ಕರ್ನಾಟಕ

karnataka

ಮಗನ ಶವ ಸಾಗಾಟದ ವೇಳೆ ಸಿಕ್ಕಿಬಿದ್ದ ಉದ್ಯಮಿ: ವಿಚ್ಛೇದನಕ್ಕಾಗಿ ಕಾಯುತ್ತಿದ್ದ ಮಹಿಳೆ - ಪೊಲೀಸರಿಂದ ಮಾಹಿತಿ

By ETV Bharat Karnataka Team

Published : Jan 9, 2024, 5:55 PM IST

Updated : Jan 9, 2024, 8:20 PM IST

ವೈವಾಹಿಕ ಭಿನ್ನಾಭಿಪ್ರಾಯದಿಂದ ಬಳಲುತ್ತಿದ್ದ ಮಹಿಳಾ ಉದ್ಯಮಿ ಸುಚನಾ ಸೇಠ್, ತನ್ನ ಪತಿಯಿಂದ ವಿಚ್ಛೇದನ ಬಯಸಿದ್ದರು. ನ್ಯಾಯಾಲಯದ ಇತ್ತೀಚಿನ ಆದೇಶದ ಬಗ್ಗೆಯೂ ಅಸಮಾಧಾನಗೊಂಡಿದ್ದರು. ಆದರೆ, ಮಗುವಿನ ಕೊಲೆಯ ಹಿಂದಿನ ಉದ್ದೇಶದ ಬಗ್ಗೆ ಯಾವ ಮಾಹಿತಿಯೂ ಲಭ್ಯವಾಗಿಲ್ಲ ಎಂದು ತನಿಖಾಧಿಕಾರಿಗಳು ಮಹಿಳೆಯ ಬಗೆಗಿನ ಕೆಲವು ಮಾಹಿತಿ ಬಹಿರಂಗಪಡಿಸಿದ್ದಾರೆ.

ಉತ್ತರ ಗೋವಾದ ಎಸ್​ಪಿ ನಿಧಿನ್​ ವಲ್ಸನ್​
ಉತ್ತರ ಗೋವಾದ ಎಸ್​ಪಿ ನಿಧಿನ್​ ವಲ್ಸನ್​

ಗೋವಾ:ತಮ್ಮ ನಾಲ್ಕು ವರ್ಷದ ಮಗುವಿನ ಶವದೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಉದ್ಯಮಿ ಸುಚನಾ ಸೇಠ್ (39) ಬಂಧನ ಕುರಿತು ಮತ್ತಷ್ಟು ಮಾಹಿತಿ ಲಭ್ಯವಾಗಿವೆ. ಸ್ಟಾರ್ಟ್ ಅಪ್ ಕಂಪನಿಯಲ್ಲಿ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಬೆಂಗಳೂರಿನ ಸುಚನಾ ಸೇಠ್, ತಮ್ಮ ವೈವಾಹಿಕ ಜೀವನದ ಬಗ್ಗೆ ಬಹಿರಂಗಪಡಿಸಿದ್ದಾರೆ. ''ತಾನು ತನ್ನ ಪತಿಯಿಂದ ವಿಚ್ಛೇದನಕ್ಕಾಗಿ ಕಾಯುತ್ತಿದ್ದೆ. ತಮ್ಮ ವೈವಾಹಿಕ ಜೀವನದ ಅಷ್ಟು ಸರಿ ಇರಲಿಲ್ಲ'' ಎಂದು ತನಿಖಾಧಿಕಾರಿಗಳ ಮುಂದೆ ಹೇಳಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

