ETV Bharat / state

ಮರ್ಯಾದಾ ಹತ್ಯೆ ನಿಯಂತ್ರಣಕ್ಕೆ ವಿಶೇಷ ಕಾನೂನು ರಚನೆ: ಹೊಸ ಕಾನೂನಿಗೆ ಮಾನ್ಯ ಹೆಸರಿಟ್ಟರೆ ಆತ್ಮಕ್ಕೆ ಶಾಂತಿ ಎಂದ ವಿವೇಕಾನಂದ

ಕಾನೂನು ಇಷ್ಟೊಂದು‌‌ ಕಠಿಣ ಇದ್ದರೂ ಈ ಘಟನೆ ಆಗಿದೆ. ಸರ್ಕಾರ ಮಾನ್ಯ ಮರ್ಯದಾ ಹತ್ಯೆ ಕಾಯ್ದೆ ಅಂತ ಜಾರಿಗೊಳಿಸಿದರೆ‌ ಉತ್ತಮ ಎಂದು ಮಾನ್ಯ ಪತಿ ವಿವೇಕಾನಂದ ತನ್ನ ಅಭಿಪ್ರಾಯವನ್ನು ಹೇಳಿಕೊಂಡಿದ್ದಾನೆ.

HUBBALLI HONOR KILLING CASE
ಪತ್ನಿ ಮಾನ್ಯ ಜೊತೆಗೆ ಪತಿ ವಿವೇಕಾನಂದ (ಸಂಗ್ರಹ ಚಿತ್ರ) (ETV Bharat)
author img

By ETV Bharat Karnataka Team

Published : January 7, 2026 at 6:40 PM IST

3 Min Read
Choose ETV Bharat

ವಿಶೇಷ ವರದಿ - ಹೆಚ್ ಬಿ‌ ಗಡ್ಡದ

ಹುಬ್ಬಳ್ಳಿ: ಅನ್ಯ ‌ಜಾತಿಯ ಯುವಕನನ್ನು ಮದುವೆಯಾದಳು ಎಂಬ ಕಾರಣಕ್ಕೆ ತಂದೆಯೇ ಹೆತ್ತ ಮಗಳನ್ನು ಹತ್ಯೆ ಮಾಡಿದ ಪ್ರಕರಣ ದೇಶವನ್ನೇ ಬೆಚ್ಚಿಬಿಳಿಸಿದೆ. ಹೆತ್ತ ತಂದೆಯೇ ಏಳು ತಿಂಗಳ ಗರ್ಭಣಿ ಮಗಳನ್ನು ಭೀಕರವಾಗಿ ಕೊಲೆ ಮಾಡುವ ಮೂಲಕ ನಾಗರಿಕ ಸಮಾಜ ತಲೆತಗ್ಗಿಸುವ ಕೃತ್ಯ ಎಸಗಿದ್ದು, ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಜಾತಿ ವ್ಯವಸ್ಥೆ, ಕಾನೂನಿನ ಭಯ ಇಲ್ಲದಿರುವುದೇ ಇಂತಹ ಅಮಾನವೀಯ ಕೃತ್ಯಕ್ಕೆ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಾಗಾಗಿ ಹಲವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ, ಇನಾಂವೀರಾಪುರದ ಮಾನ್ಯ ದೊಡ್ಡಮನಿ ಮರ್ಯಾದೆಗೇಡು ಹತ್ಯೆಗೆ ಸಂಬಂಧಿಸಿದಂತೆ 'ಮರ್ಯಾದಾ ಹತ್ಯೆ ತಡೆ'ಗೆ ಕಾನೂನು ತರಲು ಮುಂದಾಗಿದೆ. ಇದು ಪರವಿರೋಧ ಚರ್ಚೆಗೆ ಗ್ರಾಸವಾಗಿದೆ. ಕಾಯ್ದೆ ಬಂದ್ರೆ ಉತ್ತಮ ಎಂದು ಮಾನ್ಯ ಪತಿ ವಿವೇಕಾನಂದ ತನ್ನ ಅಭಿಮತ ವ್ಯಕ್ತಪಡಿಸಿದ್ರೆ,‌ ಇದರ ಅವಶ್ಯಕತೆ ಇಲ್ಲವೆಂದು ಕೆಲ ರಾಜಕೀಯ ನಾಯಕರ ವಾದವಾಗಿದೆ.

