ETV Bharat / technology

ಟಿಬೆಟ್‌ನಲ್ಲಿ ಹಿಮನದಿ ಸ್ಫೋಟ, ಮಹಾಪ್ರವಾಹಕ್ಕೆ ನೂರಾರು ಜನರ ಸಾವು, 12 ಪವರ್ ಪ್ಲಾಂಟ್ ನಾಶ!; ಈ ನಾಶಕ್ಕೆ ಅಸಲಿ ಕಾರಣವೇನು?

Nepal Tibet Floods Cause Explained: ನೇಪಾಳದಲ್ಲಿ ಸಂಭವಿಸಿದ ಹಠಾತ್ ಪ್ರವಾಹದ ಕಾರಣ ಸಂಪೂರ್ಣವಾಗಿ ದೃಢಪಟ್ಟಿಲ್ಲ. ಆದ್ರೆ ಈ ಘಟನೆ ಬಗ್ಗೆ ವಿಜ್ಞಾನಿ ಸಿಪಿ ರಾಜೇಂದ್ರ ಅವರು ತಮ್ಮ ಅಭಿಪ್ರಾಯಗಳನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.

TIBET GLACIER COLLAPSE  AVALANCHE ROCKFALL NOT EARTHQUAKE  NRSC TIBET ORIGIN ZIRK GLACIER  WARNING SYSTEM RIVER MONITORING
ಮಹಾಪ್ರವಾಹಕ್ಕೆ ನೂರಾರು ಜನ ಸಾವು (Photo Credit: IANS)
author img

By C P Rajendran

Published : August 28, 2026 at 11:41 AM IST

4 Min Read
Choose ETV Bharat

Nepal Tibet Floods Cause Explained: ಆಗಸ್ಟ್ 26, 2026 ರ ಬೆಳಗ್ಗೆ ಲೆಂಡೆ ಖೋಲಾ -ತ್ರಿಶೂಲಿ - ನಾರಾಯಣಿ ನದಿ ಕಾರಿಡಾರ್‌ನಲ್ಲಿ ಭೀಕರ ಹಠಾತ್ ಪ್ರವಾಹ ಅಪ್ಪಳಿಸಿದೆ. ಈ ದುರಂತವು ರಸುವಾಗಡಿ ಗಡಿ ದಾಟುವಿಕೆಯಿಂದ ಈಶಾನ್ಯಕ್ಕೆ ಸುಮಾರು 20 ಕಿಲೋಮೀಟರ್ ದೂರದಲ್ಲಿ, ಗಡಿಯ ಟಿಬೆಟ್ ಭಾಗದಲ್ಲಿ ಹಿಮನದಿ ಅಥವಾ ಹಿಮ - ಕಲ್ಲು ಕುಸಿತದಿಂದ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಇದು ಹಿಮನದಿ ಸರೋವರ ಸ್ಫೋಟ ಪ್ರವಾಹವಾಗಿರಬಹುದು ಎಂದು ಶಂಕಿಸಲಾಗಿದೆ.

ಪ್ರವಾಹದ ಅಲೆಯು ಕೆಲವು ಕಡೆ 8 ರಿಂದ 10 ಮೀಟರ್ ಎತ್ತರದಲ್ಲಿತ್ತು. ಗಲ್ಚಿಯಲ್ಲಿ 30 ನಿಮಿಷದಲ್ಲಿ 9 ಮೀಟರ್ ಮತ್ತು ತ್ರಿಶೂಲಿಯಲ್ಲಿ ಮಲೆಖು ಬಳಿ 7 ಮೀಟರ್​ವರೆಗೂ ಏರಿಕೆ ಕಂಡುಬಂದಿದೆ ಎಂದು ವರದಿಯಾಗಿದೆ. ಈ ಅಲೆಯು ತಿಮುರೆ, ರಸುವಾಗಡಿ ಕಸ್ಟಮ್ಸ್ ಪ್ರದೇಶ, ಸ್ಯಾಫ್ರುಬೆಸಿ, ಮೈಲುಂಗ್, ಶಾಂತಿಬಜಾರ್ ಮತ್ತು ಬೇತ್ರಾವತಿ ಸೇರಿದಂತೆ ಇಡೀ ಮಾರುಕಟ್ಟೆ ವಸಾಹತುಗಳನ್ನು ಕೊಚ್ಚಿಕೊಂಡು ಹೋಗುವಂತೆ ಮಾಡಿದೆ.

