ಕರ್ನಾಟಕ

karnataka

EXPLAINER: ಅಗ್ನಿಪಥ್ ಸ್ಕೀಂ ನೇಮಕಾತಿ ನಿಯಮಗಳು.. ಇಲ್ಲಿದೆ ಸಂಪೂರ್ಣ ಮಾಹಿತಿ

By

Published : Jun 20, 2022, 1:26 PM IST

Updated : Jun 20, 2022, 1:40 PM IST

ಸೇವಾ ಅವಧಿಯಲ್ಲಿರುವ ಯಾವುದೇ ಅಗ್ನಿವೀರ್ ಯೋಧನನ್ನು ಆತನ ಮನವಿಯ ಮೇರೆಗೆ ಸೇವೆಯಿಂದ ಬಿಡುಗಡೆ ಮಾಡಲು ಬರುವುದಿಲ್ಲ. "ಆದಾಗ್ಯೂ ಕೆಲವೊಂದು ತೀರಾ ಅನಿವಾರ್ಯ ಸಂದರ್ಭಗಳಲ್ಲಿ ಉನ್ನತ ಅಧಿಕಾರಿಗಳ ಅನುಮತಿಯ ಮೇರೆಗೆ ಮಾತ್ರ ಅಗ್ನಿವೀರ್​ರನ್ನು ಸೇವೆಯಿಂದ ಬಿಡುಗಡೆಗೊಳಿಸಬಹುದು."

Agnipath scheme: Army comes out with terms and conditions
Agnipath scheme: Army comes out with terms and conditions

ನವದೆಹಲಿ: ಅಗ್ನಿಪಥ್ ಯೋಜನೆಯಡಿ ಸೇನಾಪಡೆಗೆ ಸೇರ ಬಯಸುವ ಅಭ್ಯರ್ಥಿಗಳಿಗಾಗಿ ಭಾರತೀಯ ಸೇನೆಯು ಹಲವಾರು ನೀತಿ - ನಿಯಮಗಳನ್ನು ಭಾನುವಾರ ಘೋಷಣೆ ಮಾಡಿದೆ. ಅಗ್ನಿವೀರರು ಭಾರತೀಯ ಸೇನೆಯಲ್ಲಿ ವಿಶಿಷ್ಟ ಶ್ರೇಣಿಯನ್ನು ಹೊಂದಿರಲಿದ್ದು, ಈ ಶ್ರೇಣಿಯು ಈಗಿರುವ ಶ್ರೇಣಿಗಳಿಗಿಂತ ಸಂಪೂರ್ಣ ವಿಭಿನ್ನವಾಗಿರಲಿದೆ. ಅಲ್ಲದೇ ಅಗ್ನಿವೀರರನ್ನು ಯಾವುದೇ ರೆಜಿಮೆಂಟ್ ಅಥವಾ ಯುನಿಟ್​ಗೆ ನೇಮಕ ಮಾಡಬಹುದಾಗಿದೆ.

ಸರ್ಕಾರಿ ರಹಸ್ಯಗಳ ಕಾಯ್ದೆ, 1923ರ ಪ್ರಕಾರ, ಅಗ್ನಿವೀರರು ತಮ್ಮ ನಾಲ್ಕು ವರ್ಷದ ಅವಧಿಯಲ್ಲಿ ತಿಳಿದುಕೊಂಡ ಗುಪ್ತ ಮಾಹಿತಿಯನ್ನು ಯಾವುದೇ ಅನಧಿಕೃತ ವ್ಯಕ್ತಿ ಅಥವಾ ಮೂಲಗಳಿಗೆ ಬಹಿರಂಗ ಮಾಡುವಂತಿಲ್ಲ. "ಈ ಯೋಜನೆ ಜಾರಿಯ ನಂತರ ಅಗ್ನಿವೀರ್ ಸೇವಾ ಅವಧಿಯನ್ನು ಪೂರ್ಣಗೊಳಿಸಿರುವವರನ್ನು ಮಾತ್ರ ವೈದ್ಯಕೀಯ ತಾಂತ್ರಿಕ ಕೇಡರ್ ಹೊರತುಪಡಿಸಿ ಸೇನಾಪಡೆಯ ರೆಗ್ಯುಲರ್ ಕೇಡರ್​ಗೆ ನೇಮಕಾತಿ ಮಾಡಿಕೊಳ್ಳಲಾಗುವುದು" ಎಂದು ಸೇನಾಪಡೆ ಹೇಳಿದೆ.

ಸೇವೆಯಲ್ಲಿರುವ ಅಗ್ನಿವೀರ್​​​​​​​ ಯೋಧನನ್ನು ಬಿಡುಗಡೆ ಮಾಡಲು ಬರಲ್ಲ:ಸೇವಾ ಅವಧಿಯಲ್ಲಿರುವ ಯಾವುದೇ ಅಗ್ನಿವೀರ್ ಯೋಧನನನ್ನು ಆತನ ಮನವಿಯ ಮೇರೆಗೆ ಸೇವೆಯಿಂದ ಬಿಡುಗಡೆ ಮಾಡಲು ಬರುವುದಿಲ್ಲ. "ಆದಾಗ್ಯೂ ಕೆಲವೊಂದು ತೀರಾ ಅನಿವಾರ್ಯ ಸಂದರ್ಭಗಳಲ್ಲಿ ಉನ್ನತ ಅಧಿಕಾರಿಗಳ ಅನುಮತಿಯ ಮೇರೆಗೆ ಮಾತ್ರ ಅಗ್ನಿವೀರ್​ರನ್ನು ಸೇವೆಯಿಂದ ಬಿಡುಗಡೆಗೊಳಿಸಬಹುದು."

ಜೂನ್ 14 ರಂದು ಘೋಷಿಸಲಾದ ಅಗ್ನಿವೀರ್ ಯೋಜನೆಯಡಿ ಹದಿನೇಳುವರೆಯಿಂದ 21 ವರ್ಷದೊಳಗಿನವರನ್ನು ನಾಲ್ಕು ವರ್ಷಗಳ ಅವಧಿಗೆ ಸೇನಾಪಡೆಗೆ ಸೇರಿಸಿಕೊಳ್ಳಲಾಗುತ್ತದೆ. ಇದರಲ್ಲಿ ಶೇ 15 ರಷ್ಟು ಜನರನ್ನು ಮಾತ್ರ ಮುಂದಿನ 15 ವರ್ಷಗಳವರೆಗೆ ನೇಮಕಾತಿ ಮಾಡಲಾಗುತ್ತದೆ. ಆದರೆ, 2022 ಕ್ಕೆ ಅನ್ವಯವಾಗುವಂತೆ ಸರ್ಕಾರವು ಕನಿಷ್ಠ ವಯೋಮಿತಿಯನ್ನು 23 ವರ್ಷಗಳಿಗೆ ನಂತರದಲ್ಲಿ ಏರಿಸಿದೆ.

ಹೊಸ ಯೋಜನೆಯಡಿ ನೇಮಕವಾಗುವವರಿಗೆ ಅಗ್ನಿವೀರ್​ ಅಂತಾರೆ:ಹೊಸ ಯೋಜನೆಯಡಿ ನೇಮಕವಾಗುವ ಯೋಧರನ್ನು ಅಗ್ನಿವೀರ್ ಎಂದು ಕರೆಯಲಾಗುವುದು. ಹೊಸ ನೇಮಕಾತಿಗಳು ಸೇನಾಪಡೆ ಕಾಯ್ದೆ, 1950 ರ ಪ್ರಕಾರ ನಡೆಯಲಿವೆ ಹಾಗೂ ಇದರಲ್ಲಿ ನೇಮಕವಾದವರನ್ನು ಭೂಸೇನೆ, ನೌಕಾಪಡೆ ಅಥವಾ ವಾಯುಪಡೆ ಹೀಗೆ ಎಲ್ಲಿಯಾದರೂ ಸೇವೆಗೆ ನಿಯೋಜಿಸಬಹುದು.

ಅಗ್ನಿವೀರರು ತಮ್ಮ ಯುನಿಫಾರ್ಮ್ ಮೇಲೆ ವಿಶಿಷ್ಟವಾದ ಗುರುತೊಂದನ್ನು ಧರಿಸಲಿದ್ದು, ಇದರ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಸೇನಾಪಡೆಯ ಅಗತ್ಯತೆ ಹಾಗೂ ನೀತಿಗಳಿಗನುಗುಣವಾಗಿ, ರೆಗ್ಯುಲರ್ ಕೇಡರ್ ಶ್ರೇಣಿಗೆ ಅರ್ಜಿ ಸಲ್ಲಿಸಲು ಸೇವಾವಧಿ ಪೂರ್ಣಗೊಳಿಸಿದ ಅಗ್ನಿವೀರರಿಗೆ ಅವಕಾಶವಿರುತ್ತದೆ.

ಸೇನಾ ಪ್ರಕಟಣೆ ಹೇಳುವುದೇನು?:ಅಗ್ನಿವೀರರ ಇಂಥ ಅರ್ಜಿಗಳನ್ನು ಅವರ ಕಾರ್ಯಕ್ಷಮತೆಯ ಆಧಾರದಲ್ಲಿ ಕೇಂದ್ರೀಕೃತ ವ್ಯವಸ್ಥೆಯಡಿ ಪರಿಶೀಲಿಸಲಾಗುವುದು. ನಾಲ್ಕು ವರ್ಷ ಸೇವಾವಧಿ ಪೂರೈಸಿದ ಪ್ರತಿ ಬ್ಯಾಚಿನಿಂದ ಗರಿಷ್ಠ ಶೇ 25 ರಷ್ಟು ಅಗ್ನಿವೀರರನ್ನು ರೆಗ್ಯುಲರ್ ಶ್ರೇಣಿಗೆ ಪರಿಗಣಿಸಲಾಗುವುದು ಎಂದು ಭಾರತೀಯ ಸೇನಾಪಡೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

"ಹೀಗೆ ನೇಮಕವಾದ ಅಗ್ನಿವೀರರು 15 ವರ್ಷಗಳ ಸೇವಾವಧಿಯನ್ನು ಪೂರ್ಣಗೊಳಿಸಬೇಕಾಗುತ್ತದೆ ಹಾಗೂ ಇವರ ಸೇವೆಯು ಸದ್ಯ ಚಾಲನೆಯಲ್ಲಿರುವ ಸರ್ವಿಸ್ ನಿಯಮಗಳಿಗೆ (of Junior Commissioned Officer/ Other Ranks) ಒಳಪಟ್ಟಿರುತ್ತದೆ. ಆದರೆ. ನಾಲ್ಕು ವರ್ಷಗಳ ನಂತರ ಸೇನಾಪಡೆಗೆ ನೇಮಕವಾಗುವುದು ಅವರ ಹಕ್ಕಾಗಿರುವುದಿಲ್ಲ ಎಂದು ಸೇನಾಪಡೆಯು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ನೀತಿ- ನಿಯಮಗಳನ್ನು ಪ್ರತಿಯೊಬ್ಬರೂ ಒಪ್ಪಿಕೊಳ್ಳಬೇಕಾಗುತ್ತದೆ:ನೇಮಕಾತಿಯ ಸಮಯದಲ್ಲಿ ಪ್ರತಿಯೊಬ್ಬ ಅಗ್ನಿವೀರನು ಅಗ್ನಿಪಥ್ ಯೋಜನೆಯ ಎಲ್ಲ ನೀತಿ ನಿಯಮಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. 18 ವರ್ಷಕ್ಕೂ ಕಡಿಮೆ ವಯಸ್ಸಿನ ಅರ್ಜಿದಾರರಿಗೆ ಅವರ ಪಾಲಕರು ಅಥವಾ ಪೋಷಕರು ಒಪ್ಪಿಗೆ ಸಹಿ ಮಾಡುವುದು ಅಗತ್ಯ. ರೆಗ್ಯುಲರ್ ಸರ್ವಿಸ್ ನಲ್ಲಿದ್ದವರಿಗೆ ವರ್ಷಕ್ಕೆ 90 ದಿನಗಳ ರಜೆ ಇರುತ್ತದೆ. ಆದರೆ, ಅಗ್ನಿವೀರರಿಗೆ ಈ ರಜೆಯ ಅವಧಿ 30 ದಿನಗಳದ್ದಾಗಿರುತ್ತದೆ. ಇನ್ನು ಅಗತ್ಯವಿದ್ದಾಗ ವೈದ್ಯರ ಸಲಹೆಯಂತೆ ವೈದ್ಯಕೀಯ ರಜೆ ನೀಡಲಾಗುವುದು.

