ETV Bharat / technology

ಭಾರತದಲ್ಲಿ EV ಹವಾ ಜೋರು: ಸೆಪ್ಟೆಂಬರ್‌ನಲ್ಲಿ 95% ಮಾರಾಟ ಜಿಗಿತ, ಟಾಟಾ ಮತ್ತೆ ಮಾರುಕಟ್ಟೆ ಲೀಡರ್!

EV Sales September 2026 India: ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ 36,108 ಎಲೆಕ್ಟ್ರಿಕ್ ಕಾರುಗಳು ಮಾರಾಟವಾಗಿದ್ದು, ಕಳೆದ ವರ್ಷಕ್ಕಿಂತ 95% ಹೆಚ್ಚಳವಾಗಿದ್ದು, ಟಾಟಾ ಮಾರುಕಟ್ಟೆ ನಾಯಕನಾಗಿದೆ. ಈ ಕುರಿತು ಸಂಪೂರ್ಣ ವರದಿ ಇಲ್ಲಿದೆ..

ಟಾಟಾ ಎಲೆಕ್ಟ್ರಿಕ್ ಕಾರು ಮಾರಾಟ  ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬೇಡಿಕೆ  FADA RETAIL SALES  ELECTRIC CAR MARKET SHARE INDIA
ಭಾರತದಲ್ಲಿ EV ಹವಾ ಜೋರು: (Photo Credit: EV TATA Cars)
author img

By ETV Bharat Tech Team

Published : October 12, 2026 at 8:10 AM IST

3 Min Read
Choose ETV Bharat

EV Sales September 2026 India: ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ (EV) ಬೇಡಿಕೆ ದಿನದಿಂದ ದಿನಕ್ಕೆ ಭರ್ಜರಿ ಏರಿಕೆಯಾಗುತ್ತಿದೆ. ಈ ಬಾರಿಯ ಹಬ್ಬದ ಋತುವಿನ ಆರಂಭದಲ್ಲಿಯೇ ಗ್ರಾಹಕರು ಎಲೆಕ್ಟ್ರಿಕ್ ಕಾರು ಖರೀದಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ (FADA) ಬಿಡುಗಡೆ ಮಾಡಿರುವ ಸೆಪ್ಟೆಂಬರ್ 2026ರ ರಿಟೇಲ್ ಮಾರಾಟದ ಅಂಕಿ-ಅಂಶಗಳ ಪ್ರಕಾರ, ದೇಶದ ಎಲೆಕ್ಟ್ರಿಕ್ ಪ್ಯಾಸೆಂಜರ್ ವಾಹನ ವಿಭಾಗದಲ್ಲಿ ದೊಡ್ಡ ಯಶಸ್ಸು ಕಂಡುಬಂದಿದೆ.

