ಕರ್ನಾಟಕ

karnataka

ತುರ್ತು ಪರಿಸ್ಥಿತಿಗೆ 46 ವರ್ಷ: ಅಂದಿನ ಕುತೂಹಲಕರ ಘಟನಾವಳಿಗಳ ವಿವರ ಇಲ್ಲಿದೆ

By

Published : Jun 25, 2020, 2:48 PM IST

Updated : Jun 25, 2021, 9:51 AM IST

1973 ರಿಂದ ಮಾರ್ಚ್ 1974 ರ ಅವಧಿಯಲ್ಲಿ ಕಾಲೇಜು ಶುಲ್ಕ ಹೆಚ್ಚಳ ವಿರೋಧಿಸಿ ಗುಜರಾತಿನಲ್ಲಿ ಬೃಹತ್ ಪ್ರಮಾಣದ ವಿದ್ಯಾರ್ಥಿ ಪ್ರತಿಭಟನೆಗಳು ನಡೆದವು. ನಂತರ ಕಾರ್ಖಾನೆಗಳ ಕಾರ್ಮಿಕರು ಸಹ ಈ ಆಂದೋಲನಕ್ಕೆ ಕೈಜೋಡಿಸಿದರು. ಆಗ ರಾಜ್ಯದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್​ ಸರ್ಕಾರವು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿ ಸರ್ಕಾರದ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆಗಳು ಮುಂದುವರೆದವು. ಈ ಆಂದೋಲನವನ್ನು ನವ ನಿರ್ಮಾಣ ಆಂದೋಲನ ಅಥವಾ ಪುನರುತ್ಥಾನ ಆಂದೋಲನ ಎಂದು ಕರೆಯಲಾಗಿದೆ. ಆಂದೋಲನದ ತೀವ್ರತೆ ಎಷ್ಟಿತ್ತೆಂದರೆ ಫೆಬ್ರವರಿ 1974ರ ಹೊತ್ತಿಗೆ ಕೇಂದ್ರ ಸರ್ಕಾರವು ಗುಜರಾತ್ ರಾಜ್ಯ ವಿಧಾನಸಭೆಯನ್ನು ಅಮಾನತುಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಿಬಿಟ್ಟಿತು.

45 years to Emergency:
45 years to Emergency:

ಹೈದರಾಬಾದ್:ಜೂನ್ 25, 1975 ರ ಮಧ್ಯರಾತ್ರಿ ಆಗಿನ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ದೇಶಾದ್ಯಂತ ಹಠಾತ್ತಾಗಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದರು. ದೇಶದಲ್ಲಿನ ಆಂತರಿಕ ಕ್ಷೋಭೆಯ ಕಾರಣ ನೀಡಿ ಕಾಯ್ದೆ 352 (1) ರ ಅನ್ವಯ ಆಗಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರು ತುರ್ತು ಪರಿಸ್ಥಿತಿ ಘೋಷಣೆಯ ನಿರ್ಧಾರಕ್ಕೆ ಸಹಿ ಹಾಕಿದ್ದರು. ನಂತರ ಮುಂದಿನ 21 ತಿಂಗಳುಗಳ ಕಾಲ ದೇಶ ತುರ್ತು ಪರಿಸ್ಥಿತಿಯ ಅಜ್ಞಾತವಾಸ ಅನುಭವಿಸುವಂತಾಗಿತ್ತು.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ರಾಜಕೀಯವಾಗಿ ಅತ್ಯಂತ ವಿವಾದಾತ್ಮಕ ನಿರ್ಣಯವೆಂದೇ ಬಣ್ಣಿಸಲಾಗಿರುವ ತುರ್ತು ಪರಿಸ್ಥಿತಿಯ ಘೋಷಣೆಗೆ ಕಾರಣವಾದ ಅಂಶಗಳು ಹಾಗೂ ಇದರ ಹಿಂದಿನ ಸಂಪೂರ್ಣ ಘಟನಾವಳಿಗಳ ವಿವರವನ್ನು ಈಟಿವಿ ಭಾರತ್ ನಿಮಗಾಗಿ ತಂದಿದೆ.

ತುರ್ತು ಪರಿಸ್ಥಿತಿ ಘೋಷಣೆಗೆ ಕಾರಣವೇನು?