''ಮೂಲತಃ ಪಶ್ಚಿಮ ಬಂಗಾಳದ ಸುಚನಾ ಸೇಠ್, ಬೆಂಗಳೂರಿನಲ್ಲಿ ನೆಲೆಸಿರುವ ಬಗ್ಗೆ ಗೋವಾ ಪೊಲೀಸರು ಪತ್ತೆ ಮಾಡಿದ್ದಾರೆ. ಸದ್ಯ ವಿದೇಶದಲ್ಲಿರುವ ತನ್ನ ಪತಿಯಿಂದ ಮಹಿಳೆ ವಿಚ್ಛೇದನ ಬಯಸಿದ್ದರು. ಕಳೆದ ವಾರಷ್ಟೇ ಮಗನನ್ನು ತಂದೆ ಭಾನುವಾರ ಭೇಟಿ ಮಾಡಬಹುದು ಎಂದು ಹೇಳಿ ನ್ಯಾಯಾಲಯ ಅನುಮತಿ ಸಹ ನೀಡಿತ್ತು. ನ್ಯಾಯಾಲಯದ ಈ ಆದೇಶವು ಮಹಿಳೆಗೆ ಆಘಾತ ತರಿಸಿತ್ತು. ಆದರೆ, ಮಗುವಿನ ಕೊಲೆಯ ಹಿಂದಿನ ಉದ್ದೇಶದ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ'' ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಗೋವಾ ಪೊಲೀಸರು ಬಾಲಕನ ತಂದೆಯನ್ನು ಸಂಪರ್ಕಿಸಿ ದುರಂತದ ಬಗ್ಗೆ ತಿಳಿಸಿದ್ದಾರೆ. ಸದ್ಯ ಮಗುವಿನ ಮೃತದೇಹವನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದ್ದು ತಂದೆ ನೇರವಾಗಿ ಅಲ್ಲಿಗೆ ಪ್ರಯಾಣ ಮಾಡಲಿದ್ದಾರೆ. ಹೋಟೆಲ್​ ಸಿಬ್ಬಂದಿಯ ಹೇಳಿಕೆ ಆಧರಿಸಿ ಮಹಿಳೆಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ಮತ್ತು ಗೋವಾ ಮಕ್ಕಳ ರಕ್ಷಣಾ ಕ್ರಮದ ನಿಬಂಧನೆಗಳ ಅಡಿಯಲ್ಲಿ ಆಕೆಯ ವಿರುದ್ಧ ದೂರು ದಾಖಲಾಗಿದೆ.

ಗೋವಾ ಎಸ್​ಪಿ ಪ್ರತಿಕ್ರಿಯೆ: ಬಾಲಕನ ಹತ್ಯೆಗೆ ಸಂಬಂಧಿಸಿ ಉತ್ತರ ಗೋವಾದ ಎಸ್​ಪಿ ನಿಧಿನ್​ ವಲ್ಸನ್​ ಪ್ರತಿಕ್ರಿಯೆ ನೀಡಿದ್ದು, "ಆರೋಪಿ ಮಹಿಳೆ ಗೋವಾದ ಸೋಲ್​ ಬನಿಯನ್​ ಹೋಟೆಲ್​ಗೆ 4 ವರ್ಷದ ಮಗುವಿನ ಜೊತೆಗೆ ಚೆಕ್​ -ಇನ್​ ಆಗಿದ್ದಳು. ಸೋಮವಾರ ಬೆಳಗ್ಗೆ ಹೋಟೆಲ್​ ಸಿಬ್ಬಂದಿಗೆ ಬೆಂಗಳೂರಿಗೆ ಹೋಗಲು ಟ್ಯಾಕ್ಸಿ ವ್ಯವಸ್ಥೆ ಮಾಡುವಂತೆ ಹೇಳಿದ್ದಾರೆ. ಆಗ ಸಿಬ್ಬಂದಿ, ಬೆಂಗಳೂರಿಗೆ ಟ್ಯಾಕ್ಸಿ ದುಬಾರಿಯಾಗಿದ್ದು, ವಿಮಾನ ಟಿಕೆಟ್​ ಬುಕ್​ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಆದರೆ, ಮಹಿಳೆ ಟ್ಯಾಕ್ಸಿಯಲ್ಲೇ ಹೋಗಬೇಕು ಎಂದಾಗ ಹೋಟೆಲ್​ ಸಿಬ್ಬಂದಿ ಇನ್ನೋವಾ ಟ್ಯಾಕ್ಸಿ ವ್ಯವಸ್ಥೆ ಮಾಡಿದ್ದರು. ತಕ್ಷಣವೇ ಮಹಿಳೆ ಹೋಟೆಲ್​ನಿಂದ ಚೆಕ್​ಔಟ್ ಆಗಿದ್ದಳು."

