ಮಂಗಳೂರು: ಮೊಬೈಲ್ ವಿಚಾರವಾಗಿ ಜಗಳ; ಚಾಕುವಿನಿಂದ ಇರಿದು ಅಣ್ಣನ ಹತ್ಯೆಗೈದ ತಮ್ಮನ ಬಂಧನ
ಬೆಳಗಾವಿ ಮೂಲದ ಅಣ್ಣ-ತಮ್ಮ ಮಂಗಳೂರಿನ ಕೊಟ್ಟಾರ ಕ್ರಾಸ್ ಬಳಿ ತಾಯಿ ಜತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ನಿನ್ನೆ ರಾತ್ರಿ ಜಗಳ ನಡೆದು, ಕೊಲೆಯಾಗಿದೆ.

Published : August 31, 2026 at 12:20 PM IST
ಮಂಗಳೂರು: ಮೊಬೈಲ್ ಫೋನ್ ವಿಚಾರಕ್ಕೆ ಸಂಬಂಧಿಸಿದಂತೆ ಅಣ್ಣ-ತಮ್ಮಂದಿರ ನಡುವೆ ನಡೆದ ಕ್ಷುಲ್ಲಕ ಜಗಳ ವಿಕೋಪಕ್ಕೆ ತಿರುಗಿ, ತಮ್ಮನೇ ಅಣ್ಣನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಭಾನುವಾರ ರಾತ್ರಿ ನಗರದ ಬಿಜೈ ಕೊಟ್ಟಾರ್ ಕ್ರಾಸ್ ಬಳಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮೂಲದ ಅಡಿವೆಪ್ಪ (40) ಕೊಲೆಯಾದ ವ್ಯಕ್ತಿ. ಕೃತ್ಯ ಎಸಗಿದ ಆರೋಪಿ ತಮ್ಮ ರಾಜು (36) ಎಂಬಾತನನ್ನು ಉರ್ವ ಠಾಣಾ ಪೊಲೀಸರು ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಪ್ರಕರಣದ ವಿವರ: ಮೂಲತಃ ಬೆಳಗಾವಿಯವರಾದ ಈ ಕುಟುಂಬವು ಕೊಟ್ಟಾರ್ ಕ್ರಾಸ್ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ತಾಯಿ ಸಣ್ಣ ಗೂಡಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರೆ, ಇಬ್ಬರೂ ಸಹೋದರರು ಕೂಲಿ ಕೆಲಸ ಮಾಡುತ್ತಿದ್ದರು. ಇಬ್ಬರಿಗೂ ಮದ್ಯವ್ಯಸನದ ಚಟವಿತ್ತು.
ಭಾನುವಾರ ರಾತ್ರಿ ಸುಮಾರು 10:30 ರಿಂದ 11:00 ಗಂಟೆಯ ಅವಧಿಯಲ್ಲಿ ಮೊಬೈಲ್ ವಿಚಾರವಾಗಿ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.
ಜಗಳ ತಾರಕಕ್ಕೇರಿದಾಗ ಆಕ್ರೋಶಗೊಂಡ ತಮ್ಮ ರಾಜು, ಚಾಕುವಿನಿಂದ ಅಣ್ಣ ಅಡಿವೆಪ್ಪನಿಗೆ ಇರಿದಿದ್ದಾನೆ. ತಾಯಿ ರಾತ್ರಿ ಅಂಗಡಿ ಮುಚ್ಚಿ ಮನೆಗೆ ಬಂದಾಗ ಅಡಿವೆಪ್ಪ ರಕ್ತದ ಮಡುವಿನಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಉರ್ವ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ರಾಜುವನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಅವರು, "ಇದು ಕುಟುಂಬದ ಆಂತರಿಕ ಕಲಹದಿಂದ ನಡೆದ ಘಟನೆಯಾಗಿದೆ. ಮೃತರ ಸ್ವಂತ ಸಹೋದರನೇ ಪ್ರಕರಣದ ಆರೋಪಿಯಾಗಿದ್ದು, ಆತನನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೊಲೆ ಪ್ರಕರಣ ಭೇದಿಸಿದ ಬೆಳಗಾವಿ ಪೊಲೀಸರು: ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ
ಚಿಕನ್ ಪೀಸ್ಗೆ ಕೊಲೆ: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಕುಡಿದ ನಶೆಯಲ್ಲಿ ಚಿಕನ್ ಪೀಸ್ ವಿಚಾರಕ್ಕೆ ಸ್ನೇಹಿತನನ್ನೇ ವ್ಯಕ್ತಿಯೋರ್ವ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಆಗಸ್ಟ್ 23ರಂದು ನಡೆದಿತ್ತು. ಉತ್ತರ ಪ್ರದೇಶ ರಾಜ್ಯದ ಪಿಲಿಭಿತ್ ಜಿಲ್ಲೆಯ ಕಬೀರ್ ಗಂಜ್ ಗ್ರಾಮದ ಸತಿರಾಮ್ (ಸೀತಾರಾಮ್) ಚಂದ್ರದೇವ್ ಮೃತ. ಅದೇ ಊರಿನ ಅರುಣಕುಮಾರ್ ಬಲಿಷ್ಟರ್ ಚವ್ಹಾಣ್ ಕೊಲೆ ಆರೋಪಿ.

