ವಾತಾವರಣದಿಂದ ನೀರು ಉತ್ಪಾದನೆ: ಸರ್ಕಾರಿ ಶಾಲೆಯಲ್ಲಿ ನಿತ್ಯ 50 ಲೀ. ಕುಡಿಯುವ ನೀರು ತಯಾರು!
ವಾತಾವರಣದಲ್ಲಿನ ತೇವಾಂಶ ಹೀರಿಕೊಂಡು ನೀರು ಉತ್ಪಾದಿಸುವ ಈ ಸಾಧನವು ಪ್ರತಿನಿತ್ಯ 45-50 ಲೀ. ನೀರು ಉತ್ಪಾದನೆ ಮಾಡಲಿದೆ.

Published : February 28, 2026 at 10:31 AM IST
|Updated : February 28, 2026 at 10:56 AM IST
ವರದಿ: ಸುರೇಂದ್ರ ಎಸ್
ಚಾಮರಾಜನಗರ: ವಾತಾವರಣದಲ್ಲಿನ ತೇವಾಂಶ ಹೀರಿಕೊಂಡು ನೀರು ಉತ್ಪಾದಿಸುವ ಏರೋ ವಾಟರ್ ಅರ್ಥಾತ್ ಏರ್ ಟು ವಾಟರ್ ಸಾಧನವನ್ನು ಚಾಮರಾಜನಗರ ಜಿಲ್ಲಾಡಳಿತ ಸರ್ಕಾರಿ ಶಾಲೆಗೆ ಅಳವಡಿಸಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಬವಣೆ ನೀಗಿಸಲು ಪ್ರಾಯೋಗಿಕವಾಗಿ ಏರೋ ವಾಟರ್ ಸಾಧನವನ್ನು ಚಾಮರಾಜನಗರದ ಸೋಮವಾರಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಳವಡಿಸಿಸಲಾಗಿದ್ದು, ವಿದ್ಯುಚ್ಛಕ್ತಿ ಮೂಲಕ ಈ ಸಾಧನ ಕಾರ್ಯ ನಿರ್ವಹಿಸಲಿದೆ.
ವಾತಾವರಣದಲ್ಲಿನ ತೇವಾಂಶ ಹೀರಿಕೊಂಡು ನೀರು ಉತ್ಪಾದಿಸುವ ಈ ಸಾಧನವು ನಿತ್ಯ 45-50 ಲೀ. ನೀರು ಉತ್ಪಾದನೆ ಮಾಡಲಿದೆ. ಹೆಚ್ಚಿನ ಪ್ರಮಾಣದಲ್ಲೂ ಉತ್ಪಾದನೆ ಮಾಡುವ ಸಾಮರ್ಥ್ಯದ ಯಂತ್ರ ಸಾಧನವೂ ಇದ್ದು, ಪ್ರಾಯೋಗಿಕವಾಗಿ 50 ಲೀ. ಸಾಮರ್ಥ್ಯದ ಯಂತ್ರವನ್ನು ಅಳವಡಿಸಲಾಗಿದೆ.
ಏರೋ ವಾಟರ್ ಎಂಬ ಕಂಪನಿಯ ತಂತ್ರಜ್ಞಾನ ಇದಾಗಿದ್ದು, ವಾತಾವರಣದಲ್ಲಿರುವ ತೇವಾಂಶವನ್ನು ಸಂಗ್ರಹಿಸಿ ಅದನ್ನು ಸಾಂದ್ರೀಕರಿಸಿ ಹಾಗೂ ಶುದ್ದೀಕರಿಸುವ ಮೂಲಕ ಕುಡಿಯಲು ಯೋಗ್ಯವಾದ ನೀರನ್ನು ಉತ್ಪಾದಿಸಲಾಗುತ್ತಿದೆ. ಈ ತಂತ್ರಜ್ಞಾನವು ಅಂತರ್ಜಲ ಅಥವಾ ಮಳೆಯನ್ನು ಅವಲಂಬಿಸದೇ ವರ್ಷಪೂರ್ತಿ ನಿರಂತರವಾಗಿ ನೀರನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುವುದು ವಿಶೇಷ.
ಸೌರಶಕ್ತಿಯೊಂದಿಗೂ ಜೋಡಿಸಬಹುದು: ವಿದ್ಯುತ್ ಆಧಾರಿತವಾಗಿ ಕಾರ್ಯನಿರ್ವಹಿಸುವ ಈ ಘಟಕವನ್ನು ಸೌರಶಕ್ತಿಯೊಂದಿಗೆ ಜೋಡಿಸಬಹುದಾಗಿದೆ. ದೂರದ ಹಾಗೂ ಅರಣ್ಯ ಪ್ರದೇಶಗಳಿಗೆ ಈ ತಂತ್ರಜ್ಞಾನ ಬಹಳ ಉಪಯುಕ್ತವಾಗಿದ್ದು, ಅರಣ್ಯ ಪ್ರದೇಶಗಳು ಹೆಚ್ಚಾಗಿರುವ ಜಿಲ್ಲೆಯ ಅಗತ್ಯಗಳನ್ನು ಮನಗಂಡು ಈ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಗಿದೆ.
