ETV Bharat / technology

ಭಾರತದಲ್ಲಿ ಇ-ಸ್ಕೂಟರ್ ಹವಾ: 9 ತಿಂಗಳಲ್ಲಿ ಅಧಿಕ ಲಕ್ಷ ಮಾರಾಟದೊಂದಿಗೆ ಸಾರ್ವಕಾಲಿಕ ದಾಖಲೆ, ಟಿವಿಎಸ್-ಬಜಾಜ್ ಮೇಲುಗೈ!

Scooter Sales India 2026: 2026ರಲ್ಲಿ ಭಾರತದಲ್ಲಿ 16.1 ಲಕ್ಷ ಇ-ಸ್ಕೂಟರ್ ಮಾರಾಟವಾಗಿದ್ದು, ಸೆಪ್ಟೆಂಬರ್‌ನಲ್ಲಿ 2.07 ಲಕ್ಷದ ದಾಖಲೆ ಮಾರಾಟವಾಗಿದೆ. ಇದರಲ್ಲಿ ಟಿವಿಎಸ್ ಬಜಾಜ್ ಮುನ್ನಡೆ ಸಾಧಿಸಿದೆ.

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಭಾರತ  ಇ ಸ್ಕೂಟರ್ ದಾಖಲೆ ಮಾರಾಟ  TVS BAJAJ EV MARKET SHARE  ATHER VIDA SALES SEPTEMBER
ಭಾರತದಲ್ಲಿ ಇ-ಸ್ಕೂಟರ್ ಹವಾ (Photo Credit: TVS Motor)
author img

By ETV Bharat Tech Team

Published : October 12, 2026 at 10:02 AM IST

3 Min Read
Choose ETV Bharat

Scooter Sales India 2026: ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ದಿನನಿತ್ಯದ ಪ್ರಯಾಣದ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬುದು ಅನೇಕರು ಎಲೆಕ್ಟ್ರಿಕ್ ವಾಹನದ ಕಡೆಗೆ ಹೋಗಲು ಮುಖ್ಯ ಕಾರಣವಾಗಿದೆ. ಇಂಧನ ವೆಚ್ಚದಲ್ಲಿನ ಲಾಭ, ಕಡಿಮೆ ನಿರ್ವಹಣಾ ವೆಚ್ಚ, ಸರ್ಕಾರದ ಸೌಲಭ್ಯಗಳು ಮತ್ತು ಸಬ್ಸಿಡಿ, ಪರಿಸರ ಸ್ನೇಹಿ, ಉತ್ತಮ ರೈಡಿಂಗ್ ಅನುಭವ ಮತ್ತು ಆಧುನಿಕ ವೈಶಿಷ್ಟ್ಯಗಳು ಪೆಟ್ರೋಲ್ ಸ್ಕೂಟರ್‌ಗಳಿಂದ ಜನರನ್ನು ಎಲೆಕ್ಟ್ರಿಕ್ ಸ್ಕೂಟರ್‌ಗೆ ಬದಲಾಯಿಸುವಂತೆ ಮಾಡುತ್ತಿವೆ.

9 ತಿಂಗಳಲ್ಲಿ 16.1 ಲಕ್ಷ ಮಾರಾಟ: 2026ರ ಜನವರಿಯಿಂದ ಸೆಪ್ಟೆಂಬರ್​ವರೆಗಿನ ಅವಧಿಯಲ್ಲಿ ದೇಶದಲ್ಲಿ 16.1 ಲಕ್ಷ ಯೂನಿಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 6.40 ಲಕ್ಷ ಯೂನಿಟ್‌ಗಳು ಮಾತ್ರ ಮಾರಾಟವಾಗಿದ್ದವು. 2026 ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಮಾತ್ರ ಗ್ರಾಹಕರು 11.2 ಲಕ್ಷ ಯೂನಿಟ್ EV ಗಳನ್ನು ಖರೀದಿಸಿದ್ದಾರೆ. ಇದು ಬಳಕೆದಾರರ ಸಂಖ್ಯೆಯಲ್ಲಿ ಕಳೆದ ವರ್ಷಕ್ಕಿಂತ ಶೇಕಡಾ 76 ರಷ್ಟು ಏರಿಕೆಯನ್ನು ತೋರಿಸುತ್ತದೆ.

ಸೆಪ್ಟೆಂಬರ್‌ನಲ್ಲಿ ಸಾರ್ವಕಾಲಿಕ ಗರಿಷ್ಠ ಮಾರಾಟ: 2026ರ ಸೆಪ್ಟೆಂಬರ್‌ನಲ್ಲಿ ಮಾತ್ರ 2.07 ಲಕ್ಷ ಯೂನಿಟ್‌ಗಳು ಮಾರಾಟವಾಗಿವೆ. ಇದು ಸಾರ್ವಕಾಲಿಕ ಗರಿಷ್ಠ ಸಂಖ್ಯೆಯಾಗಿದೆ. 2025ರ ಅಂಕಿ-ಅಂಶಗಳಿಗೆ ಹೋಲಿಸಿದರೆ ಶೇಕಡಾ 89 ರಷ್ಟು ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ದೊಡ್ಡ ಪ್ರಮಾಣದಲ್ಲಿ ಏರುತ್ತಿರುವುದರಿಂದ ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ ಒಟ್ಟು 22.6 ಲಕ್ಷ ಯೂನಿಟ್‌ಗಳು ಮಾರಾಟವಾಗುತ್ತವೆ ಎಂದು ಅಂದಾಜಿಸಲಾಗಿದೆ.

ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಕಂಪನಿಗಳು: 2025 ಏಪ್ರಿಲ್​ವರೆಗೆ ಹೆಚ್ಚು ಮಾರಾಟವಾಗಿದ್ದು ಓಲಾ ಎಲೆಕ್ಟ್ರಿಕ್ ಆಗಿತ್ತು. ಆದರೆ ನಂತರದ ತಿಂಗಳುಗಳಲ್ಲಿ ಹಿನ್ನಡೆ ಅನುಭವಿಸಿದ ನಂತರ ಟಿವಿಎಸ್ ಮೋಟಾರ್ ಮತ್ತು ಬಜಾಜ್ ಆಟೋ ಮುಂಚೂಣಿಗೆ ಬಂದವು. ಉತ್ತಮ ಬೆಳವಣಿಗೆಯನ್ನು ದಾಖಲಿಸಿದ ಎರಡು ಕಂಪನಿಗಳು ಇವು. 2026 ಸೆಪ್ಟೆಂಬರ್‌ನಲ್ಲಿ ದಾಖಲೆಯ ರಿಟೇಲ್ ಮಾರಾಟದಲ್ಲಿ ಶೇಕಡಾ 49ರಷ್ಟು ಪಾಲು ಈ ಕಂಪನಿಗಳಿಂದಲೇ ಬಂದಿದೆ.

ಬಜಾಜ್ ಆಟೋಗೆ ಸಂಬಂಧಿಸಿದಂತೆ ಇದು 2026 ಸೆಪ್ಟೆಂಬರ್‌ನ ಅತಿ ಹೆಚ್ಚು ಮಾಸಿಕ ಮಾರಾಟವಾಗಿದೆ. 2026 ಮಾರ್ಚ್‌ನಲ್ಲಿ ಸಾಧಿಸಿದ್ದ 47,755 ಯೂನಿಟ್ ಮಾರಾಟದ ಸಂಖ್ಯೆಯನ್ನು ಮೀರಿ ಕಂಪನಿ ಈ ಸಾಧನೆ ಮಾಡಿದೆ. 30,661 ಯೂನಿಟ್‌ಗಳನ್ನು ಮಾರಾಟ ಮಾಡಿ ಏಥರ್ ಎನರ್ಜಿ ಮೂರನೇ ಸ್ಥಾನದಲ್ಲಿದೆ. ಶೇಕಡಾ 56ರಷ್ಟು ವಾರ್ಷಿಕ ಬೆಳವಣಿಗೆಯನ್ನು ಕಂಪನಿ ಇದರ ಮೂಲಕ ಗಳಿಸಿದೆ.

2026 ಮಾರ್ಚ್‌ನಲ್ಲಿ ಏಥರ್ ಎನರ್ಜಿ 36,634 ಯೂನಿಟ್‌ಗಳನ್ನು ಮಾರಾಟ ಮಾಡಿತ್ತು. ಇದು ಕಂಪನಿಯ ಇದುವರೆಗಿನ ಮಾರಾಟದ ಅತ್ಯುತ್ತಮ ಪ್ರದರ್ಶನವಾಗಿದೆ. ಆದರೆ ಏಥರ್ ಕೊನಾರ್ಕ್ ಬಿಡುಗಡೆ ಮಾಡಿದ ನಂತರ ಕಂಪನಿಯ ಮಾರಾಟ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ. ಜೊತೆಗೆ ಹೀರೋ ಮೋಟೋಕಾರ್ಪ್ ಬೆಂಬಲಿತ ವಿಡಾದ 24,370 ಯೂನಿಟ್‌ಗಳು ಮಾರಾಟವಾಗಿವೆ. ಜುಲೈನ 22,996 ಯೂನಿಟ್‌ಗಳಿಗಿಂತ ಇದು ಹೆಚ್ಚು. ಇದು ಸೆಪ್ಟೆಂಬರ್ ತಿಂಗಳ ಸಾರ್ವಕಾಲಿಕ ಗರಿಷ್ಠ ಮಾರಾಟವಾಗಿದೆ.

2027 ಹಣಕಾಸು ವರ್ಷದ ಮೊದಲಾರ್ಧದ ಮಾರುಕಟ್ಟೆ ಪಾಲು: 2027 ಹಣಕಾಸು ವರ್ಷದ ಮೊದಲಾರ್ಧದ (H1 FY2027) ಮಾರುಕಟ್ಟೆ ಪಾಲನ್ನು ಪರಿಶೀಲಿಸಿದಾಗ ಟಿವಿಎಸ್ ಮೋಟಾರ್‌ನ ಮೊದಲಾರ್ಧದ ರಿಟೇಲ್ ಮಾರಾಟವು ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟಾಗಿ 2.90 ಲಕ್ಷ ಯೂನಿಟ್‌ಗಳನ್ನು ತಲುಪಿದೆ. ಇದರೊಂದಿಗೆ ಕಂಪನಿಯ ಮಾರುಕಟ್ಟೆ ಪಾಲು ಶೇಕಡಾ 26ಕ್ಕೆ ಏರಿದೆ. ಟಿವಿಎಸ್ ಮೋಟಾರ್‌ನ ಬೆಳವಣಿಗೆಯ ಮುಖ್ಯ ಮೂಲವಾಗಿ ಈಗ ಎಲೆಕ್ಟ್ರಿಕ್ ವಾಹನಗಳು ಮಾರ್ಪಟ್ಟಿವೆ ಎಂಬುದು ಅಂಕಿ-ಅಂಶಗಳಿಂದ ಸ್ಪಷ್ಟವಾಗಿದೆ. ಕಂಪನಿ ಮಾರುವ ಪ್ರತಿ ಐದು ಸ್ಕೂಟರ್‌ಗಳಲ್ಲಿ ಒಂದು ಈಗ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ.

ಬಜಾಜ್ ಆಟೋ ವಿಚಾರಕ್ಕೆ ಬಂದರೆ, ಬಜಾಜ್ ಚೇತಕ್‌ನ ವಿವಿಧ ರೂಪಾಂತರಗಳನ್ನು ಕಂಪನಿ ಮಾರುಕಟ್ಟೆಯಲ್ಲಿ ಮಾರುತ್ತಿದೆ. ಕಳೆದ ಆರು ತಿಂಗಳಲ್ಲಿ 2.53 ಲಕ್ಷ ಯೂನಿಟ್‌ಗಳ ಮಾರಾಟವನ್ನು ಇದರ ಮೂಲಕ ದಾಖಲಿಸಿದೆ. ಈ ಉತ್ತಮ ಪ್ರದರ್ಶನದೊಂದಿಗೆ ಕಂಪನಿಯ ಮಾರುಕಟ್ಟೆ ಪಾಲು ಶೇಕಡಾ 23ಕ್ಕೆ ಏರಿದೆ. ಮೂರನೇ ಸ್ಥಾನದಲ್ಲಿರುವ ಏಥರ್ ಎನರ್ಜಿ 2027 ಹಣಕಾಸು ವರ್ಷದ ಮೊದಲಾರ್ಧದಲ್ಲಿ 1.79 ಲಕ್ಷ ಯೂನಿಟ್‌ಗಳ ರಿಟೇಲ್ ಮಾರಾಟವನ್ನು ಗಳಿಸಿದೆ. ಕಳೆದ ಆರು ತಿಂಗಳಲ್ಲಿ ಜೂನ್, ಜುಲೈ, ಸೆಪ್ಟೆಂಬರ್ ಎಂಬ ಮೂರು ತಿಂಗಳಲ್ಲಿ ಏಥರ್ 30,000 ಯೂನಿಟ್ ಮಾರಾಟದ ಮೈಲಿಗಲ್ಲನ್ನು ದಾಟಿದೆ.

ನಾಲ್ಕನೇ ಸ್ಥಾನದಲ್ಲಿರುವ ಹೀರೋ ವಿಡಾ 2027 ಹಣಕಾಸು ವರ್ಷದ 1.23 ಲಕ್ಷ ಯೂನಿಟ್‌ಗಳ ರಿಟೇಲ್ ಮಾರಾಟವನ್ನು ಸಾಧಿಸಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 107ರಷ್ಟು ಏರಿಕೆಯನ್ನು ತೋರಿಸುತ್ತದೆ. ಅದೇ ಸಮಯದಲ್ಲಿ ಶೇಕಡಾ 8ರಷ್ಟು ಮಾರುಕಟ್ಟೆ ಪಾಲಿನೊಂದಿಗೆ ಓಲಾ ಎಲೆಕ್ಟ್ರಿಕ್ ಐದನೇ ಸ್ಥಾನದಲ್ಲಿ ಮುಂದುವರೆದಿದೆ. 2026 ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಈ ಪಾಲು ಶೇಕಡಾ 17 ರಷ್ಟಿತ್ತು ಎಂಬುದು ಗಮನಾರ್ಹ. ಇದು ದೊಡ್ಡ ಕುಸಿತವನ್ನು ಸೂಚಿಸುತ್ತದೆ.

ಓದಿ: ಬೆಂಗಳೂರಿನಲ್ಲಿ ಕವಾಸಕಿ Z300 ಅಬ್ಬರ: ನಿಂಜಾ 300 ಎಂಜಿನ್‌ನೊಂದಿಗೆ ಹೊಸ ನೇಕೆಡ್ ಬೈಕ್, ಮುಂದಿನ ವಾರದಿಂದ ಬುಕಿಂಗ್ ಓಪನ್​