ತುರ್ತು ಪರಿಸ್ಥಿತಿ ಜಾರಿಗೊಳಿಸಲು ಹಲವಾರು ಘಟನಾವಳಿಗಳು ಕಾರಣವಾಗಿದ್ದವು. ತುರ್ತು ಪರಿಸ್ಥಿತಿ ಜಾರಿಗೆ ಮುನ್ನ ಹಲವಾರು ತಿಂಗಳುಗಳ ಕಾಲ ದೇಶದಲ್ಲಿ ನಿರುದ್ಯೋಗ ಸಮಸ್ಯೆ, ಹಣದುಬ್ಬರ ಹಾಗೂ ಆಹಾರ ಕೊರತೆ, ಹಿಂಸಾಚಾರದ ಘಟನೆಗಳು ನಡೆದಿದ್ದವು.

ತುರ್ತು ಪರಿಸ್ಥಿತಿ ಘೋಷಣೆಗೆ ಕಾರಣವಾದ 70 ರ ದಶಕದ ಪ್ರಮುಖ ಘಟನಾವಳಿಗಳು:

ಗುಜರಾತ್​ನಲ್ಲಿ ನವನಿರ್ಮಾಣ ಆಂದೋಲನ

1973 ರಿಂದ ಮಾರ್ಚ್ 1974 ರ ಅವಧಿಯಲ್ಲಿ ಕಾಲೇಜು ಶುಲ್ಕ ಹೆಚ್ಚಳ ವಿರೋಧಿಸಿ ಗುಜರಾತಿನಲ್ಲಿ ಬೃಹತ್ ಪ್ರಮಾಣದ ವಿದ್ಯಾರ್ಥಿ ಪ್ರತಿಭಟನೆಗಳು ನಡೆದವು. ನಂತರ ಕಾರ್ಖಾನೆಗಳ ಕಾರ್ಮಿಕರು ಸಹ ಈ ಆಂದೋಲನಕ್ಕೆ ಕೈಜೋಡಿಸಿದರು. ಆಗ ರಾಜ್ಯದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್​ ಸರ್ಕಾರವು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿ ಸರ್ಕಾರದ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆಗಳು ಮುಂದುವರೆದವು.

ಈ ಆಂದೋಲನವನ್ನು ನವನಿರ್ಮಾಣ ಆಂದೋಲನ ಅಥವಾ ಪುನರುತ್ಥಾನ ಆಂದೋಲನ ಎಂದು ಕರೆಯಲಾಗಿದೆ. ಆಂದೋಲನದ ತೀವ್ರತೆ ಎಷ್ಟಿತ್ತೆಂದರೆ ಫೆಬ್ರವರಿ 1974ರ ಹೊತ್ತಿಗೆ ಕೇಂದ್ರ ಸರ್ಕಾರವು ಗುಜರಾತ್ ರಾಜ್ಯ ವಿಧಾನಸಭೆಯನ್ನು ಅಮಾನತುಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಿಬಿಟ್ಟಿತು.

ಜೆಪಿ ಆಂದೋಲನ

ಮಾರ್ಚ್​ 1974 ರಲ್ಲಿ ಬಿಹಾರ ಛಾತ್ರ ಸಂಘರ್ಷ ಸಮಿತಿ ನೇತೃತ್ವದಲ್ಲಿ, ಬಿಹಾರದಲ್ಲಿ ಇದೇ ರೀತಿಯ ವಿದ್ಯಾರ್ಥಿ ಪ್ರತಿಭಟನೆಗಳು ಆರಂಭವಾದವು. ಆಗಿನ ಖ್ಯಾತ ಗಾಂಧಿವಾದಿ, ಸಮಾಜವಾದಿ ನೇತಾರ ಜಯಪ್ರಕಾಶ ನಾರಾಯಣ್ ಅವರು ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರಿಂದ ಇಡೀ ಆಂದೋಲನಕ್ಕೆ ರಾಜಕೀಯ ಸ್ವರೂಪ ಬಂದಿತು. ಸ್ವಾತಂತ್ರ್ಯ ಹೋರಾಟಗಾರ ಜಯಪ್ರಕಾಶ ನಾರಾಯಣ್ ಅವರು ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರಿಂದ ಇದು ಜೆಪಿ ಆಂದೋಲನ ಎಂದೇ ಪ್ರಸಿದ್ಧವಾಯಿತು. ಇದಕ್ಕೂ ಮುನ್ನ ಇದು ಬಿಹಾರ ಆಂದೋಲನವಾಗಿ ಆರಂಭವಾಗಿತ್ತು.

ವಿದ್ಯಾರ್ಥಿಗಳು, ರೈತರು, ಕಾರ್ಮಿಕರು ಅಹಿಂಸಾತ್ಮಕ ಆಂದೋಲನದಲ್ಲಿ ಪಾಲ್ಗೊಂಡು ಭಾರತೀಯ ಸಮಾಜದಲ್ಲಿ "ಸಂಪೂರ್ಣ ಕ್ರಾಂತಿ" ತರಲು ಹೋರಾಡಬೇಕೆಂದು ಜೆಪಿ ಕರೆ ನೀಡಿದರು. ಬಿಹಾರ ರಾಜ್ಯ ಸರ್ಕಾರವನ್ನು ವಜಾ ಮಾಡಬೇಕೆಂದು ಅವರು ಆಗ್ರಹಿಸಿದ್ದರಾದರೂ ಕೇಂದ್ರ ಸರ್ಕಾರ ಅದಕ್ಕೊಪ್ಪಲಿಲ್ಲ.

ಜೆಪಿ ಆಂದೋಲನವು ಅಸಂಸದೀಯ ಹಾಗೂ ಆಡಳಿತ ವಿರೋಧಿಯಾಗಿದೆ ಎಂದು ಹೇಳಿದ ಇಂದಿರಾ ಗಾಂಧಿ, ಜೆಪಿ ಆಂದೋಲನವನ್ನು ತಿರಸ್ಕರಿಸಿದರು. ಅಲ್ಲದೇ ಸಾರ್ವತ್ರಿಕ ಚುನಾವಣೆಯಲ್ಲಿ ತನ್ನ ವಿರುದ್ಧ ಸ್ಪರ್ಧಿಸಿ ಗೆದ್ದು ತೋರಿಸುವಂತೆ ಜಯಪ್ರಕಾಶ ನಾರಾಯಣರಿಗೆ ಇಂದಿರಾ ಸವಾಲು ಹಾಕಿದರು.

ರೈಲ್ವೆ ಕಾರ್ಮಿಕರ ಪ್ರತಿಭಟನೆ

1974 ರಲ್ಲಿ ಆಗಿನ ಮತ್ತೊಬ್ಬ ಸಮಾಜವಾದಿ ಮುಖಂಡ ಜಾರ್ಜ್ ಫರ್ನಾಂಡಿಸ್ ನೇತೃತ್ವದಲ್ಲಿ ದೇಶಾದ್ಯಂತ ರೈಲ್ವೆ ನೌಕರರ ಮುಷ್ಕರ ಆರಂಭವಾಯಿತು. ಇದರಿಂದ ಇಡೀ ದೇಶದಲ್ಲಿ ಸಾರ್ವಜನಿಕರ ಪ್ರಯಾಣ ಹಾಗೂ ಸರಕು ಸಾಮಗ್ರಿ ಸಾಗಣೆ ಸಂಪೂರ್ಣ ಸ್ಥಗಿತಗೊಂಡವು. ಸುಮಾರು ಮೂರು ವಾರಗಳವರೆಗೆ ನಡೆದ ಈ ಮುಷ್ಕರದಲ್ಲಿ ರೈಲ್ವೆಯ ಸುಮಾರು 10 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಭಾಗಿಯಾಗಿದ್ದರು.

ಮುಷ್ಕರದಿಂದ ಆಕ್ರೋಶಗೊಂಡ ಕೇಂದ್ರ ಸರ್ಕಾರ ಸಾವಿರಾರು ಕಾರ್ಮಿಕರನ್ನು ಬಂಧಿಸಿ, ಅನೇಕ ಕಾರ್ಮಿಕ ಕುಟುಂಬಗಳನ್ನು ರೈಲ್ವೆ ಕ್ವಾರ್ಟರ್ಸ್​ಗಳಿಂದ ಹೊರದಬ್ಬಿ ಆಂದೋಲವನ್ನು ಹೊಸಕಿ ಹಾಕಿತು.