ಈ ಬಗ್ಗೆ ಶಾಲಾ ಮುಖ್ಯಶಿಕ್ಷಕಿ ನೀಡಿದ ಮಾಹಿತಿ ಹೀಗಿದೆ: ಈ ಕುರಿತು ಶಾಲೆಯ ಮುಖ್ಯಶಿಕ್ಷಕಿ ನಾಗಲಕ್ಷ್ಮಿ ಮಾತನಾಡಿ, ನಮ್ಮ ಶಾಲೆಯಲ್ಲಿ ನೀರಿನ ಸಮಸ್ಯೆ ಇರುವ ಕಾರಣ, ನಮ್ಮ ಡಿಸಿ ಮೇಡಂ ಅವರು ನಮಗೆ ಏರ್ ಟು ವಾಟರ್ ತಂತ್ರಜ್ಞಾನವುಳ್ಳಂತಹ ಯಂತ್ರವನ್ನು ನಮಗೆ ಕೊಟ್ಟಿದ್ದಾರೆ. ಸದ್ಯ ಇದು ಡೆಮೋ ಯಂತ್ರಯಾಗಿದ್ದು, ಇದರ ಕಾರ್ಯವೈಖರಿ ಹೇಗೆ ಎಂಬುದನ್ನು ನೋಡಲು ನಮಗೆ ಕೊಟ್ಟಿದ್ದಾರೆ. ನಮ್ಮ ಶಾಲೆಯಲ್ಲಿ ಬಹಳ ನೀರಿನ ಅಭಾವ ಇತ್ತು. ಅವರ ಕೊಡುಗೆಯಿಂದ ನಮಗೆ ಬಹಳ ಅನುಕೂಲ ಆಗುತ್ತಿದೆ. ಈ ಯಂತ್ರ ಗಾಳಿಯಲ್ಲಿರುವ ತೇವಾಂಶವನ್ನು ಹೀರಿಕೊಂಡು, ನೀರನ್ನು ಉತ್ಪತ್ತಿ ಮಾಡಿ ಕೊಡುತ್ತಿದೆ. ಈ ತಂತ್ರಜ್ಞಾನ ಬಹಳ ಆಶ್ಚರ್ಯಕರವಾದ ಸಂಗತಿ ಎಂದರೂ ತಪ್ಪಾಗಲಾರದು. ವಾತಾವರಣದಲ್ಲಿ ನೀರಿನ ತೇವಾಂಶ ಹೆಚ್ಚು ಇದ್ದಾಗ, ಹೆಚ್ಚು ನೀರು ಹಾಗು ಕಡಿಮೆ ಇದ್ದಾಗ ಕಡಿಮೆ ನೀರು ಉತ್ಪತ್ತಿ ಮಾಡುತ್ತದೆ. ಅದರ ಕಾರ್ಯವೈಖರಿಯೇ ಹಾಗೆ ಎಂದು ಹೇಳಿದ್ದಾರೆ. ನಮ್ಮ ಶಾಲೆಯಲ್ಲಿ ಒಟ್ಟು 83 ಮಕ್ಕಳಿದ್ದಾರೆ. ಈ ನೀರನ್ನು ಮುಖ್ಯವಾಗಿ ಕುಡಿಯಲು ಬಳಸುತ್ತಿದ್ದೇವೆ. 48 ಲೀ. ನಷ್ಟು ನೀರು ಬರ್ತಿದೆ. ಮಕ್ಕಳಿಗೆ ಬೆಳಗ್ಗೆಯಿಂದ ಸಂಜೆವರೆಗೆ ಬಳಕೆಯಾಗುತ್ತಿದೆ. ನೀರಿನ ರುಚಿ ಕೂಡ ಚೆನ್ನಾಗಿದೆ ಎಂದರು.
ಇದನ್ನೂ ಓದಿ: ಬಡ ಮಕ್ಕಳ ಗುಣಮಟ್ಟ ಶಿಕ್ಷಣಕ್ಕಾಗಿ ಕೆಪಿಎಸ್ ಬದಲಿಗೆ ಮ್ಯಾಗ್ನೇಟ್ ಶಾಲೆ: ಸಚಿವ ಕೃಷ್ಣ ಬೈರೇಗೌಡ

