ನವದೆಹಲಿ :ಪಂಚರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳ ಫಲಿತಾಂಶ ಹೊರಬಿದ್ದಿದೆ. ರಾಜಸ್ಥಾನ, ಛತ್ತೀಸ್ಗಡ್ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದ್ದು, ತೆಲಂಗಾಣದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಪಂಚರಾಜ್ಯ ಚುನಾವಣೆಯು ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿತ್ತು. ಚುನಾವಣೆ ಹಿನ್ನಲೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ವಿವಿಧ ಪ್ರಾದೇಶಿಕ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿದ್ದವು.
ರಾಜಸ್ಥಾನದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು: ರಾಜಸ್ಥಾನದಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಚುನಾವಣೋತ್ತರ ಸಮೀಕ್ಷೆಯಂತೆ ಬಿಜೆಪಿ ನೂರರ ಗಡಿ ದಾಟಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಒಟ್ಟು 199 ವಿಧಾನಸಭಾ ಕ್ಷೇತ್ರಗಳ ಪೈಕಿ, ಬಿಜೆಪಿ 115 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದು, ಆಡಳಿತಾರೂಢ ಕಾಂಗ್ರೆಸ್ 70 ಸ್ಥಾನಗಳಲ್ಲಿ ಗೆದ್ದು ಎರಡನೇ ಸ್ಥಾನಕ್ಕೆ ಕುಸಿದಿದೆ. ಇತರೆ ಪಕ್ಷಗಳು ಒಟ್ಟು 14 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.
ಛತ್ತೀಸ್ಗಢದಲ್ಲಿ ಬಿಜೆಪಿಗೆ ಗೆಲುವು: ಛತ್ತೀಸ್ಘಢದಲ್ಲಿ ಬಿಜೆಪಿಗೆ ಮತದಾರ ಬಹುಪರಾಕ್ ಎಂದಿದ್ದಾನೆ. ಛತ್ತೀಸ್ಘಡದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ ಸಮೀಕ್ಷೆ ತಲೆಕೆಳಗಾಗಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಛತ್ತೀಸ್ಗಢದ 90 ವಿಧಾನಸಭಾ ಕ್ಷೇತ್ರಗಳ ಪೈಕಿ, ಬಿಜೆಪಿ 54 ಸ್ಥಾನ, ಕಾಂಗ್ರೆಸ್ 35 ಸ್ಥಾನ ಮತ್ತು ಇತರರು 1 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಈ ಚುನಾವಣೆಯಲ್ಲಿ ಸೋಲುವ ಮೂಲಕ ಕಾಂಗ್ರೆಸ್ ಎರಡು ರಾಜ್ಯಗಳಲ್ಲಿ ತನ್ನ ಅಧಿಕಾರವನ್ನು ಕಳೆದುಕೊಂಡಿದೆ.