ETV Bharat / state

'ಕೆಎಸ್​ಐಸಿ ಫಿಲೇಚರ್ ಉಳಿಸಿ' ಹೋರಾಟ ಏಕೆ?: ಹಿನ್ನೋಟ

ಸಿದ್ದರಾಮಯ್ಯನವರ ಸ್ವಕ್ಷೇತ್ರ ವರುಣಾದಲ್ಲಿ ಬರುವ ಟಿ.ನರಸೀಪುರದ ರೇಷ್ಮೆ ನೂಲು ತೆಗೆಯುವ ಫ್ಯಾಕ್ಟರಿ ವ್ಯಾಪ್ತಿಯ 5.8 ಎಕರೆ ಭೂಮಿಯನ್ನು ಕ್ರೀಡಾಂಗಣ ನಿರ್ಮಾಣಕ್ಕೆ ಸರ್ಕಾರ ಹಸ್ತಾಂತರಿಸಲು ಹೊರಟಿರುವ ಕ್ರಮವನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದೆ.

KSIC Filature Factory Site
ಕೆಎಸ್​​ಐಸಿ ಫಿಲೇಚರ್ ಕಾರ್ಖಾನೆ ಜಾಗ (ETV Bharat)
author img

By ETV Bharat Karnataka Team

Published : February 27, 2026 at 9:22 PM IST

3 Min Read
Choose ETV Bharat

ಮೈಸೂರು: ಜಗತ್ ಪ್ರಸಿದ್ಧ ಮೈಸೂರು ರೇಷ್ಮೆ ಸೀರೆಯ ಖ್ಯಾತಿಗೆ ಇದನ್ನು ಅಪ್ಪಟ ರೇಷ್ಮೆ ನೂಲಿನಿಂದ ತಯಾರು ಮಾಡುತ್ತಿರುವುದೇ ಕಾರಣವಾಗಿದೆ. ಇಂತಹ ರೇಷ್ಮೆ ಸೀರೆಯನ್ನು ತಯಾರು ಮಾಡುವ ಮೈಸೂರು ಮತ್ತು ಚನ್ನಪಟ್ಟಣದ ಕೆಎಸ್​ಐಸಿ ಫ್ಯಾಕ್ಟರಿಗಳಿಗೆ ರೇಷ್ಮೆ ನೂಲನ್ನು ತಯಾರು ಮಾಡುವುದೇ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಟಿ.ನರಸೀಪುರದಲ್ಲಿರುವ ಕೆಎಸ್​ಐಸಿ ರೇಷ್ಮೆ ನೂಲು ತೆಗೆಯುವ ಫ್ಯಾಕ್ಟರಿ.

ಇಂತಹ ಕಾರ್ಖಾನೆ ಟಿ.ನರಸೀಪುರದ ಹೃದಯ ಭಾಗದಲ್ಲಿ 13.11 ಎಕರೆ ಪ್ರದೇಶದಲ್ಲಿದ್ದು, ಸರ್ಕಾರದ ಆದೇಶದಂತೆ ಈ ಜಾಗದ 5.8 ಎಕರೆ ಜಾಗವನ್ನು ಕ್ರೀಡಾಂಗಣ ನಿರ್ಮಾಣ ಮಾಡಲು ಕೆಎಸ್​ಐಸಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರ ಮಾಡಿದೆ. ಇದರಿಂದ ಇಲ್ಲಿ ಕೆಲಸ ಮಾಡುವ ನೌಕರರಿಗೆ ಈಗ ಕಾರ್ಖಾನೆ ಮುಚ್ಚುವ ಸ್ಥಿತಿ ಬರುವ ಆತಂಕದಿಂದ ಪ್ರತಿಭಟನೆಗಳು ನಡೆಯುತ್ತಿವೆ.