ಅಗ್ನಿವೀರರ ತಿಂಗಳ ಸಂಬಳದ ಶೇ 30 ರಷ್ಟು ಮೊತ್ತವನ್ನು ಕಡ್ಡಾಯವಾಗಿ ಕಾಯ್ದಿಟ್ಟ ನಿಧಿಗೆ ಜಮೆ ಮಾಡಲಾಗುತ್ತದೆ ಹಾಗೂ ಇಷ್ಟೇ ಮೊತ್ತದ ವಂತಿಗೆಯನ್ನು ಸರ್ಕಾರ ಕೂಡ ಜಮೆ ಮಾಡುತ್ತದೆ. ಸೇವಾವಧಿಯ ನಂತರ ಜಮೆಯಾದ 5.02 ಲಕ್ಷ ರೂ.ಗಳ ಸಮನಾದ ಮೊತ್ತವನ್ನು ಭಾರತ ಸರ್ಕಾರ ಸೇರಿಸುತ್ತದೆ ಹಾಗೂ ಹೀಗೆ ಜಮೆಯಾದ ಒಟ್ಟು 10.04 ಲಕ್ಷ ರೂ. ಹಾಗೂ ಇದು ಗಳಿಸಿದ ಬಡ್ಡಿಯ ಮೊತ್ತವನ್ನು ಸೇರಿಸಿ ಅಗ್ನಿವೀರರಿಗೆ ನೀಡಲಾಗುತ್ತದೆ.

ಒಂದೊಮ್ಮೆ ಅಗ್ನಿವೀರರು ಸೇನಾಪಡೆಯ ರೆಗ್ಯುಲರ್ ಕೇಡರ್ ಸೇವೆಗೆ ಆಯ್ಕೆಯಾದಲ್ಲಿ ಸೇವಾ ನಿಧಿ ಪ್ಯಾಕೇಜ್ ಅಡಿ ಅವರಿಗೆ ಅವರ ಸಂಬಳದಿಂದ ಕಡಿತವಾದ ಮೊತ್ತವನ್ನು ಮಾತ್ರ ಬಡ್ಡಿಯ ಸಮೇತ ನೀಡಲಾಗುತ್ತದೆ ಎಂದು ಸೇನಾಪಡೆ ತಿಳಿಸಿದೆ.

ಒಂದು ವೇಳೆ ಯಾವುದೇ ಅಗ್ನಿವೀರ್, ತಮ್ಮ ಸ್ವಂತ ಕೋರಿಕೆಯ ಮೇರೆಗೆ ಸೇವಾವಧಿ ಪೂರ್ಣಗೊಳ್ಳುವ ಮುನ್ನವೇ ಸೇವೆಯಿಂದ ಬಿಡುಗಡೆಯಾದಲ್ಲಿ, ಅಂಥ ದಿನಾಂಕದವರೆಗೆ ಅವರ ಸೇವಾ ನಿಧಿ ಪ್ಯಾಕೇಜಿನಲ್ಲಿ ಸಂಗ್ರಹವಾದ ಮೊತ್ತವನ್ನು ಬಡ್ಡಿಯೊಂದಿಗೆ ನೀಡಲಾಗುತ್ತದೆ. ಇಂಥ ಸಂದರ್ಭದಲ್ಲಿ ಸರ್ಕಾರದಿಂದ ಯಾವುದೇ ವಂತಿಗೆಯನ್ನು ಭರಿಸಲಾಗುವುದಿಲ್ಲ.

ಇದನ್ನು ಓದಿ:ಅಗ್ನಿಪಥ ಅಗ್ನಿಕುಂಡ: ಬಿಹಾರದ 20 ಜಿಲ್ಲೆಗಳಲ್ಲಿ ಇಂಟರ್​​ನೆಟ್ ಸೇವೆ ಸ್ಥಗಿತ: ಮುಂದುವರಿದ ಬಂದ್​


Last Updated : Jun 20, 2022, 1:40 PM IST

ABOUT THE AUTHOR

...view details