ETV Bharat / state

ಚಾಮರಾಜನಗರ: ಕಾಡಾನೆಗಳ ದಾಳಿಗೆ ಬಾಳೆ ಕಟಾವು ಮಾಡಲು ಬಂದ ಕೂಲಿ ಕಾರ್ಮಿಕ ಬಲಿ

ಬಾಳೆ ಕಟಾವು ಮಾಡಲು ಬಂದಿದ್ದ ಕೂಲಿ ಕಾರ್ಮಿಕ ಕಾಡಾನೆಗಳ ದಾಳಿಗೆ ಬಲಿಯಾಗಿರುವ ಘಟನೆ ಗಡಿಜಿಲ್ಲೆಯಲ್ಲಿ ಸಂಭವಿಸಿದೆ.

worker-died-after-attacked-by-wild-elephants-in-chamarajanagara
ಕಾಡಾನೆಗಳ ದಾಳಿಗೆ ನಡೆದ ಸ್ಥಳ (ETV Bharat)
author img

By ETV Bharat Karnataka Team

Published : December 18, 2025 at 12:36 PM IST

2 Min Read
Choose ETV Bharat

ಚಾಮರಾಜನಗರ: ಕಾಡಾನೆಗಳು ಏಕಾಏಕಿ ದಾಳಿ ನಡೆಸಿದ ಪರಿಣಾಮ ಬಾಳೆ ಕಟಾವು ಮಾಡಲು ಬಂದಿದ್ದ ಕೂಲಿ ಕಾರ್ಮಿಕ ಸ್ಥಳದಲ್ಲೇ ಅಸುನೀಗಿದ ಘಟನೆ ಜಿಲ್ಲೆಯ ಹನೂರು ತಾಲೂಕಿನ ಜಲ್ಲಿಪಾಳ್ಯ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ತಮಿಳುನಾಡಿನ ಮಾಕನಪಾಳ್ಯ ಗ್ರಾಮದ ಶಿವಮೂರ್ತಿ(50) ಮೃತ ವ್ಯಕ್ತಿ. ಜಲ್ಲಿಪಾಳ್ಯ ಸುತ್ತಮುತ್ತಲು ಈತ ಬಾಳೆ ಕಟಾವು ಮಾಡಲು ಬಂದಿದ್ದ. ಕೂಲಿ ಕಾರ್ಮಿಕನಾಗಿದ್ದು ಕೆಲಸ ಮುಗಿಸಿ ಮಾಕನಪಾಳ್ಯಕ್ಕೆ ಬೈಕ್​ನಲ್ಲಿ ಹಿಂತಿರುಗುವಾಗ ಬುಧವಾರ ರಾತ್ರಿ ಜಲ್ಲಿಪಾಳ್ಯ ಅರಣ್ಯದಲ್ಲಿ ಕಾಡಾನೆ ದಾಳಿ ನಡೆಸಿ, ತುಳಿದು ಕೊಂದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದಾಳಿ ಮಾಡಿದ ಬಳಿಕ ಆನೆಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದವು. ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವನ್ಯಜೀವಿ ವಲಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಆನೆಗಳನ್ನು ಓಡಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.

ಘಟನೆ ನಡೆದ ಸ್ಥಳವು ರಾಜ್ಯದ ಗಡಿಯಂಚಿನಲ್ಲಿದ್ದು, ತಮಿಳುನಾಡಿಗೆ 200 ಮೀ. ದೂರದಲ್ಲಿದೆ. ಇನ್ನು, ಕಾಡಾನೆಗಳ ದಾಳಿಯಲ್ಲಿ ಬೇರೆ ಕೂಲಿ ಕಾರ್ಮಿಕರು ಪಾರಾಗಿದ್ದು, ಶಿವಮೂರ್ತಿ ಮಾತ್ರ ಆನೆ ದಾಳಿಗೆ ಸಿಲುಕಿ ಅಸುನೀಗಿದ್ದಾರೆ. ಕುಟುಂಬಸ್ಥರು ಶವದ ಮುಂದೆ ರೋಧಿಸುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.

ಪ್ರತ್ಯೇಕ ಘಟನೆ, ಕಾಡಾನೆ ದಾಳಿಗೆ ಬೈಕ್​ ಸವಾರ ಬಲಿ: ಬೈಕ್ ಸವಾರರ ಮೇಲೆ ಕಾಡಾನೆ ದಾಳಿ ನಡೆಸಿ ಓರ್ವನನ್ನು ಬಲಿ ಪಡೆದ ಘಟನೆ ಹನೂರು ತಾಲೂಕಿನ ನೆಲ್ಲಿಕತ್ರಿಯಲ್ಲಿ ಕಳೆದ ನವೆಂಬರ್​​ನಲ್ಲಿ ನಡೆದಿತ್ತು. ತಾಲೂಕಿನ ಪಿ.ಜಿ. ಪಾಳ್ಯ ಗ್ರಾಮ ಪಂಚಾಯತ್​ ವ್ಯಾಪ್ತಿಯ ಗೊಂಬೆಗಲ್ಲು ಗ್ರಾಮದ ಕೇತೆಗೌಡ ಆನೆ ದಾಳಿಯಿಂದ ಮೃತಪಟ್ಟಿರುವ ವ್ಯಕ್ತಿ.

ಗೊಂಬೆಗಲ್ಲು ಗ್ರಾಮದಿಂದ ಕಾರ್ಯನಿಮಿತ್ತ ಒಡೆಯರ ಪಾಳ್ಯಕ್ಕೆ ಬೈಕ್​ನಲ್ಲಿ ತೆರಳುತ್ತಿದ್ದಾಗ ನೆಲ್ಲಿಕತ್ರಿ ಸಮೀಪ ಕಾಡಾನೆ ಏಕಾಏಕಿ ದಾಳಿ ನಡೆಸಿತ್ತು. ಪರಿಣಾಮ ಕೇತೆಗೌಡ ಸ್ಥಳದಲ್ಲೇ ಮೃತಪಟ್ಟಿದ್ದು, ಕೊಲ್ಲ ವೀರೇಗೌಡ ಎಂಬವರು ಸ್ವಲ್ಪದರಲ್ಲೇ ಪಾರಾಗಿದ್ದರು. ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಿ ಆರ್ ಟಿ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್ ಶ್ರೀಪತಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದರು.

ಮರಣೋತ್ತರ ಪರೀಕ್ಷೆಗೆ ಹನೂರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದ್ದ ಸಂದರ್ಭದಲ್ಲಿ ಮೃತ ಕೇತೆಗೌಡ ಅವರ ಪುತ್ರ ಜಡೇಸ್ವಾಮಿಗೆ ಸರ್ಕಾರದ ವತಿಯಿಂದ ಮೊದಲ ಹಂತದ ಪರಿಹಾರ 5 ಲಕ್ಷದ ಚೆಕ್ ಅನ್ನು ಡಿಸಿಎಫ್ ಶ್ರೀಪತಿ ಹಾಗೂ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ರಾಜೇಶ್ ಸಮ್ಮುಖದಲ್ಲಿ ವಿತರಣೆ ಮಾಡಲಾಗಿತ್ತು.

ಇದನ್ನೂ ಓದಿ: ಮರೆಯಾದ ಮಾನವೀಯತೆ; ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಯ ಸಹಾಯಕ್ಕೆ ಅಂಗಲಾಚಿದರೂ ಬಾರದ ಜನ, ಉಳಿಯಲಿಲ್ಲ ಜೀವ!