ETV Bharat / business

373 ಸಿಸಿ ಸಾಮರ್ಥ್ಯದ ಬಜಾಜ್ Pulsar NS400Z ಬೈಕ್ ಬಿಡುಗಡೆ: ಬೆಲೆ 2 ಲಕ್ಷಕ್ಕಿಂತ ಕಡಿಮೆ - Bajaj Pulsar

author img

By ETV Bharat Karnataka Team

Published : May 3, 2024, 5:13 PM IST

ಬಜಾಜ್ ಬೈಕ್
Bajaj Auto launches new flagship Pulsar (ians)

ಬಜಾಜ್ ತನ್ನ ಹೊಸ ಮಾಡೆಲ್​ನ ಪಲ್ಸರ್ ಬೈಕ್ ಅನ್ನು ಬಿಡುಗಡೆ ಮಾಡಿದೆ.

ನವದೆಹಲಿ : ಭಾರತದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿ ಬಜಾಜ್ ಆಟೋ ತನ್ನ ಬಹುನಿರೀಕ್ಷಿತ ಪಲ್ಸರ್ ಎನ್ ಎಸ್ 400 ಝಡ್ (Pulsar NS400Z) ಬೈಕ್ ಅನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಪ್ರಸ್ತುತ ಹೊಸ ಬೈಕ್​ನ ಎಕ್ಸ್​ ಶೋರೂಂ ಬೆಲೆ 1,85,000 ರೂಪಾಯಿಗಳಾಗಿದೆ. ಪಲ್ಸರ್ ಎನ್ ಎಸ್ 400 ಝಡ್ ಬೈಕ್ ಗ್ಲಾಸಿ ರೇಸಿಂಗ್ ರೆಡ್, ಬ್ರೂಕ್ಲಿನ್ ಬ್ಲ್ಯಾಕ್, ಪರ್ಲ್ ಮೆಟಾಲಿಕ್ ವೈಟ್ ಮತ್ತು ಪ್ಯೂಟರ್ ಗ್ರೇ ಎಂಬ ನಾಲ್ಕು ಬಣ್ಣಗಳಲ್ಲಿ ಲಭ್ಯವಾಗಲಿದೆ.

"ಇದು ಭಾರತದಲ್ಲಿ ಸ್ಪೋರ್ಟ್ಸ್ ಮೋಟಾರ್ ಸೈಕ್ಲಿಂಗ್​ನ ಪರಿಭಾಷೆಯನ್ನೇ ಮರುವ್ಯಾಖ್ಯಾನಿಸುವ ಉತ್ಕೃಷ್ಟ ಕಾರ್ಯಕ್ಷಮತೆಯ ಬೈಕ್ ಆಗಿದೆ. ಇದನ್ನು ಎಂಜಿನಿಯರಿಂಗ್ ಪರಿಣತಿ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸವಾರರು ನಿಜವಾಗಿಯೂ ಏನು ಬಯಸುತ್ತಾರೆ ಎಂಬುದರ ಬಗೆಗಿನ ಆಳವಾದ ಅಧ್ಯಯನಗಳ ಮೂಲಕ ತಯಾರಿಸಲಾಗಿದೆ." ಎಂದು ಬಜಾಜ್ ಆಟೋದ ಮೋಟಾರ್ ಸೈಕಲ್ ವಿಭಾಗದ ಅಧ್ಯಕ್ಷ ಸಾರಂಗ್ ಕಾನಡೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹೊಸ ಪಲ್ಸರ್ ಬೈಕ್ 373 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್, 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿದ್ದು, 40 ಬಿಹೆಚ್ ಪಿ ಪವರ್ ಮತ್ತು 35 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದಲ್ಲದೆ, ಈ ಬೈಕಿನಲ್ಲಿ ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಅಗಲವಾದ ಟೈರ್ ಗಳು, ಬ್ಲೂಟೂತ್ ಸಂಪರ್ಕದೊಂದಿಗೆ ಸಂಪೂರ್ಣ ಡಿಜಿಟಲ್ ಬಣ್ಣದ ಎಲ್​ಸಿಡಿ ಸ್ಪೀಡೋಮೀಟರ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಮ್ಯೂಸಿಕ್ ಕಂಟ್ರೋಲ್, ಲ್ಯಾಪ್ ಟೈಮರ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಮುಂತಾದ ವೈಶಿಷ್ಟ್ಯಗಳಿವೆ.

