ರಸ್ತೆ ಅಪಘಾತ ತಡೆಯಲು ಮಾಸ್ಟರ್ ಪ್ಲಾನ್; ಬರ್ತಿದೆ V2V ಕಮ್ಯುನಿಕೇಶನ್ ಸಿಸ್ಟಮ್: ಏನಿದು?
Internet Free V2V Communication System: ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಇಂಟರ್ನೆಟ್-ಫ್ರೀ V2V ಕಮ್ಯುನಿಕೇಶನ್ ಸಿಸ್ಟಮ್ ಯೋಜಿಸುತ್ತಿದೆ.

Published : January 11, 2026 at 8:31 AM IST
Internet Free V2V Communication System: ರಸ್ತೆ ಅಪಘಾತಗಳು ಹೆಚ್ಚು ಸಂಭವಿಸುವ ದೇಶಗಳಲ್ಲಿ ಭಾರತವೂ ಒಂದು. ಪ್ರತಿ ವರ್ಷ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ರಸ್ತೆ ಅಪಘಾತಗಳನ್ನು ತಪ್ಪಿಸಲು ಇಂಟರ್ನೆಟ್ ರಹಿತ V2V (ವಾಹನದಿಂದ ವಾಹನಕ್ಕೆ) ಸಂವಹನ ಮತ್ತು ಅಲರ್ಟ್ ಸಿಸ್ಟಮ್ ಪ್ರಾರಂಭಿಸಲು ಯೋಜಿಸಿದೆ. ಈ ಯೋಜನೆ 2026ರ ಅಂತ್ಯದ ವೇಳೆಗೆ ಜಾರಿಗೆ ಬರುವ ನಿರೀಕ್ಷೆಯಿದೆ.
ಏನಿದು V2V ಕಮ್ಯುನಿಕೇಶನ್ ಸಿಸ್ಟಮ್?: ವರದಿಯ ಪ್ರಕಾರ, V2V ಕಮ್ಯುನಿಕೇಶನ್ ಸಿಸ್ಟಮ್ ರಸ್ತೆ ಅಪಘಾತಗಳನ್ನು, ಅದರಲ್ಲೂ ವಿಶೇಷವಾಗಿ ಬ್ಲೈಂಡ್ ಸ್ಪಾಟ್‌ಗಳು, ಹಿಂಭಾಗದ ಡಿಕ್ಕಿಗಳು, ಮಂಜು ಸಂಬಂಧಿತ ಅಪಘಾತಗಳು ಮತ್ತು ನಿಂತ ವಾಹನಗಳಿಂದ ಸಂಭವಿಸುವ ಅಪಘಾತಗಳನ್ನು ಕಡಿಮೆ ಮಾಡುವ ಗುರಿ ಹೊಂದಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ವಾಹನದಿಂದ ವಾಹನಕ್ಕೆ ಸಂವಹನ ವ್ಯವಸ್ಥೆ ಯಾವುದೇ ಇಂಟರ್ನೆಟ್ ಅಥವಾ ಮೊಬೈಲ್ ನೆಟ್‌ವರ್ಕ್ ಸಂಪರ್ಕವಿಲ್ಲದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಬಹುದು. ಇದನ್ನು ಬಹುತೇಕ ಎಲ್ಲ ವಾಹನಗಳೊಂದಿಗೆ ಸಂಯೋಜಿಸಬಹುದು. ಮತ್ತೊಂದು ವಾಹನವು ಹತ್ತಿರದಲ್ಲಿದ್ದಾಗ ಚಾಲಕರಿಗೆ ನೈಜ-ಸಮಯದ ಎಚ್ಚರಿಕೆಗಳನ್ನು ಸಕ್ರಿಯಗೊಳಿಸುತ್ತದೆ. ಹೀಗಾಗಿ ಘರ್ಷಣೆ ಮತ್ತು ಅಪಘಾತಗಳನ್ನು ತಡೆಯಲು ನೆರವಾಗುತ್ತದೆ. ಈ ವ್ಯವಸ್ಥೆ ಸುಮಾರು ಶೇ.80ರಷ್ಟು ರಸ್ತೆ ಅಪಘಾತಗಳನ್ನು ಸಂಭಾವ್ಯವಾಗಿ ತಡೆಯಬಹುದು ಎಂದು ಸಚಿವರು ಹೇಳಿದ್ದಾರೆ.
