ಕರ್ನಾಟಕ

karnataka

ವಿಷಕಾರಿ ಮದ್ಯ ಸೇವನೆ: ಬಿಹಾರದಲ್ಲಿ ಇಬ್ಬರು ಕಾರ್ಮಿಕರ ಸಾವು

By

Published : Feb 17, 2021, 5:51 PM IST

ವಿಷಕಾರಿ ಮದ್ಯ ಸೇವಿಸಿ ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯ ಮಜೋಲಿಯಾ ಗ್ರಾಮದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ.

hooch-poisoning
ವಿಷಕಾರಿ ಮದ್ಯ ಸೇವನೆ

ಪಾಟ್ನಾ: ವಿಷಕಾರಿ ಮದ್ಯ ಸೇವಿಸಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಗೋಪಾಲ್‌ಗಂಜ್ ಜಿಲ್ಲೆಯ ಮಜೋಲಿಯಾ ಗ್ರಾಮದಲ್ಲಿ ನಡೆದಿದೆ. ಇನ್ನೋರ್ವ ವ್ಯಕ್ತಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ವಿಜಯಪುರ ಪೊಲೀಸ್ ಠಾಣೆ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಮೃತರನ್ನು ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಬುಧ್ವಾ (45) ಮತ್ತು ಕರ್ಮ (50) ಎಂದು ಗುರುತಿಸಲಾಗಿದೆ. ಮತ್ತೋರ್ವನನ್ನು ನರ್ಸಿಂಗ್ ಷಾ ಎನ್ನಲಾಗಿದೆ.

ವಿಷಕಾರಿ ಮದ್ಯ ಸೇವನೆಯಿಂದಾಗಿ ಸಾವು ಸಂಭವಿಸಿವೆ ಎಂದು ವೈದ್ಯರು ಹೇಳಿದ ನಂತರ, ಜಿಲ್ಲೆಯ ಪೊಲೀಸ್ ಮತ್ತು ನಾಗರಿಕ ಆಡಳಿತವು ಎಚ್ಚರಗೊಂಡಿದೆ. ತನಿಖೆಯ ವೇಳೆ, ಮೃತ ವ್ಯಕ್ತಿಯ ಕುಟುಂಬ ಸದಸ್ಯರು ಮಂಗಳವಾರ ಸಂಜೆ ಆತ ಮದ್ಯ ಸೇವಿಸಿದ್ದಾರೆ ಎಂದು ಹೇಳಿದ್ದಾರೆ. ಮೂರನೆಯ ವ್ಯಕ್ತಿ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದರೂ, ರಾಜ್ಯದಲ್ಲಿ ಮದ್ಯ ನಿಷೇಧ ಇರುವುದರಿಂದ ಪೊಲೀಸ್ ಕ್ರಮಕ್ಕೆ ಹೆದರಿ ಮಜೋಲಿಯಾ ಗ್ರಾಮದಿಂದ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಬುಧವಾರ ಬೆಳಗ್ಗೆ ಬುಧ್ವಾ ಮತ್ತು ಕರ್ಮ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಈ ವೇಳೆ, ಅವರನ್ನು ಹತ್ತಿರದ ಭೋರ್ ರೆಫರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಲ್ಲಿನ ವೈದ್ಯರು ಗೋಪಾಲ್​ಗಂಜ್​ ಸದರ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಇಬ್ಬರೂ ಮೃತಪಟ್ಟಿದ್ದಾರೆ.

ಪಟ್ಟಣ ಪೊಲೀಸ್ ಠಾಣೆಯ ಎಸ್‌ಎಚ್‌ಒ ಪ್ರಶಾಂತ್ ಕುಮಾರ್ ಅವರು ಸದರ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.

2016 ರಿಂದ ಮದ್ಯ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿರುವ ರಾಜ್ಯಗಳಲ್ಲಿ ಬಿಹಾರವೂ ಒಂದು. ಮದ್ಯ ವ್ಯಾಪಾರಿಗಳು, ಗ್ರಾಹಕರು ಮತ್ತು ಮಾಫಿಯಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಿತೀಶ್ ಕುಮಾರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಪೊಲೀಸ್ ಸಿಬ್ಬಂದಿ ಮದ್ಯ ಸೇವಿಸಿ ಸಿಕ್ಕಿಬಿದ್ದರೆ ಅವರನ್ನು ಸೇವೆಯಿಂದ ಅಮಾನತು ಮಾಡುವಂತೆ ಅವರು ವಿಶೇಷ ಸೂಚನೆಗಳನ್ನು ನೀಡಿದ್ದರು.

ABOUT THE AUTHOR

...view details