ETV Bharat / state

ತುಂಗಭದ್ರಾ ಡ್ಯಾಂನಲ್ಲಿ ನೀರಿನ ಕೊರತೆ: ಮುಂಗಾರು ಬೆಳೆಗಳಿಗೆ ಕಾಲುವೆ ನೀರು ಇಲ್ಲ

ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಈವರೆಗೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಒಳಹರಿವು ತೀವ್ರವಾಗಿ ಕುಂಠಿತಗೊಂಡಿದೆ. ಪರಿಣಾಮ ಕೃಷಿ ನೀರಾವರಿಗೆ ನೀರು ಬಿಡುಗಡೆ ಮಾಡುವ ಅವಕಾಶ ಇಲ್ಲ ಎಂದು ಅಧಿಕೃವಾಗಿ ಪ್ರಕಟಣೆ ಹೊರಡಿಸಲಾಗಿದೆ.

BALLARI  NO TUNGABHADRA WATER TO CROP  ತುಂಗಭದ್ರಾ ಡ್ಯಾಂ ನೀರಿನ ಕೊರತೆ  ಮುಂಗಾರು ಬೆಳೆ  TUNGABHADRA DAM
ತುಂಗಭದ್ರಾ ಡ್ಯಾಂ (ETV Bharat)
author img

By ETV Bharat Karnataka Team

Published : July 4, 2026 at 9:28 AM IST

2 Min Read
Choose ETV Bharat

ಬಳ್ಳಾರಿ: ತುಂಗಭದ್ರಾ ಜಲಾಶಯದಲ್ಲಿ ಸಮರ್ಪಕ ಪ್ರಮಾಣದ ನೀರಿನ ಸಂಗ್ರಹ ಇಲ್ಲದಿರುವ ಕಾರಣ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬೆಳೆಗಳಿಗೆ ಜಲಾಶಯದ ಬಲದಂಡೆ ಹಾಗೂ ಎಡದಂಡೆ ಕಾಲುವೆಗಳ ಮೂಲಕ ನೀರು ಹರಿಸಲು ಸಾಧ್ಯವಾಗುವುದಿಲ್ಲ ಎಂದು ತುಂಗಭದ್ರಾ ಯೋಜನೆ ಹಾಗೂ ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಮತ್ತು ಅಧೀಕ್ಷಕ ಎಂಜಿನಿಯರ್ ಎಸ್.ಬಿ. ಮಲ್ಲಿಗವಾಡ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಈವರೆಗೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಒಳಹರಿವು ತೀವ್ರವಾಗಿ ಕುಂಠಿತಗೊಂಡಿದೆ. ಪರಿಣಾಮವಾಗಿ ಜಲಾಶಯದಲ್ಲಿ ನೀರಿನ ಸಂಗ್ರಹವೂ ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಕೃಷಿ ನೀರಾವರಿಗೆ ನೀರು ಬಿಡುಗಡೆ ಮಾಡುವ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯ ಸರ್ಕಾರ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸುವಂತೆ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ, ಬಲದಂಡೆ ಮತ್ತು ಎಡದಂಡೆ ನಾಲೆಗಳ ಮೂಲಕ ಮುಂಗಾರು ಬೆಳೆಗಳಿಗೆ ನೀರು ಹರಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಈ ನಿರ್ಧಾರದಿಂದ ಬಳ್ಳಾರಿ, ವಿಜಯನಗರ ಸೇರಿದಂತೆ ಅಚ್ಚುಕಟ್ಟು ಪ್ರದೇಶದ ಸಾವಿರಾರು ರೈತರಿಗೆ ಆತಂಕ ಎದುರಾಗಿದೆ. ಮಳೆ ಕೊರತೆಯಿಂದ ಈಗಾಗಲೇ ಮುಂಗಾರು ಬಿತ್ತನೆ ವಿಳಂಬವಾಗಿದ್ದು, ನೀರಾವರಿ ಸೌಲಭ್ಯವೂ ದೊರೆಯದಿರುವುದು ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಮಳೆ ನಿರೀಕ್ಷೆಯಲ್ಲಿ ರೈತರು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅಚ್ಚುಕಟ್ಟು ಪ್ರದೇಶದ ರೈತರು ಈ ಸಂಕಷ್ಟದ ಸಂದರ್ಭದಲ್ಲಿ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಅಧೀಕ್ಷಕ ಎಂಜಿನಿಯರ್ ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಪ್ರಮಾಣದ ಮಳೆಯಾಗಿ ಜಲಾಶಯ ಭರ್ತಿಯಾದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ, ಬೆಳೆಗಳಿಗೆ ನೀರು ಹರಿಸುವ ಕುರಿತು ಪರಿಸ್ಥಿತಿಗೆ ಅನುಗುಣವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಜಲಾಶಯಕ್ಕೆ ಸಮರ್ಪಕ ಪ್ರಮಾಣದ ಒಳಹರಿವು ಆರಂಭವಾಗುವವರೆಗೆ ನೀರಾವರಿ ನೀರು ಬಿಡುಗಡೆ ಕುರಿತು ಯಾವುದೇ ನಿರ್ಧಾರ ಕೈಗೊಳ್ಳಲಾಗುವುದಿಲ್ಲ ಎಂಬುದನ್ನು ಇಲಾಖೆ ಸ್ಪಷ್ಟಪಡಿಸಿದೆ.

ಅಣೆಕಟ್ಟು ನೀರು ನಂಬಿ ಬೆಳೆ ಹಾಕಬೇಡಿ ಎಂದ ಸಿಎಂ: ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು, ರೈತರು ಬೆಳೆಗೆ ನೀರು ಪೂರೈಕೆ ಅಸಾಧ್ಯವಾಗಿದೆ. ಜಲಾಶಯಗಳಲ್ಲಿ ನೀರಿಲ್ಲದ ಕಾರಣ ರೈತರು ಬೆಳೆ ಹಾಕಬಾರದು. ಅಣೆಕಟ್ಟು ನೀರು ನಂಬಿಕೊಂಡು ಬೆಳೆ ಹಾಕಬೇಡಿ ಎಂದು ಈಗಾಗಲೇ ಸಿಎಂ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಜನರಿಗೆ ಮನವಿ ಮಾಡಿದ್ದರು.

ನೀರು ಬಿಡುವ ವಿಚಾರದಲ್ಲಿ ರೈತರು ಒತ್ತಡ ಹಾಕಬೇಡಿ. ಮುಂದಿನ ದಿನಗಳಲ್ಲಿ ಮಳೆ ಗಮನದಲ್ಲಿಟ್ಟುಕೊಂಡು ಬೆಳೆ ಹಾಕಿ. ಮಳೆ ಬಂದರೆ ನಾವು ನೀರನ್ನು ಒದಗಿಸಿಕೊಡುತ್ತೇವೆ ಎಂದು ಸಿಎಂ ತಿಳಿಸಿದ್ದರು.

ಇವುಗಳನ್ನೂ ಓದಿ: