ಆಪಲ್ CEO ಟಿಮ್ ಕುಕ್ ವಿದಾಯಕ್ಕೆ ಕ್ಷಣಗಣನೆ: ಇಲ್ಲಿವೆ ಆಪಲ್ ಬೆಳೆಸಿದ ಟಿಮ್ ಕುಕ್ನ 5 ದೊಡ್ಡ ಸಾಧನೆಗಳು
Apple CEO Tim Cook Step Down: ಇಂದು ಟಿಮ್ ಕುಕ್ ಆಪಲ್ ಸಿಇಒ ಹುದ್ದೆಗೆ ವಿದಾಯ ಹೇಳಲಿದ್ದಾರೆ. 350 ಬಿಲಿಯನ್‌ನಿಂದ 4 ಟ್ರಿಲಿಯನ್‌ಗೆ ಬೆಳೆಸಿದ ದಿಗ್ಗಜನ 5 ಐತಿಹಾಸಿಕ ಸಾಧನೆಗಳು ಇಲ್ಲಿವೆ..

Published : August 31, 2026 at 7:48 AM IST
Apple CEO Tim Cook Step Down: ಇಂದು ಆಪಲ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯಿಂದ ಟಿಮ್ ಕುಕ್ ಅಧಿಕೃತವಾಗಿ ಕೆಳಗಿಳಿಯಲಿದ್ದಾರೆ. ಅವರ ನಂತರ ಈ ಸ್ಥಾನವನ್ನು ಜಾನ್ ಟರ್ನಸ್ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ ತಂತ್ರಜ್ಞಾನ ಜಗತ್ತಿನ ತಜ್ಞರು ಐಫೋನ್ 18 ಸೀರಿಸ್ ಬಿಡುಗಡೆ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಟಿಮ್ ಕುಕ್ ಅವರೇ ಇರಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಟಿಮ್ ಕುಕ್ ಅವರ ನಿರ್ಗಮನ ಮತ್ತು ಜಾನ್ ಟರ್ನಸ್ ಅವರ ನಾಯಕತ್ವದ ಆರಂಭದ ನಡುವೆ ಕುಕ್ ಅವರ ಕೊಡುಗೆಯ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಅವರ ನಾಯಕತ್ವದಲ್ಲಿ ಆಪಲ್‌ನ ಜನಪ್ರಿಯತೆ ಮತ್ತು ಆದಾಯ ಎರಡೂ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿದೆ. ತಂತ್ರಜ್ಞಾನದಲ್ಲಿ ಹೊಸತನವನ್ನು ತರುವುದರ ಜೊತೆಗೆ ಮಧ್ಯಮ ವರ್ಗದ ಜನರ ಕೈಗೆ ಆಪಲ್ ಸಾಧನಗಳನ್ನು ತಲುಪಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಇನ್ನು ಟಿಮ್ ಕುಕ್ ಯುಗದಲ್ಲಿ ಆಪಲ್ ಮಾಡಿದ 5 ದೊಡ್ಡ ಬದಲಾವಣೆಗಳು ಯಾವುವು ಎಂಬ ವಿವರ ಇಲ್ಲಿದೆ..

