ಬೆಂಗಳೂರು :ಬಿಜೆಪಿ ರಾಜ್ಯ ಚುನಾವಣಾ ಪ್ರಚಾರ ಸಮಿತಿ ಮತ್ತು ರಾಜ್ಯ ಕೋರ್ ಕಮಿಟಿ ಸಭೆ ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆಯಿತು. ನಗರದ ಖಾಸಗಿ ಹೊಟೇಲ್‌ನಲ್ಲಿ ತಡರಾತ್ರಿವರೆಗೆ ನಡೆದ ಸಭೆಯಲ್ಲಿ ಚುನಾವಣಾ ರಣತಂತ್ರದ ಬಗ್ಗೆ ಚರ್ಚಿಸಲಾಗಿದೆ. ರಾಜ್ಯದ ನಾಲ್ಕು ದಿಕ್ಕಿನಲ್ಲಿ ನಡೆದ ವಿಜಯ ಸಂಕಲ್ಪ ರಥಯಾತ್ರೆಯ ವರದಿಯನ್ನು ಸಭೆಯಲ್ಲಿ ಶಾ ಅವರಿಗೆ ಒಪ್ಪಿಸಲಾಯಿತು. ಬಿಜೆಪಿ ದುರ್ಬಲ ಇರುವ ಕಡೆಗಳಲ್ಲಿ ರಥಯಾತ್ರೆಗೆ ಸಿಕ್ಕ ಸ್ಪಂದನೆ, ಪಕ್ಷ ಸಂಘಟನೆ ಮೇಲಾದ ಲಾಭ, ಇತ್ಯಾದಿ ಮಾಹಿತಿ ವರದಿಯಲ್ಲಿದೆ.
ಮುಂದಿನ ಒಂದು ತಿಂಗಳ ಚುನಾವಣಾ ಪ್ರಚಾರದ ಬಗ್ಗೆ ತಂತ್ರಗಾರಿಕೆ, ಪ್ರಧಾನಿ ಮೋದಿಯವರ ರೋಡ್ ಶೋ, ರ್ಯಾಲಿಗಳ ಸ್ಥಳಗಳ ಬಗ್ಗೆ ಪ್ಲಾನಿಂಗ್ ನಡೆಯಿತು. ಮೀಸಲಾತಿ ಲಾಭದ ಬಗ್ಗೆ ಮಹತ್ವದ ಸಮಾಲೋಚನೆ ಆಗಿದೆ. ಈ ಬಗ್ಗೆ ಪರಿಣಾಮಕಾರಿಯಾಗಿ ಪ್ರಚಾರ ನಡೆಸಿ, ಮತಬೇಟೆ ಮಾಡುವ ಬಗ್ಗೆ ಸೂಚಿಸಲಾಗಿದೆ. ಮನೆ, ಮನೆ ಪ್ರಚಾರ ಚುರುಕುಗೊಳಿಸಲು ಸೂಚನೆ, ಡಬಲ್ ಇಂಜಿನ್ ಸರ್ಕಾರಗಳ ಸಾಧನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವುದು, ದುರ್ಬಲ ಕ್ಷೇತ್ರಗಳನ್ನು ಬಲಪಡಿಸಲು ನೀಡಿದ್ದ ಗುರಿ ಪ್ರಗತಿ ಬಗ್ಗೆಯೂ ಅಮಿತ್ ಶಾ ಮಾಹಿತಿ ಪಡೆದರು. ಟಿಕೆಟ್ ಹಂಚಿಕೆ ಬಗ್ಗೆ ಚರ್ಚಿಸಲಾಗಿದೆ. ಜಿಲ್ಲಾ ಸಮಿತಿಗಳಿಂದ ರಾಜ್ಯ ಘಟಕಕ್ಕೆ ಸಂಭಾವ್ಯರ ಪಟ್ಟಿ ರವಾನೆ ಬಗ್ಗೆ ಮಾಹಿತಿ, ಕ್ಷೇತ್ರವಾರು ಆಕಾಂಕ್ಷಿಗಳ ಪಟ್ಟಿಯ ಬಗ್ಗೆಯೂ ವಿವರ ಪಡೆದುಕೊಂಡರು.
ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎರಡೂ ಸಮಿತಿಗಳ ಅಪೇಕ್ಷಿತರು, ಕೋರ್ ಸಮಿತಿಯ ಸದಸ್ಯರಾದ ಡಿ.ವಿ.ಸದಾನಂದ ಗೌಡ, ಜಗದೀಶ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ, ಡಾ.ಸಿ.ಎನ್.ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ, ಆರ್.ಅಶೋಕ್, ಬಿ.ಶ್ರೀರಾಮುಲು, ನಿರ್ಮಲ್‍ಕುಮಾರ್ ಸುರಾಣ, ರಾಜೇಶ್.ಜಿ.ವಿ, ವಿಶೇಷ ಆಹ್ವಾನಿತರಾದ ಅರುಣ್ ಸಿಂಗ್, ಡಿ.ಕೆ.ಅರುಣಾ, ಸಿ.ಟಿ.ರವಿ ಮತ್ತಿತರರು ಸಭೆಯಲ್ಲಿದ್ದರು.
ಚುನಾವಣಾ ಪ್ರಚಾರ ಸಮಿತಿಯ ಸದಸ್ಯ ಡಿ.ವಿ.ಸದಾನಂದ ಗೌಡ, ಜಗದೀಶ ಶೆಟ್ಟರ್, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಆರ್.ಅಶೋಕ್, ಶಶಿಕಲಾ ಜೊಲ್ಲೆ, ಸಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ಡಾ.ಕೆ.ಸುಧಾಕರ್, ಪ್ರಭು ಚವ್ಹಾಣ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಿ.ಟಿ.ರವಿ, ವಿ.ಶ್ರೀನಿವಾಸಪ್ರಸಾದ್, ಪಿ.ಸಿ.ಮೋಹನ್, ಅರವಿಂದ ಲಿಂಬಾವಳಿ, ಲಕ್ಷ್ಮಣ ಸವದಿ, ರಮೇಶ್ ಜಾರಕಿಹೊಳಿ, ಬಿ.ವೈ.ವಿಜಯೇಂದ್ರ ಮತ್ತು ಛಲವಾದಿ ನಾರಾಯಣಸ್ವಾಮಿ ಹಾಜರಿದ್ದರು.