ಈ ಕುರಿತು ವಾಹನ ತಯಾರಕರೊಂದಿಗೆ ಸಮಾಲೋಚಿಸಲಾಗುತ್ತಿದೆ. ಮಾನದಂಡಗಳನ್ನು ಅಂತಿಮಗೊಳಿಸಿದ ನಂತರ ಸರ್ಕಾರ ಅಧಿಕೃತ ಘೋಷಣೆ ಮಾಡಲಿದೆ. ಇದಕ್ಕಾಗಿ ಪ್ರತಿ ವಾಹನಕ್ಕೆ 5,000ರಿಂದ 7,000 ರೂ.ವರೆಗೆ ವೆಚ್ಚವಾಗುವ ನಿರೀಕ್ಷೆ ಇದೆ. ಆರಂಭದಲ್ಲಿ V2V ತಂತ್ರಜ್ಞಾನವನ್ನು ಹೊಸ ವಾಹನಗಳಿಗೆ ಕಡ್ಡಾಯಗೊಳಿಸಲಾಗುವುದು. ನಂತರ ಅಸ್ತಿತ್ವದಲ್ಲಿರುವ ವಾಹನಗಳಿಗೆ ವಿಸ್ತರಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.
ನ್ಯಾಶನಲ್ ಫ್ರೀಕ್ವೆನ್ಸಿ ಲೋಕೇಷನ್ ಫ್ರೇಮ್‌ವರ್ಕ್ ಅಡಿಯಲ್ಲಿ V2V ಸಂವಹನಕ್ಕಾಗಿ 30 MHz ಸ್ಪೆಕ್ಟ್ರಮ್ ಉಚಿತವಾಗಿ ಹಂಚಿಕೆ ಮಾಡಲು ಭಾರತ ಸರ್ಕಾರ ಈಗಾಗಲೇ ದೂರಸಂಪರ್ಕ ಸಚಿವಾಲಯಕ್ಕೆ ಸೂಚಿಸಿದೆ. ಈ ಯೋಜನೆಯ ಒಟ್ಟು ವೆಚ್ಚ ಸುಮಾರು 5,000 ಕೋಟಿ ರೂ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಪ್ರತಿದಿನ ವರದಿಯಾಗುವ ರಸ್ತೆ ಅಪಘಾತಗಳ ಸಂಖ್ಯೆಯನ್ನು ಪರಿಗಣಿಸಿ ಕೇಂದ್ರ ಈ ಕ್ರಮಕ್ಕೆ ಮುಂದಾಗಿದೆ.
ಭಾರತದಾದ್ಯಂತ ಇತ್ತೀಚೆಗೆ ನೂರಾರು ಜೀವಗಳನ್ನು ಬಲಿ ಪಡೆದ ಮಾರಕ ಬಸ್ ಅಪಘಾತಗಳನ್ನೂ ಸಹ ಗಡ್ಕರಿ ಉಲ್ಲೇಖಿಸಿದ್ದಾರೆ. ಸ್ಲೀಪರ್ ಕೋಚ್ ಬಸ್‌ಗಳನ್ನು ಈಗ ಕೇಂದ್ರೀಕೃತ ಮಾನ್ಯತೆ ಹೊಂದಿರುವ ಆಟೋಮೊಬೈಲ್ ಕಂಪನಿಗಳು ಮಾತ್ರ ತಯಾರಿಸುತ್ತವೆ ಎಂದು ಅವರು ಹೇಳಿದ್ದಾರೆ. ಅಸ್ತಿತ್ವದಲ್ಲಿರುವ ಬಸ್‌ಗಳನ್ನು ಬೆಂಕಿ ಪತ್ತೆ ವ್ಯವಸ್ಥೆಗಳು, ತುರ್ತು ನಿರ್ಗಮನಗಳು, ತುರ್ತು ಬೆಳಕು ಮತ್ತು ಚಾಲಕರ ಅರೆನಿದ್ರಾವಸ್ಥೆ ಸೂಚಕಗಳೊಂದಿಗೆ ಮರುಹೊಂದಿಸಲಾಗುತ್ತದೆ. ಸಚಿವಾಲಯವು ಅತಿ ಹೆಚ್ಚು ರಸ್ತೆ ಅಪಘಾತಗಳನ್ನು ಹೊಂದಿರುವ 100 ಜಿಲ್ಲೆಗಳನ್ನು ಗುರುತಿಸಿದೆ.
ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಮೆಡಿಕಲ್ ಎಮರ್ಜೆನ್ಸಿ, ಗಗನಯಾತ್ರಿ ಅಸ್ವಸ್ಥ! ನಾಸಾದ ಮುಂದಿನ ನಡೆಯೇನು?

