ಸೇವಾ ನಿಯಮ ಉಲ್ಲಂಘಿಸಿದ ನೌಕರರ ಅಮಾನತು ಮಾಡುತ್ತೇವೆ: ಸಚಿವ ಪ್ರಿಯಾಂಕ್ ಖರ್ಗೆ
ನೌಕರರಿಗೆ ನಾನು ಕಾನೂನು ಬಾಹಿರವಾಗಿ ಏನೂ ಹೇಳಿಲ್ಲ. ಕಾನೂನು ಪಾಲನೆ ಮಾಡಿ ಎಂದು ಹೇಳುತ್ತಿದ್ದೇವೆ. ಗಣವೇಷ ಹಾಕಿದ್ದಕ್ಕೆ ಪಿಡಿಒ ಸಸ್ಪೆಂಡ್ ಮಾಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

Published : October 18, 2025 at 3:44 PM IST
ಬೆಂಗಳೂರು: ''ಸೇವಾ ನಿಯಮ ಉಲ್ಲಂಘನೆ ಕಂಡು ಬಂದಂತಹ ಸಿಬ್ಬಂದಿಯನ್ನು ಅಮಾನತು ಮಾಡುತ್ತೇವೆ'' ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ರಾಯಚೂರು ಪಿಡಿಒ ಪ್ರವೀಣ್ ಕುಮಾರ್ ಅಮಾನತು ವಿಚಾರವಾಗಿ ಅವರು ಪ್ರತಿಕ್ರಿಯಿಸಿದರು.
''ಯಾರದ್ದೋ ಪಿಎ ಅಂತ ಸಸ್ಪೆಂಡ್ ಮಾಡಿದ್ದಲ್ಲ. ನಿಯಮ ಉಲ್ಲಂಘಿಸಿದ್ದಕ್ಕೆ ಅಮಾನತು ಮಾಡಿದ್ದು. ಸಿಎಂ - ಪಿಎ ಇರಲಿ, ಮತ್ತೊಬ್ಬರ ಪಿಎ ಇರಲಿ. ನಿಯಮ ಮೀರಿದರೆ ಅಮಾನತು ಮಾಡುತ್ತೇವೆ. ಗಣವೇಷ ಹಾಕಲು ಇವರಿಗೆ ಸರ್ಕಾರದ ಅನುಮತಿ ಇದೆಯಾ?. ನಿನ್ನೆ ಮುಖ್ಯ ಕಾರ್ಯದರ್ಶಿಗಳಿಗೆ ಖುದ್ದಾಗಿ ಪತ್ರ ಬರೆದಿದ್ದೇನೆ. ಇದು ಅಕ್ಷರಶಃ ಪಾಲನೆ ಆಗಬೇಕು ಅಂತ ಹೇಳಿದ್ದೇನೆ. ಸುಮ್ಮನೆ ಯಾರಿಗೋ ಹೋಗಿ ಬೆನ್ನಹಿಂದೆ ಬಿದ್ದು ಇದನ್ನು ಮಾಡಿದ್ದಲ್ಲ. ರಿಪೋರ್ಟ್, ಪುರಾವೆ ಇದ್ದರೆ ಅಮಾನತು ಮಾಡುತ್ತೇವೆ. ಈ ಪಿಡಿಒ ಅವರದ್ದು ಸಾಕ್ಷಿ ಸಿಕ್ಕಿದೆ. ಸ್ಥಳೀಯ ಮಾಹಿತಿ ಆಧಾರದ ಮೇಲೆ ಖಚಿತವಾಯಿತು. ನಂತರ ಸಸ್ಪೆಂಡ್ ಮಾಡಿದ್ದೇವೆ, ತಪ್ಪೇನು?. ನಂತರ ನಿಯಮಾನುಸಾರ ಕ್ರಮ ತೆಗೆದುಕೊಳ್ಳುತ್ತೇವೆ. ನಾವು ನಿಯಮ ಮಾಡುತ್ತೇವೆ, ಅದು ಪಾಲನೆ ಆಗಬೇಕು'' ಎಂದರು.
