ETV Bharat / technology

ನ್ಯೂಕ್ಲಿಯರ್ ಎನರ್ಜಿ ಮಿಷನ್, ಶಾಂತಿ ಕಾಯ್ದೆ 2025 ಜಾರಿ, ತ್ಯಾಜ್ಯಕ್ಕೆ ವಿಟ್ರಿಫಿಕೇಶನ್ ತಂತ್ರಜ್ಞಾನ, ಕೆಲವೇ ದೇಶಗಳಲ್ಲಿ ಭಾರತ!

Nuclear Energy India: ಭಾರತದಲ್ಲಿ 24 ಪರಮಾಣು ರಿಯಾಕ್ಟರ್ ಕಾರ್ಯನಿರ್ವಹಿಸುತ್ತಿದ್ದು, 9 ಘಟಕಗಳು ನಿರ್ಮಾಣ ಹಂತದಲ್ಲಿವೆ.

REACTORS CONSTRUCTION  100 GW NUCLEAR BY 2047  NUCLEAR ENERGY MISSION 2025  SHANTI ACT 2025 INDIA
ನ್ಯೂಕ್ಲಿಯರ್ ಎನರ್ಜಿ ಮಿಷನ್ (Photo Credit: IANS)
author img

By ETV Bharat Tech Team

Published : August 29, 2026 at 9:51 AM IST

2 Min Read
Choose ETV Bharat

Nuclear Energy India: ಭಾರತದಲ್ಲಿ 8.78 ಗಿಗಾವ್ಯಾಟ್ ಒಟ್ಟು ಸ್ಥಾಪಿತ ಸಾಮರ್ಥ್ಯದ 24 ಪರಮಾಣು ವಿದ್ಯುತ್ ರಿಯಾಕ್ಟರ್‌ಗಳು ಕಾರ್ಯನಿರ್ವಹಿಸುತ್ತಿವೆ. 7.5 ಗಿಗಾವ್ಯಾಟ್ ಸಂಯೋಜಿತ ಸಾಮರ್ಥ್ಯದ 9 ರಿಯಾಕ್ಟರ್ ಘಟಕಗಳು ನಿರ್ಮಾಣ ಹಂತದಲ್ಲಿವೆ. ದೇಶ 2047 ರ ವೇಳೆಗೆ 100 ಗಿಗಾವ್ಯಾಟ್ ಪರಮಾಣು ವಿದ್ಯುತ್ ಸಾಮರ್ಥ್ಯ ಸಾಧಿಸುವತ್ತ ಸಾಗುತ್ತಿದೆ ಎಂದು ಶುಕ್ರವಾರ ಅಧಿಕೃತ ಮಾಹಿತಿ ಹೊರಬಿದ್ದಿದೆ.

100 ಗಿಗಾವ್ಯಾಟ್ ಗುರಿಗೆ 9 ಹೊಸ ಘಟಕ ನಿರ್ಮಾಣ!: ಇತ್ತೀಚಿನ ನೀತಿ ಉಪಕ್ರಮಗಳಾದ ನ್ಯೂಕ್ಲಿಯರ್ ಎನರ್ಜಿ ಮಿಷನ್ 2025-26 ಮತ್ತು ಶಾಂತಿ ಕಾಯ್ದೆ 2025 ಸಾಮರ್ಥ್ಯ ವಿಸ್ತರಣೆಯನ್ನು ವೇಗಗೊಳಿಸುತ್ತಿವೆ. ದೇಶೀಯ ಉತ್ಪಾದನೆಯನ್ನು ಬಲಪಡಿಸುತ್ತಿವೆ, ನಾವೀನ್ಯತೆಯನ್ನು ಉತ್ತೇಜಿಸುತ್ತಿವೆ ಮತ್ತು ಹೆಚ್ಚಿನ ಖಾಸಗಿ ವಲಯದ ಭಾಗವಹಿಸುವಿಕೆಗೆ ಅನುವು ಮಾಡಿಕೊಡುತ್ತಿವೆ.

REACTORS CONSTRUCTION  100 GW NUCLEAR BY 2047  NUCLEAR ENERGY MISSION 2025  SHANTI ACT 2025 INDIA
ಪರಮಾಣು ವಿದ್ಯುತ್ ಸ್ಥಾವರ (Photo Credit: IANS)

ಸರ್ಕಾರ 10 ದೇಶೀಯ ಒತ್ತಡದ ಭಾರ ನೀರು ರಿಯಾಕ್ಟರ್‌ಗಳನ್ನು (Pressurized Heavy Water Reactors - PHWRs) ಫ್ಲೀಟ್ ಮೋಡ್‌ನಲ್ಲಿ ಅನುಮೋದಿಸಿದೆ. ಎರಡು 500 ಮೆಗಾವ್ಯಾಟ್ ಫಾಸ್ಟ್ ಬ್ರೀಡರ್ ರಿಯಾಕ್ಟರ್‌ಗಳಿಗೆ ಪೂರ್ವ ಯೋಜನಾ ಚಟುವಟಿಕೆಗಳನ್ನು ಅನುಮೋದಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ಭಾರತದ ಪರಮಾಣು ಕಾರ್ಯಕ್ರಮಕ್ಕೆ ತಾಂತ್ರಿಕ ಸ್ವಾವಲಂಬನೆಯ ಕಾರ್ಯತಂತ್ರ ಮಾರ್ಗದರ್ಶನ ನೀಡುತ್ತಿದೆ. ಐತಿಹಾಸಿಕ ಇಂಧನ ನಿರ್ಬಂಧಗಳನ್ನು ನಿವಾರಿಸಲು ಮತ್ತು ದೇಶದ ಅಪಾರ ಥೋರಿಯಂ ನಿಕ್ಷೇಪಗಳನ್ನು ಬಳಸಿಕೊಳ್ಳಲು ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮೂರು ಹಂತದ ಪರಮಾಣು ವಿದ್ಯುತ್ ಕಾರ್ಯಕ್ರಮ: ಭಾರತದ ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಮೂರು ಹಂತದ ಪರಮಾಣು ವಿದ್ಯುತ್ ಕಾರ್ಯಕ್ರಮವನ್ನು ಹೇಳಿಕೆ ವಿವರಿಸಿದೆ. ಇದು ಯುರೇನಿಯಂನಿಂದ ಥೋರಿಯಂ ಆಧಾರಿತ ಇಂಧನ ಚಕ್ರಗಳಿಗೆ ಕ್ರಮೇಣ ಪರಿವರ್ತನೆಗೆ ಅನುವು ಮಾಡಿಕೊಡುತ್ತದೆ.

ಈ ಕಾರ್ಯಕ್ರಮ ಭಾರತದ ಸುಸ್ಥಿರ ಅಭಿವೃದ್ಧಿಯ ದೃಷ್ಟಿಕೋನಕ್ಕೆ ಕೊಡುಗೆ ನೀಡುತ್ತಿದೆ. ಸ್ಥಳೀಯ ನಾವೀನ್ಯತೆಯನ್ನು ಮುಂದುವರಿಸುವ ಮೂಲಕ, ಶುದ್ಧ ಮತ್ತು ವಿಶ್ವಾಸಾರ್ಹ ವಿದ್ಯುತ್ ಉತ್ಪಾದನೆಯನ್ನು ವಿಸ್ತರಿಸುವ ಮೂಲಕ ಮತ್ತು ದೀರ್ಘಾವಧಿ ಇಂಧನ ಭದ್ರತೆಯನ್ನು ಖಾತ್ರಿಪಡಿಸುವ ಮೂಲಕ ಕೊಡುಗೆ ನೀಡುತ್ತಿದೆ.

REACTORS CONSTRUCTION  100 GW NUCLEAR BY 2047  NUCLEAR ENERGY MISSION 2025  SHANTI ACT 2025 INDIA
ಭಾರತೀಯ ನೌಕಾಪಡೆಯ ಮೂರನೇ ಸ್ಥಳೀಯವಾಗಿ ನಿರ್ಮಿಸಲಾದ ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ಐಎನ್ಎಸ್ ಅರಿಧಮನ್ (Photo Credit: IANS)

ಭಾರತದ ದೀರ್ಘಾವಧಿ ಪರಮಾಣು ಕಾರ್ಯತಂತ್ರವು ತನ್ನ ಹೇರಳವಾದ ಥೋರಿಯಂ ನಿಕ್ಷೇಪಗಳನ್ನು ಬಳಸುವುದರ ಮೇಲೆ ಕೇಂದ್ರೀಕೃತವಾಗಿದೆ. ತನ್ನ ಮೂರು ಹಂತದ ಪರಮಾಣು ವಿದ್ಯುತ್ ಕಾರ್ಯಕ್ರಮದ ಮೂಲಕ ಇದನ್ನು ಮಾಡಲಾಗುತ್ತಿದೆ.

