ETV Bharat / technology

48 ವರ್ಷ ಅಮೆರಿಕ ವಾಸ, ವಿಶ್ವಸಂಸ್ಥೆಯಲ್ಲಿ ಕೆಲಸ: ಡಿಜಿಟಲ್​ ಅರೆಸ್ಟ್‌ನಲ್ಲಿ ₹15 ಕೋಟಿ ಕಳ್ಕೊಂಡ ವೈದ್ಯ ದಂಪತಿ!

Digital Arrest: 48 ವರ್ಷ ಅಮೆರಿಕದಲ್ಲಿ ವಾಸವಿದ್ದು, ವಿಶ್ವಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದ ದಂಪತಿ ಡಿಜಿಟಲ್ ಅರೆಸ್ಟ್​ ಮೂಲಕ ಸುಮಾರು 15 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.

CYBER CRIME  DIGITAL ARREST  MONEY LOSE  POLICE INVESTIGATION
ಸಾಂದರ್ಭಿಕ ಚಿತ್ರ (Eenadu)
author img

By ETV Bharat Tech Team

Published : January 11, 2026 at 10:16 AM IST

4 Min Read
Choose ETV Bharat

Digital Arrest Fraud: ದೆಹಲಿಯಲ್ಲಿ ಮತ್ತೊಂದು ಬಹುದೊಡ್ಡ ಡಿಜಿಟಲ್ ಅರೆಸ್ಟ್​ ಪ್ರಕರಣ ಬೆಳಕಿಗೆ ಬಂದಿದೆ. ಸೈಬರ್ ವಂಚಕರು ವೃದ್ಧ ವೈದ್ಯ ದಂಪತಿಗೆ 14 ಕೋಟಿ 85 ಲಕ್ಷ ರೂಪಾಯಿ ವಂಚಿಸಿದ್ದಾರೆ. ಡಾ.ಓಂ ತನೇಜಾ ಮತ್ತು ಪತ್ನಿ ಡಾ.ಇಂದಿರಾ ತನೇಜಾ ಹಣ ಕಳೆದುಕೊಂಡವರು.

ಈ ದಂಪತಿ ಸುಮಾರು 48 ವರ್ಷ ಅಮೆರಿಕದಲ್ಲಿ ನೆಲೆಸಿದ್ದರು. ವಿಶ್ವಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾದ ನಂತರ 2015ರಲ್ಲಿ ಭಾರತಕ್ಕೆ ಮರಳಿದ್ದರು.

ವಂಚನೆ ಹೇಗೆ?: ಡಿಸೆಂಬರ್ 24ರಂದು ದಂಪತಿಗೆ ಸೈಬರ್ ವಂಚಕರಿಂದ ಕರೆ ಬಂದಿದೆ. ಎಂದಿನಂತೆ ಸುಳ್ಳು ಕೇಸು ಮತ್ತು ಬಂಧನ ವಾರಂಟ್‌ಗಳ ಮೂಲಕ ಬೆದರಿಸಿದ್ದಾರೆ. ಡಿ.24ರಿಂದ ಜ.10ರ ಬೆಳಗ್ಗಿನವರಿಗೆ ವಿಡಿಯೋ ಕರೆ​ ಮೂಲಕ ಡಾ.ಓಂ ತನೇಜಾ ಮತ್ತು ಡಾ.ಇಂದಿರಾ ತನೇಜಾ ಅವರನ್ನು ಡಿಜಿಟಲ್ ರೂಪದಲ್ಲಿ ಬಂಧಿಸಿದ್ದರು. ಇದೇ ಸಂದರ್ಭದಲ್ಲಿ ಎಂಟು ವಿಭಿನ್ನ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿಕೊಂಡಿದ್ದರು.

ಡಾ.ಇಂದಿರಾ ತನೇಜಾ ಅವರ ಪ್ರಕಾರ, ಸೈಬರ್ ವಂಚಕರು ವಿಭಿನ್ನ ಮೊತ್ತವನ್ನು ವರ್ಗಾಯಿಸಲು ಕೇಳಿಕೊಂಡಿದ್ದಾರೆ. ಕೆಲವೊಮ್ಮೆ ಎರಡೆರಡು ಕೋಟಿ ಮತ್ತು ಒಮ್ಮೆ 10 ಕೋಟಿ ರೂಪಾಯಿ ವರ್ಗಾಯಿಸಿಕೊಂಡರು ಎಂದು ಡಾ.ಇಂದಿರಾ ತನೇಜಾ ಹೇಳಿದ್ದಾರೆ.

ಡಾ.ಇಂದಿರಾ ತನೇಜಾ ಅವರ ಪ್ರಕಾರ, ಡಿಜಿಟಲ್ ಅರೆಸ್ಟ್​ ವೇಳೆ ಅವರು ಹೊರಗೆ ಹೋಗಬೇಕಾದಾಗ ಅಥವಾ ಕರೆ ಮಾಡಬೇಕಾದಾಗಲೆಲ್ಲ ಸೈಬರ್ ವಂಚಕರು ಪತಿ ಓಂ ತನೇಜಾ ಅವರಿಗೆ ವಿಡಿಯೋ ಕಾಲ್​ ಮಾಡಿ ಎಲ್ಲವನ್ನೂ ಮೇಲ್ವಿಚಾರಣೆ ಮಾಡುತ್ತಿದ್ದರು. ಸೈಬರ್ ವಂಚನೆಯ ಬಗ್ಗೆ ಯಾರಿಗೂ ಹೇಳುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳುತ್ತಿದ್ದರು. ಡಾ.ಇಂದಿರಾ ತನೇಜಾ ಮೊದಲು ಹಣ ವರ್ಗಾವಣೆ ಮಾಡಲು ತಮ್ಮ ಬ್ಯಾಂಕ್‌ಗೆ ಹೋದಾಗ, ಬ್ಯಾಂಕ್ ಮ್ಯಾನೇಜರ್ ಇಷ್ಟು ದೊಡ್ಡ ಮೊತ್ತವನ್ನು ಏಕೆ ವರ್ಗಾಯಿಸುತ್ತಿದ್ದೀರಿ ಎಂದು ಕೇಳಿದರು. ಸೈಬರ್ ವಂಚಕರು ಹೇಳಿದ್ದನ್ನು ಬ್ಯಾಂಕ್​ ಸಿಬ್ಬಂದಿಗೆ ನಿಖರವಾಗಿ ಹೇಳಿದ್ದರು.

ಡಾ.ಇಂದಿರಾ ತನೇಜಾ ಹಣ ವರ್ಗಾವಣೆ ಮಾಡಲು ಬ್ಯಾಂಕಿಗೆ ಹೋದಾಗಲೆಲ್ಲ ಸೈಬರ್ ವಂಚಕರು ಅವರು ಹೊರಡುವ ಮೊದಲು ಸುಳ್ಳು ಕಥೆ ಹೇಳುತ್ತಿದ್ದರು. ಯಾವುದೇ ಬ್ಯಾಂಕ್ ಸಿಬ್ಬಂದಿ ನೀವು ಏಕೆ ಇಷ್ಟೊಂದು ಹಣವನ್ನು ವರ್ಗಾಯಿಸುತ್ತಿದ್ದೀರಿ ಎಂದು ಕೇಳಿದರೆ ಈ ರೀತಿ ಹೇಳುವಂತೆ ಟ್ರೈನ್​​ ಮಾಡಿದ್ದರು. ನಾನು ಅವರ ಮಾತುಗಳನ್ನೇ ಬ್ಯಾಂಕ್​ ಸಿಬ್ಬಂದಿಗೆ ಹೇಳುತ್ತಿದ್ದೆ ಎಂದು ತನೇಜಾ ಹೇಳಿದ್ದಾರೆ.

ಇಡೀ ಪ್ರಕರಣ ಹೀಗಿತ್ತು: ಜ.10ರ ಬೆಳಗ್ಗೆ ಸೈಬರ್ ವಂಚಕರು ಸ್ಥಳೀಯ ಪೊಲೀಸ್ ಠಾಣೆಗೆ ಹೋಗುವಂತೆ ಹೇಳಿದಾಗ ವಿಷಯ ಬೆಳಕಿಗೆ ಬಂದಿದೆ. ಏಕೆಂದರೆ ಈಗ ಸಂಪೂರ್ಣ ಹಣವನ್ನು ಆರ್‌ಬಿಐ ಮರುಪಾವತಿಸುತ್ತದೆ ಮತ್ತು ಸ್ಥಳೀಯ ಪೊಲೀಸರಿಗೆ ತಿಳಿಸಲಾಗುತ್ತದೆ ಎಂದು ವಂಚಕರು ತನೇಜಾ ಅವರನ್ನು ನಂಬಿಸಿದ್ದರು. ಹೀಗಾಗಿ ಅವರು ಪೊಲೀಸ್​ ಠಾಣೆಗೆ ತೆರಳಿದ್ದಾಗ ಅಸಲಿ ಘಟನೆ ಹೊರ ಬಿದ್ದಿದೆ.

ಡಾ.ಇಂದಿರಾ ತನೇಜಾ ಪೊಲೀಸ್ ಠಾಣೆಗೆ ಬಂದಾಗ ಸೈಬರ್ ವಂಚಕರು ಇನ್ನೂ ಅವರೊಂದಿಗೆ ವಿಡಿಯೋ ಕರೆಯಲ್ಲಿದ್ದರು. ಬಳಿಕ ವಂಚಕರು ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ, ಅಸಭ್ಯವಾಗಿ ವರ್ತಿಸಿದ್ದಾರೆ. ಪೊಲೀಸ್ ಠಾಣೆ ತಲುಪಿದ ನಂತರ, ಡಾ.ಇಂದಿರಾ ಅವರಿಗೆ ₹14.85 ಕೋಟಿ (148.5 ಮಿಲಿಯನ್ ರೂಪಾಯಿ) ವಂಚನೆಯಾಗಿದೆ ಎಂದು ತಿಳಿದು ಬಂದಿದೆ ಮತ್ತು ವೈದ್ಯ ದಂಪತಿಗಳು ಈಗ ಆಘಾತಕ್ಕೊಳಗಾಗಿದ್ದಾರೆ. ಆದರೆ ವಿಷಯದ ಗಂಭೀರತೆ ಗಮನಿಸಿ, ದೆಹಲಿ ಪೊಲೀಸರು ತನಿಖೆಯನ್ನು ದೆಹಲಿ ಪೊಲೀಸ್ ಸ್ಪೆಷಲ್​ ಸೆಲ್​ ಸೈಬರ್ ಘಟಕ IFSOಗೆ ಹಸ್ತಾಂತರಿಸಿದ್ದಾರೆ.

ಡಿಜಿಟಲ್ ಬಂಧನ ಎಂದರೇನು?: ಸಾಮಾನ್ಯವಾಗಿ ಯಾರಾದರೂ ಅಪರಾಧ ಎಸಗಿದರೆ ದೂರಿನ ಮೇರೆಗೆ ನೇರವಾಗಿ ಪೊಲೀಸರು ಬಂದು ಬಂಧಿಸುತ್ತಾರೆ. ಆದರೆ, ಇಲ್ಲಿ ಸೈಬರ್ ಅಪರಾಧಿಗಳನ್ನು ಆನ್‌ಲೈನ್‌ನಲ್ಲಿ ಬಂಧಿಸಲಾಗುತ್ತದೆ. ಇದು ಹೇಗೆ?. ಸೈಬರ್ ಅಪರಾಧಿಗಳು ನಿಮಗೆ ವಿಡಿಯೋ ಕರೆ ಮಾಡುತ್ತಾರೆ. ತಾವು ಪೊಲೀಸ್ ಮತ್ತು ತನಿಖಾಧಿಕಾರಿಗಳೆಂದು ನಂಬಿಸುತ್ತಾರೆ. ಆ ನಂತರ ನೀವು ಬ್ಯಾಂಕ್ ಖಾತೆ, ಸಿಮ್ ಕಾರ್ಡ್, ಆಧಾರ್ ಕಾರ್ಡ್ ಇತ್ಯಾದಿಗಳನ್ನು ಅಕ್ರಮವಾಗಿ ಬಳಸಿದ್ದೀರಿ ಎಂದು ಬೆದರಿಕೆ ಹಾಕುತ್ತಾರೆ. ಇಲ್ಲವಾದಲ್ಲಿ ನಿಮ್ಮ ಹೆಸರಿನಲ್ಲಿ ಡ್ರಗ್ಸ್ ಸಿಕ್ಕಿದೆ ಎಂದೆಲ್ಲಾ ಹೇಳುತ್ತಾರೆ. ತನಿಖೆ ಮುಗಿಯುವವರೆಗೂ ವಿಡಿಯೋ ಕಾಲ್ ಕಟ್ ಮಾಡಲು ಅವಕಾಶವಿಲ್ಲ ಎನ್ನುತ್ತಾ ಹೆದರಿಸುತ್ತಾರೆ.

ಕೊನೆಗೆ, ಪ್ರಕರಣದಿಂದ ಹೊರಬರಬೇಕಾದರೆ ಹಣ ಕೊಡಬೇಕು. ಇಲ್ಲದಿದ್ದರೆ, ಜೀವಿತಾವಧಿಯನ್ನು ಜೈಲಿನಲ್ಲಿಯೇ ಕಳೆಯಬೇಕೆಂದು ಬೆದರಿಕೆ ಹಾಕಿದ್ದಾರೆ. ಇದನ್ನೆಲ್ಲ ಕೇಳುತ್ತಿರುವ ಸಂತ್ರಸ್ತರಿಗೆ ಏನು ಮಾಡಬೇಕೆಂದು ತೋಚುವುದಿಲ್ಲ. ಮೊದಲು ಆ ಸಮಸ್ಯೆಯಿಂದ ಹೊರಬರುವ ಆಸೆಯಲ್ಲಿ ಕೇಳಿದಷ್ಟು ಹಣ ಕೊಡುತ್ತಾರೆ. ಒಬ್ಬ ವ್ಯಕ್ತಿಯನ್ನು ಎಲ್ಲೂ ಹೋಗಲು ಬಿಡದೆ ಸ್ಕ್ರೀನ್​ ಮುಂದೆ ಬಂಧಿಸಿ ದರೋಡೆ ಮಾಡುವ ವಿಧಾನವೇ ‘ಡಿಜಿಟಲ್ ಅರೆಸ್ಟ್​’.

ಈ ಹಿಂದಿನ ಸೈಬರ್ ಅಪರಾಧಗಳಿಗೆ ಹೋಲಿಸಿದರೆ ಇದು ಸಂಪೂರ್ಣವಾಗಿ ವಿಭಿನ್ನ. ಇಂಥ ಹಗರಣಗಳ ಬಗ್ಗೆ ಜನರಿಗೆ ಹೆಚ್ಚು ತಿಳಿದಿಲ್ಲ. ಡಿಜಿಟಲ್ ಅರೆಸ್ಟ್​ ಅಪರಾಧಗಳನ್ನು ಮಾಡಲು ಸೈಬರ್ ಅಪರಾಧಿಗಳು ಸಾಮಾನ್ಯವಾಗಿ ಸ್ಕೈಪ್ ಆ್ಯಪ್ ಬಳಸುತ್ತಾರೆ. ಮೊದಲು ಫೋನ್ ಮಾಡಿ ನಿನ್ನ ಮೇಲೆ ಕೇಸುಗಳಿವೆ ಎಂದು ಬೆದರಿಸುತ್ತಾರೆ. ಮೇಲಾಧಿಕಾರಿ ನಂತರ ಮಾತನಾಡುತ್ತಾರೆ ಎಂದು ಸ್ಕೈಪ್ ಮೂಲಕವೇ ಹುಸಿ ತನಿಖೆ ನಡೆಸುತ್ತಾರೆ. ಆದಾಗ್ಯೂ, ಸ್ಕೈಪ್ ಇಂಟರ್ನೆಟ್‌​ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಿಂದ ಅಪರಾಧಿಗಳನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತದೆ. ನಕಲಿ ಇಮೇಲ್ ಐಡಿ ಬಳಸಿ ಅಪರಾಧ ಕೃತ್ಯಗಳನ್ನು ಎಸಗುತ್ತಾರೆ.

ಮುನ್ನೆಚ್ಚರಿಕೆ ಕ್ರಮಗಳು: ಸೈಬರ್ ಅಪರಾಧಿಗಳು ನಮ್ಮ ಭಯವನ್ನು ಅವಕಾಶವಾಗಿ ಪರಿವರ್ತಿಸುತ್ತಾರೆ. ಹಾಗಾಗಿ ವಂಚಕರು ನಿಮಗೆ ಕರೆ ಮಾಡಿದರೆ ಭಯಪಡದೆ ಉತ್ತರಿಸಿ. ನಿಜವಾಗಲೂ ನಾವು ತಪ್ಪು ಮಾಡಿದರೆ ಪೊಲೀಸರು ನೇರವಾಗಿ ನಮ್ಮ ಬಳಿ ಬಂದು ತನಿಖೆ ನಡೆಸುತ್ತಾರೆ. ದೆಹಲಿ, ಮುಂಬೈ ಮುಂತಾದ ಸ್ಥಳಗಳಿಗೆ ಸಂಬಂಧಿಸಿದಂತೆ ಯಾವುದೇ ಅಪರಾಧ ನಡೆದರೆ ಅಲ್ಲಿನ ಪೊಲೀಸರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಆರೋಪಿಯನ್ನು ಸ್ಥಳೀಯ ಠಾಣೆಗೆ ಕರೆಸಲಾಗುತ್ತದೆ. ಪೊಲೀಸರು ಯಾವತ್ತೂ ಸ್ಕೈಪ್ ಮತ್ತು ವಾಟ್ಸ್​ಆ್ಯಪ್​ನಲ್ಲಿ ವಿಚಾರಣೆ ನಡೆಸುವುದಿಲ್ಲ. ಇದನ್ನು ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಬೇಕು. ಅಪರಿಚಿತ ಸಂಖ್ಯೆಗಳಿಂದ ಬೆದರಿಕೆ ಕರೆಗಳು ಬಂದರೆ, ಅನಗತ್ಯ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳಿಗೆ ಹೋಗದಿರುವುದು ಉತ್ತಮ ಎಂದು ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ: ರಸ್ತೆ ಅಪಘಾತ ತಡೆಯಲು ಮಾಸ್ಟರ್​ ಪ್ಲಾನ್; ಬರ್ತಿದೆ V2V ಕಮ್ಯುನಿಕೇಶನ್​ ಸಿಸ್ಟಮ್: ಏನಿದು?