ಕರ್ನಾಟಕ

karnataka

ಅಲಿಗಢ ಬದಲು ಹರಿಗಢ: ಮರು ನಾಮಕರಣದ ಪ್ರಸ್ತಾವನೆ ಅಂಗೀಕಾರ

By ETV Bharat Karnataka Team

Published : Nov 7, 2023, 7:42 PM IST

Aligarh to be renamed as Harigarh: ಉತ್ತರ ಪ್ರದೇಶದ ಅಲಿಗಢಕ್ಕೆ ಹರಿಗಢ ಎಂದು ಮರು ನಾಮಕರಣ ಮಾಡುವ ಪ್ರಸ್ತಾವನೆಯನ್ನು ಮಹಾನಗರ ಪಾಲಿಕೆ ಅಂಗೀಕರಿಸಿದೆ.

Aligarh to be renamed as Harigarh:   Municipal Corporation passes proposal
ಅಲಿಗಢ ಬದಲು ಹರಿಗಢ: ಮರು ನಾಮಕರಣದ ಪ್ರಸ್ತಾವನೆ ಅಂಗೀಕಾರ

ಅಲಿಗಢ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ನಗರಗಳ ಹೆಸರನ್ನು ಬದಲಿಸುವ ಪರಿಪಾಠ ಮುಂದುವರೆದಿದೆ. ಇದೀಗ ಅಲಿಗಢಕ್ಕೆ ಹರಿಗಢ ಎಂದು ಮರು ನಾಮಕರಣ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಮಂಗಳವಾರ ನಡೆದ ಮಹಾನಗರ ಪಾಲಿಕೆಯ ಮೊದಲ ಆಡಳಿತ ಮಂಡಳಿ ಸಭೆಯಲ್ಲಿ ಅಲಿಗಢ ಹೆಸರನ್ನು ಹರಿಗಢ ಎಂದು ಬದಲಾಯಿಸುವ ಪ್ರಸ್ತಾವನೆ ಅಂಗೀಕರಿಸಲಾಗಿದೆ.

2017ರಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಗರಗಳ ಹೆಸರು ಬದಲಾವಣೆ ರೂಢಿ ಶುರುವಾಗಿದೆ. ಪಾಲಿಕೆ ಸಭೆಯಲ್ಲಿ ಅಲಿಗಢವನ್ನು ಹರಿಗಢ್ ಆಗಿ ಬದಲಿಸುವ ಪ್ರಸ್ತಾವನೆಯನ್ನು ಕೌನ್ಸಿಲರ್ ಸಂಜಯ್ ಪಂಡಿತ್ ಮಂಡಿಸಿದ್ದರು. ಎಲ್ಲ ಕೌನ್ಸಿಲರ್​ಗಳ ಸರ್ವಾನುಮತದಿಂದ ಈ ಪ್ರಸ್ತಾವನೆ ಅಂಗೀಕಾರವಾಗಿದೆ. ಇದನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಲಾಗಿದೆ. ಈ ಪ್ರಸ್ತಾವನೆಗೆ ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ನೀಡಿದರೆ, ಅದು ಉತ್ತರ ಪ್ರದೇಶದ ಸಚಿವ ಸಂಪುಟದ ಮುಂದೆ ಬರಲಿದೆ. ಸಚಿವ ಸಂಪುಟ ಕೂಡ ಒಪ್ಪಿಗೆ ಸೂಚಿಸಿದರೆ ಗೆಜೆಟ್ ಪಾಸ್​ ಆಗಲಿದೆ.

ಈ ಹಿಂದಿನಿಂದಲೂ ಅಲಿಗಢ ಹೆಸರು ಬದಲಿಸುವ ವಿಷಯ ಚರ್ಚೆಯಲ್ಲಿದೆ. 2021ರ ಆಗಸ್ಟ್​ನಲ್ಲೇ ಜಿಲ್ಲಾ ಪಂಚಾಯಿತಿಯಲ್ಲಿ ಹರಿಗಢ ಎಂದು ನಾಮಕರಣ ಮಾಡುವ ಪ್ರಸ್ತಾವನೆ ಅಂಗೀಕಾರವಾಗಿದೆ. ಈ ಪ್ರಸ್ತಾವನೆಯೂ ಸರ್ವಾನುಮತದಿಂದ ಅಂಗೀಕಾರವಾಗಿತ್ತು. ಸದಸ್ಯರಾದ ಕೆಹ್ರಿ ಸಿಂಗ್ ಮತ್ತು ಉಮೇಶ್ ಯಾದವ್ ಮಂಡಿಸಿದ್ದ ಈ ಪ್ರಸ್ತಾವನೆ ಅಂಗೀಕರಿಸಿ, ಸರ್ಕಾರಕ್ಕೆ ರವಾನಿಸಲಾಗಿದೆ. ಇದು ಇದನ್ನೂ ಸರ್ಕಾರದ ಹಂತದಲ್ಲೇ ಬಾಕಿ ಉಳಿದಿದೆ.

ಸ್ವಾಮಿ ಹರಿದಾಸರ ಜನ್ಮಸ್ಥಳ: ಅಲಿಗಢದಲ್ಲಿ ಆಧ್ಯಾತ್ಮಿಕ ಕವಿ ಸ್ವಾಮಿ ಹರಿದಾಸರ ಜನ್ಮಸ್ಥಳ ಇದೆ. ಮಥುರಾದಲ್ಲಿ ನೆಲೆಸಿದ್ದ ಅವರ ಹೆಸರಲ್ಲಿ ಅಲಿಗಢದಲ್ಲಿ ಹರಿದಾಸಪುರ ಎಂಬ ಗ್ರಾಮವೂ ಇದೆ. ಖೇರೇಶ್ವರ ಧಾಮದಲ್ಲಿ ಸ್ವಾಮಿ ಹರಿದಾಸರ ಪತ್ನಿಯ ಸ್ಮಾರಕ ನಿರ್ಮಿಸಲಾಗಿದೆ. ಇದಕ್ಕಾಗಿಯೇ ಅಲಿಗಢವನ್ನು ಹರಿಗಢ ಎಂದು ಹೆಸರಿಸಲಾಗುತ್ತಿದೆ.