ನಮ್ಮ ಪಿಎ ಇದ್ದರೂ ಸಸ್ಪೆಂಡ್: ''ನಾನು ಕಾನೂನುಬಾಹಿರವಾಗಿ ಏನೂ ಹೇಳಿಲ್ಲ. ಕಾನೂನು ಪಾಲನೆ ಮಾಡಿ ಅಂತಿದ್ದೇವೆ. ಅದಕ್ಕೆ ಮೈಮೇಲೆ ಬಿದ್ದರೆ ಹೇಗೆ. ಗಣವೇಷ ಹಾಕಿದ್ದಕ್ಕೆ ಸಸ್ಪೆಂಡ್ ಮಾಡಲಾಗಿದೆ. ನೀವು ನಮ್ಮ ಬೆನ್ನು ತಟ್ಟಬೇಕಲ್ಲ. ಅದನ್ನ ಬಿಟ್ಟು ಯಾಕೆ ಮಾಡಿದ್ದೀರಾ ಅಂದ್ರೆ?. ಉದ್ದೇಶಪೂರ್ವಕವಾಗಿ ಎಲ್ಲಿ ಮಾಡಿದ್ದೇವೆ. ಈ ರೀತಿ ನಮ್ಮ ಪಿಎ ಇದ್ದರೂ ಸಸ್ಪೆಂಡ್ ಮಾಡುತ್ತೇನೆ. ಅವರು ಯಾರ ಪಿಎಗಳೇ ಇರಲಿ'' ಎಂದು ಸ್ಷಷ್ಟನೆ ನೀಡಿದರು.
''ಚಿತ್ತಾಪುರದಲ್ಲಿ ಬ್ಯಾನರ್ ತೆರವು ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ''ಚಿತ್ತಾಪುರದಲ್ಲಿ ಬ್ಯಾನರ್ ತೆಗೆದಿದ್ದೇವೆ. ಧ್ವಜ ಕೆಳಗಿಳಿಸಿದ್ದೇವೆ ಅಂತ ಮಾಧ್ಯಮಗಳಲ್ಲಿ ಹೋಗುತ್ತಿದೆ. ಹೌದು, ಧ್ವಜ ಕೆಳಗಿಳಿಸಿರುವುದು ನಿಜ. ಮೊದಲ ಬಾರಿ ನಾನು ಮಂತ್ರಿಯಾಗಿದ್ದೆ, ಆಗ ನಮ್ಮವರು ಬ್ಯಾನರ್ ಹಾಕಿದ್ದರು. ಆಗ ಕಾರ್ಪೋರೇಷನ್ ನನಗೆ ದಂಡ ಹಾಕಿತ್ತು. ಹುಟ್ಟುಹಬ್ಬಕ್ಕೆ ಬ್ಯಾನರ್ ಹಾಕಿದ್ದರೂ ದಂಡ ಹಾಕುತ್ತೇವೆ. ಬೇರೆ ಕಡೆ ಗೊತ್ತಿಲ್ಲ, ಕಲಬುರಗಿಯಲ್ಲಿ ದಂಡ ಹಾಕುತ್ತೇವೆ'' ಎಂದು ಹೇಳಿದರು.
ನಿಯಮ ಎಲ್ಲರಿಗೂ ಒಂದೇ: ಪಥಸಂಚಲನಕ್ಕೆ ಅನುಮತಿ ಇದೆ ಎಂಬ ವಿಚಾರವಾಗಿ ಮಾತನಾಡಿ, ''ಪರ್ಮಿಷನ್ ಎಲ್ಲಿ ಕೊಟ್ಟಿದ್ದೇವೆ. ಡಿವೈಡರ್ ಮೇಲೆ ಹೋಗಿ ಸ್ಟೀಲ್ ಪೈಪ್ ಹಾಕುತ್ತಾರೆ. ಪಥಸಂಚಲನ ಮಾಡುತ್ತೇವೆ, ಮಾಹಿತಿಗಾಗಿ ಅಂತ ಪತ್ರ ಕೊಟ್ಟಿದ್ದಾರೆ. ಮಾಹಿತಿಗೂ, ಅನುಮತಿಗೂ ವ್ಯತ್ಯಾಸ ಇಲ್ವಾ?. ಅನುಮತಿಗಾಗಿ ಅಂತ ಇರಬೇಕಲ್ಲ. ಮಾಹಿತಿಗಾಗಿ ಅಂತ ಹೇಳಿದರೆ ಹೇಗೆ ಸಾಧ್ಯ?. ಮೊನ್ನೆ ಆರ್ಸಿಬಿ ಸಂಭ್ರಮಾಚರಣೆಯಲ್ಲಿ ಏನೆನಾಯ್ತು ಗೊತ್ತಲ್ಲ. ಯಾರ ತಲೆ ಮೇಲೆ ಬರುತ್ತೆ ಗೊತ್ತಲ್ಲ. ಇವರು ನಾವು ಇಷ್ಟು ಜನ ಸೇರುತ್ತೇವೆ. ಹೆಚ್ಚುಕಡಿಮೆ ಆದರೆ ಜವಾಬ್ದಾರಿ ನಾವೇ ಅಂತ ಹೇಳಿದರೆ ಆಯ್ತಲ್ಲ. ಕಾನೂನು ಪಾಲನೆ ಮಾಡಿ ಅಂತ ಹೇಳುವುದು ತಪ್ಪೇ? ಕೆಲವರು ಅದೇಗೆ ತಡೆಯುತ್ತಾರೆ ನೊಡೋಣ ಅಂತಾರೆ. ಪ್ರಿಯಾಂಕ್ ಖರ್ಗೆ ವಿರುದ್ಧ ಅಲ್ಲ ಇವರದ್ದು, ಇವರು ಕಾನೂನಿನ ವಿರುದ್ಧವಾಗಿ ಇದ್ದಾರೆ. ನಿಯಮ ಎಲ್ಲರಿಗೂ ಒಂದೇ ಅಲ್ವೇ'' ಎಂದು ಪ್ರಶ್ನಿಸಿದರು.
ಯಾವುದೇ ಬಿಲ್ ನಿಲ್ಲಿಸಿಲ್ಲ: ಆರ್ಡಿಪಿಆರ್ ಬಿಲ್ ಬಾಕಿ ವಿಚಾರವಾಗಿ ಮಾತನಾಡಿ, ''ವಿಳಂಬವಿಲ್ಲದೆ ಬಿಲ್ ಮಾಡುತ್ತಿದ್ದೇವೆ. ಆರ್ಡಿಪಿಆರ್ನಲ್ಲಿ ತೊಂದರೆ ಇಲ್ಲ ಅಂತ ಅವರೇ ಹೇಳಿದ್ದಾರಲ್ಲ. ನಮಗೂ ಹಣ ಕ್ರೋಢೀಕರಣ ಆಗಬೇಕಲ್ಲ. ತೆರಿಗೆ ಇನ್ನಿತರ ಕಡೆಯಿಂದ ಬರಬೇಕಲ್ಲ. ನಮ್ಮದೂ ಒಂದು ಕ್ವಾರ್ಟರ್ ಇರುತ್ತದೆ. ನಾವು ಆರ್ಥಿಕ ಶಿಸ್ತು ಕಾಪಾಡುತ್ತಿದ್ದೇವೆ. ಹಿಂದಿನ ಸರ್ಕಾರ ಹಾಸಿಗೆ ಇದ್ದಷ್ಟು ಕಾಲು ಚಾಚಿಲ್ಲ. ಸಾಲ ಮಾಡಿ ತುಪ್ಪ ತಿಂದಿರುವುದು. ಅದನ್ನು ನಾವು ಕೊಡುತ್ತಿದ್ದೇವೆ. ಸೀನಿಯಾರಿಟಿ ಇನ್ನಿತರ ಆಧಾರದ ಮೇಲೆ ಬಿಲ್ ಬಾಕಿ ಹಣ ಕೊಡುತ್ತಿದ್ದೇವೆ. ನಾವು ಯಾವುದೇ ಬಿಲ್ ನಿಲ್ಲಿಸಿಲ್ಲ. ಇನ್ನೂ ಹೆಚ್ಚು ಕೆಲಸ ಕೊಡಿ ಅಂತ ಕೇಳಿದ್ದಾರೆ. ಅದರ ಬಗ್ಗೆ ನೊಡೋಣ ಎಂದಿದ್ದೇನೆ'' ಎಂದು ತಿಳಿಸಿದರು.
ಇದನ್ನೂ ಓದಿ: ನಾವು ಆರ್ಎಸ್ಎಸ್ ಟಾರ್ಗೆಟ್ ಮಾಡಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