ಹೆಚ್ಚಿನ ಮಟ್ಟದ ತ್ಯಾಜ್ಯಕ್ಕೆ ವಿಟ್ರಿಫಿಕೇಶನ್ ಟೆಕ್ನಾಲಾಜಿ: ಭಾರತ ಹೆಚ್ಚಿನ ಮಟ್ಟದ ವಿಕಿರಣಶೀಲ ತ್ಯಾಜ್ಯಕ್ಕೆ ವಿಟ್ರಿಫಿಕೇಶನ್ ತಂತ್ರಜ್ಞಾನ ಹೊಂದಿರುವ ಕೆಲವೇ ದೇಶಗಳಲ್ಲಿ ಒಂದಾಗಿದೆ. ಈ ಪ್ರಕ್ರಿಯೆ ಹೆಚ್ಚಿನ ಮಟ್ಟದ ವಿಕಿರಣಶೀಲ ತ್ಯಾಜ್ಯವನ್ನು ಸ್ಥಿರ ಗಾಜಿನ ರೂಪಕ್ಕೆ ಪರಿವರ್ತಿಸುತ್ತದೆ. ಇದು ದೀರ್ಘಾವಧಿ ಸಂಗ್ರಹಣೆ, ಸಾಗಣೆ ಮತ್ತು ಅಂತಿಮ ವಿಲೇವಾರಿಗೆ ಸುರಕ್ಷಿತವಾಗಿಸುತ್ತದೆ.

ಶುದ್ಧ, ವಿಶ್ವಾಸಾರ್ಹ ಮತ್ತು ಸ್ಥಿರ ಬೇಸ್‌ಲೋಡ್ ವಿದ್ಯುತ್‌ಗೆ ಬೆಳೆಯುತ್ತಿರುವ ಬೇಡಿಕೆಯನ್ನು ಗುರುತಿಸಿದ ನಂತರ ಸರ್ಕಾರ ಪರಮಾಣು ಶಕ್ತಿಯನ್ನು ತನ್ನ ದೀರ್ಘಾವಧಿ ಇಂಧನ ಕಾರ್ಯತಂತ್ರದ ಕೇಂದ್ರದಲ್ಲಿ ಇರಿಸಿದೆ ಎಂದು ಹೇಳಿಕೆ ಸೇರಿಸಿದೆ. ಪರಮಾಣು ವಿದ್ಯುತ್ ದಿನದ 24 ಗಂಟೆ ಕಡಿಮೆ ಇಂಗಾಲದ ವಿದ್ಯುತ್ ನೀಡುತ್ತದೆ. ನವೀಕರಿಸಬಹುದಾದ ಇಂಧನಕ್ಕೆ ಪೂರಕವಾಗಿದ್ದು, ಗ್ರಿಡ್ ಸ್ಥಿರತೆಯನ್ನು ಖಾತ್ರಿಪಡಿಸುತ್ತದೆ.

ಇದು ಆಮದು ಮಾಡಿಕೊಳ್ಳುವ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಭಾರತದ ಹವಾಮಾನ ಬದ್ಧತೆಗಳನ್ನು ಬೆಂಬಲಿಸುತ್ತದೆ. ಭಾರತ ಇಡೀ ಪರಮಾಣು ಇಂಧನ ಚಕ್ರದಾದ್ಯಂತ ದೃಢವಾದ ಸ್ಥಳೀಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಿಕೆ ಗಮನಿಸಿದೆ. ಇದರಲ್ಲಿ ರಿಯಾಕ್ಟರ್ ವಿನ್ಯಾಸ, ಇಂಧನ ತಯಾರಿಕೆ, ತ್ಯಾಜ್ಯ ನಿರ್ವಹಣೆ ಮತ್ತು ಸುಧಾರಿತ ತಂತ್ರಜ್ಞಾನಗಳು ಸೇರಿವೆ.

ಓದಿ: 135 ಕೋಟಿ ದಾಟಿದ ಟೆಲಿಕಾಂ ಚಂದಾದಾರರು: ಜುಲೈನಲ್ಲಿ ಒಂದರಲ್ಲೇ 62 ಲಕ್ಷ ಏರಿಕೆ!