ಸೆಪ್ಟೆಂಬರ್ ತಿಂಗಳ ಮಾರಾಟದ ಲೆಕ್ಕಾಚಾರ: FADA ಅಧಿಕೃತ ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 2026ರಲ್ಲಿ ಭಾರತದಲ್ಲಿ ಒಟ್ಟು 36,108 ಯೂನಿಟ್ ಎಲೆಕ್ಟ್ರಿಕ್ ಪ್ಯಾಸೆಂಜರ್ ಕಾರುಗಳು ಮಾರಾಟವಾಗಿವೆ. ಇದು ಕಳೆದ ವರ್ಷ ಸೆಪ್ಟೆಂಬರ್ 2025ರಲ್ಲಿ ಮಾರಾಟವಾಗಿದ್ದ 18,559 ಯೂನಿಟ್‌ಗಳಿಗೆ ಹೋಲಿಸಿದರೆ ವಾರ್ಷಿಕ ಆಧಾರದ ಮೇಲೆ ಶೇಕಡಾ 94.56 ರಷ್ಟು ಅಂದರೆ ಸುಮಾರು 95% ಹೆಚ್ಚಳವಾಗಿದೆ. ಅಷ್ಟೇ ಅಲ್ಲದೆ ಆಗಸ್ಟ್ 2026ರಲ್ಲಿ ಮಾರಾಟವಾಗಿದ್ದ 30,696 ಯೂನಿಟ್‌ಗಳಿಗೆ ಹೋಲಿಸಿದರೆ ಮಾಸಿಕ ಆಧಾರದಲ್ಲಿಯೂ ಶೇಕಡಾ 17.63 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಈ ಭರ್ಜರಿ ಮಾರಾಟದಿಂದಾಗಿ ಒಟ್ಟು ಪ್ಯಾಸೆಂಜರ್ ಕಾರು ಮಾರುಕಟ್ಟೆಯಲ್ಲಿ EV ವಿಭಾಗದ ಮಾರುಕಟ್ಟೆ ಪಾಲು ಏರಿಕೆಯಾಗಿ ಶೇಕಡಾ 8.5ಕ್ಕೆ ತಲುಪಿದೆ. ಇದು ಆಗಸ್ಟ್ 2026 ರಲ್ಲಿ ಶೇಕಡಾ 7.6 ರಷ್ಟು ಮತ್ತು ಸೆಪ್ಟೆಂಬರ್ 2025 ರಲ್ಲಿ ಕೇವಲ ಶೇಕಡಾ 5.7 ರಷ್ಟು ಇತ್ತು. ಈಗ ಹಬ್ಬದ ಸೀಸನ್ ಬೇಗ ಆರಂಭವಾಗಿರುವುದು ಮತ್ತು ಕಂಪನಿಗಳ ಹೊಸ ಹೊಸ ಮಾಡೆಲ್‌ಗಳು ಗ್ರಾಹಕರನ್ನು ಸೆಳೆಯುತ್ತಿವೆ.

ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾ ಏಕಸ್ವಾಮ್ಯ: ದೇಶೀಯ ಮಾರುಕಟ್ಟೆಯಲ್ಲಿ ಎಂದಿನಂತೆ ಈ ಬಾರಿಯೂ ಟಾಟಾ ಮೋಟಾರ್ಸ್ ತನ್ನ ದೇಶಿ ದಬದಬೆಯನ್ನು ಉಳಿಸಿಕೊಂಡು ಮಾರುಕಟ್ಟೆ ಲೀಡರ್ ಆಗಿದೆ. ಕಂಪನಿಯು ಸೆಪ್ಟೆಂಬರ್ 2026 ರಲ್ಲಿ ಒಟ್ಟು 14,791 ಯೂನಿಟ್ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿ ಮೊದಲ ಸ್ಥಾನದಲ್ಲಿದೆ. ಇದು ಸೆಪ್ಟೆಂಬರ್ 2025ರ 7,369 ಯೂನಿಟ್‌ಗಳಿಗೆ ಹೋಲಿಸಿದರೆ ವಾರ್ಷಿಕ ಶೇಕಡಾ 100.72 ರಷ್ಟು ಬೆಳವಣಿಗೆಯಾಗಿದೆ. ಆಗಸ್ಟ್ 2026ರ 13,158 ಯೂನಿಟ್‌ಗಳಿಗೆ ಹೋಲಿಸಿದರೆ ಮಾಸಿಕ ಶೇಕಡಾ 12.41 ರಷ್ಟು ಹೆಚ್ಚಳವಾಗಿದೆ.

ಈ ಓಟದಲ್ಲಿ ಮಹೀಂದ್ರಾ ಕಂಪನಿ 7,780 ಯೂನಿಟ್ ಗಾಡಿಗಳನ್ನು ಮಾರಾಟ ಮಾಡಿ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ. ಇದು ಕಳೆದ ವರ್ಷದ ಇದೇ ಅವಧಿಯ 3,973 ಯೂನಿಟ್‌ಗಳಿಗೆ ಹೋಲಿಸಿದರೆ ಶೇಕಡಾ 95.82 ರಷ್ಟು ವಾರ್ಷಿಕ ಬೆಳವಣಿಗೆ ಮತ್ತು ಆಗಸ್ಟ್ 2026 ರ 6,464 ಯೂನಿಟ್‌ಗಳಿಗೆ ಹೋಲಿಸಿದರೆ ಮಾಸಿಕ ಶೇಕಡಾ 20.36 ರಷ್ಟು ಬೆಳವಣಿಗೆಯನ್ನು ತೋರಿಸುತ್ತದೆ. ಇನ್ನೊಂದೆಡೆ JSW MG ಮೋಟಾರ್ ಇಂಡಿಯಾ ಒಟ್ಟು 5,242 ಯೂನಿಟ್ ರಿಟೇಲ್ ಮಾರಾಟದೊಂದಿಗೆ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಇದು ವಾರ್ಷಿಕ ಶೇಕಡಾ 9.14 ಮತ್ತು ಮಾಸಿಕ ಶೇಕಡಾ 13.41 ರಷ್ಟು ಹೆಚ್ಚಾಗಿದೆ.