431 ಮೆಗಾವ್ಯಾಟ್ ವಿದ್ಯುತ್ ಕಟ್, ಕೊಚ್ಚಿ ಹೋಯ್ತು 40 ಕಿ.ಮೀ ರಸ್ತೆ: ಈ ಪ್ರವಾಹವು 12 ಜಲವಿದ್ಯುತ್ ಸ್ಥಾವರಗಳನ್ನು ನಾಶಪಡಿಸಿದೆ, 431.1 ಮೆಗಾವ್ಯಾಟ್ ವಿದ್ಯುತ್ ಗ್ರಿಡ್‌ನಿಂದ ಕಡಿತಗೊಂಡಿದೆ. ಕನಿಷ್ಠ 19 ವಾಹನ ಸಂಚಾರಿ ಸೇತುವೆಗಳು ಮತ್ತು ಸುಮಾರು 40 ಕಿಲೋಮೀಟರ್ ರಸ್ತೆ ನಾಶವಾಗಿದೆ. ಆಗಸ್ಟ್ 27ರಂದು ಧಾಡಿಂಗ್‌ನಲ್ಲಿ ಪುನಃಸ್ಥಾಪನೆ ಕಾರ್ಯ ನಡೆಯುತ್ತಿದೆ ಎಂದು ಪಿಟಿಐ ಚಿತ್ರಗಳು ತೋರಿಸಿವೆ. ದುರಂತದ ನಿಖರ ಕಾರಣ ಇನ್ನೂ ಸಂಪೂರ್ಣವಾಗಿ ದೃಢಪಟ್ಟಿಲ್ಲ. ಉಪಗ್ರಹ ಚಿತ್ರಗಳು ಮತ್ತು ಇತ್ತೀಚಿನ ಮಳೆ ದತ್ತಾಂಶವನ್ನು ವಿವರವಾಗಿ ಪರಿಶೀಲಿಸಬೇಕಿದೆ. ಆರಂಭದಲ್ಲಿ 4.4 ತೀವ್ರತೆಯ ಭೂಕಂಪವೇ ಹಿಮನದಿಯ ಬುಡವನ್ನು ಒಡೆದಿದೆ ಎಂದು ಅಂದಾಜಿಸಲಾಗಿತ್ತು.

ಭೂಕಂಪ ಅಲ್ಲ, ಹಿಮಪಾತವೇ ಕಾರಣ ಎಂದ USGS: ಆದರೆ, ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆಯ ಹೊಸ ಅಧ್ಯಯನವು ಈ ಊಹೆಯನ್ನು ತಳ್ಳಿಹಾಕಿದೆ. ಪರ್ವತಗಳಲ್ಲಿ ಸಂಭವಿಸಿದ ಹಿಮಪಾತ ಮತ್ತು ಕಲ್ಲು ಕುಸಿತವೇ ಈ ಘಟನೆಗೆ ಕಾರಣ ಎಂದು ಹೇಳಿದೆ. ಮಳೆ ಅಥವಾ ಹಿಮ ಕರಗಿದ ನೀರು ಮಣ್ಣು ಮತ್ತು ಹಿಮದ ಪದರವನ್ನು ಅಸ್ಥಿರಗೊಳಿಸಿದ್ದರಿಂದ ದುರಂತ ಆರಂಭವಾಗಿರಬಹುದು. ನೇಪಾಳದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ನೇಪಾಳ - ಚೀನಾ ಗಡಿಯ ರಸುವಾಗಡಿಯಿಂದ 20 ಕಿ.ಮೀ ಈಶಾನ್ಯದಲ್ಲಿ ಲೆಂಡೆ ನದಿಗೆ ಅವಶೇಷಗಳು ಬಿದ್ದು ಭೂಕುಸಿತವಾಗಿದೆ. ಹಿಮಾಲಯದ ಒರಟು ಭೂಪ್ರದೇಶವು ಅಂತಹ ಘಟನೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಜಿರ್ಕ್ ಹಿಮನದಿ ಕುಸಿತದಿಂದ ನದಿ ಬ್ಲಾಕ್, ಮಹಾಪ್ರವಾಹ: ರಾಷ್ಟ್ರೀಯ ರಿಮೋಟ್ ಸೆನ್ಸಿಂಗ್ ಕೇಂದ್ರದ ಪ್ರಕಾರ, ದುರಂತದ ಮೂಲ ಟಿಬೆಟ್ ಪರ್ವತಗಳಲ್ಲಿದೆ. ಭಾರತೀಯ ಭೂಕಂಪ ಜಾಲ ಕೇಂದ್ರವು ರಸುವಾ ಪ್ರದೇಶದ ಬಳಿ ಬೆಳಗ್ಗೆ 8:22ಕ್ಕೆ 4.9 ತೀವ್ರತೆಯ ಕಂಪನವನ್ನು ದಾಖಲಿಸಿದೆ. ಈ ಕಂಪನವು ಜಿರ್ಕ್ ಹಿಮನದಿಯ ಕುಸಿತಕ್ಕೆ ಕಾರಣವಾಗಿರಬಹುದು. ಹಿಮ ಮತ್ತು ಕಲ್ಲಿನ ಬೃಹತ್ ಹಿಮಪಾತವು ಕಡಿದಾದ ಕಣಿವೆಯಲ್ಲಿ ಕುಸಿದು ನದಿಯ ಸಹಜ ಹರಿವನ್ನು ತಾತ್ಕಾಲಿಕವಾಗಿ ತಡೆಹಿಡಿದಿತ್ತು. ನಂತರ ನೀರು, ಮಣ್ಣು, ಕಲ್ಲು ಮತ್ತು ಅವಶೇಷಗಳನ್ನು ಹೊತ್ತ ವಿನಾಶಕಾರಿ ಪ್ರವಾಹವು ತ್ರಿಶೂಲಿ ಕಣಿವೆಯಲ್ಲಿ ಹರಿದು ವ್ಯಾಪಕ ವಿನಾಶ ಉಂಟುಮಾಡಿತು. 2024ರಲ್ಲೂ ನೇಪಾಳದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು.

ಹವಾಮಾನ ಬದಲಾವಣೆಯೇ ದೊಡ್ಡ ಬೆದರಿಕೆ: ಹವಾಮಾನ ಬದಲಾವಣೆಯು ಹಿಂದೂ ಕುಶ್ ಹಿಮಾಲಯ ಪ್ರದೇಶದಾದ್ಯಂತ ಹಿಮನದಿಗಳ ಕರಗುವಿಕೆಯನ್ನು ವೇಗಗೊಳಿಸುತ್ತಿದೆ. ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕ್ ಹೊರತುಪಡಿಸಿ ಅತಿದೊಡ್ಡ ಹಿಮ ಮತ್ತು ಮಂಜುಗಡ್ಡೆ ನಿಕ್ಷೇಪವನ್ನು ಹೊಂದಿರುವ ಹಿಮಾಲಯವನ್ನು ವಿಶ್ವದ ಮೂರನೇ ಧ್ರುವ ಎಂದು ಕರೆಯಲಾಗುತ್ತದೆ. ತಾಪಮಾನ ಹೆಚ್ಚಾದಂತೆ, ಕಡಿದಾದ ಇಳಿಜಾರುಗಳಲ್ಲಿ ಶತಮಾನಗಳಷ್ಟು ಹಳೆಯದಾದ ಪರ್ಮಾಫ್ರಾಸ್ಟ್ ಕರಗಲು ಪ್ರಾರಂಭಿಸುತ್ತದೆ.

ಇದು ಪ್ರತ್ಯೇಕ ವಿದ್ಯಮಾನವಲ್ಲ. 2021ರಲ್ಲಿ ಉತ್ತರಾಖಂಡದ ಚಮೋಲಿಯಲ್ಲಿ ಸಂಭವಿಸಿದ ದುರಂತ, ಸ್ವಿಟ್ಜರ್ಲೆಂಡ್‌ನಲ್ಲಿ ಹಿಮನದಿ ಕುಸಿತದಿಂದ ಬ್ಲಾಟೆನ್ ಗ್ರಾಮದ ನಾಶ ಮತ್ತು 2023ರಲ್ಲಿ ಜಾರ್ಜಿಯಾದ ಪರ್ವತ ರೆಸಾರ್ಟ್‌ನಲ್ಲಿ 33 ಜನರನ್ನು ಬಲಿ ತೆಗೆದುಕೊಂಡ ಭೂಕುಸಿತಗಳು, ಹಿಮನದಿಗಳು ಜಾಗತಿಕವಾಗಿ ವೇಗವಾಗಿ ಕರಗುತ್ತಿರುವುದಕ್ಕೆ ಸಾಕ್ಷಿಯಾಗಿವೆ. ಇಂತಹ ಘಟನೆಗಳು ಮುಂದೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಇಂತಹ ದುರಂತಗಳನ್ನು ತಡೆಯಬಹುದೇ?: ಸ್ವಿಟ್ಜರ್ಲೆಂಡ್‌ನಲ್ಲಿ ಹಿಮನದಿ ಕುಸಿದಾಗಲೂ ನಿಖರವಾದ ಮುನ್ನೆಚ್ಚರಿಕೆ ವ್ಯವಸ್ಥೆಗಳು ಸಕಾಲದಲ್ಲಿ ಜನರನ್ನು ಸ್ಥಳಾಂತರಿಸಲು ಮತ್ತು ಜೀವಹಾನಿಯನ್ನು ತಡೆಯಲು ಸಹಾಯ ಮಾಡಿದ್ದವು. ಆಧುನಿಕ ತಂತ್ರಜ್ಞಾನವು ನದಿ ಮಟ್ಟ, ಭಾರಿ ಮಳೆ ಮತ್ತು ಭೂಕಂಪನ ಚಟುವಟಿಕೆಯನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡಿ ನಿರ್ಣಾಯಕ ಮುನ್ಸೂಚನೆಯನ್ನು ನೀಡಬಲ್ಲದು.

