ETV Bharat / technology

ವಾಹನ ಸವಾರರಿಗೆ ಶಾಕ್​ ಕೊಟ್ಟ ಕೇಂದ್ರ: ಏಪ್ರಿಲ್​ನಿಂದ ಬಂಕ್​ಗಳಲ್ಲಿ ಎಥೆನಾಲ್​ ಮಿಶ್ರಿತ ಹೊಸ ಪೆಟ್ರೋಲ್​

Government New Rules: ಏಪ್ರಿಲ್​ನಿಂದ ಪೆಟ್ರೋಲ್​ನಲ್ಲಿ ಎಥೆನಾಲ್​ ಮಿಶ್ರಣಕ್ಕೆ ಸಂಬಂಧಿಸಿದಂತೆ ಭಾರತದಾದ್ಯಂತ ಹೊಸ ಆದೇಶ ಜಾರಿಯಾಗಲಿದೆ. ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ..

ETHANOL BLENDED PETROL  PETROL PUMP  RESEARCH OCTANE NUMBER  NEW PETROL MANDATE
ಏಪ್ರಿಲ್​ನಿಂದ ಬಂಕ್​ಗಳಲ್ಲಿ ಹೊಸ ಪೆಟ್ರೋಲ್​ ಶುರು (Photo Credit: IANS)
author img

By ETV Bharat Tech Team

Published : February 28, 2026 at 8:23 AM IST

3 Min Read
Choose ETV Bharat

Government New Rules: ಭಾರತದ ಇಂಧನ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಬರಲಿದೆ. ಪರಿಸರವನ್ನು ರಕ್ಷಿಸುವ ಮತ್ತು ವಿದೇಶಗಳಿಂದ ಆಮದು ಮಾಡಿಕೊಳ್ಳುವ ತೈಲದ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಒಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಈ ವರ್ಷದ ಏಪ್ರಿಲ್ 1 ರಿಂದ ದೇಶದ ಎಲ್ಲಾ ಭಾಗಗಳಲ್ಲಿ 95 RON (ರಿಸರ್ಚ್ ಆಕ್ಟೇನ್ ನಂಬರ್​) ಎಥೆನಾಲ್ ಬೆರೆಸಿದ ಪೆಟ್ರೋಲ್ ಅನ್ನು ಮಾತ್ರ ಮಾರಾಟ ಮಾಡಲು ತೈಲ ಕಂಪನಿಗಳಿಗೆ ಆದೇಶಿಸಿದೆ. ಫೆಬ್ರವರಿ 17 ರಂದು ಸರ್ಕಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ ಈಗ ಪೆಟ್ರೋಲ್‌ನಲ್ಲಿ (E20 ಇಂಧನ) 20 ಪ್ರತಿಶತ ಎಥೆನಾಲ್ ಅನ್ನು ಬೆರೆಸುವುದು ಕಡ್ಡಾಯವಾಗಲಿದೆ. ಈ ನಿರ್ಧಾರವು ರೈತರಿಗೆ ಪ್ರಯೋಜನವನ್ನು ನೀಡುವುದಲ್ಲದೇ ದೇಶದ ಆರ್ಥಿಕತೆಯನ್ನು ಬಲಪಡಿಸುತ್ತದೆ.

E20 ಪೆಟ್ರೋಲ್ ಎಂದರೇನು?: ನಾವು ಬಳಸುವ ಸಾಮಾನ್ಯ ಪೆಟ್ರೋಲ್​ನಲ್ಲಿ ಎಥೆನಾಲ್ ಎಂಬ ಆಲ್ಕೋಹಾಲ್​ ಬೆರೆಸುವುದೇ ಎಥೆನಾಲ್​ ಬ್ಲೆಂಡಿಂಗ್​ ಎನ್ನುತ್ತಾರೆ. E20 ಎಂದರೆ ಅದು 20 ಪ್ರತಿಶತ ಎಥೆನಾಲ್ ಮತ್ತು 80 ಪ್ರತಿಶತ ಪೆಟ್ರೋಲ್ ಅನ್ನು ಹೊಂದಿರುತ್ತದೆ. ಈ ಎಥೆನಾಲ್ ಅನ್ನು ಜೋಳ, ಧಾನ್ಯಗಳು ಮತ್ತು ಕಬ್ಬಿನಿಂದ ತಯಾರಿಸಲಾಗುತ್ತದೆ. ಇದು ಪರಿಸರಕ್ಕೆ ಉತ್ತಮವಾದ ಶುದ್ಧ ಇಂಧನವಾಗಿದೆ. ಇದು ವಾಯು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ. ಕಳೆದ ಹತ್ತು ವರ್ಷಗಳಲ್ಲಿ, ಎಥೆನಾಲ್ ಸೇರ್ಪಡೆಯಿಂದಾಗಿ ದೇಶವು ಸುಮಾರು 1.40 ಲಕ್ಷ ಕೋಟಿ ರೂಪಾಯಿಗಳ ವಿದೇಶಿ ವಿನಿಮಯವನ್ನು ಉಳಿಸಿದೆ. ಅದಕ್ಕಾಗಿಯೇ ಸರ್ಕಾರವು ಈ ಗುರಿಯನ್ನು 2030 ರೊಳಗೆ ಪೂರ್ಣಗೊಳಿಸಲು ಪ್ರಯತ್ನಿಸುತ್ತಿದೆ.

