ಜಾನುವಾರು ಕಟ್ಟುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ: ವೃದ್ಧನಿಗೆ ಗಂಭೀರ ಗಾಯ
ಜಾನುವಾರು ಕಟ್ಟುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ಹಾಸನ ತಾಲೂಕಿನ ಕಣಗುಪ್ಪೆ ಗ್ರಾಮದಲ್ಲಿ ನಡೆದಿದೆ.

Published : July 9, 2026 at 5:13 PM IST
ಹಾಸನ (ಬೇಲೂರು): ಜಾನುವಾರುಗಳನ್ನು ಕಟ್ಟುತ್ತಿದ್ದ ವೇಳೆ ಒಂಟಿ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದ ಪರಿಣಾಮ, ರೈತರೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಕಣಗುಪ್ಪೆ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಗ್ರಾಮದ ನಿವಾಸಿ ಸಿದ್ದಶೆಟ್ಟಿ (65) ಗಾಯಗೊಂಡ ರೈತ. ಎಂದಿನಂತೆ ತಮ್ಮ ಮನೆಯ ಸಮೀಪದ ತೋಟದಲ್ಲಿ ಜಾನುವಾರುಗಳನ್ನು ಕಟ್ಟುತ್ತಿದ್ದ ವೇಳೆ ಗ್ರಾಮದೊಳಗೆ ನುಗ್ಗಿದ್ದ ಒಂಟಿಸಲಗ ಏಕಾಏಕಿ ಅವರ ಮೇಲೆ ದಾಳಿ ನಡೆಸಿದೆ. ಈ ವೇಳೆ, ಆನೆಯು ಸೊಂಡಿಲಿನಿಂದ ಎತ್ತಿ ಬಿಸಾಡಿದ ಪರಿಣಾಮ ಸಿದ್ದಶೆಟ್ಟಿ ಅವರ ಹೊಟ್ಟೆ ಹಾಗೂ ಬಲಗೈಗೆ ಗಂಭೀರ ಗಾಯಗಳಾಗಿವೆ.
ಸ್ಥಳೀಯರು ಕೂಡಲೇ ಗಾಯಾಳುವನ್ನು ರಕ್ಷಿಸಿ ಬೇಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿ, ಘಟನೆ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.
ಗಾಯಗೊಂಡ ರೈತ ಸಿದ್ದಶೆಟ್ಟಿ ಅವರು ಮಾತನಾಡಿದ್ದು, 'ದನಗಳನ್ನು ಕಟ್ಟಲು ಹೋಗಿದ್ದೆ. ಆಗ ಹಸುಗಳು ನೆಗೆದವು. ಆಗ ನಾನು ತಿರುಗಿ ನೋಡಿದಾಗ ಆನೆ ನನ್ನ ಹತ್ತಿರಕ್ಕೆ ಬಂದಿತ್ತು. ನಾನು ಈ ಕಡೆ ತಿರುಗುವಾಗ ಏಕಾಏಕಿ ಬಂದು ಗುದ್ದಿ ಕೆಡವಿತು. ಆಗ ದನಗಳು ನನ್ನನ್ನು ಸ್ವಲ್ಪ ಮುಂದಕ್ಕೆ ಎಳೆದವು. ಇಲ್ಲದಿದ್ದರೆ ನನ್ನ ಕಾಲು ಮುರಿಯುತ್ತಿತ್ತು. ನಾನು ಕೂಗಾಡಿದೆ. ಜನರು ಕೂಗಾಡಿದ್ದರಿಂದಾಗಿ ಎಳೆದು ಬಿಸಾಡಿತು' ಎಂದಿದ್ದಾರೆ.
ಗಾಯಾಳುವಿನ ಪುತ್ರ ಲೋಕೇಶ್ ಅವರು ಮಾತನಾಡಿ, 'ಕಳೆದ ಮೂರು ದಿನಗಳಿಂದ ಈ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದ ಕಾರಣ ತೋಟದ ಕಡೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಇಂದು ಬೆಳಗ್ಗೆ ಮಳೆ ಕೊಂಚ ಕಡಿಮೆಯಾದ ಹಿನ್ನೆಲೆಯಲ್ಲಿ ನಮ್ಮ ತಂದೆ ಮನೆ ಸಮೀಪದ ತೋಟಕ್ಕೆ ದನಗಳನ್ನು ಕಟ್ಟಲು ತೆರಳಿದ್ದರು. ಇದೇ ವೇಳೆ, ಗ್ರಾಮದೊಳಗೆ ಬಂದಿದ್ದ ಒಂಟಿ ಕಾಡಾನೆ ಏಕಾಏಕಿ ದಾಳಿ ನಡೆಸಿತ್ತು. ದಾಳಿಯಿಂದ ನಮ್ಮ ತಂದೆಯ ಹೊಟ್ಟೆ ಹಾಗೂ ಬಲಗೈಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ' ಎಂದಿದ್ದಾರೆ.
ಇಟಿಎಫ್ ಅಧಿಕಾರಿ ತ್ರಿಮೂರ್ತಿ ಅವರು ಮಾತನಾಡಿದ್ದು, 'ಕಣಗುಪ್ಪೆ ಗ್ರಾಮದಲ್ಲಿ ಇಂದು ಬೆಳಗ್ಗೆ ಕಾಡಾನೆಯೊಂದು ದಿಢೀರ್ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಗಾಯಗೊಂಡಿರುವ ಘಟನೆ ಸಂಭವಿಸಿದೆ. ಇಂದು ಬೆಳಗ್ಗೆ ಸುಮಾರು 9:45ರ ಅವಧಿಯಲ್ಲಿ ಗ್ರಾಮದ ನಿವಾಸಿಯಾದ ಸಿದ್ದಶೆಟ್ಟಿ ಎಂಬುವರ ಮೇಲೆ ಕಾಡಾನೆ ದಾಳಿ ಮಾಡಿದೆ. ಅದೃಷ್ಟವಶಾತ್ ಸಿದ್ದಶೆಟ್ಟಿ ಅವರಿಗೆ ಕೇವಲ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸದ್ಯ ಗಾಯಾಳುವನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗುತ್ತಿದೆ' ಎಂದು ತಿಳಿಸಿದ್ದಾರೆ.
ಈ ಭಾಗದಲ್ಲಿ ಸುಮಾರು 12 ಆನೆಗಳ ಹಿಂಡು ಬೀಡುಬಿಟ್ಟಿದೆ. ಆದರೆ, ಈ ಆನೆಗಳ ಗುಂಪಿನಿಂದ ಬೇರ್ಪಟ್ಟ ಒಂಟಿ ಆನೆಯೊಂದು ಗ್ರಾಮದೊಳಗೆ ನುಗ್ಗಿದ್ದರಿಂದ ಈ ಅವಾಂತರ ಸೃಷ್ಟಿಯಾಗಿದೆ. ಸದ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದಿದ್ದಾರೆ.
ವಸತಿ ಪ್ರದೇಶದ ಸಮೀಪದಲ್ಲೇ ಕಾಡಾನೆ ದಾಳಿ ನಡೆಸಿರುವ ಘಟನೆ ಗ್ರಾಮಸ್ಥರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳ ಸಂಚಾರ ಹೆಚ್ಚಾಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಿ, ಮಾನವ–ವನ್ಯಜೀವಿ ಸಂಘರ್ಷ ತಡೆಗಟ್ಟಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಗ್ರಾಮಸ್ಥರ ಸುರಕ್ಷತೆಗೆ ಅಗತ್ಯ ಮುನ್ನೆಚ್ಚರಿಕಾ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟದಲ್ಲಿ ನಿಲ್ಲಿಸಿದ್ದ ಕಾರು, ಕೈಗಾಡಿ ಮೇಲೆ ಕಾಡಾನೆ ದಾಳಿ

