ಕರ್ನಾಟಕ

karnataka

ದಸರಾ ರ‍್ಯಾಲಿಯಲ್ಲಿ ಬಾಳಾಸಾಹೇಬ್ ಠಾಕ್ರೆ ಕುರ್ಚಿಗೆ ಶಿಂದೆ ಗೌರವ: ಉದ್ಧವ್​ಗೆ ಸಹೋದರ ಜೈದೇವ್​ ಶಾಕ್​

By

Published : Oct 5, 2022, 9:57 PM IST

ಸಿಎಂ ಏಕನಾಥ್ ಶಿಂದೆ ಅವರನ್ನು ಕೈ ಬಿಡಬೇಡಿ. ಅವರು ರೈತರು ಮತ್ತು ಸಾಮಾನ್ಯರಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಉದ್ಧವ್​ ಠಾಕ್ರೆ ಅವರ ಸಹೋದರ ಜೈದೇವ್​ ಠಾಕ್ರೆ ಹೇಳಿದ್ದಾರೆ.

balasaheb-thackerays-son-jaidev-thackeray-supports-cm-shinde
ದಸರಾ ರ‍್ಯಾಲಿಯಲ್ಲಿ ಬಾಳಾಸಾಹೇಬ್ ಠಾಕ್ರೆ ಕುರ್ಚಿಗೆ ಸಿಂಧೆ ಗೌರವ: ಉದ್ಧವ್​ಗೆ ಸಹೋದರ ಜೈದೇವ್​ ಶಾಕ್​

ಮುಂಬೈ (ಮಹಾರಾಷ್ಟ್ರ):ಮಹಾರಾಷ್ಟ್ರದಲ್ಲಿ ದಸರಾ ಹಬ್ಬವು ರಾಜಕೀಯ ಬಲ ಪ್ರದರ್ಶನಕ್ಕೆ ಸಾಕ್ಷಿ ಆಗಿದೆ. ಶಿವಸೇನೆಯ ಉದ್ಧವ್​ ಠಾಕ್ರೆ ಮತ್ತು ಏಕನಾಥ್​ ಶಿಂದೆ ಬಣಗಳು ಪ್ರತ್ಯೇಕವಾಗಿ ಸಾರ್ವಜನಿಕ ಸಭೆಗಳನ್ನು ನಡೆಸಿವೆ. ಅಚ್ಚರಿ ಎಂದರೆ ಉದ್ಧವ್​ ಠಾಕ್ರೆ ಅವರ ಸಹೋದರ ಜೈದೇವ್​ ಠಾಕ್ರೆ ಶಿಂದೆ ಬಣಕ್ಕೆ ಇದೇ ವೇಳೆ ಬೆಂಬಲ ಸೂಚಿಸಿ ಎಲ್ಲರಿಗೆ ಅಚ್ಚರಿ ಮೂಡಿಸಿದ್ದಾರೆ.

ಇಂದು ಸಂಜೆ ಶಿಂದೆ ನೇತೃತ್ವದ ಬಂಡಾಯ ಗುಂಪು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಎಂಎಂಆರ್‌ಡಿಎ ಮೈದಾನದಲ್ಲಿ ದಸರಾ ರ‍್ಯಾಲಿ ಆಯೋಜಿಸಿತ್ತು. ಸಭೆಯ ವೇದಿಕೆ ಮೇಲೆ ಶಿವಸೇನೆಯ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಬಳುಸುತ್ತಿದ್ದ ಪೀಠ ತಂದು ಗೌರವ ಸಲ್ಲಿಸಲಾಯಿತು. ಅಲ್ಲದೇ, 51 ಅಡಿ ಕತ್ತಿಗೆ 'ಶಾಸ್ತ್ರ ಪೂಜೆ' ನಡೆಸಲಾಯಿತು. ಇದಕ್ಕಾಗಿ ಉತ್ತರ ಪ್ರದೇಶದ ಅಯೋಧ್ಯೆಯಿಂದ ಮಹಂತರನ್ನು ಕರೆಸಲಾಗಿತ್ತು.

ಶಿಂಧೆಗೆ ಜೈದೇವ್​ ಠಾಕ್ರೆ ಬೆಂಬಲ: ಬಾಳಾಸಾಹೇಬ್ ಠಾಕ್ರೆ ಅವರ ಮತ್ತೊಬ್ಬ ಮಗ ಜೈದೇವ್​ ಠಾಕ್ರೆ ಅವರು ಏಕನಾಥ್​ ಶಿಂದೆ ಬಣದ ವೇದಿಕೆ ಜೊತೆಗೆ ವೇದಿಕೆ ಹಂಚಿಕೊಂಡು ಸಹೋದರ ಉದ್ಧವ್​ ಠಾಕ್ರೆಗೆ ಶಾಕ್​​ ನೀಡಿದರು. ಅಲ್ಲದೇ, ಏಕನಾಥ್ ಶಿಂದೆ ಅವರನ್ನು ಕೈ ಬಿಡಬೇಡಿ. ಅವರು ರೈತರು ಮತ್ತು ಸಾಮಾನ್ಯರಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಜೈದೇವ್​ ಠಾಕ್ರೆ ಹೇಳಿದರು.

