ETV Bharat / state

ಬೆಂಗಳೂರಲ್ಲಿ ಭಾರಿ ಅಗ್ನಿ ಅವಘಡ: ಮಹಿಳೆ ಸಾವು, ಮೂವರನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ಬೆಂಗಳೂರಿನ ಗಾಯತ್ರಿ ನಗರದ ಮನೆಯೊಂದರಲ್ಲಿ ನಿನ್ನೆ ರಾತ್ರಿ ಅಗ್ನಿ ಅವಾಂತರ ಸಂಭವಿಸಿದೆ. ಇದರಿಂದಾಗಿ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

A fire accident occurred in a house
ಮನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿರುವುದು (ETV Bharat)
author img

By ETV Bharat Karnataka Team

Published : March 3, 2026 at 3:25 PM IST

2 Min Read
Choose ETV Bharat

ಬೆಂಗಳೂರು : ನಗರದ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಮಹಿಳೆ ಸಾವನ್ನಪ್ಪಿದರೆ, ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಬ್ರಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಾಯತ್ರಿ ನಗರದಲ್ಲಿ ಸೋಮವಾರ ರಾತ್ರಿ ಅಗ್ನಿ ಅವಾಂತರ ಸಂಭವಿಸಿದೆ.

ಸವಿತಾ (53) ಸಾವನ್ನಪ್ಪಿದ ಮಹಿಳೆ. ಮನೆಯಲ್ಲಿದ್ದ ರಮೇಶ್ ಬಾಬು, ಇವರ ತಾಯಿ ಸಣ್ಣವ್ವ ಹಾಗೂ ಪುತ್ರನನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನ ಗಾಯತ್ರಿ ನಗರದ ಮನೆಯೊಂದರಲ್ಲಿ ಅಗ್ನಿ ಅವಘಡ ನಡೆದಿರುವುದು (ETV Bharat)

ರಮೇಶ್ ಬಾಬು ಅವರು ಹೆಂಡತಿ-ಮಕ್ಕಳೊಂದಿಗೆ ಮೂರನೇ ಹಾಗೂ ನಾಲ್ಕನೆ ಡೂಪ್ಲೆಕ್ಸ್ ಮನೆಯಲ್ಲಿ ವಾಸವಾಗಿದ್ದರು. ಮೊದಲ ಹಾಗೂ ಎರಡನೇ ಮಹಡಿಯಲ್ಲಿರುವ ಮನೆಗಳನ್ನು ಬಾಡಿಗೆ ನೀಡಿದ್ದರು. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಮೂರನೇ ಮಹಡಿಯ ಅಡುಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿದ ಪರಿಣಾಮ ಧಗ-ಧಗನೇ ಹೊತ್ತಿ ಉರಿದಿದೆ. ಹೀಗಾಗಿ, ಹೊರ ಬರಲಾಗದೆ ನಾಲ್ವರು ಅಲ್ಲಿಯೇ ಸಿಲುಕಿದ್ದರು.

ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸುಬ್ರಮಣ್ಯ ನಗರ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ನಡೆಸಿ, ಮೂವರನ್ನು ರಕ್ಷಿಸಿದ್ದಾರೆ. ಅಗ್ನಿ ನಂದಿಸಿದರೂ ದುರಾದೃಷ್ಟವಶಾತ್ ಸವಿತಾ ಅವರು ಉಸಿರುಗಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಗ್ನಿ-ಅವಘಡದಲ್ಲಿ ಗಾಯಗೊಂಡಿದ್ದ ಮೂವರನ್ನು ಖಾಸಗಿ ಆಸ್ಪತ್ರೆ ಸೇರಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಏಕಾಏಕಿ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ. ಶಾರ್ಟ್ ಸರ್ಕಿಟ್​ನಿಂದ ಅಗ್ನಿ ಅವಾಂತರ ಸಂಭವಿಸಿರಬಹುದಾ? ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಾರ್ಡ್‌ವೇರ್ ಗೋದಾಮಿನಲ್ಲಿ ಅಗ್ನಿ‌ ಅವಘಡ (ಬೆಂಗಳೂರು) : ಹಾರ್ಡ್‌ವೇರ್ ಗೋದಾಮು ಅಗ್ನಿಗಾಹುತಿಯಾದ ಘಟನೆ ಚಿಕ್ಕಪೇಟೆ ವ್ಯಾಪ್ತಿಯ ಕುಂಬಾರ ಪೇಟೆಯಲ್ಲಿ ಇತ್ತೀಚಿಗೆ ನಡೆದಿತ್ತು. ಲಕ್ಷಾಂತರ ರೂಪಾಯಿ ಮೌಲ್ಯದ ಹಾರ್ಡ್‌ವೇರ್ ಮತ್ತಿತರ ವಸ್ತುಗಳು ಬೆಂಕಿಗಾಹುತಿಯಾಗಿದ್ದವು. ಅಕ್ಕಪಕ್ಕದ ಕೆಲ ಅಂಗಡಿಗಳಿಗೂ ಹಾನಿಯಾಗಿತ್ತು.

ಭಾರೀ ಪ್ರಮಾಣದಲ್ಲಿ ಹೊಗೆ ವ್ಯಾಪಿಸುತ್ತಿದ್ದಂತೆ ಎಚ್ಚೆತ್ತ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ನಾಲ್ಕು ವಾಹನಗಳೊಂದಿಗೆ ಸ್ಥಳಕ್ಕಾಗಮಿಸಿದ್ದ ಅಗ್ನಿಶಾಮಕದಳ ಸುಮಾರು ಎರಡು ಗಂಟೆ ಶ್ರಮಿಸಿ ಬೆಂಕಿ ನಿಯಂತ್ರಿಸಿದ್ದರು.

'ಒಂದು‌ ಅಂಗಡಿಯಲ್ಲಿ ಮೊದಲು ಕಾಣಿಸಿಕೊಂಡ ಬೆಂಕಿ ನಂತರ ಅಕ್ಕಪಕ್ಕದ‌ ಅಂಗಡಿಗಳಿಗೂ ವ್ಯಾಪಿಸಿತ್ತು. ತಕ್ಷಣ ಕಟ್ಟಡದ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದೆವು. ಅಂಗಡಿಗಳಲ್ಲಿದ್ದ ಹಾರ್ಡ್‌ವೇರ್ ವಸ್ತುಗಳು, ಡೆಕೋರೇಷನ್ ಸಾಮಗ್ರಿ, ಪ್ಲಾಸ್ಟಿಕ್ ವಸ್ತುಗಳು ಸುಟ್ಟು ಹೋಗಿವೆ. ಕಟ್ಟಡದಲ್ಲಿ ಯಾರೂ ಇರಲಿಲ್ಲ. ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಬೆಂಕಿ ಅನಾಹುತ ಆಗಿರಬಹುದು' ಎಂದು ಕಟ್ಟಡದ ಮಾಲೀಕ ವಿನೋದ್ ತಿಳಿಸಿದ್ದರು.

ಇದನ್ನೂ ಓದಿ : ಬೆಂಗಳೂರು: ಹಾರ್ಡ್‌ವೇರ್ ಗೋದಾಮಿನಲ್ಲಿ ಅಗ್ನಿ‌ ಅವಘಡ - FIRE BREAKS OUT IN HARDWARE SHOP