ಕರ್ನಾಟಕ

karnataka

ಯುಪಿಯಲ್ಲಿ 36 ಮುಸ್ಲಿಂ ಅಭ್ಯರ್ಥಿಗಳನ್ನ ವಿಧಾನಸಭೆಗೆ ಕಳುಹಿಸಿದ ಮತದಾರ!

By

Published : Mar 11, 2022, 10:22 AM IST

ಆಡಳಿತಾರೂಢ ಬಿಜೆಪಿ ಹಾಗೂ ಸಮಾಜವಾದಿ ಪಕ್ಷಗಳ ನೇರ ಸ್ಪರ್ಧೆಯನ್ನು ಗಮನಿಸಿರುವ ಉತ್ತರಪ್ರದೇಶದ ಮತದಾರರು ಈ ಬಾರಿ 36 ಮುಸ್ಲಿಂ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ಅದರಲ್ಲೂ ಕೆಲವರು ಬಿಜೆಪಿ ವಿರುದ್ಧ ವಿಜಯ ಸಾಧಿಸಿದ್ದು, ಸಮಾಜವಾದಿ ಪಕ್ಷಕ್ಕೆ ಮುಸ್ಲಿಂ ಸಮುದಾಯ ಬೆಂಬಲವನ್ನು ಸೂಚಿಸಿದ್ದಾರೆ ಎಂಬುದು ದೃಢವಾಗಿದೆ.

people
ಜನತೆ

ಲಖನೌ:ಉತ್ತರಪ್ರದೇಶದ ವಿಧಾನಸಭಾ ಚುನಾವಣಾ ಅಂಗಳದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನೇರ ಸ್ಪರ್ಧೆಯನ್ನು ಗಮನಿಸಿರುವ ಮತದಾರರು ಈ ಬಾರಿ 36 ಮುಸ್ಲಿಂ ಅಭ್ಯರ್ಥಿಗಳನ್ನು ವಿಧಾನಸಭೆಗೆ ಆಯ್ಕೆ ಮಾಡಿದ್ದಾರೆ. ಕಳೆದ ಬಾರಿಗಿಂತ ಈ ಸಲ ಇಬ್ಬರು ಅಭ್ಯರ್ಥಿಗಳನ್ನು ಹೆಚ್ಚಾಗಿ ಆಯ್ಕೆ ಮಾಡಿದ್ದಾರೆ.

ಶೇ.20 ಕ್ಕಿಂತ ಹೆಚ್ಚು ಮುಸ್ಲಿಂ ಜನಸಂಖ್ಯೆ ಇರುವ ರಾಜ್ಯದ ಒಟ್ಟು 403 ಶಾಸಕರಲ್ಲಿ ಹೊಸದಾಗಿ ಚುನಾಯಿತರಾದ ಶಾಸಕರಲ್ಲಿ ಶೇಕಡಾ 8.93 ರಷ್ಟು ಮುಸ್ಲಿಮರಿದ್ದಾರೆ. ಅವರಲ್ಲಿ ಮೊಹಮ್ಮದ್ ಅಜಂ ಖಾನ್, ಅವರ ಮಗ ಅಬ್ದುಲ್ಲಾ ಅಜಂ ಖಾನ್, ರಾಜಕಾರಣಿಯಾಗಿ ಬದಲಾದ ಗ್ಯಾಂಗ್‌ಸ್ಟರ್ ಮುಖ್ತಾರ್ ಅನ್ಸಾರಿ ಅವರ ಮಗ ಅಬ್ಬಾಸ್ ಮತ್ತು ಸೋದರಳಿಯ ಮನ್ನು ಗೆಲುವು ಸಾಧಿಸಿರುವವರಲ್ಲಿ ಪ್ರಮುಖರು.

ಅಜಂಖಾನ್​ ಪುತ್ರನಿಗೆ ಭರ್ಜರಿ ಜಯ:ರಾಮ್‌ಪುರದಲ್ಲಿ, ಜೈಲಿಗೆ ಹೋಗಿದ್ದ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ 1,21,755 ಮತಗಳನ್ನು ಗಳಿಸಿ, 56,368 ಮತಗಳನ್ನು ಗಳಿಸಿರುವ ಬಿಜೆಪಿಯ ಆಕಾಶ್ ಸಕ್ಸೇನಾ ಅವರನ್ನು ಸೋಲಿಸಿದ್ದಾರೆ. ಸುವಾರ್ ವಿಧಾನಸಭಾ ಕ್ಷೇತ್ರದಲ್ಲಿ ಅಪ್ನಾ ದಳದಿಂದ ಸ್ಪರ್ಧಿಸಿದ್ದ ಹೈದರ್ ಅಲಿ ಖಾನ್ ಅಲಿಯಾಸ್​ ಹಮ್ಜಾ ಮಿಯಾನ್ ಅವರ 65,059 ಮತಗಳ ವಿರುದ್ಧ ಅಜಂ ಖಾನ್​ ಅವರ ಪುತ್ರ ಅಬ್ದುಲ್ಲಾ ಅಜಮ್ 1,26,162 ಮತಗಳನ್ನು ಪಡೆದರು.

ಮುಖ್ತಾರ್​ ಅನ್ಸಾರಿ ಪುತ್ರನೂ ವಿನ್​:ಮೌ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಬಿಎಸ್‌ಪಿಯಿಂದ ಸ್ಪರ್ಧಿಸಿದ್ದ ಮುಖ್ತಾರ್ ಅನ್ಸಾರಿ ಅವರ ಪುತ್ರ ಅಬ್ಬಾಸ್ ಅನ್ಸಾರಿ ಬಿಜೆಪಿಯ ಅಶೋಕ್ ಕುಮಾರ್ ಸಿಂಗ್ ಅವರನ್ನು 38,227 ಮತಗಳಿಂದ ಸೋಲಿಸಿದ್ದರೆ, ಮೊಹಮ್ಮದಾಬಾದ್​ನಲ್ಲಿ ಮಾಜಿ ಶಾಸಕ ಸಿಬ್ಗತುಲ್ಲಾ ಅನ್ಸಾರಿ ಅವರ ಪುತ್ರ ಮತ್ತು ಮುಖ್ತಾರ್ ಅವರ ಸೋದರಳಿಯ ಸುಹೈಬ್ ಅನ್ಸಾರಿ ಅಲಿಯಾಸ್​ ಮನ್ನು 18,199 ಮತಗಳ ಅಂತರದಿಂದ ಬಿಜೆಪಿಯ ಹಾಲಿ ಶಾಸಕಿ ಅಲ್ಕಾ ರೈ ಅವರನ್ನು ಸೋಲಿಸಿ ವಿಜಯಶಾಲಿಯಾಗಿದ್ದಾರೆ.

ಕೈರಾನಾ ಕ್ಷೇತ್ರದಲ್ಲಿ ಎಸ್‌ಪಿ ಅಭ್ಯರ್ಥಿ ನಹಿದ್ ಹಸನ್ ಅವರು ಬಿಜೆಪಿ ಅಭ್ಯರ್ಥಿ ಮೃಗಾಂಕಾ ಸಿಂಗ್ ಅವರ 1,05,148 ವಿರುದ್ಧ 1,31,035 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ನಿಜಾಮಾಬಾದ್‌ನಲ್ಲಿ ಎಸ್‌ಪಿಯ 85 ವರ್ಷದ ಅನುಭವಿ ಆಲಂ ಬಾಡಿ ಅವರು ಬಿಜೆಪಿಯ ಮನೋಜ್ ಅವರನ್ನು 34,187 ಮತಗಳ ಅಂತರದಿಂದ ಸೋಲಿಸಿ ಮರು ಆಯ್ಕೆಯಾದರು. ಮೀರತ್‌ನ ಕಿಥೋರ್ ಅಸೆಂಬ್ಲಿ ಕ್ಷೇತ್ರದಲ್ಲಿ ಎಸ್‌ಪಿಯ ಶಾಹಿದ್ ಮಜೂರ್ ಮತ್ತು ಬಿಜೆಪಿಯ ಸತ್ವಿರ್ ಸಿಂಗ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಮಜೂರ್ ಅವರು 2,180 ಮತಗಳ ಅಲ್ಪ ಅಂತರದಿಂದ ಗೆದ್ದರು. ಕುಂದರ್ಕಿಯಲ್ಲಿ ಎಸ್‌ಪಿ ಸಂಸದ ಶಫೀಕರ್ ರಹಮಾನ್ ಬಾರ್ಕ್ ಅವರ ಪುತ್ರ ಜಿಯಾ-ಉರ್-ರೆಹಮಾನ್ ಬಿಜೆಪಿಯ ಕಮಲ್ ಕುಮಾರ್ ಅವರನ್ನು 43,162 ಮತಗಳಿಂದ ಸೋಲಿಸಿದ್ದಾರೆ.

ಯಾರು ಎಷ್ಟು ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್​ ಕೊಟ್ಟಿದ್ದರು?:ಈ ಬಾರಿ ಬಿಎಸ್​ಪಿ 88 ಹಾಗೂ ಕಾಂಗ್ರೆಸ್​ 75 ಹಾಗೂ ಸಮಾಜವಾದಿ ಪಕ್ಷ 74 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಕೂಡ ಸಮುದಾಯದ 60 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಮುಸ್ಲಿಮರು ಮತ ಚಲಾಯಿಸಿದ ರೀತಿಯನ್ನು ಗಮನಿಸಿದರೆ ಸಮಾಜವಾದಿ ಪಕ್ಷ ಮೊದಲ ಸ್ಥಾನದಲ್ಲಿದ್ದು, ಎಐಎಂಐಎಂ ಹಾಗೂ ಬಿಎಸ್​ಪಿಗೂ ಕೆಲವೊಂದು ಕ್ಷೇತ್ರಗಳಲ್ಲಿ ಮುಸ್ಲಿಮರು ಬೆಂಬಲವನ್ನು ಸೂಚಿಸಿದ್ದಾರೆ.

ಇದನ್ನೂ ಓದಿ: ಪಂಚ ರಾಜ್ಯ ಚುನಾವಣೆ: ಅಚ್ಚರಿಯಾದ್ರೂ ಇದು ಸತ್ಯ.. ನೋಟಾಗೆ ಗುದ್ದಿದ ಸುಮಾರು ಎಂಟು ಲಕ್ಷ ಮಂದಿ!

ABOUT THE AUTHOR

...view details