ಚಿಕ್ಕಮಗಳೂರಿನ ಗಿರಿ ಶಿಖರಗಳ ಮರಗಳಿಗೆ ನೀರಿನ ಮಡಿಕೆ ಕಟ್ಟಿ ಪ್ರಾಣಿ-ಪಕ್ಷಿಗಳ ದಾಹ ತೀರಿಸುತ್ತಿರುವ ಪ್ರವಾಸಿ ಮಿತ್ರ
ಚಿಕ್ಕಮಗಳೂರಿನ ಗಿರಿ ಶಿಖರಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಸೇರಿ ಹಲವೆಡೆ ಪ್ರವಾಸಿ ಮಿತ್ರ ತಂಡ ಮಾನವೀಯ ಕೆಲಸದಲ್ಲಿ ನಿರತವಾಗಿದೆ.

Published : March 4, 2026 at 2:07 PM IST
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬಿಸಿಲಿನ ಧಗೆ ಪ್ರಾರಂಭವಾಗಿದೆ. ಮುಳ್ಳಯ್ಯನಗಿರಿ, ಸೀತಾಳಯ್ಯನ ಗಿರಿ, ಕೆಮ್ಮಣ್ಣುಗುಂಡಿ, ಗಾಳಿಕೆರೆ, ನೆತ್ತಿಚೌಕ ಮುಂತಾದ ಭಾಗಗಳಲ್ಲಿ ಬಿಸಿಲ ಕಿರಣಗಳು ನೇರವಾಗಿ ನೆತ್ತಿ ಸುಡಲು ಪ್ರಾರಂಭಿಸುತ್ತದೆ. ಈ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಪ್ರಾಣಿ, ಪಕ್ಷಿ ಸಂಕುಲವಿದ್ದು, ನೀರಿನ ಸಮಸ್ಯೆ ನೀಗಿಸಲು ಪ್ರವಾಸಿ ಮಿತ್ರರು ಮರಗಳಿಗೆ ಮಡಿಕೆ ಕಟ್ಟಿ ಮಾನವೀಯತೆ ಮೆರೆಯುತ್ತಿದ್ದಾರೆ.
ಈಗಷ್ಟೇ ಬೇಸಿಗೆ ಶುರುವಾಗಿದೆ. ಬಿಸಿಲ ಝಳ ದಿನ ದಿನಕ್ಕೆ ಏರುತ್ತಿದೆ. ಮೂಕ ಪ್ರಾಣಿ-ಪಕ್ಷಿಗಳೂ ನೀರಿನ ಹಾಹಾಕಾರ ಎದುರಿಸುತ್ತಿವೆ. ಬೇಸಿಗೆಯ ಮಧ್ಯದಲ್ಲಿ ಇಲ್ಲಿರುವ ಕೆಲ ಜಲಪಾತಗಳಲ್ಲಿ ಹನಿ ನೀರಿಗೂ ಪರದಾಟದ ಪರಿಸ್ಥಿತಿ ಉದ್ಭವಿಸುತ್ತದೆ. ಈ ಕಠಿಣ ಪರಿಸ್ಥಿತಿಯಲ್ಲಿ ಪ್ರವಾಸಿಗರ ನೆರವಿಗೆ ಇರುವ ಪ್ರವಾಸಿ ಮಿತ್ರರು ಈಗ ಪ್ರಾಣಿ-ಪಕ್ಷಿಗಳ ದಾಹ ತಣಿಸಲು ಮುಂದಾಗಿದ್ದಾರೆ.

ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಹಾಗೂ ವಿವಿಧ ಭಾಗಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಗುತ್ತಿಗೆ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗಂಗಾಧರ್, ಹರೀಶ್, ರಾಜು, ರಮೇಶ್ ಹಾಗೂ ಯೋಗೇಶ್ ಈ ಕಾರ್ಯಾರಂಭಿಸಿದ್ದಾರೆ. ಇವರು ಸ್ವಂತ ಹಣದಿಂದ ಮಡಿಕೆಗಳನ್ನು ಖರೀದಿಸಿ ಗಿರಿ ಶ್ರೇಣಿಯ ಸುಮಾರು 70ಕ್ಕೂ ಹೆಚ್ಚು ಮರಗಳ ಕೊಂಬೆಗಳಿಗೆ ಮಡಿಕೆಗಳನ್ನು ಭದ್ರವಾಗಿ ಕಟ್ಟಿ, ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ.
ಪ್ರತಿ ಎರಡು ದಿನಕ್ಕೊಮ್ಮೆ ತಪ್ಪದೇ ಆ ಮಡಿಕೆಗಳಿಗೆ ನೀರು ತುಂಬಿಸುವ ಜವಾಬ್ದಾರಿಯನ್ನೂ ಇವರು ನಿರ್ವಹಿಸುತ್ತಿದ್ದಾರೆ. ಇವರ ಮಾನವೀಯ ಕೆಲಸಕ್ಕೆ ಸ್ಥಳೀಯ ಜೀಪ್ ಚಾಲಕರೂ ಸಾಥ್ ನೀಡುತ್ತಿದ್ದಾರೆ. ಪ್ರವಾಸಿಗರ ರಕ್ಷಣೆಯೊಂದಿಗೆ ಪರಿಸರ ಮತ್ತು ಜೀವರಾಶಿಗಳ ಬಗ್ಗೆ ಕಾಳಜಿ ವಹಿಸುತ್ತಿರುವ ಪ್ರವಾಸಿ ಮಿತ್ರರ ಕಾರ್ಯಕ್ಕೆ ಪ್ರವಾಸಿಗರು ಹಾಗೂ ಪರಿಸರ ಪ್ರೇಮಿಗಳಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

"ಇಂತಹ ಗಿರಿ ಪ್ರದೇಶದಲ್ಲಿ ನೀರು ಸಿಗುವುದು ಬಹಳ ಕಡಿಮೆ. ಇಲ್ಲಿ ನೀರಿಲ್ಲದೇ ಪ್ರಾಣಿ-ಪಕ್ಷಿಗಳು ಒದ್ದಾಡಿರುವುದನ್ನು ನೋಡಿದ್ದೇವೆ. ನಾವು ಇಡೀ ಗುಡ್ಡದಲ್ಲಿ ಸ್ವಂತ ಖರ್ಚಿನಲ್ಲಿ 70-75 ಮಡಿಕೆ, ಬಾಟಲ್ಗಳನ್ನು ಇಟ್ಟು ನೀರು ಹಾಕಿ ಬರುತ್ತಿದ್ದೇವೆ. ನೀವೂ ಕೂಡ ಅಷ್ಟೇ, ಮನೆ ಹೆಂಚಿನ ಮೇಲೆ, ಟೆರೇಸ್ ಮೇಲೆ ಉಳಿದ ಅನ್ನ, ನೀರು ಇಟ್ಟು ಪಕ್ಷಿಗಳ ದಾಹ ತೀರಿಸಿ" ಎಂದು ಪ್ರವಾಸಿ ಮಿತ್ರ ಸದಸ್ಯ ಗಂಗಾಧರ್ ಮನವಿ ಮಾಡಿದರು.