95 RON ಎಂದರೇನು? ಅದು ಎಂಜಿನ್‌ಗೆ ಹೇಗೆ ಒಳ್ಳೆಯದು?: ಪೆಟ್ರೋಲ್ ಪಂಪ್‌ಗಳಲ್ಲಿ ನಾವು 95 RON ಎಂಬ ಪದವನ್ನು ಕೇಳುತ್ತೇವೆ. ಆಕ್ಟೇನ್ ನಂಬರ್​ ಎಂಜಿನ್ ಒಳಗೆ ಇಂಧನ ಎಷ್ಟು ಸರಾಗವಾಗಿ ಉರಿಯುತ್ತದೆ ಎಂಬುದನ್ನು ಹೇಳುವ ಲೆಕ್ಕಾಚಾರವಾಗಿದೆ. ಈ ಸಂಖ್ಯೆ ಕಡಿಮೆಯಿದ್ದರೆ ಎಂಜಿನ್ ಬಡಿದುಕೊಳ್ಳುವ ಶಬ್ದವನ್ನು ಮಾಡುತ್ತದೆ. ಇದರರ್ಥ ಇಂಧನವು ಸರಿಯಾಗಿ ಉರಿಯುವುದಿಲ್ಲ ಮತ್ತು ಸ್ಫೋಟಗಳಂತಹ ಶಬ್ದ ಹೊರ ಸೂಸುತ್ತದೆ. ಆಗ ಎಂಜಿನ್ ಭಾಗಗಳಿಗೆ ಹಾನಿಯಾಗುತ್ತದೆ. ಎಥೆನಾಲ್ ನೈಸರ್ಗಿಕವಾಗಿ ಹೆಚ್ಚಿನ ಆಕ್ಟೇನ್ ಶಕ್ತಿಯನ್ನು ಹೊಂದಿರುತ್ತದೆ. ಆದ್ದರಿಂದ ಪೆಟ್ರೋಲ್‌ಗೆ ಎಥೆನಾಲ್ ಸೇರಿಸಿದಾಗ ಎಂಜಿನ್ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ಹೊಸ ರೀತಿಯ ಕಾರುಗಳು ಮತ್ತು ಬೈಕ್‌ಗಳ ಎಂಜಿನ್‌ಗಳಿಗೆ ಹಾನಿಯಾಗದಂತೆ ತಡೆಯಲು ಸರ್ಕಾರವು ಈ 95 RON ನಿಯಮವನ್ನು ವಿಧಿಸಿದೆ.

ಮೈಲೇಜ್ ಕಡಿಮೆಯಾಗುತ್ತದೆಯೇ?: ಇದು ಅನೇಕ ಜನರನ್ನು ಕಾಡುತ್ತಿರುವ ಪ್ರಶ್ನೆ. ವಾಸ್ತವವಾಗಿ ಎಥೆನಾಲ್ ಸಾಮಾನ್ಯ ಪೆಟ್ರೋಲ್‌ಗಿಂತ ಸ್ವಲ್ಪ ಕಡಿಮೆ ಶಕ್ತಿಯ ಅಂಶವನ್ನು ಹೊಂದಿದೆ. ಇದು ಕಾರಿನ ಮೈಲೇಜ್ ಅನ್ನು ಶೇಕಡಾ 3 ರಿಂದ 7 ರಷ್ಟು ಕಡಿಮೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ. ಅಂದರೆ ನಿಮ್ಮ ಕಾರು ಲೀಟರ್‌ಗೆ 20 ಕಿಲೋಮೀಟರ್ ನೀಡಿದರೆ ಈ ಹೊಸ ಪೆಟ್ರೋಲ್‌ನೊಂದಿಗೆ ಅದು 19 ಕಿಲೋಮೀಟರ್‌ಗೆ ಇಳಿಯಬಹುದು. ಆದರೆ 2023ರ ನಂತರ ಬಿಡುಗಡೆಯಾಗುವ ಹೊಸ ವಾಹನಗಳ ಮೇಲೆ ಈ ಪರಿಣಾಮವು ಹೆಚ್ಚು ಇರುವುದಿಲ್ಲ. ಹಳೆಯ ವಾಹನಗಳಲ್ಲಿ ಸ್ವಲ್ಪ ವ್ಯತ್ಯಾಸ ಮಾತ್ರ ಕಂಡುಬರುತ್ತದೆ.

ಹಳೆಯ ಬೈಕ್‌ಗಳು ಹಾಳಾಗುತ್ತವೆಯೇ?: ಹಳೆಯ ವಾಹನಗಳಲ್ಲಿರುವ ಪೈಪ್‌ಗಳು ಮತ್ತು ಸೀಲ್‌ಗಳಂತಹ ರಬ್ಬರ್ ಭಾಗಗಳನ್ನು ಪೆಟ್ರೋಲ್‌ಗಾಗಿ ಮಾತ್ರ ತಯಾರಿಸಲಾಗುತ್ತದೆ. ಎಥೆನಾಲ್‌ನಿಂದಾಗಿ ಈ ಭಾಗಗಳು ಕಾಲಾನಂತರದಲ್ಲಿ ಹಾಳಾಗುವ ಸಾಧ್ಯತೆ ಇದೆ. ಆದರೆ ಇದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಪರಿವರ್ತನಾ ಕಿಟ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ. ರಾಯಲ್ ಎನ್‌ಫೀಲ್ಡ್‌ನಂತಹ ಕಂಪನಿಗಳು ಅಂತಹ ಕಿಟ್‌ಗಳನ್ನು ತಂದಿವೆ. ಪೆಟ್ರೋಲ್ ಫಿಲ್ಟರ್ ಅನ್ನು ಬದಲಾಯಿಸುವ ಮೂಲಕ ಮತ್ತು ಬೈಕ್ ಅನ್ನು ಸರ್ವಿಸ್ ಮಾಡುವಾಗ ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ ಈ ಸಮಸ್ಯೆಯನ್ನು ನಿವಾರಿಸಬಹುದು.

ಪರಿಸರ ಮತ್ತು ರೈತರಿಗೆ ಲಾಭ: ಕಬ್ಬಿನಿಂದ ಹೊರತೆಗೆಯಲಾದ ಎಥನಾಲ್ ಮಾಲಿನ್ಯವನ್ನು ಶೇಕಡಾ 65 ರಷ್ಟು ಕಡಿಮೆ ಮಾಡಬಹುದು. ಜೋಳದೊಂದಿಗೆ ಮಾಲಿನ್ಯವನ್ನು ಶೇಕಡಾ 50 ರಷ್ಟು ಕಡಿಮೆ ಮಾಡುವ ಸಾಧ್ಯತೆಯಿದೆ. ಇದು ದೆಹಲಿಯಂತಹ ನಗರಗಳಲ್ಲಿ ವಿಶೇಷವಾಗಿ ಉಪಯುಕ್ತವಾಗಿದೆ. ಮತ್ತೊಂದೆಡೆ ಎಥನಾಲ್ ಬಳಕೆ ಹೆಚ್ಚಾದರೆ ರೈತರು ಉತ್ತಮ ಆದಾಯವನ್ನು ಪಡೆಯುತ್ತಾರೆ. ಇದನ್ನು ಬೆಳೆ ತ್ಯಾಜ್ಯದಿಂದಲೂ ತಯಾರಿಸಬಹುದಾದ್ದರಿಂದ ರೈತರಿಗೆ ಲಾಭದಾಯಕವಾಗುತ್ತದೆ.

ಚಾಲನೆಯಲ್ಲಿ ವ್ಯತ್ಯಸವೇನು?: ಸಂಶೋಧನೆಯು E20 ಇಂಧನವನ್ನು ಬಳಸುವುದರಿಂದ ವಾಹನದ ವೇಗವರ್ಧನೆ ಸುಧಾರಿಸುತ್ತದೆ ಎಂದು ತೋರಿಸಿದೆ. ನಗರ ಸಂಚಾರದಲ್ಲಿ ವಾಹನವನ್ನು ಚಾಲನೆ ಮಾಡುವುದು ತುಂಬಾ ಮೃದುವಾಗಿರುತ್ತದೆ. ಎಂಜಿನ್ ಒಳಗಿನ ಶಾಖವೂ ಕಡಿಮೆಯಾಗುತ್ತದೆ. ಮೈಲೇಜ್‌ನಲ್ಲಿ ಸಣ್ಣ ವ್ಯತ್ಯಾಸಕ್ಕಿಂತ ಕಡಿಮೆ ಮಾಲಿನ್ಯ ಮತ್ತು ದೇಶದ ಸುಧಾರಣೆ ನಮಗೆಲ್ಲರಿಗೂ ಒಳ್ಳೆಯದು.

ಓದಿ: ಮಾರ್ಚ್​ನಲ್ಲಿ ಲಗ್ಗೆಯಿಡಲಿವೆ ಹಾನರ್, ಆಪಲ್, ನಥಿಂಗ್, ಮೊಟೊರೊಲಾ ಕಂಪನಿಗಳ ಸ್ಮಾರ್ಟ್​ಫೋನ್ಸ್​! ಡೇಟ್​​ ಲಾಕ್​ ಮಾಡಿಕೊಳ್ಳಿ