ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಜೊಲ್ಲೆ - ಜಾರಕಿಹೊಳಿ ಬ್ರದರ್ಸ್ ಒಂದಾಗಿದ್ದೇಕೆ?
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣಾ ಕಣ ರಂಗೇರಿದೆ. ಇದರ ನಡುವೆ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಜಾರಕಿಹೊಳಿ ಸಹೋದರರ ಜೊತೆ ಕೈ ಜೋಡಿಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Published : October 15, 2025 at 6:34 PM IST
ವರದಿ - ಶಿವರಾಜ್ ನೇಸರಗಿ
ಚಿಕ್ಕೋಡಿ(ಬೆಳಗಾವಿ): ರಾಜಕೀಯದಲ್ಲಿ ಯಾರೂ ಶಾಶ್ವತವಾಗಿ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ ಎಂಬ ಮಾತಿದೆ. ಇದಕ್ಕೆ ಬೆಳಗಾವಿ ಜಿಲ್ಲೆಯ ಡಿಸಿಸಿ ಬ್ಯಾಂಕ್ ಚುನಾವಣೆ ನೈಜ ಉದಾಹರಣೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಇದೀಗ ಜಾರಕಿಹೊಳಿ ಸಹೋದರರ ಜೊತೆ ಕೈಜೋಡಿಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಅಕ್ಟೋಬರ್ 19ರಂದು ನಡೆಯಲಿರುವ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ನಿಪ್ಪಾಣಿ ಸಹಕಾರ ಕ್ಷೇತ್ರದಿಂದ ಸ್ಪರ್ಧಿಸಿರುವ ಜೊಲ್ಲೆಗೆ ಜಾರಕಿಹೊಳಿ ಬ್ರದರ್ಸ್ ಆಪ್ತ ಉತ್ತಮ ಪಾಟೀಲ್ ಎದುರಾಳಿಯಾಗಿದ್ದಾರೆ. ಒಂದು ಕಡೆ ಜಾರಕಿಹೊಳಿ ಬ್ರದರ್ಸ್ ಜೊಲ್ಲೆಗೆ ಪರವಾಗಿ ನಿಂತಿದ್ದಾರೆ ಎನ್ನಲಾಗುತ್ತಿದ್ದರೂ ಸಹ ಅವರ ಆಪ್ತ ಉತ್ತಮ ಪಾಟೀಲ್ ಕಣಕ್ಕಿಳಿದಿದ್ಯಾಕೆ ಎಂಬ ಪ್ರಶ್ನೆ ಮೂಡಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ ವಿರುದ್ಧ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಶರದ್ ಪವಾರ್ ಬಣ) ದಿಂದ ಸ್ಪರ್ಧಿಸಿದ್ದ ಉತ್ತಮ ಪಾಟೀಲ್ ಕೇವಲ ಏಳು ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದರು. ಸಹಕಾರಿ ರಂಗ, ಉದ್ಯಮ ಕ್ಷೇತ್ರದಿಂದ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ಉತ್ತಮ ಪಾಟೀಲ್, ಶಶಿಕಲಾ ಜೊಲ್ಲೆಗೆ ತೀವ್ರ ಪೈಪೋಟಿ ನೀಡಿದ್ದರು. ಹೀಗಾಗಿ ಉತ್ತಮ ಪಾಟೀಲ್ ರಾಜಕೀಯ ಭವಿಷ್ಯಕ್ಕೆ ಹಿನ್ನಡೆಯಾಗುವಂತೆ ಮಾಡಲು ಜೊಲ್ಲೆ, ಜಾರಕಿಹೊಳಿ ಬ್ರದರ್ಸ್ ಜೊತೆ ಕೈಜೋಡಿಸುವ ಮೂಲಕ ಹೊಸ ರಾಜಕೀಯ ದಾಳ ಉರುಳಿಸಿದ್ದಾರಾ ಎಂಬ ಚರ್ಚೆ ಜಿಲ್ಲೆಯಲ್ಲಿ ಜೋರಾಗಿದೆ.
ತಮ್ಮದೇ ಉದ್ಯಮ ಸಾಮ್ರಾಜ್ಯ ಹಾಗೂ ಸಹಕಾರಿ ಬ್ಯಾಂಕ್ಗಳನ್ನು ಹೊಂದಿರುವ ಉತ್ತಮ ಪಾಟೀಲ್ ಕೂಡ ನಿಪ್ಪಾಣಿಯಲ್ಲಿ ಅಪಾರ ಜನಮನ್ನಣೆ ಗಳಿಸಿರುವ ನಾಯಕರಾಗಿದ್ದಾರೆ. ಇಂಥ ಸಂದರ್ಭದಲ್ಲಿ ದೂರದೃಷ್ಟಿ ಹಾಗೂ ರಾಜಕೀಯ ಮುಂದಾಲೋಚನೆಯಿಂದ ಹೇಗಾದರೂ ಮಾಡಿ ಎದುರಾಳಿಯನ್ನು ಕಟ್ಟಿ ಹಾಕಿ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲೇಬೇಕೆಂಬ ಹಠಕ್ಕೆ ಬಿದ್ದವರಂತೆ ಕಾಣುತ್ತಿರುವ ಜೊಲ್ಲೆ, ಡಿಸಿಸಿ ಬ್ಯಾಂಕ್ ನೆಪದಿಂದಲಾದರೂ ನಿಪ್ಪಾಣಿ ಕ್ಷೇತ್ರದಲ್ಲಿ ನೆಲೆಯನ್ನು ಭದ್ರಪಡಿಸಿಕೊಳ್ಳಲು ಜಾರಕಿಹೊಳಿ ಸಹೋದರರ ರಕ್ಷಣೆ ಪಡೆಯಲು ಮುಂದಾಗಿದ್ದಾರೆ. ಈ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಯೂ ಸಹಕಾರ ನೀಡಬೇಕೆಂದು ಜಿಲ್ಲೆಯ ಪ್ರಬಲ ಕುಟುಂಬಕ್ಕೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಅಸ್ತಿತ್ವ ಇಲ್ಲದ, ನೆರೆಯ ಮಹಾರಾಷ್ಟ್ರದ ಎನ್ಸಿಪಿ ಪಕ್ಷದಿಂದ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಪರಾಭವಗೊಂಡಿರುವ ಉತ್ತಮ ಪಾಟೀಲ್ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಶಾಸಕರಾಗುವುದು ನಿಶ್ಚಿತ ಎಂಬುದನ್ನು ಅರಿತಿರುವ ಜೊಲ್ಲೆ ಕುಟುಂಬ, ಇರುವ ಒಂದು ಶಾಸಕ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಈಗಿನಿಂದಲೇ ಅಡಿಪಾಯ ಹಾಕುತ್ತಿದೆಯಾ? ಎಂಬ ಪ್ರಶ್ನೆ ಮೂಡಿದೆ.