ಹೊಸ ಬೈಕಿನಲ್ಲಿ ಸುರಕ್ಷತೆಗಾಗಿ ಬ್ರೇಕಿಂಗ್ ಮತ್ತು ಕಂಟ್ರೋಲ್ ಫೀಚರ್​ಗಳ ಸಮಗ್ರ ಸೂಟ್ ಅನ್ನು ಅಳವಡಿಸಲಾಗಿದೆ. ಇದರಲ್ಲಿನ ಕಂಬೈನ್ಡ್ ಎಬಿಎಸ್ ತಂತ್ರಜ್ಞಾನದೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ತ್ವರಿತವಾಗಿ ನಿಲುಗಡೆ ಶಕ್ತಿಯನ್ನು ನೀಡುತ್ತದೆ ಮತ್ತು ವಿವಿಧ ರೈಡಿಂಗ್ ಪರಿಸ್ಥಿತಿಗಳಲ್ಲಿ ವ್ಹೀಲ್ ಲಾಕಪ್ ಅನ್ನು ತಡೆಯುತ್ತದೆ. ಸ್ವಿಚಬಲ್ ಎಲೆಕ್ಟ್ರಾನಿಕ್ ಟ್ರಾಕ್ಷನ್ ಕಂಟ್ರೋಲ್ (ಇಟಿಸಿ) ಸ್ಪೋರ್ಟ್ ಮತ್ತು ಆಫ್-ರೋಡ್ ಮೋಡ್ ಗಳಲ್ಲಿ ಗ್ರಿಪ್ ಅನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಕಂಪನಿ ಹೇಳಿದೆ.

ಬಜಾಜ್ ಗ್ರೂಪ್​​ನ ಪ್ರಮುಖ ಕಂಪನಿಯಾದ ಬಜಾಜ್ ಆಟೋ, ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಉತ್ಪಾದನಾ ಕಂಪನಿಯಾಗಿದ್ದು, ಲ್ಯಾಟಿನ್ ಅಮೆರಿಕಾ, ಆಗ್ನೇಯ ಏಷ್ಯಾ ಸೇರಿದಂತೆ 79 ದೇಶಗಳಿಗೆ ವಾಹನಗಳನ್ನು ರಫ್ತು ಮಾಡುತ್ತದೆ. ಇದರ ಪ್ರಧಾನ ಕಚೇರಿ ಭಾರತದ ಪುಣೆಯಲ್ಲಿದೆ. ಸ್ಪೋರ್ಟ್ಸ್ ಮತ್ತು ಸೂಪರ್ ಸ್ಪೋರ್ಟ್ಸ್ ದ್ವಿಚಕ್ರ ವಾಹನಗಳನ್ನು ತಯಾರಿಸುವ ಕೆಟಿಎಂ ಬ್ರಾಂಡ್ ನ ಶೇ 48ರಷ್ಟು ಪಾಲನ್ನು ಇದು ಸ್ವಾಧೀನಪಡಿಸಿಕೊಂಡಿದೆ.

ಬಜಾಜ್ ಆಟೋ ಕಂಪನಿಯನ್ನು ನವೆಂಬರ್ 29, 1945 ರಂದು ಆರಂಭದಲ್ಲಿ ಮೆಸರ್ಸ್ ಬಚರಾಜ್ ಟ್ರೇಡಿಂಗ್ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನಲ್ಲಿ ಆರಂಭಿಸಲಾಯಿತು. 1948 ರಲ್ಲಿ, ಬಜಾಜ್ ಆಟೋ ಭಾರತದಲ್ಲಿ ಆಮದು ಮಾಡಿಕೊಂಡ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಮಾರಾಟ ಮಾಡಲು ಪ್ರಾರಂಭಿಸಿತು. 1959 ರಲ್ಲಿ ಕಂಪನಿಯು ಭಾರತ ಸರ್ಕಾರದಿಂದ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ತಯಾರಿಸಲು ಪರವಾನಗಿ ಪಡೆಯಿತು.

ಇದನ್ನೂ ಓದಿ : ಸ್ಮಾರ್ಟ್​ಫೋನ್ ಓವರ್ ಹೀಟ್ ಆಗ್ತಿದೆಯಾ? ತಣ್ಣಗಾಗಿಸಲು ಹೀಗೆ ಮಾಡಿ - Smartphone Overheating

ETV Bharat Logo

Copyright © 2024 Ushodaya Enterprises Pvt. Ltd., All Rights Reserved.