ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಪ್ರಾರಂಭಿಸಿದ ನಡೆ ಟೀಕಿಸಿದ್ದ ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದ್ದು, ಈ ಕುರಿತು ಮಾತನಾಡಲು ಪಾಕ್ಗೆ ಯಾವುದೇ ಹಕ್ಕಿಲ್ಲ ಎಂದಿದೆ.
ತನಗೆ ಅಗತ್ಯವಿಲ್ಲದ ವಿಷಯದಲ್ಲಿ ಪಾಕ್ ತಲೆ ಹಾಕುವುದನ್ನು ನಾವು ನೋಡಿದ್ದೇವೆ. ಅಲ್ಪಸಂಖ್ಯಾತರನ್ನು ಉಲ್ಲೇಖಿಸಲೂ ಪಾಕಿಸ್ತಾನ ಮುಜುಗರ ಪಡಬೇಕು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.
ಕೋವಿಡ್-19 ಸೋಂಕಿನಿಂದ ಜಗತ್ತು ನಲುಗುತ್ತಿರುವಾಗ RSS-BJP ಹಿಂದುತ್ವ ಅಜೆಂಡಾವನ್ನು ಮುನ್ನಡೆಸುತ್ತಿದೆ. 2020ರ ಮೇ 26 ರಂದು ಅಯೋಧ್ಯೆಯಯಲ್ಲಿ ಮಂದಿರ ನಿರ್ಮಾಣದ ಪ್ರಾರಂಭವು ಈ ದಿಕ್ಕಿನ ಮತ್ತೊಂದು ಹೆಜ್ಜೆಯಾಗಿದೆ. ಪಾಕಿಸ್ತಾನ ಸರ್ಕಾರ ಮತ್ತು ಜನರು ಇದನ್ನು ತೀವ್ರವಾಗಿ ಖಂಡಿಸುತ್ತಾರೆ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ಬುಧವಾರ ಹೇಳಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಶ್ರೀವಾಸ್ತವ ಅವರು, ಭಾರತವು ಕಾನೂನಿನ ನಿಯಮದಿಂದ ಸೇವೆ ಸಲ್ಲಿಸುತ್ತಿರುವ ರಾಷ್ಟ್ರವಾಗಿದ್ದು, ಎಲ್ಲಾ ಧರ್ಮಗಳಿಗೆ ಸಮಾನ ಹಕ್ಕುಗಳನ್ನು ಖಾತರಿಪಡಿಸುತ್ತದೆ. ಭಾರತ ಮತ್ತು ಪಾಕ್ ನಡುವಿನ ವ್ಯತ್ಯಾಸ ತಿಳಿದುಕೊಳ್ಳಲು ವಿದೇಶಾಂಗ ಕಚೇರಿ ಒಮ್ಮೆ ಬಿಡುವು ಮಾಡಿಕೊಂಡು ನಿಮ್ಮದೇ ಸಂವಿಧಾನವನ್ನು ಓದಿ ಎಂದು ತಿರುಗೇಟು ನೀಡಿದ್ದಾರೆ.