ಮನೆಯಲ್ಲೇ ಕಾಶ್ಮೀರದ ವಾತಾವರಣ ಸೃಷ್ಟಿಸಿ ಕೇಸರಿ ಬೆಳೆದ ದೊಡ್ಡಬಳ್ಳಾಪುರದ ಯುವ ಐಟಿ ಉದ್ಯೋಗಿ
ಒಂದು ರೂಮಿನಲ್ಲಿ ಕೇಸರಿಗೆ ಬೇಕಾದ ವಾತಾವರಣವನ್ನು ಸೃಷ್ಟಿ ಮಾಡಿ ಯುವ ಐಟಿ ಉದ್ಯೋಗಿ ಕಾಶ್ಮೀರ ಕೇಸರಿಯನ್ನು ಬೆಳೆದಿದ್ದಾರೆ.

Published : November 7, 2025 at 2:21 PM IST
ವಿಶೇಷ ವರದಿ: ಗುರುಪ್ರಸಾದ್ ಹೆಚ್.ಪಿ.
ದೊಡ್ಡಬಳ್ಳಾಪುರ: ಕೇಸರಿ ಕಾಶ್ಮೀರದ ಪ್ರಮುಖ ಬೆಳೆ. ಕೇಸರಿ ಬೆಳೆಯಲು ತಂಪು ವಾತಾವರಣ ಅಗತ್ಯ. ದೊಡ್ಡಬಳ್ಳಾಪುರದ 24 ವರ್ಷದ ಐಟಿ ಉದ್ಯೋಗಿ ಪವನ್ ಧನಂಜಯ್ ಅವರು ಮಾರುತಿ ನಗರದಲ್ಲಿರುವ ತಮ್ಮ ಮನೆಯಲ್ಲಿಯೇ ಕಾಶ್ಮೀರದ ಹವಾಮಾನ ಸೃಷ್ಟಿ ಮಾಡಿ ಕೇಸರಿ ಬೆಳೆದು ಯಶಸ್ವಿಯಾಗಿದ್ದಾರೆ.
ಈ ಕೇಸರಿ ಗಡ್ಡೆ ವರ್ಷದಲ್ಲಿ ಒಮ್ಮೆ ಮಾತ್ರ ಕೇಸರಿ ಹೂ ಬಿಡುತ್ತದೆ. ಅದೂ ಅಕ್ಟೋಬರ್ ಕೊನೆಯ ವಾರದಿಂದ ನವೆಂಬರ್ ಮೊದಲ ವಾರದವರೆಗೆ ಮಾತ್ರ. ಬಳಿಕ ವಾರದಲ್ಲಿ ಹೂ ಖಾಲಿಯಾದರೆ ಮತ್ತೆ ಕೇಸರಿ ಹೂ ಬರುವುದು ಮುಂದಿನ ವರ್ಷಕ್ಕೆ. ಏಪ್ರಿಲ್ ತಿಂಗಳಲ್ಲಿ ಕೇಸರಿ ಗಡ್ಡೆಯನ್ನು ನಾಟಿ ಮಾಡಲಾಗುತ್ತದೆ. ಅದು ಸೆಪ್ಟೆಂಬರ್ ತಿಂಗಳಲ್ಲಿ ಮೊಳಕೆ ಬಿಡಲು ಶುರು ಮಾಡಿ, ಅಕ್ಟೋಬರ್ - ನವೆಂಬರ್ ತಿಂಗಳಲ್ಲಿ ಹೂ ಬಿಡುತ್ತದೆ. ಈ ಹೂ ಬಿಡುವ ಸಮಯ ಅಂದರೆ ಎರಡರಿಂದ ಮೂರು ತಿಂಗಳು ಮಾತ್ರ ಈ ಕೋಲ್ಡ್ ಸ್ಟೋರೇಜ್ ಅವಶ್ಯಕತೆ ಇರುತ್ತದೆ ಎನ್ನುತ್ತಾರೆ ಪವನ್.
ಹೂ ಬಿಟ್ಟಾಗ ಹೂವಿನಿಂದ ಶಲಾಕೆಯ ರೂಪದಲ್ಲಿ ಕೇಸರಿ ಹೊರಗಡೆ ಬರುತ್ತದೆ. ಅವುಗಳನ್ನು ಹೂವುಗಳಿಂದ ಹುಷಾರಾಗಿ ಬೇರ್ಪಡಿಸಿ ಸಂಗ್ರಹಿಸಲಾಗುತ್ತದೆ. ಹೀಗೆ ಸಂಗ್ರಹಿಸಲಾಗುವ ಕೇಸರಿಯನ್ನು ಕೋಲ್ಡ್ ಸ್ಟೋರೇಟ್ನಲ್ಲಿ ಇಡುವ ಅವಶ್ಯಕತೆ ಇರುವುದಿಲ್ಲ ಎಂದು ಪವನ್ ಮಾಹಿತಿ ನೀಡಿದರು.
ರೂಮಿನಲ್ಲೇ ಅದಕ್ಕೆ ಬೇಕಾದ ವಾತಾವರಣ ಸೃಷ್ಟಿ: ಕಾಶ್ಮೀರದ ಭೂಮಿಯಲ್ಲಿ ಬೆಳೆಯುವ ಕೇಸರಿಗೆ ರಾಸಾಯನಿಕ ಗೊಬ್ಬರಗಳನ್ನು ಹಾಕಲಾಗುತ್ತದೆ. ಆದರೆ ಇಲ್ಲಿ ಒಂದು ರೂಮಿನಲ್ಲಿ ಅದಕ್ಕೆ ಬೇಕಾದ ವಾತಾವರಣವನ್ನು ಸೃಷ್ಟಿ ಮಾಡಿ ಕಾಶ್ಮೀರ ಕೇಸರಿ ಬೆಳೆಯಲಾಗುತ್ತದೆ. ಇದಕ್ಕೆ ಯಾವುದೇ ರಾಸಾಯನಿಕ ಗೊಬ್ಬರ ಹಾಕಲಾಗುವುದಿಲ್ಲ. ನೈಸರ್ಗಿಕವಾಗಿ ಇರುತ್ತದೆ. 20 ಕೆಜಿ ಕೇಸರಿ ಗಡ್ಡೆಯಲ್ಲಿ 30 ಗ್ರಾಂ ಕೇಸರಿ ಬರುತ್ತದೆ. ಒಂದು ಗ್ರಾಂ ಕೇಸರಿ ಒಂದು ಸಾವಿರ ರೂಪಾಯಿಗೂ ಹೆಚ್ಚಿನ ದರಕ್ಕೆ ಮಾರಾಟವಾಗುತ್ತದೆ ಎಂದು ತಿಳಿಸಿದ್ದಾರೆ.
ಏಳು ವರ್ಷಗಳವರೆಗೆ ಕೇಸರಿ ಹೂ ಬಿಡುತ್ತೆ: ಐದರಿಂದ ಏಳು ವರ್ಷಗಳವರೆಗೆ ಕೇಸರಿ ಗಡ್ಡೆ ಹೂಗಳನ್ನು ಬಿಡುತ್ತೆ. ಇದರಿಂದ ರೈತರಿಗೆ ಲಾಭವೂ ಸಿಗುತ್ತೆ. ಅಲ್ಲದೇ ಕ್ಯಾನ್ಸರ್ಗೆ ಔಷಧೀಯ ಗುಣಗಳನ್ನು ಹೊಂದಿರುವ ಅಂಶಗಳು ಈ ಕೇಸರಿಯಲ್ಲಿದ್ದು, ಮಾರುಕಟ್ಟೆಯಲ್ಲಿ ಕೇಸರಿಗೆ ಹೆಚ್ಚಿನ ಡಿಮ್ಯಾಂಡ್ ಇದೆ ಎಂದು ಹೇಳಿದರು.
ಕೊಠಡಿಯಲ್ಲಿ 16 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ: ಕೇಸರಿಯನ್ನು ಸದ್ಯ ಮಾರಾಟ ಮಾಡದೇ ಸ್ನೇಹಿತರಿಗೆ ಬಳಸಲು ನೀಡಿ ಅವರಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಗೆಡ್ಡೆಗಳನ್ನು ಫ್ರಿಜ್‌ನಲ್ಲಿ ಇಟ್ಟು ಕೇಸರಿ ಹೂವು ಬೆಳೆಸಬಹುದು ಎನ್ನುವುದು ಸುಳ್ಳು. ಅದಕ್ಕೆ ಕನಿಷ್ಠ ವಿಶಾಲ ಜಾಗ ಅಗತ್ಯವಿದ್ದು, ಕಾಶ್ಮೀರದಲ್ಲಿ ಕೇಸರಿ ಹೂವುಗಳನ್ನು ಬೆಳೆಯುವ ಪಾಂಪೋರ್ ಎನ್ನುವ ಪ್ರದೇಶದಲ್ಲಿ ಇರುವ 16 ಡಿಗ್ರಿ ಉಷ್ಣಾಂಶವನ್ನು ಕೊಠಡಿಯಲ್ಲಿ ಕಾಪಾಡಿಕೊಂಡಿದ್ದೇನೆ ಎಂದು ತಿಳಿಸಿದರು.
ಕೇಸರಿಯನ್ನು ಬೆಳೆಸುವ ವಿಧಾನ: ಕೋಣೆಯಲ್ಲಿ ಇರಿಸಿರುವ ಉಷ್ಣಾಂಶ ನಿಯಂತ್ರಕವು ಗಾಳಿಯಲ್ಲಿ ತೇವಾಂಶದ ಮಟ್ಟವನ್ನು ಹೆಚ್ಚಿಸುತ್ತದೆ. ಹೂ ಬಿಡುವ ಸಮಯದಲ್ಲಿ ತಾಪಮಾನವು 6 ಡಿಗ್ರಿ ಸೆಲ್ಸಿಯಸ್‌ನಿಂದ 9 ಡಿಗ್ರಿ ಸೆಲ್ಸಿಯಸ್ ಮಿತಿಯಲ್ಲಿರಬೇಕು. ಇದರಿಂದ ಕೇಸರಿಯು ಉತ್ತಮವಾದ, ಪೋಷಕಾಂಶ - ಭರಿತ ಮಂಜಿನಿಂದ ಪೋಷಿಸಲ್ಪಡುತ್ತದೆ. ಕೇಸರಿ ಗಡ್ಡೆಗಳ ಸರಿಯಾದ ಬೆಳವಣಿಗೆಗೆ ವಾರಕ್ಕೊಮ್ಮೆ ನೀರುಣಿಸಬೇಕು.
ಮಾರುಕಟ್ಟೆ ಹೇಗೆ?: ಕಾಶ್ಮೀರದಲ್ಲಿ ಪ್ರತಿ ಗ್ರಾಂ ಕೇಸರಿಗೆ 900 ರೂ.ಗಳಿಂದ 1,500 ರೂ. ವರೆಗೆ ದರ ಇರುತ್ತದೆ. ಇದನ್ನು ಅಂಗಡಿಯವರು, ಬೇಕರಿಯವರು ಮತ್ತು ಅಡುಗೆಯವರು ಖರೀದಿ ಮಾಡುತ್ತಾರೆ.
ಕೇಸರಿಯಿಂದ ದೇಹಕ್ಕೆ ಶಕ್ತಿ: ಸಾಮಾನ್ಯವಾಗಿ ಕೇಸರಿಯನ್ನು ಹೆಚ್ಚಾಗಿ ಸಿಹಿ ತಿಂಡಿಗಳನ್ನು ತಯಾರಿಸಲು ಮತ್ತು ಬಾಣಂತಿಯರು ಸೇವಿಸುತ್ತಾರೆ. ಬಾಣಂತಿಯರು ಕೇಸರಿಯನ್ನು ಸೇವಿಸಿದರೆ ಮಗು ಬೆಳ್ಳಗೆ ಹುಟ್ಟುತ್ತದೆ ಎಂಬ ನಂಬಿಕೆ ಇದೆ. ಆದರೆ ಕೇಸರಿಯನ್ನು ಹಾಲಿಗೆ ಮಿಶ್ರಣ ಮಾಡಿ ಕುಡಿದರೆ ಆಯಾಸ ಹೋಗುತ್ತದೆ. ದೇಹಕ್ಕೆ ಶಕ್ತಿ ಬರುತ್ತದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಕೇಸರಿ ಬೆಳೆ: ಮನೆಯನ್ನೇ ಕಾಶ್ಮೀರವನ್ನಾಗಿಸಿದ ಅಣ್ತಮ್ಮ; ಸಾಧನೆ ಹಿಂದಿವೆ ಸೋಲಿನ ಪ್ರಯೋಗಗಳು!