ಮರ್ಯಾದಾ ಹತ್ಯೆ ತಡೆ ಕಾನೂನು ಜಾರಿ ಕುರಿತು ಅಭಿಪ್ರಾಯ (ETV Bharat)

ಇಂತಹ ಕೃತ್ಯ ತಡೆಯಲು ಕಾನೂನು ಅವಶ್ಯಕತೆ ಇದೆ: ಆದರೆ ಇಂತಹ ಮರ್ಯಾದೆಗೇಡು ಹತ್ಯೆ ತಡೆಗಡೆಗಟ್ಟಲು ಕಾನೂನಿನ ಅವಶ್ಯಕತೆಯನ್ನು ಅಲ್ಲಗಳಿಯುವಂತಿಲ್ಲ. ಕಾನೂನು ಆದಲ್ಲಿ ತ್ವರಿತ ವಿಚಾರಣೆ ನಡೆದು, ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವುದು, ದಲಿತರ ಮೇಲಿನ ದೌರ್ಜನ್ಯ ಹಾಗೂ ಕೊಲೆ ಪ್ರಕರಣಗಳಿಗೆ ಕಡಿವಾಣ ಹಾಕುವುದು ಸರ್ಕಾರದ ಉದ್ದೇಶವಾಗಿದೆ. ಮಾನ್ಯ ಹತ್ಯೆ ಪ್ರಕರಣ ಅಟ್ರಾಸಿಟಿ ಪ್ರಕರಣವಾಗಿದ್ದರಿಂದ ಕಾನೂನಿನ ಪ್ರಕಾರ 60 ದಿನಗಳ ಒಳಗಾಗಿ ದೋಷಾರೋಪ ಪಟ್ಟಿ ಸಲ್ಲಿಸಬೇಕಾಗಿದೆ. ಹೀಗಾಗಿ ಖಾಸಗಿ ಪ್ರಾಸಿಕ್ಯೂಟರ್‌ ಅವರನ್ನು ನೇಮಕ ಮಾಡಲು ಸರ್ಕಾರ ‌ಮುಂದಾಗಿದೆ.

ವಿಶೇಷ ಕಾನೂನು ರಚನೆಗೆ ಮುಂದಾದ ಸರ್ಕಾರ; ಕಠಿಣವಾದ ಮರ್ಯಾದಾ ಹತ್ಯೆ ತಡೆ ಕಾನೂನು ಜಾರಿಯಾದರೆ ಹೆಣ್ಣುಮಕ್ಕಳ ನಿಲುವಿಗೆ ವಿರುದ್ಧವಾಗಿ ಮದುವೆಗೆ ಬಲವಂತಪಡಿಸುವುದು ಅಥವಾ ಮದುವೆ ನಿರಾಕರಿಸುವುದು, ಜಾತಿಯಾಧಾರಿತ ಹಿಂಸೆ-ಹಲ್ಲೆ, ಮರ್ಯಾದೆಗೇಡು ಹತ್ಯೆಯಂತಹ ಘಟನೆಗಳು ಇಡೀ ಮಾನವ ಸಮಾಜ ತಲೆತಗ್ಗಿಸುವಂತಹ ಹೀನ ಕೃತ್ಯಗಳಿಗೆ ಕಡಿವಾಣ ಹಾಕಬಹುದಾಗಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಇಂತಹ ಘಟನೆಗಳಿಗೆ ಕಡಿವಾಣ ಹಾಕುವ ಹಾಗೂ ಜನರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ವಿಶೇಷ ಕಾನೂನು ರಚನೆ ಮಾಡಲು ತೀರ್ಮಾನಿಸಿದೆ. ಈ ಬಗ್ಗೆ ವಿಧಾನ ಮಂಡಲದ ಮುಂದಿನ ಅಧಿವೇಶನದಲ್ಲಿ ಚರ್ಚಿಸಿ, ಸೂಕ್ತ ನಿರ್ಣಯ ತೆಗೆದುಕೊಳ್ಳುವ ತೀರ್ಮಾನ ಕೂಡ ಮಾಡಿದೆ.

ಈ‌ ಕುರಿತಂತೆ ಮಾನ್ಯ ದೊಡ್ಡಮನಿ ಪತಿ ವಿವೇಕಾನಂದ ದೊಡ್ಡಮನಿ‌ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ''ನಾನು ಮತ್ತು ಮಾನ್ಯ ಅನ್ಯಜಾತಿಯವರಾದರೂ ಪ್ರೀತಿಸಿ ಮದುವೆ ಮಾಡಿಕೊಂಡಿದ್ದೆವು. 2025ರ ಮೇ ತಿಂಗಳಲ್ಲಿ ‌ಪ್ರೇಮ ವಿವಾಹ ಮಾಡಿಕೊಂಡೆವು. ಡಿ.21 ರಂದು ಮಾನ್ಯ ತಂದೆ ಹಾಗೂ ಅವರ ಸಂಬಂಧಿಗಳು ನಮ್ಮ ಮೇಲೆ ದಾಳಿ ಮಾಡಿ ನನ್ನ ಪತ್ನಿ ಮಾನ್ಯಳ ಕೊಲೆ ಮಾಡಿದ್ದಲ್ಲದೇ , ನಮ್ಮ ಕುಟುಂಬದವರ ಮೇಲೂ ಹಲ್ಲೆ ಮಾಡಿದ್ದಾರೆ. ಆದರೆ ಸರ್ಕಾರ ಈಗ ಮರ್ಯಾದಾ ಹತ್ಯೆ ಕಾಯ್ದೆ ತರುತ್ತಿರುವುದು ಸಂತೋಷವಾಗಿದೆ. ನಮ್ಮ ಕುಟುಂಬದ ಮಾನ್ಯಳಿಗೆ ಆದ ಸ್ಥಿತಿ ಬೇರೆ ಯಾವ ಹೆಣ್ಣುಮಕ್ಕಳಿಗೂ ಆಗಬಾರದು. ಸಂವಿಧಾನದಲ್ಲಿ ನಾವು ಇಷ್ಟಪಟ್ಟವರ ಜೊತೆ ಬದುಕುವ ಹಕ್ಕು ‌ಇದೆ. ಕಾನೂನು ಇಷ್ಟೊಂದು‌‌ ಕಠಿಣ ಇದ್ದರೂ ಈ ಘಟನೆ ಆಗಿದೆ. ಇದು ನಮಗೆ ಬೇಜಾರಾಗಿದೆ. ಸರ್ಕಾರ 'ಮಾನ್ಯ ಮರ್ಯದಾ ಹತ್ಯೆ ಕಾಯ್ದೆ' ಅಂತ ಜಾರಿಗೊಳಿಸಿದರೆ‌ ಉತ್ತಮ'' ಎಂದರು.

ಸರ್ಕಾರಕ್ಕೆ ನಾನೇನು ಹೆಚ್ಚಿನ ಬೇಡಿಕೆ ಇಡುವುದಿಲ್ಲ: ''ಸರ್ಕಾರದಿಂದ ನಾವು ಹೆಚ್ಚಿನದ್ದೇನು ಬೇಡಿಕೆ ಇಡುವುದಿಲ್ಲ. ಒಂದು ಉತ್ತಮ ಕಾನೂನು ‌ತರುವುದರಿಂದ ಅವಳಿಗೆ (ಮಾನ್ಯ) ನ್ಯಾಯ ಸಿಗಬೇಕು. ಅವಳ ಆತ್ಮಕ್ಕೆ ಶಾಂತಿ‌ ಸಿಗಬೇಕು. ನಾವು ಯಾರಿಗೂ ಅನ್ಯಾಯ ಮಾಡಿಲ್ಲ. ನಮಗೆ ಯಾಕೆ ಈ ಅನ್ಯಾಯ? ನಾವು ಪ್ರೀತಿಸಿ ಮದುವೆಯಾಗಿದ್ದೇ ತಪ್ಪಾ? ಮಾನ್ಯ ಮರ್ಯಾದೆ ಹತ್ಯೆ ಕಾನೂನು ಜಾರಿಮಾಡಬೇಕು ಎಂಬುದೊಂದೇ ನಮ್ಮ ಬೇಡಿಕೆ'' ಎಂದರು.

