ETV Bharat / state

ಪ್ರಿಯಕರನಿಗೆ ಬೆಂಕಿ ಹಚ್ಚಿ, ತಾನೂ ವಿಷ ಕುಡಿದು ಸಾಯಲು ನಿರ್ಧರಿಸಿದ್ದ ಪ್ರಿಯತಮೆ..? ಬೆಂಕಿ ತೀವ್ರತೆಯ ಭಯಕ್ಕೆ ಬಾತ್ ರೂಮ್​ನಲ್ಲಿ ಅವಿತುಕೊಂಡಿದ್ದ ಆರೋಪಿತೆ

ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಂದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಯುವತಿ ನಿರ್ಧರಿಸಿದ್ದಳು ಎಂಬುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.

BENGALURU  BOYFRIEND MURDER  ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಲೆ  WOMAN SETS BOYFRIEND ABLAZE
ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಂದ ಯುವತಿ (ETV Bharat)
author img

By ETV Bharat Karnataka Team

Published : April 22, 2026 at 10:53 PM IST

3 Min Read
Choose ETV Bharat

ಬೆಂಗಳೂರು: ವಿದೇಶಿ ಶೈಲಿಯಲ್ಲಿ ಪ್ರೇಮ ನಿವೇದನೆ ಮಾಡುವುದಾಗಿ ಮನೆಗೆ ಕರೆಸಿ ಪ್ರಿಯಕರನನ್ನು ಬೆಂಕಿ ಹಚ್ಚಿ ಕೊಲೆ ಮಾಡಿದ ಬಳಿಕ ಪ್ರಿಯತಮೆಯು ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದಳು. ಆದರೆ, ಬೆಂಕಿ ತೀವ್ರತೆ ಹೆಚ್ಚಾಗಿ ದಟ್ಟ ಹೊಗೆ ಆವರಿಸಿದ ಪರಿಣಾಮ ಭಯದಿಂದ ಹೊರಬಂದಿದ್ದಳು ಎಂಬ ವಿಚಾರ ಪೊಲೀಸರ ತನಿಖೆಯಿಂದ ಹೊರಬಿದ್ದಿದೆ.

ತನ್ನಿಂದ ಅಂತರ ಕಾಯ್ದುಕೊಳ್ಳುತ್ತಿರುವುದಾಗಿ ಭಾವಿಸಿ ಮನನೊಂದಿದ್ದ ಆರೋಪಿತೆ ಪ್ರೇಮಾ, ಮಂಗಳವಾರ ಮಧ್ಯಾಹ್ನ ಪ್ರಿಯಕರ ಕಿರಣ್ ನನ್ನ ಕರೆಯಿಸಿಕೊಂಡು ವಿದೇಶಿ ಶೈಲಿಯಲ್ಲಿ ಪ್ರೇಮ ನಿವೇದನೆ ಮಾಡುವುದಾಗಿ ನಂಬಿಸಿದ್ದಳು. ಪ್ರಿಯಕರನ ಕಣ್ಣಿಗೆ ಬಟ್ಟೆ ಕಟ್ಟಿ, ಕೈ-ಕಾಲುಗಳಿಗೆ ಹ್ಯಾಂಡ್ ಕಪ್ ಮಾದರಿಯ ಬೆಲ್ಟ್ ಕಟ್ಟಿ ಪೂರ್ವಸಂಚಿನಂತೆ ಮನೆಯಲ್ಲಿ ತಂದಿರಿಸಿದ್ದ ಪೆಟ್ರೋಲ್ ಮಿಶ್ರಿತ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಳು. ಪ್ರಿಯಕರನ ನರಳಾಟ ನೋಡಲು ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಂಡಿದ್ದಳು. ಬಳಿಕ ತಾನು ವಿಷ ಕುಡಿದು ಸಾಯಲು ನಿರ್ಧರಿಸಿದ್ದಳು. ಆದರೆ, ಬೆಂಕಿ ಹೊಗೆ ಹೆಚ್ಚಾದಂತೆ ಆತಂಕಗೊಂಡು ಸ್ನಾನದ ಮನೆಗೆ ಹೋಗಿ ಬಾಗಿಲು ಹಾಕಿಕೊಂಡು ಬಚ್ಚಿಟ್ಟುಕೊಂಡಿದ್ದಳು. ನಂತರ ಗಾಬರಿಗೊಂಡು ಮನೆಯಿಂದ ಹೊರಬಂದಿದ್ದಳು ಎಂಬ ವಿಚಾರ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.