ಆದರೆ, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೆಚ್ಚಿನ ವೆಚ್ಚದ ಕಾರಣ ಇಂತಹ ವ್ಯವಸ್ಥೆಗಳನ್ನು ಅಳವಡಿಸುವುದು ದೊಡ್ಡ ಸವಾಲಾಗಿದೆ. ಶುಭ ಸುದ್ದಿ ಎಂದರೆ, ಗ್ರೀನ್ ಕ್ಲೈಮೇಟ್ ಫಂಡ್ ಕಳೆದ ವರ್ಷ ನೇಪಾಳದ ಮೇಲ್ವಿಚಾರಣಾ ಮೂಲಸೌಕರ್ಯವನ್ನು ನವೀಕರಿಸಲು ಹಣಕಾಸು ನೆರವು ಘೋಷಿಸಿದೆ. ಇದು ಭವಿಷ್ಯದಲ್ಲಿ ಸಾವಿರಾರು ಜೀವಗಳನ್ನು ಉಳಿಸಬಹುದು.

ಎದುರಾಗಲಿದೆ ನೀರಿನ ಬಿಕ್ಕಟ್ಟು: ತಕ್ಷಣದ ವಿಪತ್ತು ಅಪಾಯವನ್ನು ಮೀರಿ ಮತ್ತೊಂದು ಗಂಭೀರ ಕಳವಳವಿದೆ. ಈ ಹಿಮನದಿಗಳು ನೇಪಾಳ, ಭಾರತ, ಪಾಕಿಸ್ತಾನ ಮತ್ತು ಚೀನಾದಾದ್ಯಂತ ಕೋಟ್ಯಂತರ ಜನರಿಗೆ ಕುಡಿಯುವ ನೀರನ್ನು ಪೂರೈಸುವ ಪ್ರಮುಖ ನದಿಗಳಿಗೆ ನೀರುಣಿಸುತ್ತವೆ. ಹಿಮನದಿಗಳು ಕರಗಿದಾಗ ಆರಂಭದಲ್ಲಿ ನದಿ ಹರಿವು ಹೆಚ್ಚಾಗಬಹುದಾದರೂ, ಹಿಮನದಿಗಳು ಕುಗ್ಗಿದಂತೆ ಒಣ ಹವೆಯ ನೀರಿನ ಪೂರೈಕೆ ತೀವ್ರವಾಗಿ ಕಡಿಮೆಯಾಗಬಹುದು.

ಇದಕ್ಕೆ ಶಾಶ್ವತ ಪರಿಹಾರ ಎಂದರೆ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ವೇಗವಾಗಿ ಕಡಿಮೆ ಮಾಡುವುದು, ಮುನ್ನೆಚ್ಚರಿಕೆ ವ್ಯವಸ್ಥೆಗಳಲ್ಲಿ ಹೂಡಿಕೆ ಮಾಡುವುದು ಮತ್ತು ದುರ್ಬಲ ಪರ್ವತ ವಲಯಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆಯನ್ನು ಜಾರಿಗೊಳಿಸುವುದು. ಇಂತಹ ಕ್ರಮಗಳು ದುರಂತಗಳನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲದಿದ್ದರೂ, ಸಾವಿರಾರು ಜೀವಗಳನ್ನು ಉಳಿಸಬಹುದು ಎಂದು ತಜ್ಞರು ಹೇಳಿದ್ದಾರೆ.

(ಗಮನಿಸಿ: ಈ ಲೇಖನದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಲೇಖಕರ ವೈಯಕ್ತಿಕ ಅಭಿಪ್ರಾಯಗಳಾಗಿವೆ. ಇಲ್ಲಿ ವ್ಯಕ್ತಪಡಿಸಿರುವ ಸಂಗತಿಗಳು ಮತ್ತು ಅಭಿಪ್ರಾಯಗಳು ಈಟಿವಿ ಭಾರತನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ)

ಓದಿ: ಹಿಮಾಲಯದಲ್ಲಿ ಪ್ರಕೃತಿಯ ರೌದ್ರಾವತಾರ!: ಮಣ್ಣಿನ ಸುನಾಮಿಗೆ ನೂರಾರು ಜನ ಬಲಿ, ಸಾವಿರಾರೂ ಮಂದಿ ನಾಪತ್ತೆ; ವಿಜ್ಞಾನಿಗಳು ಹೇಳಿದ್ದೇನು?