ನಾವು ಆರ್ಎಸ್ಎಸ್ ಟಾರ್ಗೆಟ್ ಮಾಡಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಸಿಎಂ ಸಿದ್ದರಾಮಯ್ಯ ಅವರು ನಾವು ಆರ್ಎಸ್ಎಸ್ ಟಾರ್ಗೆಟ್ ಮಾಡಿಲ್ಲ ಎಂದು ಹೇಳಿದ್ದಾರೆ.

Published : October 18, 2025 at 1:49 PM IST
ಮೈಸೂರು : ಖಾಸಗಿ ಸಂಘ ಸಂಸ್ಥೆಗಳು, ಸಂಘಟನೆಗಳು ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆಗಳನ್ನು ಕಾನೂನುಬದ್ದವಾಗಿ ನಡೆಸಲು ಅನುಮತಿ ನೀಡುವ ಮಾರ್ಗಸೂಚಿಯನ್ನು ಜಗದೀಶ್ ಶೆಟ್ಟರ್ ಇದ್ದಾಗಲೇ ಮಾಡಲಾಗಿತ್ತು. ಅದನ್ನೇ ನಾವು ರಿಪೀಟ್ ಮಾಡುತ್ತಿದ್ದೇವೆ. ನಾವು ಆರ್ಎಸ್ಎಸ್ ಟಾರ್ಗೆಟ್ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿತ್ತಾಪುರ ಗಲಾಟೆ ಬಗ್ಗೆ ಮಾಹಿತಿಯನ್ನ ಪಡೆದು ಮಾತನಾಡುತ್ತೇನೆ. ನಾವು ಕೇವಲ ಆರ್ಎಸ್ಎಸ್ ಸಂಘಟನೆಯನ್ನು ಟಾರ್ಗೆಟ್ ಮಾಡಿಲ್ಲ, ಎಲ್ಲ ಸಂಘಟನೆಗಳಿಗೂ ನಿಯಮ ಅನ್ವಯಿಸುತ್ತದೆ. ಇದರಲ್ಲಿ ಬಿಜೆಪಿ ವಿನಾಕಾರಣ ರಾಜಕಾರಣ ಮಾಡುತ್ತಿದೆ. ಬಿಜೆಪಿ ಮೊದಲಿಂದಲೂ ಇದನ್ನೇ ಮಾಡಿಕೊಂಡು ಬಂದಿದೆ. ಕರ್ನಾಟಕದಲ್ಲಿ ಬಿಜೆಪಿಯಿಂದ ಶಾಂತಿ ಭಂಗ ಸಾಧ್ಯವಿಲ್ಲ ಎಂದಿದ್ದಾರೆ.
ರಾಜ್ಯಪಾಲರಿಗೆ ಗುತ್ತಿಗೆದಾರರ ಪತ್ರ ಹಾಗೂ ದಿನಾಂಕ ಗಡುವು ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರನ್ನ ಕರೆದು ಮಾತನಾಡುತ್ತೇವೆ ಎಂದರು.
ಸೆನ್ಸೇಷನ್ ಸುದ್ದಿಗಳಿಂದ ಸಮಾಜಕ್ಕೆ ಏನು ಪ್ರಯೋಜನ?: ಸೆನ್ಸೇಷನ್ ಸುದ್ದಿಗಳಿಂದ ಸಮಾಜಕ್ಕೆ ಏನು ಪ್ರಯೋಜನ ಎನ್ನುವುದನ್ನು ಪತ್ರಕರ್ತರು ಯೋಚಿಸಬೇಕು. ಸಮಾಜಕ್ಕೆ ಉಪಯೋಗ ಇಲ್ಲದ್ದನ್ನು ಏಕೆ ಮಾಡಬೇಕು ಎಂದು ಸಿಎಂ ಪ್ರಶ್ನಿಸಿದರು.
ಜಿಲ್ಲಾ ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಯ್ಕೆ ಆದ ಫೋಟೋ ಜರ್ನಲಿಸ್ಟ್ ಗಳಿಗೆ 'ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ' ವಿತರಿಸಿ ಮಾತನಾಡಿದರು.
ಒಂದು ಫೋಟೋ ಸಾವಿರ ಪದಗಳಿಗೆ ಸಮ. ಹೀಗಾಗಿ ಫೋಟೋ ಜರ್ನಲಿಸ್ಟ್ಗಳು ಪತ್ರಿಕಾ ವೃತ್ತಿಯ ಮುಖ್ಯ ಭಾಗ. ಆದರೆ ತೆಗೆದ ಫೋಟೋಗಳನ್ನು ಬೇರೆ ಸಂದರ್ಭಗಳಲ್ಲಿ ಬಳಸಿ ತಿರುಚಿದ ಅಭಿಪ್ರಾಯ ಮೂಡಿಸುವುದು ಆರೋಗ್ಯಕರವಲ್ಲ ಎಂದರು.
ಪತ್ರಕರ್ತರು ಸತ್ಯ ಹೇಳ್ತಾರೆ ಎನ್ನುವ ನಂಬಿಕೆಯಿಂದ ನಿಮ್ಮನ್ನು ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭ ಎಂದು ಕರೆಯುತ್ತಾರೆ. ಪತ್ರಕರ್ತರು ಸುಳ್ಳು ಹೇಳುವುದಿಲ್ಲ ಎನ್ನುವ ನಂಬಿಕೆ ಈಗಲೂ ಇದೆ. ಆದರೆ, ಊಹಾ ಪತ್ರಿಕೋದ್ಯಮ ವಿಪರೀತ ಆಗುತ್ತಿದೆ. ಊಹೆ ಮಾಡಿಕೊಂಡು ಸುದ್ದಿ ಮಾಡುವುದು ಗೌರವ ತರುವುದಿಲ್ಲ ಎಂದು ಹೇಳಿದರು.
ಸಾಮಾಜಿಕ ವ್ಯವಸ್ಥೆಯನ್ನು ಜನರ ಮುಂದೆ ವಾಸ್ತವವಾಗಿ ಇಡುವ ಕೆಲಸವನ್ನು ನೀವು ಮಾಡುತ್ತಲೇ ಇಲ್ಲ. ನೂರಾರು ವರ್ಷಗಳ ಕಾಲ ಶೂದ್ರ ಸಮುದಾಯವನ್ನು ಶಿಕ್ಷಣದಿಂದ ದೂರ ಇಟ್ಟಿದ್ದ ಕಾರಣಕ್ಕೆ ಅಸಮಾನತೆ ಬೆಳೆದಿದೆ. ಇದನ್ನೆಲ್ಲ ಜನರಿಗೆ ಅರ್ಥ ಮಾಡಿಸಬೇಕಿದೆ ಎಂದರು.
ಪತ್ರಕರ್ತರು ಮೌಢ್ಯವನ್ನು ಬೆಂಬಲಿಸಬಾರದು. ಬಸವಣ್ಣನವರು 12ನೇ ಶತಮಾನದಲ್ಲೇ ಮೌಢ್ಯದ ವಿರುದ್ಧ ಚಳವಳಿ ನಡೆಸಿದರು. ಆದರೆ ಇವತ್ತಿನ ಪತ್ರಕರ್ತರು ಮೌಢ್ಯದ ವಿರುದ್ಧ ಜನರನ್ನು ಎಚ್ಚರಿಸುವ ಕೆಲಸವನ್ನೇ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ. ವಿ. ಪ್ರಭಾಕರ್, ಶಾಸಕರಾದ ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಶಿವಕುಮಾರ್, ಅಸೋಸಿಯೇಷನ್ ಅಧ್ಯಕ್ಷರಾದ ಪ್ರಗತಿ ಗೋಪಾಲಕೃಷ್ಣ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ : ಸಾರ್ವಜನಿಕ ಸ್ಥಳಗಳು, ಸರ್ಕಾರಿ ಸಂಸ್ಥೆಗಳಲ್ಲಿ ಖಾಸಗಿ ಸಂಘ ಸಂಸ್ಥೆ, ಸಂಘಟನೆಗಳ ಚಟುವಟಿಕೆ ಪರಿಶೀಲಿಸುವ ನಿಯಮ: ಸಂಪುಟದ ಮಹತ್ವದ ನಿರ್ಧಾರ