ಇದೇ ವೇಳೆ ಏಕನಾಥ್​ ಶಿಂದೆ ಮಾತನಾಡಿ, ಶಿವಸೇನೆ ನಿಮ್ಮ (ಉದ್ಧವ್ ಠಾಕ್ರೆ) ಖಾಸಗಿ ಲಿಮಿಟೆಡ್ ಕಂಪನಿಯಲ್ಲ. ಶಿವಸೇನೆಯು ಶಿವಸೈನಿಕರದ್ದು, ಅದಕ್ಕಾಗಿ ತಮ್ಮ ಬೆವರು ಹರಿಸಿದ್ದಾರೆ. ಪಾಲುದಾರಿಕೆ ಮಾಡಿ ಮಾರಾಟ ಮಾಡಿದ ನಿಮ್ಮಂತಹವರಿಗೆ ಅಲ್ಲ ಎಂದು ಟೀಕಿಸಿದರು.

ಶಿವಸೇನೆಯ ಶಿಂಧೆ ಬಣದ ನಾಯಕ ರಾಮದಾಸ್ ಕದಂ ಮಾತನಾಡಿ, ಉದ್ಧವ್ ಅವರೇ ನಿಮ್ಮ ಸಹೋದರ, ಸೋದರ ಸಂಬಂಧಿಗಳು ಅಥವಾ ರಾಜ್ ಠಾಕ್ರೆ ಕೂಡ ನಿಮ್ಮೊಂದಿಗೆ ಇಲ್ಲ. ನಿಮ್ಮ ಕುಟುಂಬವನ್ನು ಸಹ ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ, ನೀವು ರಾಜ್ಯವನ್ನು ಹೇಗೆ ಉಳಿಸಿಕೊಳ್ಳುತ್ತೀರಿ ಎಂದು ಪ್ರಶ್ನಿಸಿದರು.

ಶಿಂಧೆ ಬಣ ಸೇರ್ತಾರಾ ಇನ್ನೂ 7 ಜನ?: ಇದಕ್ಕೂ ಮುನ್ನ ಮಾತನಾಡಿದ್ದ ಸಂಸದ ಕೃಪಾಲ್ ತುಮಾನೆ, ಉದ್ಧವ್ ಠಾಕ್ರೆ ಬಣದ ಇಬ್ಬರು ಸಂಸದರು ಮತ್ತು ಐವರು ಶಾಸಕರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಗುಂಪಿನೊಂದಿಗೆ ಸೇರಲಿದ್ದಾರೆ ಎಂದು ಹೇಳಿದ್ದರು.

ಇತ್ತ, ಉದ್ಧವ್​ ಠಾಕ್ರೆ ಬಣವು ತನ್ನ ರ‍್ಯಾಲಿಯನ್ನು ಸೆಂಟ್ರಲ್ ಮುಂಬೈನ ದಾದರ್‌ನಲ್ಲಿರುವ ಐತಿಹಾಸಿಕ ಶಿವಾಜಿ ಪಾರ್ಕ್‌ನಲ್ಲಿ ನಡೆಸಿತು. 1966ರಲ್ಲಿ ಶಿವಸೇನೆ ಪ್ರಾರಂಭವಾದಾಗಿನಿಂದ ಇದೇ ಸ್ಥಳದಲ್ಲಿ ದಸರಾ ರ‍್ಯಾಲಿ ನಡೆಸಿಕೊಂಡು ಬರಲಾಗಿದೆ.

ಇನ್ನು, ಶಿಂದೆ ಮತ್ತು ಇತರ 39 ಸೇನಾ ಶಾಸಕರು ಜೂನ್‌ನಲ್ಲಿ ಪಕ್ಷದ ನಾಯಕತ್ವದ ವಿರುದ್ಧ ಬಂಡಾಯವೆದ್ದಿದ್ದರು. ಅದರ ನಂತರ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನಗೊಂಡಿತ್ತು. ಜೂನ್ 30ರಂದು ಶಿಂದೆ ಅವರು ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಸರ್ಕಾರ ರಚಿಸಿ ಮುಖ್ಯಮಂತ್ರಿಯಾಗಿದ್ದಾರೆ.

ಸದ್ಯ ಶಿಂದೆ ಬಣದಲ್ಲಿ ಸಿಎಂ ಸೇರಿದಂತೆ 40 ಶಾಸಕರು ಹಾಗೂ 12 ಲೋಕಸಭಾ ಸದಸ್ಯರಿದ್ದಾರೆ. ಠಾಕ್ರೆ ಬಣದಲ್ಲಿ 15 ಶಾಸಕರು ಮತ್ತು ಆರು ಲೋಕಸಭಾ ಸದಸ್ಯರಿದ್ದಾರೆ.

ಇದನ್ನೂ ಓದಿ:ಕುಲು ದಸರಾ ಉತ್ಸವದಲ್ಲಿ ಪ್ರಧಾನಿ ಮೋದಿ ಭಾಗಿ: ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮ

ABOUT THE AUTHOR

...view details