ETV Bharat / technology

ಚೀನಾದ ಚಾಂಗ್'ಇ-6 ಯಶಸ್ವಿ ಉಡಾವಣೆ: ಚಂದ್ರನ ಮಣ್ಣು ಭೂಮಿಗೆ ತರಲಿದೆ ನೌಕೆ - China Lunar Mission

author img

By ETV Bharat Karnataka Team

Published : May 3, 2024, 6:00 PM IST

ಚೀನಾದ ಚಾಂಗ್'ಇ-6 ಬಾಹ್ಯಾಕಾಶ ನೌಕೆಯು ಶುಕ್ರವಾರ ಯಶಸ್ವಿಯಾಗಿ ಚಂದ್ರನತ್ತ ಹಾರಿದೆ.

China’s Chang'e-6 spacecraft
ಚೀನಾದ ಚಾಂಗ್'ಇ-6 ಬಾಹ್ಯಾಕಾಶ ನೌಕೆ (IANS)

ಬೀಜಿಂಗ್: ಚೀನಾದ ಚಾಂಗ್'ಇ-6 ಬಾಹ್ಯಾಕಾಶ ನೌಕೆಯು ಚಂದ್ರನತ್ತ ಶುಕ್ರವಾರ ಯಶಸ್ವಿಯಾಗಿ ಉಡಾವಣೆಯಾಗಿದೆ. ಚಂದ್ರನ ದೂರದ ಭಾಗದ ಮೇಲಿಳಿಯಲಿರುವ ಇದು ಚಂದ್ರನ ಮೇಲ್ಮೈಯಿಂದ ಕಲ್ಲು, ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ತರಲಿದೆ. ದಕ್ಷಿಣ ದ್ವೀಪ ಪ್ರಾಂತ್ಯದ ಹೈನಾನ್ ಕರಾವಳಿಯ ವೆನ್ ಚಾಂಗ್ ಬಾಹ್ಯಾಕಾಶ ಉಡಾವಣಾ ಸ್ಥಳದಿಂದ ಚಾಂಗ್'ಇ -6 ಬಾಹ್ಯಾಕಾಶ ನೌಕೆಯನ್ನು ಹೊತ್ತ ಲಾಂಗ್ ಮಾರ್ಚ್ -5 ರಾಕೆಟ್ ಶುಕ್ರವಾರ ಮಧ್ಯಾಹ್ನ ಉಡಾವಣೆಯಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದು ಚಂದ್ರನ ದೂರದ ಭಾಗಕ್ಕೆ ಚೀನಾದ ಚಾಂಗ್'ಇ -4 2019 ರಲ್ಲಿ ಮೊದಲ ಬಾರಿಗೆ ಭೇಟಿ ನೀಡಿತ್ತು. ಆದರೆ ಈಗ ಚಾಂಗ್'ಇ-6 ಬಾಹ್ಯಾಕಾಶ ನೌಕೆಯು ಇದೇ ಮೊದಲ ಬಾರಿಗೆ ಚಂದ್ರನ ದೂರದ ಪ್ರದೇಶದ ಮೇಲಿನಿಂದ ಧೂಳಿನ ಮಾದರಿಗಳನ್ನು ಸಂಗ್ರಹಿಸಲಿದೆ. ಚಂದ್ರನ ಮೇಲ್ಮೈಯಿಂದ 2 ಕೆಜಿ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ತರುವ ಗುರಿಯನ್ನು ನೌಕೆ ಹೊಂದಿದೆ. 2020 ರಲ್ಲಿ ಚಾಂಗ್'ಇ -5 ಸುಮಾರು ನಾಲ್ಕು ಪೌಂಡ್ ರೆಗೊಲಿತ್ ಅನ್ನು ಮರಳಿ ತಂದಿತ್ತು. ಆದರೆ ಅದು ಚಂದ್ರನ ಹತ್ತಿರದ ಭಾಗದಿಂದ ತಂದ ಮಾದರಿಯಾಗಿತ್ತು. ಯುಎಸ್ ಮತ್ತು ಮಾಜಿ ಸೋವಿಯತ್ ಒಕ್ಕೂಟ ಕೂಡ ಚಂದ್ರನ ಮೇಲಿಂದ ಮಾದರಿಗಳನ್ನು ಯಶಸ್ವಿಯಾಗಿ ಸಂಗ್ರಹಿಸಿ ಭೂಮಿಗೆ ಮರಳಿ ತಂದಿವೆ.

ಚಾಂಗ್'ಇ -6 ಬಾಹ್ಯಾಕಾಶ ನೌಕೆಯು ಆರ್ಬಿಟರ್, ಲ್ಯಾಂಡರ್, ಅಸೆಂಡರ್ ಮತ್ತು ರಿಟರ್ನರ್ ಗಳನ್ನು ಒಳಗೊಂಡಿದೆ. ಅಂತರರಾಷ್ಟ್ರೀಯ ಸಹಕಾರದ ಮೂಲಕ ಅಭಿವೃದ್ಧಿಪಡಿಸಿದ ನಾಲ್ಕು ಪೇಲೋಡ್​ಗಳನ್ನು ಸಹ ಈ ನೌಕೆ ಹೊತ್ತೊಯ್ದಿದೆ. ಫ್ರಾನ್ಸ್, ಇಟಲಿ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿಯ ವೈಜ್ಞಾನಿಕ ಉಪಕರಣಗಳು ಚಾಂಗ್'ಇ -6 ಲ್ಯಾಂಡರ್​ನಲ್ಲಿದ್ದರೆ, ಪಾಕಿಸ್ತಾನದ ಸಣ್ಣ ಉಪಗ್ರಹವೊಂದು ಆರ್ಬಿಟರ್​ನಲ್ಲಿದೆ.