ಇತರ ಪ್ರಮುಖ ಕಂಪನಿಗಳ ಪ್ರದರ್ಶನ: ಭಾರತೀಯ ಮಾರುಕಟ್ಟೆಗೆ ಹೊಸದಾಗಿ ಪ್ರವೇಶಿಸಿರುವ ವಿಯೆಟ್ನಾಂನ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿ ವಿನ್‌ಫಾಸ್ಟ್ ಆಟೋ ಇಂಡಿಯಾ ಕೂಡ ತನ್ನ ಮಾರಾಟವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ. ಕಂಪನಿಯು ಸೆಪ್ಟೆಂಬರ್ ತಿಂಗಳಲ್ಲಿ 2,964 ಯೂನಿಟ್ ಮಾರಾಟ ಮಾಡಿದೆ. ಇದು ಆಗಸ್ಟ್ 2026ರ 2,199 ಯೂನಿಟ್‌ಗಳಿಗೆ ಹೋಲಿಸಿದರೆ ಮಾಸಿಕ ಶೇಕಡಾ 34.79 ರಷ್ಟು ಬೆಳವಣಿಗೆಯಾಗಿದೆ. ಸೆಪ್ಟೆಂಬರ್ 2025 ರಲ್ಲಿ ಕಂಪನಿಯು ಕೇವಲ 6 ಯೂನಿಟ್ ಗಾಡಿಗಳನ್ನು ಮಾತ್ರ ಮಾರಾಟ ಮಾಡಿತ್ತು.

ಅದೇ ರೀತಿ ಕಿಯಾ ಇಂಡಿಯಾ ಕೂಡ 1,262 ಯೂನಿಟ್ EV ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಇದು ವಾರ್ಷಿಕ ಶೇಕಡಾ 111.04 ಮತ್ತು ಮಾಸಿಕ ಶೇಕಡಾ 95.66 ರಷ್ಟು ಬೆಳವಣಿಗೆಯಾಗಿದೆ. ಇನ್ನೊಂದೆಡೆ ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇಂಡಿಯಾ ಸೆಪ್ಟೆಂಬರ್ ತಿಂಗಳಲ್ಲಿ 1,104 ಯೂನಿಟ್ EV ಮಾರಾಟ ಮಾಡಿದೆ. ಇದು ಆಗಸ್ಟ್ 2026ರ 1,412 ಯೂನಿಟ್‌ಗಳಿಗೆ ಹೋಲಿಸಿದರೆ ಸುಮಾರು ಶೇಕಡಾ 21.81 ರಷ್ಟು ಇಳಿಕೆಯನ್ನು ತೋರಿಸುತ್ತದೆ. ಹಬ್ಬದ ಋತುವಿನಿಂದಾಗಿ ಮುಂದೆ EV ಮಾರುಕಟ್ಟೆಯ ಒಟ್ಟಾರೆ ಮಾರಾಟ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಓದಿ: ಆಗ ಟೀಕೆ, ವ್ಯಂಗ್ಯ! ಈಗ ಭಾರತದಲ್ಲಿ ಅಗ್ಗದ ಇಂಟರ್ನೆಟ್ ಕೊಡ್ತೀನಿ ಎಂದು ಅಂಬಾನಿಗೆ ಮಸ್ಕ್ ನೇರ ಸವಾಲು!!