"ಚೆಕ್​ಔಟ್​​ ಬಳಿಕ ಹೋಟೆಲ್​ ಸಿಬ್ಬಂದಿ ಸ್ವಚ್ಛಗೊಳಿಸಲು ತೆರಳಿದಾಗ ಕೊಠಡಿಯಲ್ಲಿ ಕೆಂಪು ಬಣ್ಣದ ಕಲೆಗಳು ಕಂಡು ಬಂದಿದ್ದು, ರಕ್ತ ಎಂದು ಅನುಮಾನಿಸಿದ್ದಾರೆ. ಅಲ್ಲದೆ ಮಹಿಳೆ ಬಂದಾಗ ಇದ್ದ ಮಗು, ಹೋಗುವಾಗ ಇಲ್ಲದಿರುವುದು ಕಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಿಐ ಪರೇಶ್​​ ನೇತೃತ್ವದ ತಂಡ ತಕ್ಷಣ ಹೋಟೆಲ್​ಗೆ ತೆರಳಿ ಮಾಹಿತಿ ಸಂಗ್ರಹಿಸಿತ್ತು. ಟ್ಯಾಕ್ಸಿ ಚಾಲಕನ ಮೂಲಕ ಮಹಿಳೆಯನ್ನು ಸಂಪರ್ಕಿಸಿದ ಪೊಲೀಸರು, ಮಗನ ಬಗ್ಗೆ ವಿಚಾರಿಸುತ್ತಿದ್ದಂತೆ ಮಡ್ಗಾಂವ್​ನ ಸ್ನೇಹಿತರೊಬ್ಬರ ಬಳಿ ಬಿಟ್ಟಿರುವುದಾಗಿ ಹೇಳಿದ್ದಾರೆ. ಆದರೆ, ಮಹಿಳೆ ನೀಡಿದ ವಿಳಾಸ ನಕಲಿ ಎಂಬುದು ಗೊತ್ತಾದಾಗ ತಕ್ಷಣ ಐಮಂಗಲ ಪೊಲೀಸ್​ ಠಾಣೆಗೆ ಕರೆತರಲಾಯಿತು. ಈ ಬಗ್ಗೆ ಚಿತ್ರದುರ್ಗದ ಎಸ್​ಪಿ ಜೊತೆಗೂ ತಾವು ಮಾತನಾಡಿರುವೆ" ಎಂದು ತನಿಖಾ ಹಂತದ ಬಗ್ಗೆ ವಲ್ಸನ್ ಸಂಪೂರ್ಣ ಮಾಹಿತಿ ನೀಡಿದ್ದಾರೆ.

"ಸದ್ಯ ಐಮಂಗಲ ಠಾಣೆಯ ಪೊಲೀಸರು ಕಾರು ಹಾಗೂ ಲಗೇಜ್​ ಪರಿಶೀಲಿಸಿದ್ದು, ಸೂಟ್​ಕೇಸ್​ನಲ್ಲಿ ಮಗುವಿನ ಶವ ಇರುವುದು ಪತ್ತೆಯಾಗಿದೆ. ಐಮಂಗಲದ ಪೊಲೀಸರು ಕಲಂಗೂರು ಠಾಣೆಗೆ ಮಾಹಿತಿ ನೀಡಿದ್ದಾರೆ. ಹೋಟೆಲ್​ನ ಮೇಲ್ವಿಚಾರಕ ನೀಡಿದ ದೂರಿನ ಆಧಾರದಲ್ಲಿ ನಾವು ಎಫ್​ಐಆರ್​ ದಾಖಲಿಸಿದ್ದೇವೆ. 302, 201 ಹಾಗೂ ಗೋವಾ ಮಕ್ಕಳ ಕಾಯ್ದೆಯ 8ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ತನಿಖೆ ಕೈಗೆತ್ತಿಕೊಂಡಿದ್ದೇವೆ. ಐಮಂಗಲ ಠಾಣೆಯ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಗೋವಾ ಪೊಲೀಸರ ತಂಡ ಚಿತ್ರದುರ್ಗಕ್ಕೆ ತೆರಳಿ, ಮಹಿಳೆಯನ್ನು ಬಂಧಿಸಿದೆ. ಅಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಗೋವಾಗೆ ಕರೆತರಲಾಗುವುದು" ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಸೂಟ್​ಕೇಸ್​ನಲ್ಲಿ ಮಗುವಿನ ಶವದೊಂದಿಗೆ ಕಾರ್​ನಲ್ಲಿ ತೆರಳುತ್ತಿದ್ದ ತಾಯಿ ಬಂಧನ

Last Updated : Jan 9, 2024, 8:20 PM IST

ABOUT THE AUTHOR

...view details