ತುಮಕೂರಿನ ಚಿಕ್ಕನಾಯಕನಹಳ್ಳಿ ಮೂಲದ ಕಿರಣ್ ಹಾಗೂ ಅಂಜನಾಪುರದ ನಿವಾಸಿ ಪ್ರೇಮ ಎರಡು ವರ್ಷಗಳಿಂದ ಪರಿಚಿತರಾಗಿದ್ದು. ಇಬ್ಬರು ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಕಾಲ ಕ್ರಮೇಣ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇಬ್ಬರು ಒಟ್ಟಿಗೆ ಓಡಾಡಿಕೊಂಡಿದ್ದರು. ಪ್ರೀತಿ ವಿಷಯವನ್ನು ಕಿರಣ್, ತನ್ನ ಮನೆಯವರಿಗೆ ಹೇಳಿರಲಿಲ್ಲ. ಇತ್ತ ಮನೆಯಲ್ಲಿ ಮಗನ ಮದುವೆಗಾಗಿ ಪೋಷಕರು ಹುಡುಗಿ ನೋಡುತ್ತಿದ್ದರು. ಪ್ರೇಮಾಳೊಂದಿಗೆ ಮದುವೆಗೆ ಜಾತಿ ಅಡ್ಡ ಬರಲಿದೆ ಎಂದು ಭಾವಿಸಿ ಆರೋಪಿತೆಯಿಂದ ಕಿರಣ್ ಅಂತರ ಕಾಯ್ದುಕೊಂಡಿದ್ದ. ಯುವತಿ ಮೊಬೈಲ್ ನಂಬರ್ ಸಹ ಬ್ಲ್ಯಾಕ್ ಮಾಡಿದ್ದ. ಮತ್ತೊಂದು ನಂಬರ್ ನಿಂದ ಕರೆ ಮಾಡಿದ ಪ್ರೇಮಾ, ತನ್ನ ಮನೆಗೆ ಬಂದರೆ ಸರ್​​ಪ್ರೈಸ್ ಕೊಡುವುದಾಗಿ ಹೇಳಿದ್ದಳು. ಇದನ್ನ ನಂಬಿದ ಕಿರಣ್, ಪ್ರಿಯತಮೆ ನಿವಾಸಕ್ಕೆ ಬಂದಿದ್ದ ಎಂದು ಮೂಲಗಳು ತಿಳಿಸಿವೆ.

ತನ್ನನ್ನ ಕಡೆಗಣಿಸಿ ಮಾಜಿ ಪ್ರಿಯತಮೆ ಹುಟ್ಟುಹಬ್ಬದ ಸಂಭ್ರಮಾಚರಣೆ ಪೋಟೊವನ್ನ ಕಿರಣ್ ಹಾಕಿಕೊಂಡಿದ್ದ ಎನ್ನಲಾಗಿದೆ. ಮದುವೆ ಮಾಡಿಕೊಳ್ಳುವುದಾಗಿ ತನಗೆ ಭರವಸೆ ನೀಡಿ ತನ್ನಿಂದ ಅಂತರ ಕಾಯ್ದುಕೊಳ್ಳಲು ಇದು ಒಂದು ಕಾರಣವೆಂದು ಭಾವಿಸಿದ್ದಳು. ಹೀಗಾಗಿ ಆತನನ್ನ ಮನೆಗೆ ಕರೆಯಿಸಿ ಬೆಂಕಿ ಹಚ್ಚಿ ಕೊಂದ ಬಳಿಕ ತಾನು ಸಹ ಸಾಯಲು ನಿರ್ಧರಿಸಿದ್ದೆ ಎಂದು ಆರೋಪಿತೆ ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಯುವತಿಯನ್ನ ವಶಕ್ಕೆ ಪಡೆದುಕೊಂಡು ಪ್ರಾಥಮಿಕ ವಿಚಾರಣೆ ನಡೆಸಿದ ಬಳಿಕ ಬಂಧಿಸಲಾಯಿತು. ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಲಯ ಮುಂದೆ ಹಾಜರುಪಡಿಸಿ 3 ದಿನಗಳ ಕಸ್ಟಡಿ ಪಡೆಯಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪುಷ್ಪಗುಚ್ಚ ನೀಡಿ ಪ್ರಿಯಕರನನ್ನ ಸ್ವಾಗತಿಸಿದ ಪ್ರಿಯತಮೆ: ಆರೋಪಿತೆಯು ಕಳೆದ ಫೆಬ್ರುವರಿಯಲ್ಲಿ ಮಾಡಿಕೊಂಡಿದ್ದ ಪ್ರೇಮ ನಿವೇದನೆಗೆ ಕಿರಣ್ ಒಪ್ಪಿಕೊಂಡಿದ್ದ. ಬಳಿಕ ಇಬ್ಬರು ಅನ್ಯೋನ್ಯವಾಗಿ ಓಡಾಡಿಕೊಂಡಿದ್ದರು. ಪ್ರಿಯಕರನಿಗೆ ಬೈಕ್ ಹಾಗೂ ಮೊಬೈಲ್ ಗಿಫ್ಟ್ ಕೊಡಿಸಲು ಯುವತಿ ಮುಂದಾಗಿದ್ದಳು. ಇದಕ್ಕೆ ಪೂರಕವಾಗಿ ಬೈಕ್ ಸಹ ನೋಡಿಕೊಂಡು ಬಂದಿದ್ದರು. ಪ್ರಿಯತೆಮೆಯ ಕರೆಯೋಲೆಯಂತೆ ಮನೆಗೆ ಬರುತ್ತಿದ್ದಂತೆ ಪುಷ್ಪಗುಚ್ಚ ನೀಡಿ ಸ್ವಾಗತಿಸಿದ್ದಳು. ರೂಮಿಗೆ ಕರೆದುಕೊಂಡು ಖಾಸಗಿ ಕ್ಷಣ ಕಳೆದಿದ್ದರು ಎನ್ನಲಾಗಿದ್ದು, ಸಲುಗೆಯಿಂದ ಮಾತನಾಡಿಸಿ ವಿದೇಶಿ ಮಾದರಿಯಲ್ಲಿ ಪ್ರಪೋಸ್ ಮಾಡುವುದಾಗಿ ಹೇಳಿ ಕೃತ್ಯ ಎಸಗಿದ್ದಳು ಎಂದು ಮೂಲಗಳು ತಿಳಿಸಿವೆ.