ದಲಿತ ವಿಮೋಚನಾ ಸಂಘಟನೆ ಅಧ್ಯಕ್ಷ ಶ್ರೀಧರ ಕಂದಗಲ್ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ಜಾತಿಯ ವಿಷ ಬೀಜ ಗ್ರಾಮೀಣ ಭಾಗದಲ್ಲಿ ‌ಇನ್ನೂ ಜೀವಂತವಿದೆ. ಹೆತ್ತ ತಂದೆಯೇ ಮರ್ಯಾದೆಗೋಸ್ಕರ ಮಗಳನ್ನೇ ಕೊಲೆ ಮಾಡಿದಂತಹ ಘಟನೆಗಳು ನಡೆಯಬಾರದು. ಇದಕ್ಕಾಗಿ ಸರ್ಕಾರ ಕಠಿಣವಾದ ಕಾನೂನು ಜಾರಿಗೆ ತರಬೇಕು. ಇದರಿಂದ ಈ ರೀತಿ ಕೃತ್ಯಗಳಿಗೆ ಕಡಿವಾಣ ಬೀಳಲಿದೆ. ಅನ್ಯ ಜಾತಿಯ ವಿವಾಹವಾದ ಕುಟುಂಬಗಳು ತೊಂದರೆ ಅನುಭವಿಸುವುದು ತಪ್ಪುತ್ತದೆ ಎಂದರು.

ಪ್ರತ್ಯೇಕ ಕಾನೂನಿನ ಅವಶ್ಯಕತೆ ಇದೆ - ಗೋವಿಂದ ಕಾರಜೋಳ: ಈ‌ ಕುರಿತಂತೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿ, ಮರ್ಯಾದೆ ಹೆಸರಿನಲ್ಲಿ ದೌರ್ಜನ್ಯ ತಡೆಯಲು ರಾಜ್ಯ ಸರ್ಕಾರ ಪ್ರತ್ಯೇಕ ಮಸೂದೆ ಜಾರಿಗೆ ತರುವ ಅವಶ್ಯಕತೆ ಇಲ್ಲ. ಆದರೆ, ಇಂತಹ ಘಟನೆ ನಡೆಯದಂತೆ ಸರ್ಕಾರ ಕ್ರಮಕೈಗೊಳ್ಳಬೇಕು. ದಲಿತರ ದೌರ್ಜನ್ಯ ತಡೆಗೆ ಅನೇಕ ಕಾನೂನುಗಳಿವೆ. ಜನರಿಗೆ ರಕ್ಷಣೆ ನೀಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಹೊಸ ಮಸೂದೆ ತಂದರೆ‌ ನೂರಾ ಎಂಟರಲ್ಲಿ ಇದೊಂದು ಕಾನೂನು ಆಗಲಿದೆ ಹೊರತು ಅದರಿಂದ ಏನು ಪ್ರಯೋಜನವಾಗಲ್ಲ ಎಂದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರ ಛಲವಾದಿ ನಾರಾಯಣಸ್ವಾಮಿ ಅವರು ಮರ್ಯಾದೆ ಹತ್ಯೆ ಕಾನೂನಿನ ಬಗ್ಗೆ ಪ್ರತಿಕ್ರಿಯಿಸಿ, ಹುಬ್ಬಳ್ಳಿಯಲ್ಲಿ ಸಮಾಜವೇ ತಲೆತಗ್ಗಿಸುವಂತಹ ಹತ್ಯೆಯಾಗಿದೆ. ಸಮಾಜ ಬಹಳ ಮುಂದುವರೆದಿದ್ದು, ಸಮಾಜವನ್ನು ಅರಿಯದವರು ಇಂತಹ ಕೃತ್ಯ ಮಾಡುತ್ತಾರೆ. ಇದು ಅಮಾನವೀಯ ಘಟನೆಯಾಗಿದೆ‌‌. ಬುದ್ಧ, ಬಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರು ಬದುಕಿದ ನಾಡಿದು. ಬಸವಣ್ಣನವರು ಜಾತಿ ರಹಿತ ಸಮಾಜ ನಿರ್ಮಿಸಿದ್ದರು. ಅಷ್ಟಾಗಿಯೂ ಇಂತಹ ಘಟನೆ ನಡೆದಿದೆ. ಇದು ನಡೆಯಬಾರದಿತ್ತು. ಹೊಸ ಕಾನೂನು ಅವಶ್ಯಕತೆ ಇಲ್ಲ.‌ ಇದ್ದ ಕಾನೂನು‌ ಪರಿಣಾಮಕಾರಿಯಾಗಿ ಜಾರಿಯಾಗಲಿ ಎಂದರು.

ಇದನ್ನೂ ಓದಿ: ಮರ್ಯಾದೆಗೇಡು ಹತ್ಯೆ ನಿಯಂತ್ರಣಕ್ಕೆ ವಿಶೇಷ ಕಾನೂನು ರಚನೆ: ಸಿಎಂ ಸಿದ್ದರಾಮಯ್ಯ