ಕೈತುಂಬಾ ಸಂಬಳದ ಕೆಲಸ ಬಿಟ್ಟು ಎತ್ತಿನ ಗಾಣದ ಎಣ್ಣೆ ಉದ್ಯಮ ಆರಂಭಿಸಿ ಯಶಸ್ವಿಯಾದ ಯುವಕರು!
ಕೈತುಂಬಾ ಸಂಬಳ ಪಡೆಯುತ್ತಿದ್ದ ಈ ಯುವಕರ ತಂಡವೊಂದು ಆರೋಗ್ಯದ ದೃಷ್ಟಿಯಿಂದ ಎತ್ತಿನ ಗಾಣದ ಎಣ್ಣೆಯನ್ನು ತೆಗೆಯುವ ದೇಸಿರಿ ನ್ಯಾಚುರಲ್ ಉದ್ಯಮ ಸ್ಥಾಪಿಸಿ ಯಶಸ್ವಿಯಾಗಿದ್ದಾರೆ.

Published : January 10, 2026 at 8:33 PM IST
ವಿಶೇಷ ವರದಿ - ಮಹೇಶ್ ಎಂ
ಮೈಸೂರು: ಸ್ಥಳೀಯ ಯುವಕರು ಉದ್ಯಮ ಆರಂಭಿಸುವ ಮೂಲಕ ಮೇಕ್ ಇನ್ ಇಂಡಿಯಾ ಯೋಜನೆ ಅಳವಡಿಸಿಕೊಳ್ಳಬೇಕು ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಾತಿನಿಂದ ಪ್ರೇರಣೆಗೊಂಡ ಯುವಕರ ತಂಡವೊಂದು ನಗರ ಪ್ರದೇಶದಲ್ಲಿ ಕೈತುಂಬಾ ಸಂಬಳ ಬರುತ್ತಿದ್ದ ಕೆಲಸವನ್ನು ಬಿಟ್ಟು, ತಮ್ಮ ಹಳ್ಳಿಯಲ್ಲಿ ಸಿಗುವ ಸಾವಯವ ಪದಾರ್ಥಗಳನ್ನು ಬಳಸಿ ತಯಾರಿಸುವ ಎತ್ತಿನ ಗಾಣದ ಎಣ್ಣೆಯನ್ನು ತೆಗೆಯುವ ದೇಸಿರಿ ನ್ಯಾಚುರಲ್ ಉದ್ಯಮ ಸ್ಥಾಪಿಸಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಯುವ ಸಮೂದಾಯಕ್ಕೂ ಮಾದರಿ ಕೂಡ ಆಗಿದ್ದಾರೆ.
ಇಂದು ಎಣ್ಣೆ ಇಲ್ಲದೇ ತಯಾರಿಸುವ ಅಡುಗೆ ಭಾಗಶಃ ಯಾವುದೂ ಇಲ್ಲ. ಇದ್ದರೆ ಬೆರಳೆಣಿಕೆಯಷ್ಟು. ಪ್ರತಿ ಅಡಿಗೆಗೆ ನಿತ್ಯ ಎಣ್ಣೆ ಬೇಕೇ ಬೇಕು. ಆದರೆ, ಮಾರುಕಟ್ಟೆಯಲ್ಲಿ ದೊರೆಯುವ ಕಡಿಮೆ ಬೆಲೆಯ ಎಣ್ಣೆ ನಮ್ಮ ಆರೋಗ್ಯಕ್ಕೆ ಎಷ್ಟು ಸುರಕ್ಷತ ಎಂಬುದನ್ನು ನಾವು ಯೋಜನೆಯೇ ಮಾಡುವುದಿಲ್ಲ. ಕಡಿಮೆ ಬೆಲೆಗೆ ಸಿಗುವ ಅಡುಗೆ ಎಣ್ಣೆ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ ಹಾಗೂ ಹಲವಾರು ರೋಗಗಳು ಸಹ ಬರುತ್ತವೆ ಎಂಬುದು ಸಂಶೋಧನೆಯಿಂದ ಈಗಾಗಲೇ ತಿಳಿದಿದೆ. ಆದರೆ, ಕೊರೊನಾ ಬಳಿಕ ಜನರಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಅರಿವು ಮೂಡುತ್ತಿದ್ದು, ಹಿಂದಿನ ಸಾಂಪ್ರದಾಯಿಕ ಆಹಾರ ಪದ್ದತಿಗೆ ಮರಳುತ್ತಿದ್ದಾರೆ ಎನ್ನುವುದಕ್ಕೆ ಈ ಎತ್ತಿನ ಗಾಣದ ಎಣ್ಣೆಗೆ ಬೇಡಿಕೆ ನೋಡಿದರೆ ತಿಳಿಯುತ್ತದೆ.

8 ವರ್ಷದ ಹಿಂದೆ ಉದ್ಯಮ ಆರಂಭ: ಮೈಸೂರು ಜಿಲ್ಲೆಯ ನವೀನ್, ಮಹೇಶ್, ಯೋಗೇಶ್, ಅನಿಲ್ ಈ ಉದ್ಯಮವನ್ನು ಸ್ಥಾಪಿಸಿದವರು. ಕೈತುಂಬಾ ಸಂಬಳ ಪಡೆಯುತ್ತಿದ್ದ ಈ ಯುವಕರು ಒಟ್ಟಾಗಿ, ಇನ್ನೊಬ್ಬರ ಬಳಿ ಸಂಬಳ ತೆಗೆದುಕೊಂಡು ಕೆಲಸ ಮಾಡುವುದನ್ನು ಬಿಟ್ಟಿದ್ದಲ್ಲದೇ ತಾವೇ ಏನಾದರು ಉದ್ಯಮ ಆರಂಭಿಸಲು ಚಿಂತಿಸುತ್ತಿದ್ದರು. ಆಗ ಹೊಳೆದಿದ್ದೆ ಈ ದೇಸಿರಿ ನ್ಯಾಚುರಲ್ ಉದ್ಯಮ. ಜಿಲ್ಲೆಯ ಕೆ.ಆರ್.ನಗರದ ಬಳಿಯ ಆಡಕನ ಹಳ್ಳಿ ಎಂಬ ಗ್ರಾಮದಲ್ಲಿ 2017ರಲ್ಲಿ ಅಂದುಕೊಂಡಂತೆ ದೇಸಿರಿ ನ್ಯಾಚುರಲ್ ಎಂಬ ಎತ್ತಿನ ಗಾಣದಿಂದ ಎಣ್ಣೆ ತೆಗೆಯುವ ಉದ್ಯಮಕ್ಕೆ ಧುಮುಕಿದ್ದರು. ಈಗ ಇವರ ಉದ್ಯಮ ವೃದ್ಧಿಸಿದ್ದು, 16 ರಿಂದ 17 ಎತ್ತಿನ ಗಾಣಗಳಿಂದ ಎಣ್ಣೆ ತೆಗೆಯುವ ಮೂಲಕ ತಮ್ಮ ಆದಾಯವನ್ನು ಸಹ ಹೆಚ್ಚಿಸಿಕೊಂಡಿದ್ದಾರೆ.

ತಿಂಗಳಿಗೆ 8 ರಿಂದ 10 ಸಾವಿರ ಲೀಟರ್ ಗಾಣದ 10 ವಿಧದ ಎಣ್ಣೆಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಈ ಯುವ ತಂಡಕ್ಕೆ ದೇಶಾದ್ಯಂತ ಸುಮಾರು 20 ಸಾವಿರ ಗ್ರಾಹಕರಿದ್ದು, ಇಲ್ಲಿ ತಯಾರಾಗುವ ಎತ್ತಿನ ಗಾಣದ ಎಣ್ಣೆಗಳನ್ನು 24 ರಾಜ್ಯಗಳು ಸೇರಿದಂತೆ 8 ಬೇರೆ ಬೇರೆ ದೇಶಗಳಿಗೆ ನೇರವಾಗಿ ಅಲ್ಲಿನ ಗ್ರಾಹಕರಿಗೆ ಕಳುಹಿಸುತ್ತಾರೆ. ಇದರಿಂದ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುತ್ತಿದ್ದಾರೆ.

ದೇಸಿರಿ ನ್ಯಾಚುರಲ್ ಸ್ಥಾಪನೆ ಉದೇಶ: ಸಾಂಪ್ರದಾಯಿಕ ಎತ್ತಿನ ಗಾಣದ ಎಣ್ಣೆ ಉದ್ಯಮ ಸ್ಥಾಪನೆಯ ಉದೇಶದ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಯುವ ಉದ್ಯಮಿ ಅನಿಲ್, ನಮ್ಮ ಉದ್ಯಮದ ಉದ್ದೇಶ ಜನರಿಗೆ ಆರೋಗ್ಯಕರವಾದ ಎಣ್ಣೆಗಳನ್ನು ನೀಡುವುದಾಗಿದೆ. ಹಿಂದೆ ನಮ್ಮ ಹಿರಿಯರು ಎತ್ತಿನ ಗಾಣದಿಂದ ಎಣ್ಣೆ ತೆಗೆದು ಜನರಿಗೆ ನೀಡುತ್ತಿದ್ದರು. ಅದನ್ನೇ ನಾವುಗಳು ಮಾಡುತ್ತಿದ್ದೇವೆ. ಇಲ್ಲಿ ಸಿಗುವುದು ನ್ಯಾಚುರಲ್ ಎಣ್ಣೆ. ಎತ್ತಿನ ಗಾಣದಿಂದ ಎಣ್ಣೆ ತೆಗೆದು ಗ್ರಾಹಕರಿಗೆ ನೀಡುವ ಪದ್ದತಿಯನ್ನು ನಾವುಗಳು ಮಾಡುತ್ತಿದ್ದೇವೆ. ಸಾವಯುವ ಪದಾರ್ಥಗಳನ್ನು ಬಳಸಿ ಎತ್ತಿನ ಗಾಣದಿಂದ 10 ರೀತಿಯ ಎಣ್ಣೆಗಳನ್ನು ತೆಗೆದು ನಾವು ಮಾರಾಟ ಮಾಡುತ್ತೇವೆ. ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ವಿವರಿಸಿದರು.

ಜನರಿಗೆ ಆರೋಗ್ಯಕರ ಅಡುಗೆ ಹಾಗೂ ಇತರ ಎಣ್ಣೆಗಳನ್ನು ನೀಡುವುದು ಒಂದಾದರೆ, ಈ ಉದ್ಯಮದಿಂದ ಗ್ರಾಮಿಣ ಮಹಿಳೆಯರಿಗೆ ಕೆಲಸ ಕೂಡ ಸಿಗುತ್ತಿದೆ. ಈಗ ಈ ಉದ್ಯಮದಲ್ಲಿ 65 ಜನ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಜನರು ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ಸಹ ತಪ್ಪಿಸಬಹುದು. ಅಲ್ಲದೇ ದೇಶಿಯ ಜಾನುವಾರ ಉಳಿಸಬಹುದು. ಪ್ಲಾಸ್ಟಿಕ್ ಮುಕ್ತಕ್ಕೆ ಇದು ಸಹಕಾರಿ ಕೂಡ ಹೌದು ಎನ್ನುತ್ತಾರೆ ಉದ್ಯಮಿ ಅನಿಲ್.
ಇದನ್ನೂ ಓದಿ:

