ಮಗಳನ್ನ ಮದುವೆ ಮಾಡಿಕೊಡಲು ಒಪ್ಪದಿದ್ದಕ್ಕೆ ತಾಯಿಗೆ ಬೆಂಕಿಯಿಟ್ಟ ಪ್ರಕರಣ; ಚಿಕಿತ್ಸೆ ಫಲಕಾರಿಯಾಗದೇ ತಾಯಿ ಸಾವು
ಕಿಡಿಗೇಡಿಯ ಕೃತ್ಯದಿಂದ ಗಾಯಗೊಂಡಿದ್ದ ಮಹಿಳೆ, ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

Published : January 7, 2026 at 7:48 PM IST
ಬೆಂಗಳೂರು: ಮಗಳನ್ನ ಮದುವೆ ಮಾಡಿಕೊಡಲು ಸಮ್ಮತಿಸದ್ದಕ್ಕೆ ಕಿಡಿಗೇಡಿಯೋರ್ವ ಬೆಂಕಿಯಿಟ್ಟಿದ್ದ ಆಕೆಯ ತಾಯಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೂರು ವಾರಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗೀತಾ ಮೃತಪಟ್ಟ ದುರ್ದೈವಿ.
ಡಿಸೆಂಬರ್ 23 ರಂದು ಭೋವಿ ಕಾಲೋನಿಯಲ್ಲಿ ಘಟನೆ ನಡೆದಿತ್ತು. ಅಭಿಮನ್ಯು ಮುತ್ತು ಎಂಬಾತನ ಕೃತ್ಯದಿಂದ ಗಂಭೀರವಾಗಿ ಗಾಯಗೊಂಡಿದ್ದ ಗೀತಾ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಇಂದು ಗೀತಾ ಮೃತಪಟ್ಟಿದ್ದಾರೆ.
ನಡೆದಿದ್ದೇನು..? ಭೋವಿ ಪಾಳ್ಯದಲ್ಲಿ ಕಿರಾಣಿ ಅಂಗಡಿ ಹೊಂದಿದ್ದ ಗೀತಾ, ತಮ್ಮ ಮಗಳೊಂದಿಗೆ ವಾಸವಿದ್ದರು. ಗೀತಾ ಅವರ ಅಂಗಡಿ ಸಮೀಪದಲ್ಲಿಯೇ ಟೀ ಶಾಫ್ ಹೊಂದಿದ್ದ ಮುತ್ತು ಅವರೊಂದಿಗೆ ಸಲುಗೆಯಿಂದಿದ್ದ. ಇತ್ತೀಚಿಗೆ ಮುತ್ತು ಸಹ ಗೀತಾ ಅವರ ಮನೆಯಲ್ಲಿಯೇ ವಾಸಿಸಲಾರಂಭಿಸಿದ್ದ. ಈ ನಡುವೆ ಗೀತಾ ಅವರ 19 ವರ್ಷದ ಮಗಳನ್ನ ತನಗೆ ಮದುವೆ ಮಾಡಿಕೊಡುವಂತೆ ಮುತ್ತು ಪೀಡಿಸಲಾರಂಭಿಸಿದ್ದ. ಆದರೆ, ಮುತ್ತುನ ಕೋರಿಕೆಯನ್ನ ಗೀತಾ ನಿರಾಕರಿಸಿದ್ದರು. ಡಿಸೆಂಬರ್ 24ರಂದು ರಾತ್ರಿ ಸಹ ಇದೇ ವಿಚಾರವಾಗಿ ಗೀತಾ ಹಾಗೂ ಮುತ್ತುನ ನಡುವೆ ಮನೆಯಲ್ಲಿ ಗಲಾಟೆಯಾಗಿತ್ತು. ಇದರಿಂದ ಸಿಟ್ಟಿಗೆದ್ದ ಮುತ್ತು, ಗೀತಾ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಬಳಿಕ ಮನೆಯಿಂದ ಪರಾರಿಯಾಗಿದ್ದ.
ಆರೋಪಿಯ ವಿರುದ್ಧ ಹತ್ಯೆ ಯತ್ನದ ಪ್ರಕರಣ ದಾಖಲಿಸಿಕೊಂಡಿದ್ದ ಬಸವೇಶ್ವರ ನಗರ ಠಾಣೆ ಪೊಲೀಸರು, ಬಳಿಕ ಆತನನ್ನ ಬಂಧಿಸಿದ್ದರು.
ಇದನ್ನೂ ಓದಿ:
- ಬೆಂಗಳೂರು: ತಾಯಿ ಮೇಲಿನ ಸಿಟ್ಟಿಗೆ 6 ವರ್ಷದ ಬಾಲಕಿಯನ್ನ ಅಪಹರಿಸಿ ಹತ್ಯೆ
- ಬೆಂಗಳೂರು: ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದ ತಾಯಿಗೆ ಬೆಂಕಿಯಿಟ್ಟ ಕಿಡಿಗೇಡಿ
ಪ್ರತ್ಯೇಕ ಘಟನೆಯಲ್ಲಿ ಅಪಹರಣಕ್ಕೊಳಗಾಗಿದ್ದ ಆರು ವರ್ಷದ ಬಾಲಕಿ ಶವವಾಗಿ ಪತ್ತೆಯಾದ ಘಟನೆ ವೈಟ್‌ಫೀಲ್ಡ್ ಠಾಣೆ ವ್ಯಾಪ್ತಿಯಲ್ಲಿ ಇಂದು ವರದಿಯಾಗಿದೆ. ಪಶ್ಚಿಮ ಬಂಗಾಳ ಮೂಲದ ಷಹನಾಜ್ ಖಾತುಂ ಹತ್ಯೆಯಾದ ಬಾಲಕಿ. ಪ್ಲಾಸ್ಟಿಕ್ ರೋಪ್ ಬಳಸಿ ಉಸಿರುಗಟ್ಟಿಸಿ ಹತ್ಯೆಯಾದ ಸ್ಥಿತಿಯಲ್ಲಿ ನಲ್ಲೂರುಹಳ್ಳಿ ಬಳಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಬಾಲಕಿಯ ಪೋಷಕರು ವಾಸವಿದ್ದ ಪ್ರದೇಶದಲ್ಲಿಯೇ ನೆಲೆಸಿದ್ದ ಕುಟುಂಬದ ವ್ಯಕ್ತಿಯೊಬ್ಬರ ವಿರುದ್ಧ ಶಂಕೆ ವ್ಯಕ್ತವಾಗಿದ್ದು, ಆರೋಪಿಗಾಗಿ ಹುಡುಕಾಟ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಬಾಲಕಿ ಪೋಷಕರು ನಲ್ಲೂರುಹಳ್ಳಿ ಬಳಿ ಕೂಲಿ ಕೆಲಸ ಮಾಡಿಕೊಂಡು ವಾಸವಿದ್ದರು. ಅವರೊಂದಿಗೆ ವಾಸವಿದ್ದ ಪಶ್ಚಿಮ ಬಂಗಾಳ ಮೂಲದ ಮತ್ತೊಂದು ಕುಟುಂಬ ಹಾಗೂ ಬಾಲಕಿಯ ತಾಯಿಯ ನಡುವೆ ಇತ್ತೀಚಿಗೆ ಜಗಳವಾಗಿತ್ತು. ಈ ನಡುವೆ ಜನವರಿ 5ರಂದು ಬೆಳಗ್ಗೆ ಮನೆ ಬಳಿ ಆಟವಾಡುತ್ತಿದ್ದ ಬಾಲಕಿ ನಾಪತ್ತೆಯಾಗಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