1. 350 ಬಿಲಿಯನ್‌ನಿಂದ 4 ಟ್ರಿಲಿಯನ್ ಡಾಲರ್: ಟಿಮ್ ಕುಕ್ ಅವರು CEO ಆಗಿ ಅಧಿಕಾರ ವಹಿಸಿಕೊಂಡಾಗ ಆಪಲ್‌ನ ಒಟ್ಟು ಮೌಲ್ಯ 350 ಬಿಲಿಯನ್ ಡಾಲರ್ ಇತ್ತು. ಇಂದು ಅದೇ ಕಂಪನಿಯ ಮೌಲ್ಯ 4 ಟ್ರಿಲಿಯನ್ ಡಾಲರ್‌ಗೆ ಏರಿದೆ. ಈ ಬೆಳವಣಿಗೆಯಲ್ಲಿ ಸ್ಟೀವ್ ಜಾಬ್ಸ್ ಅವರ ಕೊಡುಗೆಯನ್ನು ಅಲ್ಲಗಳೆಯುವಂತಿಲ್ಲ. ಆದರೂ ಅವರ ಉತ್ತರಾಧಿಕಾರಿಯಾಗಿ ಕುಕ್ ಅವರು ಕಂಪನಿಯ ಮಾರುಕಟ್ಟೆ ಮೌಲ್ಯವನ್ನು ಸುಮಾರು 1000 ಪ್ರತಿಶತದಷ್ಟು ಹೆಚ್ಚಿಸಿದ್ದಾರೆ.
2. ಜಾಗತಿಕವಾಗಿ ಹೆಜ್ಜೆಗುರುತು ವಿಸ್ತರಣೆ: ಟಿಮ್ ಕುಕ್ ಅವರ ನಾಯಕತ್ವದಲ್ಲಿ ಆಪಲ್ ತನ್ನ ಜಾಗತಿಕ ವ್ಯಾಪ್ತಿಯನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸಿದೆ. ಹಿಂದೆ ಕೆಲವೇ ದೇಶಗಳಲ್ಲಿ ಮಾರಾಟವಾಗುತ್ತಿದ್ದ ಆಪಲ್ ಉತ್ಪನ್ನಗಳು ಈಗ ಸುಮಾರು 200 ದೇಶಗಳಲ್ಲಿ ಮಾರಾಟವಾಗುತ್ತಿವೆ. ಪ್ರಪಂಚದಾದ್ಯಂತ ಆಪಲ್‌ಗೆ ಸೇರಿದ ಸುಮಾರು 500 ಚಿಲ್ಲರೆ ಮಳಿಗೆಗಳಿವೆ. ಜೊತೆಗೆ ಕಂಪನಿಯು 1 ಲಕ್ಷಕ್ಕೂ ಹೆಚ್ಚು ಹೊಸ ಸಿಬ್ಬಂದಿಯನ್ನು ನೇಮಿಸಿಕೊಂಡಿದೆ. ಪ್ರಸ್ತುತ ವಿಶ್ವದಾದ್ಯಂತ ಸುಮಾರು 2.5 ಬಿಲಿಯನ್ ಸಕ್ರಿಯ ಸಾಧನಗಳಿವೆ.

3. 100 ಬಿಲಿಯನ್ ಡಾಲರ್ ದಾಟಿದ ಆಪಲ್ ಸೇವೆಗಳ ವ್ಯವಹಾರ: ಕೇವಲ ಹೊಸ ಸಾಧನಗಳನ್ನು ಮಾರಾಟ ಮಾಡುವುದು ಮಾತ್ರವಲ್ಲದೆ ಆಪಲ್‌ನ ಸೇವಾ ವಲಯವನ್ನು ಕುಕ್ ಅವರು ಬೇರೆಯದ್ದೇ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಈ ಹಿಂದೆ ಸಾಧನಗಳ ಮಾರಾಟವೇ ಮುಖ್ಯವಾಗಿತ್ತು. ಆದರೆ ಈಗ ಆಪಲ್ ಮ್ಯೂಸಿಕ್, ಐಕ್ಲೌಡ್, ಆಪ್ ಸ್ಟೋರ್‌ನಂತಹ ಸೇವೆಗಳ ವ್ಯವಹಾರವು ಸುಮಾರು 100 ಬಿಲಿಯನ್ ಡಾಲರ್‌ಗೆ ತಲುಪಿದೆ. ಇದು ಕಂಪನಿಗೆ ನಿರಂತರ ಆದಾಯ ತರುವ ದೊಡ್ಡ ಮೂಲವಾಗಿದೆ.

4. ಇಂಗಾಲದ ಹೊರಸೂಸುವಿಕೆ ಕಡಿತ ಮತ್ತು ಗೌಪ್ಯತೆಗೆ ಆದ್ಯತೆ: ಪರಿಸರದ ಬಗ್ಗೆ ಕುಕ್ ಅವರು ದೊಡ್ಡ ಹೆಜ್ಜೆ ಇಟ್ಟಿದ್ದಾರೆ. 2015ಕ್ಕೆ ಹೋಲಿಸಿದರೆ ಆಪಲ್ ತನ್ನ ಇಂಗಾಲದ ಹೊರಸೂಸುವಿಕೆಯನ್ನು ಶೇಕಡ 60ಕ್ಕಿಂತ ಹೆಚ್ಚು ಕಡಿಮೆ ಮಾಡಿದೆ. ಈ ಅವಧಿಯಲ್ಲಿ ಕಂಪನಿಯ ಆದಾಯ ಸುಮಾರು ದ್ವಿಗುಣವಾಗಿದ್ದರೂ ಈ ಸಾಧನೆ ಮಾಡಲಾಗಿದೆ. ಜೊತೆಗೆ ಬಳಕೆದಾರರ ಖಾಸಗಿ ಮಾಹಿತಿಯ ರಕ್ಷಣೆಯನ್ನು ಅವರು ಮೂಲಭೂತ ಹಕ್ಕು ಎಂದು ಪರಿಗಣಿಸಿದ್ದರು. ಇದರಿಂದಾಗಿ ಗೌಪ್ಯತೆ ಮತ್ತು ಭದ್ರತೆಯ ವಿಷಯದಲ್ಲಿ ಆಪಲ್ ಇತರೆ ಕಂಪನಿಗಳಿಗಿಂತ ಭಿನ್ನವಾಗಿ ನಿಲ್ಲುವಂತಾಗಿದೆ.

5. ಹೊಸ ಉತ್ಪನ್ನ ವಿಭಾಗವಾಗಿ ಆಪಲ್ ವಾಚ್ ಪರಿಚಯ: ಐಫೋನ್ ನಂತರ ಸಂಪೂರ್ಣ ಹೊಸ ಉತ್ಪನ್ನ ವಿಭಾಗವನ್ನು ಪರಿಚಯಿಸಿದ್ದು ಕುಕ್ ಅವರ ದೊಡ್ಡ ಸಾಧನೆ. 2015ರಲ್ಲಿ ಬಿಡುಗಡೆಯಾದ ಆಪಲ್ ವಾಚ್ ಕೇವಲ ಸ್ಮಾರ್ಟ್ ವಾಚ್ ಆಗಿ ಉಳಿಯಲಿಲ್ಲ. ಕಾಲಕ್ರಮೇಣ ಇದರಲ್ಲಿ ಇಸಿಜಿ, ಬಿದ್ದಾಗ ಪತ್ತೆಹಚ್ಚುವಿಕೆ, ಅಪಘಾತ ಪತ್ತೆಹಚ್ಚುವಿಕೆಯಂತಹ ಆರೋಗ್ಯ ಮತ್ತು ಸುರಕ್ಷತೆಗೆ ಸಂಬಂಧಿಸಿದ ಪ್ರಮುಖ ಸೌಲಭ್ಯಗಳನ್ನು ಸೇರಿಸಲಾಯಿತು. ಇದು ಆಪಲ್ ವಾಚ್ ಅನ್ನು ವಿಶ್ವದ ಅತಿ ಹೆಚ್ಚು ಮಾರಾಟವಾಗುವ ಗಡಿಯಾರವನ್ನಾಗಿ ಮಾಡಿದೆ.
ಓದಿ: ಸೆಪ್ಟೆಂಬರ್‌ನಲ್ಲಿ ದಮ್ದಾರ್ 5G ಫೋನ್ಗಳು ಲಾಂಚ್: ಇಲ್ಲಿದೆ ಬಜೆಟ್‌ನಲ್ಲಿ ಬಾಹುಬಲಿಗಳ ವಿವರ!!