ಅಲಹಾಬಾದ್ ಹೈಕೋರ್ಟ್ ತೀರ್ಪು!

1971ರಲ್ಲಿ ರಾಯ್​ಬರೇಲಿ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಇಂದಿರಾ ವಿರುದ್ಧ ಸ್ಪರ್ಧಿಸಿದ್ದ ಜಯಪ್ರಕಾಶ ನಾರಾಯಣ್ ಚುನಾವಣೆಯಲ್ಲಿ ಸೋಲುಂಡರು. ಆದರೆ, ಚುನಾವಣೆಯಲ್ಲಿ ಇಂದಿರಾ ಗಾಂಧಿ ಭ್ರಷ್ಟ ಮಾರ್ಗಗಳನ್ನು ಅನುಸರಿಸಿ ಗೆದ್ದು ಬಂದಿದ್ದಾರೆ ಎಂದು ಆರೋಪಿಸಿದ ಜೆಪಿ, ಚುನಾವಣಾ ಪ್ರಕ್ರಿಯೆ ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್​ ಮೊರೆ ಹೋದರು. ಜೆಪಿ ನ್ಯಾಯಾಲಯದ ಕದ ತಟ್ಟಿದ್ದು ಸಂಪೂರ್ಣ ಆಂದೋಲನಕ್ಕೆ ಬಹುದೊಡ್ಡ ತಿರುವು ಕೊಟ್ಟಿತು.

ಪ್ರಕರಣದ ಸಮಗ್ರ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್​ ಜೂನ್ 12, 1975 ರಂದು ತನ್ನ ತೀರ್ಪು ನೀಡಿತು. 1971 ರ ರಾಯ್​ಬರೇಲಿ ಲೋಕಸಭಾ ಚುನಾವಣೆಯನ್ನು ರದ್ದುಗೊಳಿಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಗ್ ಮೋಹನ್ ಲಾಲ್ ಸಿನ್ಹಾ, ಇಂದಿರಾ ಗಾಂಧಿಯವರ ಲೋಕಸಭಾ ಸದಸ್ಯತ್ವವನ್ನು ಅನೂರ್ಜಿತಗೊಳಿಸಿ ಆದೇಶ ನೀಡಿದರು. ಈ ಆದೇಶ ನೀಡುವ ಮುನ್ನ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಲು ಇಂದಿರಾ ಅವರಿಗೆ 20 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ಈ 20 ದಿನಗಳ ಅವಧಿಯಲ್ಲಿ ಇಂದಿರಾ ಸರ್ಕಾರಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕೋರ್ಟ್ ಅಭಿಪ್ರಾಯಪಟ್ಟು ಅವರ ಚುನಾವಣೆಯನ್ನು ರದ್ದುಗೊಳಿಸಿತ್ತು.

ಹೈಕೋರ್ಟ್​ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ನಲ್ಲಿ ಜೂನ್ 24, 1975 ರಂದು ಇಂದಿರಾ ಗಾಂಧಿ ಅರ್ಜಿ ಸಲ್ಲಿಸಿದರು. ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್ ನೇತೃತ್ವದ ಪೀಠ, ಇಂದಿರಾಗೆ ಲೋಕಸಭಾ ಕಲಾಪಕ್ಕೆ ಹಾಜರಾಗಲು ಅನುಮತಿ ನೀಡಿತು. ಆದರೆ, ಅಂತಿಮ ಆದೇಶ ಬರುವವರೆಗೆ ಇಂದಿರಾ ಲೋಕಸಭೆಯ ಯಾವುದೇ ಮತದಾನ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧ ವಿಧಿಸಲಾಗಿತ್ತು.

