ಯಡಿಯೂರಪ್ಪ ಉತ್ಸವ 2028ನೇ ಚುನಾವಣೆಯಲ್ಲಿ ಪರಿವರ್ತನೆಗೆ ಮುನ್ನುಡಿ: ಬೊಮ್ಮಾಯಿ
ಬಿ.ಎಸ್.ಯಡಿಯೂರಪ್ಪನವರು ಬಿಜೆಪಿಯ ದೊಡ್ಡ ಆಸ್ತಿ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

Published : March 1, 2026 at 1:20 PM IST
|Updated : March 1, 2026 at 1:56 PM IST
ಹಾವೇರಿ: 2028ರ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಮಾಜಿ ಸಿಎಂ ಯಡಿಯೂರಪ್ಪ ಉತ್ಸವ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ಕುರಿತು ಹಾವೇರಿ ಸಂಸದ ಬಸವರಾಜ್ ಬೊಮ್ಮಾಯಿ ಅವರು ಮಾತನಾಡಿದ್ದು, ಯಡಿಯೂರಪ್ಪ ಬಿಜೆಪಿಯ ದೊಡ್ಡ ಆಸ್ತಿ, ದೊಡ್ಡ ಶಕ್ತಿ. ಆ ಶಕ್ತಿಯ ಬಳಕೆ ಮಾಡಿಕೊಳ್ಳುವುದರಲ್ಲಿ ತಪ್ಪಿಲ್ಲ ಎನ್ನುವುದು ನನ್ನ ನಂಬಿಕೆ ಎಂದರು.
ರಾಜ್ಯದಲ್ಲಿ ಐವತ್ತು ವರ್ಷ ತುಂಬು ರಾಜಕಾರಣ ಮಾಡಿರುವವರ ಸಂಖ್ಯೆ ತುಂಬಾ ಕಡಿಮೆ. ಯಡಿಯೂರಪ್ಪ ನಾಲ್ಕು ಬಾರಿ ಸಿಎಂ ಆದವರು. ಬಹಳಷ್ಟು ಅನುಭವವಿದೆ. ಕಾಂಗ್ರೆಸ್ ದುಸ್ಥಿತಿಯ ಸರ್ಕಾರಕ್ಕೆ ಒಂದು ಒಳ್ಳೆಯ ಉತ್ತರ ಅಷ್ಟೇ ಅಲ್ಲ, ನಾಡು ಸುಭಿಕ್ಷೆಯಾಗುವ, ಜನಪರ ಆಡಳಿತ ಕೊಡುವುದಕ್ಕೆ ಯಡಿಯೂರಪ್ಪನವರ ಮಾರ್ಗದರ್ಶನದ ಅವಶ್ಯಕತೆ ಇದೆ. ಆ ಹಿನ್ನೆಲೆಯಲ್ಲಿ ಉತ್ಸವ ಮಾಡುತ್ತಿದ್ದೇವೆ. ಈ ಉತ್ಸವ 2028ನೇ ಚುನಾವಣೆಗೆ ಮುನ್ನುಡಿ. ಬಿಜೆಪಿಯ ಎಲ್ಲ ನಾಯಕರು ಸಕ್ರಿಯವಾಗಿ ಪಾಲ್ಗೊಳ್ಳುತ್ತೇವೆ ಎಂದು ಹೇಳಿದರು.
ಬಿಜೆಪಿ ಬಿಟ್ಟುಹೋಗಿರುವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಉಳಿದ ನಾಯಕರ ಘರ್ವಾಪಸಿ ಬಗ್ಗೆ ಗಂಭೀರವಾದ ಚಿಂತನೆ ಮಾಡಬೇಕಾಗುತ್ತದೆ. ಈ ಎಲ್ಲ ವಿಚಾರಗಳು ವೈಯಕ್ತಿಕಕ್ಕಿಂತ ಪಕ್ಷದ ಕೋರ್ ಕಮಿಟಿಯಲ್ಲಿ ಚರ್ಚೆ ಮಾಡಲಾಗುತ್ತದೆ. ಅಂತಿಮವಾಗಿ ಕೋರ್ ಕಮಿಟಿಯಲ್ಲಿ ತೀರ್ಮಾನ ತೆಗೆದುಕೊಂಡ ನಂತರ ದೆಹಲಿಯಲ್ಲಿ ನಮ್ಮ ಪಕ್ಷದ ವರಿಷ್ಠರು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ. 2028ರ ಗೆಲುವಿಗೆ ಏನೆಲ್ಲಾ ಮಾಡಬೇಕು ಎಂಬ ಅಂಶಗಳನ್ನು ಪಕ್ಷ ನಿರ್ಧರಿಸಲಿದೆ ಎಂದರು.
ಕಾಂಗ್ರೆಸ್ ಹೈಕಮಾಂಡ್‌ಗೆ ಯಾವುದೇ ಶಕ್ತಿ ಇಲ್ಲ. ಇಬ್ಬರು ನಾಯಕರನ್ನು ಕರೆದು ಮಾತನಾಡಿಸುತ್ತಿಲ್ಲ. ಬರುವ ದಿನಗಳಲ್ಲಿ ಜನರೇ ಇವರನ್ನು ದೆಹಲಿಗೆ ಕಳುಹಿಸುತ್ತಾರೆ, ವಿದೇಶಕ್ಕೆ ಕಳುಹಿಸುತ್ತಾರೆ. ರಾಜ್ಯದಲ್ಲಿ ಹಿಡಿದಿರುವ ಅಧಿಕಾರ ಚುಕ್ಕಾಣಿ ಬಿಡಿಸಿ ಮನೆಗೆ ಕಳುಹಿಸುತ್ತಾರೆ ಎಂದು ಟೀತಿಸಿದರು.
ಶಿವಮೊಗ್ಗದಲ್ಲಿ ಬಾಲಕನ ಸಾವು ಮನಸ್ಸಿಗೆ ನೋವಾಗುವ ಘಟನೆ. ಸಣ್ಣವಯಸ್ಸಲ್ಲಿ ಮಕ್ಕಳು ಗಾಂಜಾ ಸೇವಿಸಿದ್ದಾರೆ ಎನ್ನುವುದು ಆಘಾತಕಾರಿ. ಸರ್ಕಾರ ಈ ಕೂಡಲೇ ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ಚಿಕ್ಕಮಕ್ಕಳಲ್ಲಿಯೇ ಈ ರೀತಿ ಕೋಮು ಭಾವನೆ ಬಂದರೆ ಸಮಾಜ ಎಲ್ಲಿ ಉಳಿಯುತ್ತೆ?. ಸರ್ಕಾರ ಜವಾಬ್ದಾರಿಯಿಂದ ಇರಬೇಕು, ಈ ರೀತಿ ಖುರ್ಚಿಗಾಗಿ ಗುದ್ದಾಡುತ್ತಿದ್ದರೆ ರಾಜ್ಯದಲ್ಲಿ ಕೋಮು ಸಾಮರಸ್ಯ ಹದಗೆಡುತ್ತದೆ. ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಸಾಮಾಜಿಕ ಸಾಮರಸ್ಯ ಕಾಪಾಡಿಕೊಂಡು ಹೋಗುವುದರಲ್ಲಿ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಬಿಎಸ್ವೈ 84ನೇ ಹುಟ್ಟುಹಬ್ಬ: ಯಡಿಯೂರಪ್ಪನವರು ಶೀಘ್ರ ಕೋಪಿಯೇ ಹೊರತು, ಶೀಘ್ರ ದ್ವೇಷಿ ಅಲ್ಲ: ಜೋಶಿ

