ಕೊಟ್ಟ ಮಾತಿನಂತೆ ನೇಮಕಾತಿ ಮಾಡುತ್ತೇವೆ, ಬಜೆಟ್ನಲ್ಲೂ ಘೋಷಿಸುವೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಒಳಮೀಸಲಾತಿ ಸಮಸ್ಯೆಯಿಂದ ನೇಮಕಾತಿ ಸಮಸ್ಯೆಯಾಗಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ಈ ಬಗ್ಗೆ ಬಜೆಟ್ನಲ್ಲಿಯೂ ಘೋಷಣೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Published : February 26, 2026 at 8:17 AM IST
ಮೈಸೂರು: ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು. ಕೆಲ ಇಲಾಖೆಗಳ ನೇಮಕಾತಿ ಬಗ್ಗೆ ಬಜೆಟ್ನಲ್ಲೂ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರಿ ನೇಮಕಾತಿಗಳಲ್ಲಿ ಒಳಮೀಸಲಾತಿಯ ಸಮಸ್ಯೆಯಿಂದ ವಿಳಂಬವಾಗಿದೆ. ಸದ್ಯದಲ್ಲಿಯೇ ನೇಮಕಾತಿ ಪ್ರಾರಂಭಿಸಿ, ಹಂತ ಹಂತವಾಗಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ನಮ್ಮ ಸರ್ಕಾರ ನುಡಿದಂತೆ ನಡೆದು ಸರ್ಕಾರಿ ನೇಮಕಾತಿಗಳನ್ನು ಮಾಡಲಿದ್ದು, ಈ ಬಗ್ಗೆ ಬಜೆಟ್ನಲ್ಲಿಯೂ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.
ಬಿಜೆಪಿಗೆ ತಿರುಗೇಟು: ಬಿಜೆಪಿಯವರು ತಾವು ಅಧಿಕಾರದಲ್ಲಿದ್ದಾಗ, ಯಾವುದೇ ಕೆಲಸವನ್ನು ಮಾಡದೇ ಈಗ ವಿರೋಧಪಕ್ಷದ ಸ್ಥಾನದಲ್ಲಿದ್ದುಕೊಂಡು ಕೇವಲ ಪ್ರತಿಭಟನೆ ಮಾಡುವುದರಲ್ಲೇ ನಿರತವಾಗಿದೆ ಎಂದು ಸಿಎಂ ಕುಟುಕಿದರು.
ಬಿಜೆಪಿ ತನ್ನ ಅವಧಿಯಲ್ಲಿ ಉದ್ಯೋಗ ನೀಡಲಿಲ್ಲ: ಧಾರವಾಡದಲ್ಲಿ ವಿದ್ಯಾರ್ಥಿ ಪ್ರತಿಭಟನೆಗೆ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿಯವರು 2 ಕೋಟಿ ಉದ್ಯೋಗ ನೀಡುವುದಾಗಿ ತಿಳಿಸಿದರೇ ಹೊರತು, ಯಾರಿಗೂ ಉದ್ಯೋಗ ದೊರೆಯಲಿಲ್ಲ. ರಾಜ್ಯದಲ್ಲಿ ಬಿಜೆಪಿಯವರು ಆಡಳಿತ ನಡೆಸಿದ ಸಂದರ್ಭದಲ್ಲಿ ಯಾವುದೇ ಉದ್ಯೋಗಗಳನ್ನು ನೀಡಲಿಲ್ಲ. ಆದ್ದರಿಂದ ನಮ್ಮ ಸರ್ಕಾರವನ್ನು ಪ್ರಶ್ನಿಸಲು ಬಿಜೆಪಿಯವರಿಗೆ ಯಾವುದೇ ನೈತಿಕತೆ ಇಲ್ಲ ಎಂದರು.
ಆರೋಗ್ಯ ಇಲಾಖೆಯ ಆಹ್ವಾನ ಪತ್ರಿಕೆಯಲ್ಲಿ ಉರ್ದು ಭಾಷೆ ಮುದ್ರಿತವಾಗಿರುವ ಬಗ್ಗೆ ಚರ್ಚೆಗಳು ಎದ್ದಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಬಿಜೆಪಿಯವರು ತಾವು ಅಧಿಕಾರದಲ್ಲಿದ್ದಾಗ, ಯಾವುದೇ ಕೆಲಸವನ್ನು ಮಾಡದೇ, ಈಗ ವಿರೋಧಪಕ್ಷದ ಸ್ಥಾನದಲ್ಲಿದ್ದುಕೊಂಡು ಕೇವಲ ಪ್ರತಿಭಟನೆ ಮಾಡುವುದನ್ನೇ ಚಾಳಿ ಮಾಡಿಕೊಂಡಿದ್ದಾರೆ ಎಂದರು.
ಧಾರವಾಡ ಪ್ರತಿಭಟನೆ ಬೆನ್ನಲ್ಲೇ ಸಿಎಂ ಭರವಸೆ: ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಉದ್ಯೋಗಾಕಾಂಕ್ಷಿಗಳು ಮಂಗಳವಾರ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ಮಾಡಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ, ಸರ್ಕಾರಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು, ಪಾರದರ್ಶಕವಾಗಿ, ವ್ಯವಸ್ಥಿತವಾಗಿ ಮತ್ತು ಕಾಲಮಿತಿಯೊಳಗೆ ನೇಮಕಾತಿ ಮಾಡುವುದಾಗಿ ಭರವಸೆ ನೀಡಿದ್ದರು.
ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಹುದ್ದೆಗಳಿಗೆ ನೇಮಕಾತಿ ಮಾಡಲು ಮತ್ತು ಇಂತಹ ಬಾಕಿ ಹುದ್ದೆಗಳು ಮರುಕಳಿಸದಂತೆ ನೇಮಕಾತಿ ಸಂಸ್ಥೆಗಳನ್ನು ಬಲಪಡಿಸಲು ನಾವು ಎಲ್ಲ ಅಗತ್ಯ ಆಡಳಿತಾತ್ಮಕ ಮತ್ತು ನೀತಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದಿದ್ದರು.
ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ನಮ್ಮ ಅನೇಕ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಅನುಭವಿಸುತ್ತಿರುವ ಆತಂಕ, ಹತಾಶೆ ಮತ್ತು ಅನಿಶ್ಚಿತತೆಯನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಪ್ರತಿಯೊಂದು ಅರ್ಜಿಯ ಹಿಂದೆ ಒಂದು ಕನಸು, ಒಂದು ಕುಟುಂಬದ ಭರವಸೆ, ವರ್ಷಗಳ ಪರಿಶ್ರಮ ಮತ್ತು ಕರ್ನಾಟಕಕ್ಕೆ ಸೇವೆ ಸಲ್ಲಿಸಬೇಕೆಂಬ ಹಂಬಲವಿರುತ್ತದೆ. ಮುಖ್ಯಮಂತ್ರಿಯಾಗಿ, ನಾನು ಪ್ರತಿಯೊಬ್ಬ ವಿದ್ಯಾರ್ಥಿಗೂ ಹೇಳಬಯಸುವುದೇನೆಂದರೆ, ನಿಮ್ಮ ಕಾಳಜಿಗಳು ನಮಗೆ ಕೇಳಿಸುತ್ತಿವೆ ಮತ್ತು ನಿಮ್ಮ ಭವಿಷ್ಯ ನಮಗೆ ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ಸರ್ಕಾರಿ ಹುದ್ದೆಗಳ ನೇಮಕಾತಿಗೆ ಆಗ್ರಹ: ಧಾರವಾಡದಲ್ಲಿ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ

