ಬೆಂಗಳೂರು: ಪಿಜಿ ಕಟ್ಟಡದಿಂದ ಜಿಗಿದು ಯುವತಿ ಸಾವು, ಯುವಕನಿಗೆ ಗಂಭೀರ ಗಾಯ
ಪಿಜಿ ಕಟ್ಟಡದಿಂದ ಜಿಗಿದು ಯುವತಿ ಸಾವನ್ನಪ್ಪಿರುವ ಘಟನೆ ವೈಟ್‌ಫೀಲ್ಡ್ ವ್ಯಾಪ್ತಿಯ ಇಸಿಸಿ ರಸ್ತೆಯಲ್ಲಿ ನಡೆದಿದೆ.

Published : August 30, 2026 at 7:26 PM IST
ಬೆಂಗಳೂರು: ಪಿಜಿ (ಪೇಯಿಂಗ್ ಗೆಸ್ಟ್) ಕಟ್ಟಡದ 7ನೇ ಮಹಡಿಯಿಂದ ಜಿಗಿದು ಯುವತಿ ಸಾವನ್ನಪ್ಪಿ, ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ವೈಟ್‌ಫೀಲ್ಡ್ ವ್ಯಾಪ್ತಿಯ ಇಸಿಸಿ ರಸ್ತೆಯಲ್ಲಿ ನಡೆದಿದೆ.
ಮೃತಪಟ್ಟ ಯುವತಿಯನ್ನು ಪಾಂಡಿಚೇರಿಯ ಉಲೈವೈಕ್ಕಲ್ ಮೂಲದ ಜನನಿ (23) ಎಂದು ಗುರುತಿಸಲಾಗಿದ್ದು, ಆಕೆಯ ಜೊತೆಗೆ ಜಿಗಿದಿದ್ದ ಪಾಂಡಿಚೇರಿಯ ನಲ್ಲತ್ತೂರು ಮೂಲದ ಮಾಣಿಕ್ ವೇಲು (30) ಗಂಭೀರವಾಗಿ ಗಾಯಗೊಂಡಿದ್ದಾನೆ. ಘಟನಾ ಸ್ಥಳಕ್ಕೆ ವೈಟ್‌ಫೀಲ್ಡ್ ಠಾಣೆ ಪೊಲೀಸರು ಭೇಟಿ ನೀಡಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೃತ ಜನನಿ ಪಟ್ಟಂದೂರು ಅಗ್ರಹಾರದಲ್ಲಿರುವ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಉದ್ಯೋಗದಲ್ಲಿದ್ದು, ಕಳೆದ ಜನವರಿಯಿಂದ ಇಸಿಸಿ ರಸ್ತೆಯ ಮೌಂಟೇನ್ ಪಿಜಿಯಲ್ಲಿ ವಾಸಿಸುತ್ತಿದ್ದರು. ಮಾಣಿಕ್ ವೇಲು ಪಾಂಡಿಚೇರಿಯ ಲಾಜಿಸ್ಟಿಕ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಇಸಿಸಿ ರಸ್ತೆಯ ಡೀನ್ಸ್ ಶಾಲೆಯ ಮುಂಭಾಗದಲ್ಲಿರುವ ರಾಧಾಕೃಷ್ಣ ಕೋ-ಲಿವಿಂಗ್ ಪಿಜಿಗೆ ಬಂದಿದ್ದ ಇಬ್ಬರೂ 7ನೇ ಮಹಡಿಯಿಂದ ಜಿಗಿದಿದ್ದಾರೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿರುವ ಮಾಣಿಕ್ ವೇಲುರನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಡಿಸಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ.
ಡೆತ್‌ನೋಟ್ ಬರೆದಿಟ್ಟು ಶಿವಮೊಗ್ಗದ ಯುವತಿ ಆತ್ಮಹತ್ಯೆ: ಕಾಲೇಜು ಸಹಪಾಠಿ ಯುವಕನೋರ್ವ ನಿರಂತರವಾಗಿ ಬ್ಲಾಕ್‌ಮೇಲ್ ಹಾಗೂ ಕಿರುಕುಳ ನೀಡುತ್ತಿದ್ದಾನೆ ಎಂದು ಡೆತ್‌ನೋಟ್ ಬರೆದಿಟ್ಟು, 22 ವರ್ಷದ ಯುವತಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದಿತ್ತು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬೆಳಲಮಕ್ಕಿ ಮೂಲದ ಯುವತಿ ಆತ್ಮಹತ್ಯೆಗೆ ಶರಣಾದವರು.
ಸುಮಾರು ಒಂದು ವರ್ಷದ ಹಿಂದೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಇವರು, ನಗರದ ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಅಗರ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದು, ಅದರಲ್ಲಿ, ನನ್ನ ಸಾವಿಗೆ ಕಾಲೇಜು ದಿನಗಳ ಕ್ಲಾಸ್‌ಮೇಟ್ ಯುವಕ ಕಾರಣ ಎಂದು ಆರೋಪಿಸಿದ್ದಾರೆ. ಕಾಲೇಜು ದಿನಗಳಲ್ಲಿ ಒಟ್ಟಿಗೆ ಓದುತ್ತಿದ್ದ ಸಹಪಾಠಿಯು ನನ್ನ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಇಟ್ಟುಕೊಂಡು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿ ನಿರಂತರವಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದ. ನಾನು ಕರೆದಾಗಲೆಲ್ಲಾ ರೂಮಿಗೆ ಬರಬೇಕು, ಇಲ್ಲದಿದ್ದರೆ ಫೋಟೋ-ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಕುಟುಂಬದ ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಉಲ್ಲೇಖಿಸಿದ್ದರು.
ಇವುಗಳನ್ನೂ ಓದಿ:

