ಬೆಣ್ಣೆನಗರಿಯಲ್ಲಿ ಜಂಗಿ ಕುಸ್ತಿ: ದೇಶ-ವಿದೇಶದ ಪೈಲ್ವಾನ್ಗಳ ಕಾದಾಟ, ಇಂದು ಅಂತಿಮ ಸೆಣಸಾಟ
ದುರ್ಗಾಂಬಿಕಾ ದೇವಿ ಜಾತ್ರೆಯ ಪ್ರಯುಕ್ತ ಕುಸ್ತಿ ಪಂದ್ಯ ಆಯೋಜಿಸಲಾಗಿದ್ದು, ಇಂದು ಫೈನಲ್ ನಡೆಯಲಿದೆ.

Published : March 1, 2026 at 1:13 PM IST
ದಾವಣಗೆರೆ: ಇಲ್ಲಿ ನಡೆಯುವ ಕೆಂಪು ಮಣ್ಣಿನ ಕುಸ್ತಿ ಪಂದ್ಯಾವಳಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಪ್ರತೀ ಎರಡು ವರ್ಷಕ್ಕೊಮ್ಮೆ ದುರ್ಗಾಂಬಿಕಾ ದೇವಿ ಜಾತ್ರೆಯ ಪ್ರಯುಕ್ತ ಮೂರು ದಿನಗಳ ಕಾಲ ಕುಸ್ತಿ ಪಂದ್ಯಾವಳಿ ನಡೆಯುತ್ತದೆ. ಈ ಬಾರಿ ಸೆಣಸಾಟಕ್ಕೆ ದೇಶವಲ್ಲದೆ ಇರಾನ್, ದಕ್ಷಿಣ ಆಫ್ರಿಕಾದಿಂದಲೂ ಪೈಲ್ವಾನ್‌ಗಳು ಆಗಮಿಸಿದ್ದಾರೆ.
ದಾವಣಗೆರೆ ನಗರದ ದುಗ್ಗಮ್ಮ ದೇವಿಯ ಐತಿಹಾಸಿಕ ಜಾತ್ರೆ ಸಂಬಂಧ ಬೀರಲಿಂಗೇಶ್ವರ ದೇವಾಲಯದ ಬಳಿ ಕುಸ್ತಿ ಪಂದ್ಯಾವಳಿ ನಡೆಯುತ್ತಿದೆ. ಶುಕ್ರವಾರದ ಜಂಗಿ ಕುಸ್ತಿಯಲ್ಲಿ ಪೈಲ್ವಾನ್‌ಗಳು ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಹರಿಯಾಣದ ನ್ಯಾಷನಲ್ ಕುಸ್ತಿಪಟು ದೀಪಾಜು ಅವರ ಆಟ ನೋಡಲು ಅಭಿಮಾನಿಗಳ ಸಾಗರವೇ ಹರಿದುಬಂದಿತ್ತು. ಮೊದಲ ಸುತ್ತಿನಲ್ಲೇ ಗೆದ್ದು ಬೀಗಿದ ಪೈಲ್ವಾನ್ ದೀಪಾಜುಗೆ ಅಭಿಮಾನಿಗಳು ಹಣದ ರೂಪದಲ್ಲಿ ಪ್ರೀತಿ ಹಂಚಿದರು.
ಮೂರು ದಿನ, 500 ಪೈಲ್ವಾನ್ಗಳಿಂದ ಪ್ರಶಸ್ತಿಗೆ ಸೆಣಸಾಟ: ನಿನ್ನೆ ಅಪಾರ ಜನಸ್ತೋಮದ ನಡುವೆ ಪೈಲ್ವಾನ್‌ಗಳು ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಪ್ರೇಕ್ಷಕರು ಸಿಳ್ಳೆ ಹೊಡೆದು ಹುರಿದುಂಬಿಸಿದರು. ಮೂರು ದಿನಗಳ ಕುಸ್ತಿ ಅಖಾಡದಲ್ಲಿ ಸೆಣಸಲು 500ಕ್ಕೂ ಹೆಚ್ಚು ಪೈಲ್ವಾನ್‌ಗಳು ಅಗಮಿಸಿದ್ದಾರೆ. ಇಂದು ಕೊನೆ ದಿನವಾಗಿದ್ದು, ದೊಡ್ಡ ದೊಡ್ಡ ಪೈಲ್ವಾನ್‌ಗಳು ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಕುಸ್ತಿ ವೀಕ್ಷಣೆಗೆ ಹತ್ತು ಸಾವಿರ ಜನ ಕುಳಿತು ನೋಡುವ ಆಸನದ ವ್ಯವಸ್ಥೆ ಮಾಡಲಾಗಿದೆ.
ಹರಿಯಾಣದಿಂದ ಶೇರಾ ಗುಜ್ಜರ್ ಪೈಲ್ವಾನ್ ಹಾಗೂ ವಿಕ್ಕಿ ಪೈಲ್ವಾನ್, ಪಂಜಾಬ್ನಿಂದ ಶಾನ್ ವೀರ್ ಕೊಹಾಲಿ ಪೈಲ್ವಾನ್, ಮಹಾರಾಷ್ಟ್ರದಿಂದ ಶಿವ ಪೈಲ್ವಾನ್, ವಿಕ್ರಮ್ ಘೋರಪಡೆ ಪೈಲ್ವಾನ್ ಹಾಗೂ ಕಾಲಿಚರಣ್ ಸೋಲಂಕರ್ ಪೈಲ್ವಾನ್, ಯುಪಿಯಿಂದ ಅಭಿ ನಾಯಕ್ ಪೈಲ್ವಾನ್ ಹಾಗೇ ರೋಹಿತ್ ಘೋಜಿ ಪೈಲ್ವಾನ್, ಕುಹಲಿಯಿಂದ ಲಕ್ಕಿ ಪೈಲ್ವಾನ್, ಕರ್ನಾಟಕದಿಂದ ಸಂಜು ಹಾಗೂ ಗಣೇಶ್ ಪೈಲ್ವಾನ್ ಭಾಗಿಯಾಗಿದ್ದಾರೆ.

ವಿದೇಶಿ ಪೈಲ್ವಾನ್‌ಗಳು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಇರಾನ್ನಿಂದ ಜಲಾಲ್ ಪೈಲ್ವಾನ್ ಹಾಗೂ ಮಿರ್ಜಾ ಪೈಲ್ವಾನ್ ಸೇರಿದಂತೆ ದಕ್ಷಿಣ ಆಫ್ರಿಕಾದಿಂದ ಒಬ್ಬರು, ಈಜಿಪ್ಟ್ನಿಂದ ಒಬ್ಬರು, ಕಜಕಿಸ್ತಾನ್‌ನಿಂದ ಇಬ್ಬರು ಪೈಲ್ವಾನ್‌ಗಳು ಸೆಣಸಾಡಲು ಆಗಮಿಸಿರುವುದು ವಿಶೇಷ.
1948ದಿಂದಲೂ ಕುಸ್ತಿ ಆಯೋಜನೆ: ದುರ್ಗಾಂಬಿಕಾ ದೇವಾಸ್ಥಾನ ಕಮಿಟಿ 1948ರಿಂದಲೂ ಕುಸ್ತಿ ಪಂದ್ಯಾಟ ಆಯೋಜಿಸುತ್ತಾ ಬರುತ್ತಿದೆ. ರಾಜ ಮಹಾರಾಜರ ಕಾಲದಲ್ಲಿ ಇದ್ದ ಕ್ರೀಡೆ ದಾವಣಗೆರೆ ಯುವಕರ ಉಸಿರಾಗಿದೆ.
ದಾವಣಗೆರೆಯಲ್ಲಿ ಹತ್ತು ಗರಡಿಮನೆಗಳಿದ್ದು, ಹತ್ತು ಹದಿನೈದು ಯುವಕರು ಇಂದಿಗೂ ಕುಸ್ತಿ ಕಲಿಯುತ್ತಿದ್ದಾರೆ. ಇದಲ್ಲದೆ ಇಲ್ಲಿ ಕ್ರೀಡಾ ವಿದ್ಯಾರ್ಥಿನಿಲಯವಿದ್ದು, ಒಂದು ರಾಜ್ಯ ಮಟ್ಟದ ಕುಸ್ತಿ ಹಾಲ್ ಕೂಡಾ ಇದೆ. ಈ ಹಾಲ್ನಲ್ಲಿ ಕುಸ್ತಿ ತರಬೇತಿ ಪಡೆದ ರಫೀಕ್ ಹೋಳಿ, ಕಾರ್ತಿಕ್ ಕಾಟೆ ಮುಂತಾದ ಕುಸ್ತಿ ಪಟುಗಳು ರಾಜ್ಯ ದೇಶವನ್ನು ಪ್ರತಿನಿಧಿಸಿ ಚಿನ್ನ, ಬೆಳ್ಳಿ, ಕಂಚಿನ ಪದಕಗಳಿಗೆ ಕೊರಳೊಡ್ಡಿದ್ದಾರೆ. ಈ ಕುಸ್ತಿಗೆ ಕೆಂಪು ಮಣ್ಣನ್ನು ವಿಶೇಷವಾಗಿ ಬಳಕೆ ಮಾಡಲಾಗುತ್ತದೆ. ಈ ಮಣ್ಣಿನಲ್ಲೇ ಕುಸ್ತಿಪಟುಗಳು ಕುಸ್ತಿ ಕಲಿಯುತ್ತಿದ್ದಾರೆ.

ರಾಜ್ಯ ಕುಸ್ತಿ ಸಂಘದ ಅಧ್ಯಕ್ಷ ಬಿ.ವೀರಣ್ಣ ಪ್ರತಿಕ್ರಿಯಿಸಿ, "ದುರ್ಗಾಂಬಿಕಾ ಜಾತ್ರೆಯ ಪ್ರಯುಕ್ತ ಮೂರು ದಿನಗಳ ಕಾಲ ಕುಸ್ತಿ ಪಂದ್ಯಾಟ ಆಯೋಜಿಸಲಾಗಿದೆ. 500ಕ್ಕೂ ಹೆಚ್ಚು ಪೈಲ್ವಾನ್‌ಗಳು ಕುಸ್ತಿಯಲ್ಲಿ ಪಾಲ್ಗೊಂಡಿದ್ದಾರೆ. ಕೊನೆ ದಿನ ಪೈಲ್ವಾನ್ಗಳ ಸಂಖ್ಯೆ ಏರಿಕೆಯಾಗಲಿದೆ. ಒಂದು ಬೆಳ್ಳಿ ಗದೆ ಸಹಿತ ಆಕರ್ಷಕ ಮೊತ್ತವನ್ನು ಬಹುಮಾನವಾಗಿ ಇಡಲಾಗಿದೆ" ಎಂದು ತಿಳಿಸಿದರು.
ರೆಫರಿ ವೀರೇಶ್ ಮಾತನಾಡಿ, "ರಾಜ್ಯ, ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಮಟ್ಟ ಕುಸ್ತಿಪಟುಗಳು ಬಂದಿದ್ದಾರೆ. ದಕ್ಷಿಣ ಆಫ್ರಿಕಾ ದೇಶದ ಕುಸ್ತಿ ಪಟು ಜತೆ ವಿಜೇತನಾದ ದೆಹಲಿಯ ವಿಕ್ಕಿ ಅವರಿಗೆ ಕಮಿಟಿ 75 ಸಾವಿರ ರೂ ಬಹುಮಾನ ಘೋಷಣೆ ಮಾಡಿತ್ತು. ಸಾವಿರಾರು ಜನ ನೆರೆದಿದ್ದಾರೆ. ಸಂಜೆ ಮತ್ತೆ ಅಖಾಡ ರಂಗೇರಲಿದೆ" ಎಂದರು.

ಹರಿಯಾಣದ ನ್ಯಾಷನಲ್ ಕುಸ್ತಿ ಪಟು ದೀಪಾಜು ಮಾತನಾಡಿ, "ನನ್ನ ಊರು ಹರಿಯಾಣದ ಸಾಪ್ಲಾ ಗ್ರಾಮ. ನನ್ನ ಜತೆ ನನ್ನ ಗುರು ಜೀ ಜೋಗೇಂದರ್ ಪೈಲ್ವಾನ್ ಇದ್ದಾರೆ. ಅವರು ನನ್ನೊಂದಿಗೆ ಬಂದಿದ್ದಾರೆ. ನಾನು ಇಲ್ಲಿಗೆ ಮೊದಲ ಬಾರಿಗೆ ಬಂದಿದ್ದೇನೆ. ಇಲ್ಲಿಗೆ ಬಂದಿದ್ದು ಬಹಳ ಖುಷಿ ಇದೆ. ಇಲ್ಲಿಯ ಜನ ಸಾಕಷ್ಟು ಪ್ರೀತಿ ಕೊಟ್ಟರು. ಪಂಜಾಬ್, ಹಿಮಾಚಲ ಪ್ರದೇಶ, ಹರಿಯಾಣ, ಉಜ್ಜೈನ್ ಎಲ್ಲೆಡೆ ಆಡಿದ್ದೇನೆ. ನಾನು ಆರು ವರ್ಷದಿಂದ ಕುಸ್ತಿ ಆಡುತ್ತಿದ್ದೇನೆ" ಎಂದು ತಿಳಿಸಿದರು.

ಇದನ್ನೂ ಓದಿ: ಗದಗ ಜಿಲ್ಲೆಯ ಈ ಗ್ರಾಮದಲ್ಲಿ ಇಂದಿಗೂ ಅಸ್ಪೃಶ್ಯತೆ ಜೀವಂತ; ಜಿಲ್ಲಾಡಳಿತದ ಮಧ್ಯಸ್ಥಿಕೆಯಿಂದ ಹೊಸ ಕಟಿಂಗ್ ಶಾಪ್ ಆರಂಭ

