ಹೈದರಾಬಾದ್: ಇಲ್ಲಿನ ಜಿನೊಮ್ ವ್ಯಾಲಿಯ ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನಾ ಕೇಂದ್ರಕ್ಕೆ ತೆಲಂಗಾಣ ಐಟಿ ಮತ್ತು ಕೈಗಾರಿಕಾ ಸಚಿವ ಕೆ.ಟಿ.ರಾಮ ರಾವ್ ಇಂದು ಭೇಟಿ ನೀಡಿದರು.
ಭಾರತ್ ಬಯೋಟೆಕ್ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಕೃಷ್ಣ ಎಲ್ಲ, ಶ್ರೀಮತಿ ಸುಚಿತ್ರಾ ಎಲ್ಲ ಹಾಗೂ ತೆಲಂಗಾಣ ಲೈಫ್ ಸೈನ್ಸಸ್ ಮತ್ತು ಫಾರ್ಮಾ ನಿರ್ದೇಶಕ ಶಕ್ತಿ ನಾಗಪ್ಪನ್ ಸಚಿವರಿಗೆ ಸಾಥ್ ನೀಡಿದರು.
ಭಾರತ್ ಬಯೋಟೆಕ್ಗೆ ತೆಲಂಗಾಣ ಐಟಿ ಸಚಿವ ಕೆಟಿಆರ್ ಭೇಟಿ ಈ ಕುರಿತು ಟ್ವೀಟ್ ಮಾಡಿರುವ ಕೆಟಿಆರ್, "ಪ್ರಪಂಚದಾದ್ಯಂತ ವಿತರಿಸುವ ಸಲುವಾಗಿ ಲಸಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಉತ್ಪಾದಿಸುವಲ್ಲಿ ಭಾರತದ ಲಸಿಕೆ ಕ್ಷೇತ್ರವು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬುದನ್ನು ಮತ್ತೆ ಮತ್ತೆ ಹೇಳುವ ಸಮಯವಿದು. ಜಾಗತಿಕ ಲಸಿಕೆ ಭೂಪಟದಲ್ಲಿ ಹೈದರಾಬಾದ್‌ನ ಸ್ಥಾನ ಗುರುತಿಸಲಾಗುತ್ತಿದೆ. ಜಾಗತಿಕ ಲಸಿಕೆಗಳಲ್ಲಿ ಮೂರನೇ ಒಂದಕ್ಕಿಂದ (1/3) ಹೆಚ್ಚಿನ ಪ್ರಮಾಣದಲ್ಲಿ ಹೈದರಾಬಾದ್ ನಗರದಲ್ಲೇ ಉತ್ಪಾದನೆಯಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇದು ಮಹತ್ವದ ಸಾಧನೆಯಾಗಿದ್ದು, ನಿಮ್ಮೆಲ್ಲರ ಸತತ ಪ್ರಯತ್ನದಿಂದಾಗಿ ಇದು ಸಾಧ್ಯವಾಯಿತು" ಎಂದು ಹೇಳಿದ್ದಾರೆ.
ಜುಲೈ 15 ರಿಂದ ಭಾರತದ ಮೊದಲ ದೇಶೀಯ ಲಸಿಕೆಯಾಗಿರುವ ಕೊವ್ಯಾಕ್ಸಿನ್ನ ಕ್ಲಿನಿಕಲ್ ಪ್ರಯೋಗದ ಮೊದಲನೇ ಹಂತ ದೇಶಾದ್ಯಂತ ಪ್ರಾರಂಭವಾಗಿದೆ. ಇದು ದೇಶದ 375 ಸ್ವಯಂಸೇವಕರ ಮೇಲೆ ನಡೆಸಿರುವ ರ್ಯಾಂಡಮೈಸ್ಡ್, ಡಬಲ್-ಬ್ಲೈಂಡ್, ಪ್ಲಸೀಬೊ - ನಿಯಂತ್ರಿತ ಕ್ಲಿನಿಕಲ್ ಪ್ರಯೋಗವಾಗಿದೆ. ಈ ಪ್ರಕ್ರಿಯೆಯಲ್ಲಿ ಪ್ಲೇಸಿಬೊ (ಒಂದು ಚಿಕಿತ್ಸೆ) ವನ್ನು ಯಾರು ಪಡೆಯುತ್ತಿದ್ದಾರೆ ಎನ್ನುವುದು ರೋಗಿಗಳಿಗಾಗಲಿ ಅಥವಾ ಸಂಶೋಧಕರಿಗಾಗಲಿ ತಿಳಿಯುವುದಿಲ್ಲ.
ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಲಸಿಕೆ ಉತ್ಪಾದನಾ ಕೇಂದ್ರ ಭಾರತದ ಅತ್ಯುನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆಯಾದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ (ಬಿಬಿಐಎಲ್) ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಭಾಗಿತ್ವದಲ್ಲಿ 'ಕೊವಾಕ್ಸಿನ್' ಹೆಸರಿನ ಕೊರೊನಾ ವೈರಸ್ ಲಸಿಕೆ ಕಂಡು ಹಿಡಿದಿದೆ. ಆಗಸ್ಟ್ 15ರ ಒಳಗೆ ಮಾನವನ ಮೇಲೆ ಈ ಲಸಿಕೆಯ ಕ್ಲಿನಿಕಲ್ ಪ್ರಯೋಗದ ಫಲಿತಾಂಶವನ್ನು ಬಿಡುಗಡೆ ಮಾಡುವ ಗುರಿ ಹೊಂದಿದೆ.
ಕೋವಿಡ್ -19 ಲಸಿಕೆಗಾಗಿ ಮಾನವರ ಮೇಲೆ ಮೊದಲನೇ ಹಾಗೂ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಭಾರತ್ ಬಯೋಟೆಕ್ ಹಾಗೂ ಝ್ಯಾಡಸ್ ಕ್ಯಾಡಿಲಾ ಕಂಪನಿಗಳಿಗೆ ಅನುಮತಿ ನೀಡಿದೆ.