ಮುಗಿಲು ಮುಟ್ಟಿದ ಕುಟುಂಸ್ಥರ ಆಕ್ರಂದನ: ಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಕಿರಣ್ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ವಿಕ್ಟೋರಿಯಾ ಆಸ್ಪತ್ರೆ ಶವಾಗಾರದ ಮುಂದೆ ಪೋಷಕರು ರೋಧಿಸುವ ದೃಶ್ಯ ಕಂಡುಬಂದಿತು. ಈ ಬಗ್ಗೆ ಮಾತನಾಡಿದ ಮೃತನ ತಂದೆ ನರಸಿಂಹಯ್ಯ, ಮಗನಿಗೆ ಒಂದೇಟು ಹೊಡೆಯದೆ ಸಾಕಿ ಬೆಂಗಳೂರಿಗೆ ಕಳುಹಿಸಿದ್ದೆ. ಪ್ರೀತಿ ವಿಚಾರಕ್ಕಾಗಿ ಬೆಂಕಿ ಇಟ್ಟು ಸಾಯಿಸಿದ್ದಾರೆ. ಸರ್ಕಾರ ಬದುಕಿದ್ದರೆ ನಮಗೆ ನ್ಯಾಯ ಕೊಡಿಸಿ ಎಂದು ಅಲವತ್ತುಕೊಂಡರು .

ನರಸಿಂಹಯ್ಯ ಅವರಿಗೆ ಒಬ್ಬನೇ ಮಗನಿದ್ದು, ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿದೆ. ತಾಯಿಗೆ ವಿಚಾರ ಇನ್ನೂ ತಿಳಿಸಿಲ್ಲ. ಹುಷಾರಿಲ್ಲ ಐಸಿಯುನಲ್ಲಿದ್ದಾನೆ ಎಂದು ಹೇಳಿದ್ದಕ್ಕೆ ತಾಯಿ ಕುಸಿದುಬಿದ್ದಿದ್ದಾರೆ. ಮದುವೆಯಾಗಬೇಕೆಂದಿದ್ದರೆ ಮನೆಗೆ ಬಂದು ಕೇಳಬಹುದಿತ್ತು. ಅಥವಾ ಕಾನೂನು ಹೋರಾಟ ಮಾಡಬಹುದಿತ್ತು. ಪ್ರೀತಿ ವಿಚಾರ ಇಟ್ಟುಕೊಂಡು ಸಾಯುವುದು ಎಷ್ಟು ಸರಿ ? ಅವರ ತಂದೆ-ತಾಯಿಗೆ ಯಾರು ದಿಕ್ಕು ಪ್ರಶ್ನಿಸಿ ಸಂಬಂಧಿ ವೀಣಾ ಕಣ್ಣೀರು ಸುರಿಸಿದರು.

ಇದನ್ನೂ ಓದಿ: ಬೆಂಗಳೂರು: ಪ್ರೇಮ ನಿವೇದನೆ ನೆಪದಲ್ಲಿ ಪ್ರಿಯಕರನ ಕಣ್ಣಿಗೆ ಬಟ್ಟೆ, ಕೈಕಾಲುಗಳಿಗೆ ಹಗ್ಗ ಕಟ್ಟಿ ಬೆಂಕಿ ಹಚ್ಚಿ ಕೊಂದ ಯುವತಿ