ಅದರ ಮರುದಿನ ಜೂನ್ 25, 1975 ರಂದು ಜೆಪಿ, ಮೊರಾರ್ಜಿ ದೇಸಾಯಿ, ರಾಜ ನಾರಾಯಣ್, ನಾನಾಜಿ ದೇಶಮುಖ, ಮದನ ಲಾಲ್ ಖುರಾನಾ ಸೇರಿದಂತೆ ಹಲವಾರು ಘಟಾನುಘಟಿ ನಾಯಕರು ದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರಚಂಡ ರ‍್ಯಾಲಿ ನಡೆಸಿ ಇಂದಿರಾ ಗಾಂಧಿ ರಾಜಿನಾಮೆಗೆ ಒತ್ತಾಯಿಸಿದರು. "ಸಿಂಹಾಸನ ಖಾಲಿ ಮಾಡಿ, ಜನ ಬರುತ್ತಿದ್ದಾರೆ" ಎಂದು ರ‍್ಯಾಲಿಯಲ್ಲಿ ಘೋಷಣೆ ಮೊಳಗಿಸುವ ಮೂಲಕ ಜೆಪಿ ಪ್ರಖರ ಭಾಷಣ ಮಾಡಿದ್ದರು. ಅಲ್ಲದೇ ಪೊಲೀಸರು ಹಾಗೂ ಮಿಲಿಟರಿ ಯೋಧರು ಸರ್ಕಾರದ ಆದೇಶಗಳನ್ನು ಪಾಲಿಸಬಾರದು ಎಂದು ಕರೆ ನೀಡಿದರು.

ಆದರೆ ಈ ಪ್ರತಿಭಟನೆಗಳಿಗೆ ಒಂದಿಷ್ಟೂ ಸೊಪ್ಪು ಹಾಕದ ಇಂದಿರಾ ಪ್ರಧಾನಿ ಕುರ್ಚಿಗೆ ಗಟ್ಟಿಯಾಗಿ ಅಂಟಿಕೊಂಡು ಕುಳಿತರು.

ಈ ಎಲ್ಲ ಬೆಳವಣಿಗೆಗಳ ನಂತರ ಇಂದಿರಾ ಗಾಂಧಿ ತಕ್ಷಣವೇ ತುರ್ತು ಪರಿಸ್ಥಿತಿ ಘೋಷಣೆಯ ಕರಡನ್ನು ರಾಷ್ಟ್ರಪತಿಗಳಿಗೆ ರವಾನಿಸಿದರು. ಒಂದು ಕ್ಷಣವೂ ತಡಮಾಡದ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್, ಈ ಪತ್ರಕ್ಕೆ ಸಹಿ ಹಾಕಿದರು.

"ಭಾರತದ ಆಂತರಿಕ ಸುರಕ್ಷತೆಗೆ ಅಪಾಯ ಎದುರಾಗಿರುವ ಮಾಹಿತಿಗಳು ಸರ್ಕಾರಕ್ಕೆ ಬಂದಿವೆ." ಎಂದು ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

ಅಲ್ಲಿಗೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ 3ನೇ ಬಾರಿಗೆ ತುರ್ತು ಪರಿಸ್ಥಿತಿ ಎದುರಾಗಿತ್ತು. ಇದಕ್ಕೂ ಮುನ್ನ 1962 ರಲ್ಲಿ ಚೀನಾ ಯುದ್ಧ ಹಾಗೂ 1971 ರಲ್ಲಿ ಪಾಕಿಸ್ತಾನ ವಿರುದ್ಧದ ಯುದ್ಧ ಸಮಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು.

ತುರ್ತು ಪರಿಸ್ಥಿತಿ ಜಾರಿ; ಮಧ್ಯರಾತ್ರಿ ಮುಖಂಡರ ಬಂಧನ

ಜೆಪಿ, ಮೊರಾರ್ಜಿ ದೇಸಾಯಿ, ಜಾರ್ಜ್ ಫರ್ನಾಂಡಿಸ್, ಅಟಲ್ ಬಿಹಾರಿ ವಾಜಪೇಯಿ, ಎಲ್​ಕೆ ಅಡ್ವಾಣಿ, ಅರುಣ್​​ ಜೇಟ್ಲಿ ಸೇರಿದಂತೆ ನೂರಾರು ಪ್ರತಿಪಕ್ಷ ನಾಯಕರನ್ನು ರಾತ್ರೋರಾತ್ರಿ ಅವರ ಮನೆಗಳಿಂದ ಬಂಧಿಸಿ ಜೈಲಿಗಟ್ಟಲಾಯಿತು.

