ETV Bharat / state

ಆಸ್ತಿಗಾಗಿ ಪತಿ ಕೊಲೆ ಮಾಡಿಸಿದ ಪತ್ನಿ! ಪುತ್ರ ಸೇರಿ ನಾಲ್ವರ ಬಂಧನ: ಕೊಲೆ ಕೇಸ್ ಬೇಧಿಸಿದ ಕಿತ್ತೂರು ಪೊಲೀಸರು

ಸಂಚು ರೂಪಿಸಿ, ಪಾರ್ಟಿ ಮಾಡೋಣ ಎಂದು ಆರೋಪಿಗಳಾದ ಮಲ್ಲೇಶ ಮತ್ತು ಆತನ ಸ್ನೇಹಿತ ಮುದುಕಪ್ಪ ಜಮೀನಿಗೆ ಕರೆದೊಯ್ದು ಕಲ್ಮೇಶ ಕೋಟಿ ಎಂಬಾತನನ್ನು ಹತ್ಯೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

MURDER CASE
ಬಂಧಿತ ಆರೋಪಿಗಳು (ETV Bharat)
author img

By ETV Bharat Karnataka Team

Published : February 26, 2026 at 2:46 PM IST

2 Min Read
Choose ETV Bharat

ಬೆಳಗಾವಿ: ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಕಿತ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಪತಿ ಹೆಸರಲ್ಲಿದ್ದ ಜಮೀನು ಕಬಳಿಸಲು ಪತ್ನಿಯೇ ಕೊಲೆ ಮಾಡಿಸಿದ್ದು ಪೊಲೀಸರ ತನಿಖೆಯಲ್ಲಿ ಸ್ಪಷ್ಟವಾಗಿದೆ. ಪ್ರಕರಣದಲ್ಲಿ ಒಟ್ಟು ನಾಲ್ವರು ಆರೋಪಿಗಳ ಬಂಧನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿರೇನಂದಿಹಳ್ಳಿ ಗ್ರಾಮದ ಕಲ್ಮೇಶ ಕೋಟಿ(50) ಕೊಲೆಯಾಗಿದ್ದ ವ್ಯಕ್ತಿ. ಆಸ್ತಿಗಾಗಿ ಪತ್ನಿ ಮತ್ತು ಮಗನೇ ಸಂಚು ರೂಪಿಸಿ ಕೊಲೆ ಮಾಡಿಸಿದ್ದು, ಪೊಲೀಸರ ತನಿಖೆಯಿಂದ ಕಂಡುಬಂದಿದೆ. ಹಿರೇನಂದಿಹಳ್ಳಿ ಗ್ರಾಮದ ಮಲ್ಲೇಶ‌ ಅಂಬಣ್ಣವರ(32), ಮಲ್ಲೇಶ ಸ್ನೇಹಿತ ಮುದುಕಪ್ಪ ಕೊಳೇಕರ್(30), ಕಲ್ಮೇಶ ‌ಪತ್ನಿ ಕಸ್ತೂರಿ ಕೋಟಿ(42) ಹಾಗೂ ಕಲ್ಮೇಶ ಪುತ್ರ ಕಿರಣ್ ಕೋಟಿ(25) ಬಂಧಿತ ಆರೋಪಿಗಳು.

ಪ್ರಕರಣ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾಹಿತಿ ನೀಡುತ್ತಿರುವುದು (ETV Bharat)

ಹಿರೇನಂದಿಹಳ್ಳಿ ಗ್ರಾಮದ ಹೊರವಲಯದ ಮೆಕ್ಕೆಜೋಳದ ಗದ್ದೆಯಲ್ಲಿ ಫೆ.20ರಂದು ಕಲ್ಮೇಶನ ಶವ ಪತ್ತೆ ಆಗಿತ್ತು. ಕೊಳೆತ ಮತ್ತು ಭಯಾನಕ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದರಿಂದ ಗುರುತು ಸಿಕ್ಕಿರಲಿಲ್ಲ. ಘಟನೆಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದರು‌. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಕಿತ್ತೂರು ಪೊಲೀಸರು ಶವ ಗುರುತು ಪತ್ತೆ ಹಚ್ಚಿದ್ದರು. ಆರೋಪಿಗಳಿಗೆ ಬಲೆ ಬೀಸಿ ನಾಲ್ವರ ಹೆಡೆಮುರಿ ಕಟ್ಟಿದ್ದಾರೆ.

ತುಮಕೂರಿನ ಹೋಮ್ ಕೇರ್​ನಲ್ಲಿ ಕೆಲಸ ಮಾಡುತ್ತಿದ್ದ ಕಲ್ಮೇಶ ಕೋಟಿ ಜಾತ್ರೆಗೆ ಅಂತಾ ಊರಿಗೆ ಬಂದಿದ್ದರು. ಈ ವೇಳೆ ಸಂಚು ರೂಪಿಸಿ, ಪಾರ್ಟಿ ಮಾಡಿ ಬರೋಣ ಬಾ ಎಂದು ಆರೋಪಿಗಳಾದ ಮಲ್ಲೇಶ ಅಂಬಣ್ಣವರ ಮತ್ತು ಆತನ ಸ್ನೇಹಿತ ಮುದುಕಪ್ಪ ಕೊಳೇಕರ್ ಜಮೀನಿಗೆ ಕರೆದೊಯ್ದು ಹತ್ಯೆ ಮಾಡಿದ್ದರು. ಅದಾದ ಬಳಿಕ ತಮಗೇನೂ ಗೊತ್ತೇ ಇಲ್ಲ ಎನ್ನುವಂತೆ ಆರೋಪಿಗಳು ನಾಟಕ ಆಡಿದ್ದರು.‌ ಸದ್ಯ ಆಸ್ತಿ ಆಸೆಗೆ ಬಿದ್ದು ಆರೋಪಿಗಳು ಕೊಲೆ ಮಾಡಿ ಈಗ ಕಂಬಿ ಎಣಿಸುತ್ತಿದ್ದಾರೆ.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾಹಿತಿ ನೀಡಿದ್ದು, ದಾಂಪತ್ಯ ‌ಕಲಹದಿಂದ‌ 12 ವರ್ಷಗಳಿಂದ ಕಲ್ಮೇಶ ಮತ್ತು ಕಸ್ತೂರಿ ‌ದೂರವಾಗಿದ್ದರು. ಕುಂದಗೋಳ ತಾಲೂಕಿನ ತರ್ಲಘಟ್ಟದ ಗ್ರಾಮದ ತವರು ಮನೆಯಲ್ಲಿ ಕಸ್ತೂರಿ ವಾಸವಿದ್ದರು. ದಂಪತಿಗೆ ಓರ್ವ ಪುತ್ರ ಮತ್ತು ಓರ್ವ ಪುತ್ರಿ ಇದ್ದಾರೆ. 5 ವರ್ಷಗಳ ‌ಹಿಂದೆ ಸಾಲ ಮಾಡಿ ಕಸ್ತೂರಿ ಪುತ್ರಿಯ ಮದುವೆ ಮಾಡಿದ್ದರು. ಪುತ್ರಿಯ ಮದುವೆಗೆ ಮಲ್ಲೇಶ‌ನ ಕಡೆ 9 ಲಕ್ಷ ಸಾಲ ಪಡೆದಿದ್ದರು. ಕಲ್ಮೇಶ‌ಗೆ ಸೇರಿದ ಮೂರು ಎಕರೆ ಪಿತ್ರಾರ್ಜಿತ ಆಸ್ತಿ ಅಡ ಇಟ್ಟುಕೊಂಡು ಮಲ್ಲೇಶ ಸಾಲ ಕೊಟ್ಟಿದ್ದ. ಸುಮಾರು ವರ್ಷ ಆದರೂ ಜಮೀನು ಬರೆದುಕೊಡುತ್ತಿಲ್ಲ ಮತ್ತು ಕೊಟ್ಟ ಸಾಲ ಕೂಡ ಮರಳಿಸುತ್ತಿಲ್ಲ ಅಂತಾ‌ ಪದೇ ಪದೇ ಕಸ್ತೂರಿ ಮೇಲೆ ಮಹೇಶ ಒತ್ತಡ ಹಾಕುತ್ತಿದ್ದ.

ಇದಕ್ಕೆ ಕಸ್ತೂರಿ, ಈಗ ನಮಗೆ ಹಣ ಕೊಡೋಕೆ ಆಗುವುದಿಲ್ಲ. ಆದರೆ, ಫೆ.15ರಂದು ಹಿರೇನಂದಿಹಳ್ಳಿಗೆ ಜಾತ್ರೆಗೆ ನನ್ನ ಗಂಡ ಕಲ್ಮೇಶ ಬರುತ್ತಾರೆ. ಆ ವೇಳೆ ಅವನನ್ನು ಹತ್ಯೆ ಮಾಡಿದರೆ, ಜಮೀನು ನನ್ನ ಹೆಸರಿಗೆ ಬರುತ್ತದೆ. ಆಗ ನಿಮಗೆ ನಾನು ಹಣ ಕೊಡುತ್ತೇನೆ ಅಂತಾ ಹೇಳುತ್ತಾರೆ. ಕಲ್ಮೇಶನ ಕೊಲೆ ಮಾಡಲು ಮಹೇಶ ಮತ್ತು ಆತನ ಸ್ನೇಹಿತ ಮುದುಕಪ್ಪ ಇಬ್ಬರು ಪ್ಲಾನ್ ಮಾಡುತ್ತಾರೆ. ಫೆ. 16ರಂದು ರಾತ್ರಿ 12 ಗಂಟೆಗೆ ಪಾರ್ಟಿ ಮಾಡೋಣ ಬಾ ಅಂತಾ ಇಬ್ಬರು ಕಲ್ಮೇಶನನ್ನು ಕರೆದುಕೊಂಡು ಹೋಗುತ್ತಾರೆ.‌ ಮೊದಲಿಗೆ ಪಾರ್ಟಿ ಮಾಡಿ ಬಳಿಕ ಅಲ್ಲಿಯೇ ಹಗ್ಗದಿಂದ ಕತ್ತು ಹಿಸುಕಿ ಹತ್ಯೆ ಮಾಡುತ್ತಾರೆ. ನಮ್ಮ ಜಮೀನಿನಲ್ಲೇ ಶವ ಬಿಟ್ಟರೆ ನಮ್ಮ‌ ಮೇಲೆ ಅನುಮಾನ ಬರುತ್ತದೆ ಅಂತಾ ಬೇರೆಯವರ ಹೊಲದಲ್ಲಿ ಶವ ಬಿಸಾಕಿ ಆರೋಪಿಗಳು ಪರಾರಿಯಾಗಿದ್ದರು ಎಂದು ನಡೆದ ಘಟನೆಯನ್ನು ಕೆ.ರಾಮರಾಜನ್ ವಿವರಿಸಿದರು.

ಇದನ್ನೂ ಓದಿ: ಆಸ್ತಿಗಾಗಿ 6 ವರ್ಷದ ಬಾಲಕನ ಕೊಲೆ: ಘಟನೆಯ ಸತ್ಯ ಬಿಚ್ಚಿಟ್ಟ ಮೂವರು ಮಕ್ಕಳು, ದೊಡ್ಡಪ್ಪನಿಗೆ ಜೀವಾವಧಿ ಶಿಕ್ಷೆ