಅಹ್ಮದ್ ಮತ್ತು ಅವರ ಸಹೋದರನನ್ನು ಹೀಗೆ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣ ಉತ್ತರಪ್ರದೇಶದಲ್ಲಿ ಸಂಚಲನ ಉಂಟು ಮಾಡಿತ್ತು. ಮಾಧ್ಯಮಗಳ ಕ್ಯಾಮರಾ ಎದುರೇ ಈ ಇಬ್ಬರ ಹತ್ಯೆಯಾಗಿತ್ತು. ವೈದ್ಯಕೀಯ ತಪಾಸಣೆಗಾಗಿ ಇಬ್ಬರನ್ನೂ ಆಸ್ಪತ್ರೆಗೆ ಕರೆತರುತ್ತಿದ್ದಾಗ ದುಷ್ಕರ್ಮಿಗಳ ತಂಡ ಪಿಸ್ತೂಲಿನಿಂದ ಏಕಕಾಲಕ್ಕೆ ಇಬ್ಬರ ಮೇಲೂ ಗುಂಡಿನ ಸುರಿಮಳೆಗೈದಿತ್ತು. ಗುಂಡೇಟಿನಿಂದ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಸ್ಥಳದಲ್ಲೇ ಮೃತಪಟ್ಟಿದ್ದರು. ಗುಂಡಿನ ಮೊರೆತ ಕೇಳಿದ ತಕ್ಷಣ ಅಲ್ಲಿದ್ದ ಎಲ್ಲರೂ ದಿಕ್ಕಾಪಾಲಾಗಿ ಓಡಿಡಿದ್ದರು. ಇದು ರಾಷ್ಟ್ರೀಯ ಮಾಧ್ಯಮವೊಂದರ ಕ್ಯಾಮರಾದಲ್ಲಿ ಸೆರೆಯಾಗಿ ಬಳಿಕ ವೈರಲ್​ ಆಗಿತ್ತು.

ABOUT THE AUTHOR

...view details