ಯೋಗೇಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ವಿರುದ್ಧದ ಸಾಕ್ಷ್ಯಗಳ ವಿಚಾರಣೆ ಬಾಕಿ ಕುರಿತು ವಿವರಣೆ ನೀಡಲು ಸೂಚಿಸಿದ ಹೈಕೋರ್ಟ್
ತನಿಖಾಧಿಕಾರಿ ಬಿಟ್ಟು ಉಳಿದವರ ಸಾಕ್ಷ್ಯ ವಿಚಾರಣೆ ಆಗಿದೆ. ರಾಜಕೀಯ ದುರುದ್ದೇಶದಿಂದ ಕೊಲೆ ಪ್ರಕರಣ ದಾಖಲಿಸಲಾಗಿದೆ. ಹಾಗಾಗಿ ಜಾಮೀನು ನೀಡಬೇಕು ಎಂದು ಕೋರಿದರು.


Published : January 7, 2026 at 8:36 PM IST
ಬೆಂಗಳೂರು: ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ವಿರುದ್ಧದ ಸಾಕ್ಷಿಗಳ ವಿಚಾರಣೆ ಬಾಕಿಯಿರುವ ಸಂಬಂಧ ವಿವರಣೆ ನೀಡುವಂತೆ ಹೈಕೋರ್ಟ್ ಪ್ರಾಸಿಕ್ಯೂಷನ್ನ್ ಪರ ವಕೀಲರಿಗೆ ನಿರ್ದೇಶನ ನೀಡಿದೆ.
ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ ವಿನಯ್ ಕುಲಕರ್ಣಿ ಎರಡನೇ ಬಾರಿ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯಪೀಠ, ಈ ಸೂಚನೆ ನೀಡಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಸಾಕ್ಷಿಯೊಬ್ಬರು ವಿನಯ್ ಕುಲಕರ್ಣಿ ಕಾಲಿಗೆ ಬಿದ್ದರೆಂಬ ಆರೋಪವಿದೆ. ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳಿಲ್ಲ. ತನಿಖಾಧಿಕಾರಿ ಬಿಟ್ಟು ಉಳಿದವರ ಸಾಕ್ಷ್ಯ ವಿಚಾರಣೆ ಆಗಿದೆ. ರಾಜಕೀಯ ದುರುದ್ದೇಶದಿಂದ ಕೊಲೆ ಪ್ರಕರಣ ದಾಖಲಿಸಲಾಗಿದೆ. ಹಾಗಾಗಿ ಜಾಮೀನು ನೀಡಬೇಕು ಎಂದು ಕೋರಿದರು.
ಇದಕ್ಕೆ ಆಕ್ಷೇಪಿಸಿದ ಸಿಬಿಐ ಪರ ವಕೀಲರು, ಇನ್ನೂ ಹೆಚ್ಚುವರಿ ಸಾಕ್ಷಿಗಳ ವಿಚಾರಣೆ ಬಾಕಿಯಿದೆ. ಸಂಪೂರ್ಣ ಸಾಕ್ಷ್ಯಗಳ ವಿಚಾರಣೆ ಮುಗಿಯುವ ವರೆಗೂ ಜಾಮೀನು ನೀಡಬಾರದು. ಸುಪ್ರೀಂಕೋರ್ಟ್ ಜಾಮೀನು ರದ್ದುಪಡಿಸಿರುವುದನ್ನು ಪರಿಗಣಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು. ಈ ವೇಳೆ ನ್ಯಾಯಪೀಠ, ಬಾಕಿಯಿರುವ ಸಾಕ್ಷಿಗಳ ಬಗ್ಗೆ ಗುರುವಾರವೇ ಮೆಮೋ ಸಲ್ಲಿಸಲು ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.
ಕಳೆದ ವಿಚಾರಣೆ ವೇಳೆ ನ್ಯಾಯಾಲಯ, ಸ್ವತಃ ಸುಪ್ರೀಂಕೋರ್ಟ್ ಜಾಮೀನು ರದ್ದುಪಡಿಸಿದ ನಂತರ ಏಕೆ ಹೈಕೋರ್ಟ್ ಜಾಮೀನು ಮಂಜೂರು ಮಾಡಬೇಕು? ಏಕೆ ಮಂಜೂರು ಮಾಡಬಾರದು? ಎಂಬ ಕಾನೂನಾತ್ಮಕ ಅಂಶದ ಬಗ್ಗೆ ವಾದ ಮಂಡನೆ ಮಾಡುವಂತೆ ಕುಲಕರ್ಣಿ ಪರ ವಕೀಲರಿಗೆ ಸೂಚನೆ ನೀಡಿತ್ತು. ಆಗ ವಕೀಲರು, ಸುಪ್ರಿಂಕೋರ್ಟ್ ಜಾಮೀನು ರದ್ದುಪಡಿಸಿದ ಸಂದರ್ಭದಲ್ಲಿ ಬದಲಾವಣೆ ಆಧಾರದ ಮೇಲೆ ಕೆಳಗಿನ ನ್ಯಾಯಾಲಯದಲ್ಲಿ ಜಾಮೀನು ಕೋರುವ ಹಕ್ಕು ಆರೋಪಿಯಿಂದ ದೂರವಾಗುವುದಿಲ್ಲ. ಜಾಮೀನು ಕೋರುವ ಹಕ್ಕು ಇರುತ್ತದೆ ಎಂದು ಹೈಕೋರ್ಟ್ ಗಮನಕ್ಕೆ ತಂದು, ಜಾಮೀನು ನಿರಾಕರಿಸಿರುವ ಸಂಬಂಧ ಸುಪ್ರೀಂಕೋರ್ಟ್ ತೀರ್ಪಿನ ಪ್ರತಿಯನ್ನು ಪೀಠಕ್ಕೆ ತಂದರು.
ಪ್ರಕರಣದ ಹಿನ್ನೆಲೆ: ಯೋಗೇಶ್ ಗೌಡ ಅವರನ್ನು 2016ರ ಜೂ.15ರಂದು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಪ್ರಕರಣದ ತನಿಖೆಯನ್ನು ಸ್ಥಳೀಯ ಪೊಲೀಸರ ಬಳಿಕ ಸಿಬಿಐ ಕೈಗೆತ್ತಿಕೊಂಡು ಶಾಸಕ ವಿನಯ್ ಕುಲಕರ್ಣಿ ಅವರನ್ನು ಆರೋಪಿಯನ್ನಾಗಿ ಪರಿಗಣಿಸಿ ಬಂಧಿಸಿತ್ತು. ಬಳಿಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು ಈ ಆದೇಶವನ್ನು ಸಿಬಿಐ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು.
ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರಿಂಕೋರ್ಟ್ ಈ ಹಿಂದೆ ಜಾಮೀನು ರದ್ದುಪಡಿಸಿದ ಬಳಿಕ 2025ರ ಜೂ.13ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ. ಜನಪ್ರತಿನಿಧಿಗಳ ನ್ಯಾಯಾಲಯ ಕಳೆದ ಡಿ.8 ರಂದು ಕುಲಕರ್ಣಿ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಹಾಗಾಗಿ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ.
ಇವುಗಳನ್ನು ಓದಿ: GBA ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಮಾರ್ಚ್ 11ಕ್ಕೆ ನಿಗದಿ ಪಡಿಸಿದ ಹೈಕೋರ್ಟ್
ಹುಬ್ಬಳ್ಳಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಪೊಲೀಸರ ಹಲ್ಲೆ ಆರೋಪ: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮಗಳನ್ನ ಮದುವೆ ಮಾಡಿಕೊಡಲು ಒಪ್ಪದಿದ್ದಕ್ಕೆ ತಾಯಿಗೆ ಬೆಂಕಿಯಿಟ್ಟ ಪ್ರಕರಣ; ಚಿಕಿತ್ಸೆ ಫಲಕಾರಿಯಾಗದೇ ತಾಯಿ ಸಾವು