ಲೆಕ್ಕಾಚಾರದಂತೆ ಡಿಸಿಸಿ ಬ್ಯಾಂಕ್ ಚುನಾವಣೆಯ ಅಖಾಡಕ್ಕಿಳಿದಿರುವ ಬಾಲಚಂದ್ರ ಜಾರಕಿಹೊಳಿ, ಸಚಿವ ಸತೀಶ್ ಜಾರಕಿಹೊಳಿ ಹಾಗೂ ರಮೇಶ್ ಜಾರಕಿಹೊಳಿ ತಮ್ಮ ಬಣದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ನಿಪ್ಪಾಣಿ ವಿಚಾರದಲ್ಲಿ ಈ ಅವಿರೋಧ ಸಾಧ್ಯವಾಗದಿರುವುದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ರಾಜಕೀಯದ ಮಾಸ್ಟರ್ ಮೈಂಡ್ ಸತೀಶ್ ಜಾರಕಿಹೊಳಿ ಯಾವ್ಯಾವ ತಂತ್ರಗಾರಿಕೆ ನಡೆಸುತ್ತಿದ್ದಾರೆಂದು ಅರ್ಥ ಮಾಡಿಕೊಳ್ಳುವುದು ಕಷ್ಟ. ಆದರೂ ಸಹ ಸಹೋದರರು ಒಂದೆಡೆ ಸೇರಿ ಜೊಲ್ಲೆ ಪರವಾಗಿ ಒಗ್ಗಟ್ಟನ್ನು ಪ್ರದರ್ಶನ ಮಾಡುವ ಮೂಲಕ, ಅಣ್ಣಾಸಾಹೇಬ್ ಗೆಲುವಿಗೆ ರಣ ಕಹಳೆ ಮೊಳಗಿಸಿದ್ದಾರೆ.
ಶತ್ರುವಿನ ಶತ್ರು ಮಿತ್ರ ಎಂಬಂತೆ ಮಾಜಿ ಸಂಸದ ರಮೇಶ್ ಕತ್ತಿ ಜೊತೆಗೆ ಅಷ್ಟಕಷ್ಟೇ ಎನ್ನುವಂತೆ ಇದ್ದ ಜೊಲ್ಲೆ ಇದೀಗ ಜಾರಕಿಹೊಳಿ ಸಹೋದರರ ಜೊತೆ ಸೇರಿರುವುದು ಜಿಲ್ಲೆಯಲ್ಲಿ ನಾನಾ ರಾಜಕೀಯ ಸಮೀಕರಣಗಳಿಗೆ ನಾಂದಿ ಹಾಡಿದೆ. ಆದರೆ ತಮ್ಮದೇ ಆದ ಉದ್ಯಮ ಲೋಕ ಕಟ್ಟಿಕೊಂಡು, ಸಾವಿರಾರು ಜನರಿಗೆ ಕೆಲಸ ನೀಡುವ ಮೂಲಕ ಸಹಕಾರಿ ರಂಗದಲ್ಲಿ ಹೆಸರು ಮಾಡಿರುವ ಜೊಲ್ಲೆ ಗೇಮ್ ಪ್ಲಾನ್ ಅಂದುಕೊಂಡಂತೆ ಸಕ್ಸಸ್ ಆಗುತ್ತಾ? ಎಂಬ ಪ್ರಶ್ನೆ ಉದ್ಭವಿಸಿದೆ. ರಾಜಕೀಯ ಟೀಕೆ, ಟಿಪ್ಪಣಿಗಳಿಂದ ಚುನಾವಣೆ ಎದುರಿಸಿದ್ದ ಜೊಲ್ಲೆ ಇದೀಗ ವೈರಿಗಳೊಂದಿಗೆ ಗಳಸ್ಯ ಕಂಠಸ್ಯ ಎಂಬಂತೆ ರಕ್ಷಣೆ ಪಡೆದು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರಾ ಎಂಬುದನ್ನು ಕಾದು ನೋಡಬೇಕು.
ಇವುಗಳನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಘಟಾನುಘಟಿ ನಾಯಕರ ಪೈಪೋಟಿ ಯಾಕೆ?; ಇಲ್ಲಿದೆ ಈಟಿವಿ ಭಾರತದ ವಿಸ್ತೃತ ವರದಿ
ಬೆಳಗಾವಿ ಡಿಸಿಸಿ ಬ್ಯಾಂಕ್ ಕದನ: 9 ಮಂದಿ ಅವಿರೋಧ ಆಯ್ಕೆ, 7 ಕ್ಷೇತ್ರಗಳಲ್ಲಿ ಚುನಾವಣೆ!