ಕಾರ್ಖಾನೆಯ ಇತಿಹಾಸ: ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1912ರಲ್ಲಿ ಈ ಕಾರ್ಖಾನೆಯನ್ನು ಸ್ಥಾಪನೆ ಮಾಡಿದ್ದು, ಟಿ.ನರಸೀಪುರದ ಕೆಎಸ್​ಐಸಿ ಫಿಲೇಚರ್ ಫ್ಯಾಕ್ಟರಿಯು ಮೈಸೂರು ಮತ್ತು ಚನ್ನಪಟ್ಟಣದ ರೇಷ್ಮೆ ಸೀರೆ ತಯಾರು ಮಾಡಲು ರೇಷ್ಮೆ ದಾರಗಳನ್ನು ಪೂರೈಕೆ ಮಾಡುತ್ತದೆ. ಒಂದು ವೇಳೆ ಟಿ.ನರಸೀಪುರದ ಫಿಲೇಚರ್ ಕಾರ್ಖಾನೆ ಬಂದ್ ಆದ್ರೆ ಮೈಸೂರು ರೇಷ್ಮೆ ಸೀರೆ ತಯಾರಿಕೆ ಬಂದ್ ಆಗುವ ಆತಂಕ ಇದೆ.

ಟಿ.ನರಸೀಪುರದ ಕೆಎಸ್​ಐಸಿ ಫಿಲೇಚರ್ ಕಾರ್ಖಾನೆಯಲ್ಲಿ ಒಂದು ದಿನಕ್ಕೆ 2,500 ಕೆಜಿ ರೇಷ್ಮೆ ನೂಲನ್ನು ಕಲ್ಲಿದ್ದಲಿನಲ್ಲಿ ಬೇಯಿಸಿ, ಸುಮಾರು 300ರಿಂದ 400 ಕೆಜಿ ರೇಷ್ಮೆ ನೂಲನ್ನು ತಯಾರಿಸಲಾಗುತ್ತದೆ. ಇದೇ ರೇಷ್ಮೆ ನೂಲಿನಿಂದ ಮೈಸೂರು ಮತ್ತು ಚನ್ನಪಟ್ಟಣದಲ್ಲಿ ಅಪ್ಪಟ ರೇಷ್ಮೆ ಸೀರೆಗಳು ತಯಾರಾಗುತ್ತವೆ.

ಕ್ರೀಡಾಂಗಣ ಬೇಡ ಎಂಬ ಹೋರಾಟ ಆರಂಭ: ಟಿ.ನರಸೀಪುರದ ಕೆಎಸ್​ಐಸಿ ಫಿಲೇಚರ್ ಕಾರ್ಖಾನೆಯ ಸ್ಥಳದಲ್ಲಿ ಕ್ರೀಡಾಂಗಣ ನಿರ್ಮಾಣ ಬೇಡ ಎಂದು ನೌಕರರು ಈಗಾಗಲೇ ಪ್ರತಿಭಟನೆ ನಡೆಸುತ್ತಿದ್ದು, ಇವರ ಪ್ರತಿಭಟನೆಗೆ ವಿವಿಧ ರಾಜಕೀಯ ಮುಖಂಡರುಗಳು, ಪರಿಸರವಾದಿಗಳು ಬೆಂಬಲ ಸೂಚಿಸಿದ್ದಾರೆ.

ಸಂಸದರಾದ ಯದುವೀರ್ ಒಡೆಯರ್ ಮುಖ್ಯಮಂತ್ರಿಗಳನ್ನ ಭೇಟಿ ಆಗಿ ಕ್ರೀಡಾಂಗಣ ಬೇಡ ಎಂದು ಮನವಿ ಪತ್ರ ಸಲ್ಲಿಸಿದ್ದು, ಇದರ ಜೊತೆಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ನಾಯಕರು ಟಿ.ನರಸೀಪುರದ ಫಿಲೇಚರ್ ಕಾರ್ಖಾನೆ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾ ನೌಕರರಿಗೆ ಬೆಂಬಲ ಸೂಚಿಸಿದ್ದಾರೆ. ಜೊತೆಗೆ ಕ್ರೀಡಾಂಗಣ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಪರಿಸರ ವಾದಿಗಳಿಂದಲೂ ವಿರೋಧ: ಟಿ.ನರಸೀಪುರದ ಕೆಎಸ್​ಐಸಿ ಫಿಲೇಚರ್ ಕಾರ್ಖಾನೆಯ 5.8 ಎಕರೆ ಉದ್ದೇಶಿತ ಕ್ರೀಡಾಂಗಣ ನಿರ್ಮಾಣ ಮಾಡಲು ಆಯ್ಕೆ ಮಾಡಿರುವ ಜಾಗದಲ್ಲಿ 512 ವಿವಿಧ ಜಾತಿಯ ಬೆಲೆ ಬಾಳುವ ಮರಗಳಿವೆ. 38 ವಿವಿಧ ಜಾತಿಯ ಪ್ರಬೇಧದ ಪ್ರಾಣಿ ಪಕ್ಷಿಗಳಿದ್ದು, 20 ಬಗೆಯ ವಿವಿಧ ಚಿಟ್ಟೆಗಳ ಆಶ್ರಯ ತಾಣವಾಗಿದೆ. ಇಂತಹ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಬೇಡ ಎಂದು ಪರಿಸರಕ್ಕಾಗಿ ನಾವು ಸಂಘಟನೆಯ ಮುಖಂಡ ಪರಶುರಾಮೇಗೌಡ ಆಗ್ರಹಿಸಿದ್ದಾರೆ.