ಉತ್ತರ ಪ್ರದೇಶ ನಗರಾಭಿವೃದ್ಧಿ ಇಲಾಖೆಯ ವಿಶೇಷ ಕಾರ್ಯದರ್ಶಿ ರಿತು ಸುಹಾಸ್ ಪ್ರತಿಕ್ರಿಯಿಸಿ, ಮಹಾನಗರ ಪಾಲಿಕೆ ಮತ್ತು ಪೌರ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಗರದ ಹೆಸರನ್ನು ಬದಲಾಯಿಸುವ ಬಗ್ಗೆ ನಗರದ ಸಾರ್ವಜನಿಕ ಪ್ರತಿನಿಧಿ ಅಥವಾ ನಗರಸಭೆಯಿಂದ ಪ್ರಸ್ತಾವನೆಯನ್ನು ನಗರಾಭಿವೃದ್ಧಿ ನಿರ್ದೇಶನಾಲಯಕ್ಕೆ ರವಾನಿಸಬೇಕು. ಇದಾದ ನಂತರ ನಗರದ ಐತಿಹಾಸಿಕತೆ, ಸಾರ್ವಜನಿಕ ಭಾವನೆ ಮತ್ತು ಇತರ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಗರಾಭಿವೃದ್ಧಿ ಇಲಾಖೆಯು ಕ್ಯಾಬಿನೆಟ್​ಗೆ ಕಳುಹಿಸುತ್ತದೆ. ಸಚಿವ ಸಂಪುಟದ ಅನುಮೋದನೆ ಕೊಟ್ಟರೆ ಗೆಜೆಟ್‌ ಹೊರಡಿಸಲಾಗುತ್ತದೆ. ಇದರ ನಂತರ, ಎಲ್ಲ ಹೊಸ ದಾಖಲೆಗಳಲ್ಲಿ ಆ ನಗರದ ಹೆಸರು ಬದಲಾಗುತ್ತದೆ. ರೈಲ್ವೆ ಮತ್ತು ಬಸ್ ನಿಲ್ದಾಣದ ಹೆಸರನ್ನೂ ಬದಲಾಯಿಸಬಹುದು ಎಂದು ತಿಳಿಸಿದರು.

ಈ ಹಿಂದಿನ ಮರುನಾಮಕರಣಗಳು:ಯೋಗಿ ಆದಿತ್ಯನಾಥ್ ಸರ್ಕಾರ ಈ ಹಿಂದೆ ಅಲಹಾಬಾದ್​ ಅನ್ನು ಪ್ರಯಾಗರಾಜ್ ಬದಲಾಯಿಸಿದೆ. ಫೈಜಾಬಾದ್​ ಅನ್ನು ಅಯೋಧ್ಯಾ, ಮೊಘಲ್‌ಸರಾಯ್ ರೈಲು ನಿಲ್ದಾಣವನ್ನು ಪಂಡಿತ್ ದೀನದಯಾಳ್ ಉಪಾಧ್ಯಾಯ ನಿಲ್ದಾಣ, ಹುಮಾಯೂನ್‌ಪುರವನ್ನು ಹನುಮಾನ್ ನಗರ, ಮೀನಾ ಬಜಾರ್​ಅನ್ನು ಮಾಯಾ ಬಜಾರ್, ಅಲಿಪುರವನ್ನು ಆರ್ಯನಗರ ಎಂದು ಬದಲಾಯಿಸಲಾಗಿದೆ. ಝಾನ್ಸಿ ರೈಲು ನಿಲ್ದಾಣವನ್ನು ವೀರಾಂಗಣ ಲಕ್ಷ್ಮೀಬಾಯಿ ನಿಲ್ದಾಣ, ಬನಾರಸ್ ರೈಲು ನಿಲ್ದಾಣವು ಕಾಶಿ ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡಲಾಗಿದೆ.

ಈ ನಗರಗಳ ಹೆಸರು ಬದಲಾವಣೆಗೆ ಬೇಡಿಕೆ:ಉತ್ತರ ಪ್ರದೇಶದಲ್ಲಿ ಮತ್ತಷ್ಟು ನಗರಗಳ ಹೆಸರು ಬದಲಾವಣೆಗೆ ಬೇಡಿಕೆ ಇದೆ. ಗಾಜಿಪುರದ ಹೆಸರು ಗಾಧಿಪುರ, ಶಹಜಹಾನ್‌ಪುರದ ಹೆಸರು ಶಾದಿಪುರ, ಅಜಂಗಢದ ಹೆಸರು ಆರ್ಯ ನಗರ, ಲಖನೌಕ್ಕೆ ಲಕ್ಷ್ಮಣಪುರಿ ಎಂದು ಮರುನಾಮಕರಣ ಮಾಡಬೇಕೆಂಬ ಚರ್ಚೆಗಳು ನಡೆಯುತ್ತಿವೆ.

ಇದನ್ನೂ ಓದಿ:ಔರಂಗಾಬಾದ್​​ಗೆ ಸಂಭಾಜಿನಗರ, ಉಸ್ಮಾನಾಬಾದ್​ಗೆ ಧರಶಿವ ಎಂದು ಮರು ನಾಮಕರಣ...

ABOUT THE AUTHOR

...view details