ಇದರ ಜೊತೆಗೆ ದೇಶದ ಎಲ್ಲ ಮಾಧ್ಯಮಗಳ ಮೇಲೆ ಸಂಪೂರ್ಣ ನಿರ್ಬಂಧ ಹೇರಿ, ಪತ್ರಿಕಾ ಸ್ವಾತಂತ್ರ್ರವನ್ನು ಹತ್ತಿಕ್ಕಲಾಯಿತು. ಆಗ ಪತ್ರಿಕೆಗಳು ಯಾವುದೇ ಪ್ರಮುಖ ಸುದ್ದಿಯನ್ನು ಪ್ರಕಟಿಸಬೇಕಾದರೂ ಸರ್ಕಾರದ ಅನುಮತಿ ಪಡೆಯಬೇಕಾಗಿತ್ತು. ಸರ್ಕಾರದ ಈ ಕರಾಳ ನಿರ್ಧಾರ ಖಂಡಿಸಿ ಇಂಡಿಯನ್ ಎಕ್ಸಪ್ರೆಸ್​ ಸೇರಿದಂತೆ ಇನ್ನೂ ಹಲವಾರು ಪತ್ರಿಕೆಗಳು ಮುಖಪುಟವನ್ನು ಖಾಲಿ ಬಿಡುವ ಮೂಲಕ ಉಗ್ರವಾಗಿ ಪ್ರತಿಭಟಿಸಿದವು. ಆದರೆ ದಿನಗಳೆದಂತೆ ಬಹುತೇಕ ಮಾಧ್ಯಮಗಳು ಸರ್ಕಾರಿ ಆದೇಶವನ್ನು ಪಾಲಿಸಲಾರಂಭಿಸಿದವು. ಇಂಡಿಯನ್​ ಎಕ್ಸಪ್ರೆಸ್​ ಮಾತ್ರ ಇದಕ್ಕೆ ಹೊರತಾಗಿತ್ತು.

ಇನ್ನು ತುರ್ತು ಪರಿಸ್ಥಿತಿ ಸಮಯದಲ್ಲಿ ಹಲವಾರು ಮಾನವ ಹಕ್ಕು ಉಲ್ಲಂಘನೆಯ ಪ್ರಕರಣಗಳು ನಡೆದ ಬಗ್ಗೆ ವರದಿಯಾಗತೊಡಗಿದವು. ಇಂದಿರಾ ಪುತ್ರ ಸಂಜಯ ಗಾಂಧಿ ನೇತೃತ್ವದಲ್ಲಿ ದೇಶಾದ್ಯಂತ ನಡೆದ ಸಾಮೂಹಿಕ ಸಂತಾನೋತ್ಪತ್ತಿ ಹರಣ ಕಾರ್ಯಕ್ರಮ ಭಾರಿ ಚರ್ಚೆಗೆ ಗುರಿಯಾಯಿತು.

ಎಮರ್ಜೆನ್ಸಿ ತೆರವು - ಚುನಾವಣೆ ಘೋಷಣೆ

ಮಾರ್ಚ್​ 21, 1977 ರಂದು ತುರ್ತು ಪರಿಸ್ಥಿತಿಯನ್ನು ಹಿಂಪಡೆದ ಇಂದಿರಾ ಗಾಂಧಿ, ಬಂಧಿತ ನಾಯಕರ ಬಿಡುಗಡೆಗೆ ಆದೇಶಿಸಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ಘೋಷಿಸಿದರು. ಈ ಚುನಾವಣೆಯಲ್ಲಿ ಸೋತು ಸುಣ್ಣವಾದ ಕಾಂಗ್ರೆಸ್ ಮುಖಭಂಗಕ್ಕೀಡಾಯಿತು.

ಈ ಸಮಯದಲ್ಲಿ ಜನತಾ ಪಾರ್ಟಿ ದೇಶದ ಆಡಳಿತದ ಚುಕ್ಕಾಣಿ ಹಿಡಿಯಿತು. ಪ್ರಧಾನಿ ಮೊರಾರ್ಜಿ ದೇಸಾಯಿ ನೇತೃತ್ವದ ಈ ಸರ್ಕಾರ 21 ತಿಂಗಳುಗಳ ಕಾಲ ಆಡಳಿತ ನಡೆಸಿತು.

Last Updated : Jun 25, 2021, 9:51 AM IST

ABOUT THE AUTHOR

...view details