ಮೈಸೂರು ರೇಷ್ಮೆ ಸೀರೆ ನೇಯ್ಗೆ ಸ್ಥಗಿತ: ಟಿ.ನರಸೀಪುರದ ಕೆಎಸ್​ಐಸಿ ಫಿಲೇಚರ್ ಕಾರ್ಖಾನೆಯ ನೌಕರರು ಪ್ರತಿಭಟನೆ ನಡೆಸುತ್ತಿರುವುದರಿಂದ ಮೈಸೂರು ಮತ್ತು ಚನ್ನಪಟ್ಟಣ ರೇಷ್ಮೆ ಸೀರೆ ತಯಾರಿಕ ಘಟಕಗಳಿಗೆ ರೇಷ್ಮೆದಾರ ಬಾರದ ಕಾರಣ, ಪ್ರತಿನಿತ್ಯ ಸುಮಾರು 350 ರೇಷ್ಮೆ ಸೀರೆಗಳು ತಯಾರಾಗುತ್ತಿವೆ. ಈಗ ಕಳೆದ 2 ದಿನಗಳಿಂದ ರೇಷ್ಮೆ ನೂಲು ತಯಾರಾಗದ ಕಾರಣ ಮೈಸೂರು ರೇಷ್ಮೆ ಸೀರೆ ನೇಯ್ಗೆ ಸಂಪೂರ್ಣವಾಗಿ ಬಂದ್ ಆಗಿದೆ. ಇದರಿಂದ ರೇಷ್ಮೆ ಸೀರೆ ಕೊಳ್ಳಲು ಬಂದ ಮಹಿಳೆಯರು ರೇಷ್ಮೆ ಸೀರೆ ಸಿಗದೆ ವಾಪಸ್ ಆಗುತ್ತಿರುವ ದೃಶ್ಯ ಕಂಡುಬಂದಿದೆ.

ಟಿ.ನರಸೀಪುರದ ಕೆಎಸ್​ಐಸಿ ಫಿಲೇಚರ್ ಕಾರ್ಖಾನೆ ಇರುವುದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವರುಣ ಕ್ಷೇತ್ರದಲ್ಲಿ. ಈಗ ಕಾರ್ಖಾನೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲು ಹೊರಟಿರುವ ಹಿನ್ನೆಲೆಯಲ್ಲಿ ಇದನ್ನ ವಿರೋಧಿಸಿ ಈಗಾಗಲೇ ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಇದರ ಜೊತೆಗೆ ಕ್ರೀಡಾಂಗಣ ನಿರ್ಮಾಣ ಮಾಡದಂತೆ ಮುಖ್ಯಮಂತ್ರಿಗಳಿಗೆ ಈಗಾಗಲೇ ಮನವಿಪತ್ರವನ್ನೂ ಸಹ ಸಲ್ಲಿಸಿದ್ದು, ಈಗ ಎಲ್ಲರ ದೃಷ್ಟಿ ಮುಖ್ಯಮಂತ್ರಿಗಳ ತೀರ್ಮಾನದ ಕಡೆ ಇದೆ.

ಇದನ್ನೂ ಓದಿ: ಮೈಸೂರು: ಕೆಎಸ್​​ಐಸಿ ಫಿಲೇಚರ್ ಕಾರ್ಖಾನೆ ಭೂಮಿಯಲ್ಲಿ ಕ್ರೀಡಾಂಗಣ ನಿರ್ಮಾಣ ವಿರೋಧಿಸಿ ಸಿಎಂಗೆ ಪತ್ರ