ಚೀನಾ ನ್ಯಾಷನಲ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ಸಿಎನ್ಎಸ್ಎ) ಪ್ರಕಾರ, ಚಾಂಗ್'ಇ -6 ಚಂದ್ರ ಶೋಧಕವು ಚಂದ್ರನ ದೂರದ ಬದಿಯಲ್ಲಿರುವ ದಕ್ಷಿಣ ಧ್ರುವ-ಐಟ್ಕೆನ್ ಜಲಾನಯನ ಪ್ರದೇಶದಲ್ಲಿರುವ ಅಪೊಲೊ ಬೇಸಿನ್ ಎಂದು ಕರೆಯಲ್ಪಡುವ ಸ್ಫೋಟದಿಂದ ಉಂಟಾದ ಕುಳಿಯಿಂದ ಮಾದರಿಗಳನ್ನು ಸಂಗ್ರಹಿಸಲಿದೆ.

ನೌಕೆಯು ಚಂದ್ರನ ಮೇಲ್ಮೈಯನ್ನು ತಲುಪಲು ಒಂದು ತಿಂಗಳು ಬೇಕಾಗಲಿದೆ. ಅಲ್ಲಿಗೆ ತಲುಪಿದ ನಂತರ ನೌಕೆ ಸಾಫ್ಟ್​ ಲ್ಯಾಂಡಿಂಗ್ ಮಾಡಲಿದೆ. ಲ್ಯಾಂಡಿಂಗ್ ಆದ 48 ಗಂಟೆಗಳ ಒಳಗೆ, ಚಂದ್ರನ ಮೇಲ್ಮೈಯಿಂದ ಬಂಡೆಗಳು ಮತ್ತು ಮಣ್ಣನ್ನು ಹೊರತೆಗೆಯಲು ರೊಬೊಟಿಕ್ ಹ್ಯಾಂಡ್​ ಅನ್ನು ಹೊರಗೆ ಚಾಚಲಾಗುತ್ತದೆ. ಆದರೆ ನೆಲಕ್ಕೆ ಬೋರ್ ಮಾಡಲು ಡ್ರಿಲ್ ಅನ್ನು ಬಳಸಲಾಗುತ್ತದೆ.

ವೈಜ್ಞಾನಿಕ ಪತ್ತೆ ಕಾರ್ಯವನ್ನು ಕೂಡ ಇದೇ ಸಮಯದಲ್ಲಿ ಮಾಡಲಾಗುವುದು. ಹೀಗೆ ಸಂಗ್ರಹಿಸಿದ ಮಾದರಿಗಳನ್ನು ಕಂಟೇನರ್​ನಲ್ಲಿ ಸೀಲ್ ಮಾಡಿದ ನಂತರ, ಅಸೆಂಡರ್ ಚಂದ್ರನಿಂದ ಹೊರಟು ಚಂದ್ರನ ಕಕ್ಷೆಯಲ್ಲಿರುವ ಆರ್ಬಿಟರ್​ನೊಂದಿಗೆ ಬಂಧಿಸಲ್ಪಡುತ್ತದೆ. ನಂತರ ರಿಟರ್ನರ್​ ಮಾದರಿಗಳನ್ನು ಭೂಮಿಗೆ ತರಲಿದೆ. ಉತ್ತರ ಚೀನಾದ ಇನ್ನರ್ ಮಂಗೋಲಿಯಾ ಸ್ವಾಯತ್ತ ಪ್ರದೇಶದ ಸಿಜಿವಾಂಗ್ ಬ್ಯಾನರ್​ ಪ್ರದೇಶದಲ್ಲಿ ರಿಟರ್ನರ್ ಇಳಿಯಲಿದೆ. ಇಡೀ ಕಾರ್ಯಾಚರಣೆಯು ಸುಮಾರು 53 ದಿನಗಳ ಕಾಲ ನಡೆಯುವ ನಿರೀಕ್ಷೆಯಿದೆ ಎಂದು ಸಿಎನ್ಎಸ್ಎ ತಿಳಿಸಿದೆ.

ಇದನ್ನೂ ಓದಿ: ಚಂದ್ರನ ಮೇಲೆ ಅಗೆದು ನೋಡಬಹುದಾದಷ್ಟು ಆಳದಲ್ಲಿ ಮತ್ತಷ್ಟು ಮಂಜುಗಡ್ಡೆ ನಿಕ್ಷೇಪ: ಇಸ್ರೋ ಸಂಶೋಧನೆ - ICE ON MOON

ETV Bharat Logo

Copyright © 2024 Ushodaya Enterprises Pvt. Ltd., All Rights Reserved.