ಒಂದೇ ಗ್ರಾಮದಲ್ಲಿ ಮೂವತ್ತು ವರ್ಷ ಶಿಕ್ಷಕಿಯಾಗಿ ಸೇವೆ; ಅದ್ದೂರಿ ಗುರುವಂದನೆ ಸಲ್ಲಿಸಿದ ಗ್ರಾಮಸ್ಥರು
ಮೂವತ್ತು ವರ್ಷಗಳವರೆಗೆ ಸೇವೆ ಸಲ್ಲಿಸಿ ನಿವೃತ್ತಿಯಾದ ಶಿಕ್ಷಕಿಯೊಬ್ಬರಿಗೆ ಗ್ರಾಮಸ್ಥರು ಅದ್ದೂರಿ ಗುರುವಂದನೆ ಸಲ್ಲಿಸಿದ್ದಾರೆ.

Published : January 6, 2026 at 2:57 PM IST
ಧಾರವಾಡ : ಮೂವತ್ತು ವರ್ಷಗಳ ಕಾಲ ಒಂದೇ ಗ್ರಾಮದಲ್ಲಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ಶಾಲಾ ಶಿಕ್ಷಕಿಗೆ ಗ್ರಾಮಸ್ಥರು ಅದ್ದೂರಿಯಾಗಿ ಬೀಳ್ಕೊಡುಗೆ ಹಾಗೂ ಗುರುವಂದನಾ ಕಾರ್ಯಕ್ರಮ ಮಾಡಿರುವ ಘಟನೆ ತಾಲೂಕಿನ ಚಿಕ್ಕಮಲ್ಲಿಗೆವಾಡ ಗ್ರಾಮದಲ್ಲಿ ನಡೆದಿದೆ.
ಚಂದ್ರಾ ದೊಡಮನಿ ಎಂಬ ಶಿಕ್ಷಕಿ 1996ರಲ್ಲಿ ಶಿಕ್ಷಕಿಯಾಗಿ ಈ ಗ್ರಾಮದಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ನಿವೃತ್ತಿ ದಿನ ಗ್ರಾಮಸ್ಥರು ಊರಿನ ತುಂಬಾ ಹೂವಿನ ರಾಶಿ ಹಾಕಿ, ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ, ಶಿಕ್ಷಕಿ ಮೇಲೆ ಹೂವು ಹಾಕಿ, ಹಬ್ಬದ ವಾತಾವರಣ ನಿರ್ಮಾಣ ಮಾಡಿದ್ದಾರೆ.
ಶಿಕ್ಷಕಿ ಇಲ್ಲಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿದಂತೆ ಗ್ರಾಮಸ್ಥರ ಜೊತೆಗೆ ಉತ್ತಮ ಒಡನಾಟ ಹೊಂದಿದ್ದರು. ಹೀಗಾಗಿ, ನಿವೃತ್ತಿಯಾದ ಶಿಕ್ಷಕಿಗೆ ಏನಾದರು ಮಾಡಬೇಕು ಎಂಬ ನಿರ್ಧಾರಕ್ಕೆ ಬಂದ ಗ್ರಾಮಸ್ಥರು ಹಾಗೂ ಹಳೇ ವಿದ್ಯಾರ್ಥಿಗಳು ಜೀವನ ರೂಪಿಸಿದ ಶಿಕ್ಷಕಿಗೆ ಅದ್ದೂರಿಯಾಗಿ ಮೆರವಣಿಗೆ ಮಾಡಿ ಗುರುವಂದನೆ ಸಲ್ಲಿಸಿದ್ದಾರೆ.
ಈ ಕುರಿತು ಶಿಕ್ಷಕಿ ಚಂದ್ರ ದೊಡಮನಿ ಅವರು ಮಾತನಾಡಿದ್ದು, 'ನಾನು ಸೇವೆಗೆ ಸೇರಿರುವುದು ಹಾಗೂ ನಿವೃತ್ತಿ ಹೊಂದಿರುವುದು ಚಿಕ್ಕಮಲ್ಲಿಗೆವಾಡ ಗ್ರಾಮದಲ್ಲಿ. ಈ ದಿನ ನನ್ನ ನೆಚ್ಚಿನ ವಿದ್ಯಾರ್ಥಿಗಳು ಊರೆಲ್ಲಾ ಮೆರವಣಿಗೆ ಮಾಡಿಕೊಂಡು ಬಂದಿದ್ದಾರೆ. ಇಲ್ಲಿನ ಸ್ಟೇಜ್ ಅನ್ನು ಚೆನ್ನಾಗಿ ಅಲಂಕಾರ ಮಾಡಿದ್ದಾರೆ. ಹಳೆ ವಿದ್ಯಾರ್ಥಿಗಳು ನಿವೃತ್ತಿ ಹೊಂದಿದ ಶಿಕ್ಷಕರು ಹಾಗೂ ಬೇರೆ ಕಡೆ ಟ್ರಾನ್ಸ್ಫರ್ ಆಗಿ ಹೋದಂತವರನ್ನು ಕರೆಸಿ ನಮಗೆ ಸನ್ಮಾನ ಇಟ್ಟುಕೊಂಡಿದ್ದಾರೆ. ಅವರೆಲ್ಲರಿಗೂ ನಾನು ತುಂಬು ಹೃದಯದ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಊರಿನಲ್ಲಿ ಹಿರಿಯರ ಒಡನಾಟ ಜಾಸ್ತಿ ಇತ್ತು. ಈ ಗ್ರಾಮದಲ್ಲಿ ಸೇವೆ ಸಲ್ಲಿಸಿರುವುದು ನನಗೆ ಹೆಮ್ಮೆ ಎನಿಸಿದೆ. ಇಷ್ಟೊಂದು ವಿಜೃಂಭಣೆಯಿಂದ ಬೀಳ್ಕೊಡುಗೆ ಮಾಡುತ್ತಾರೆ ಎಂಬುದು ನನಗೆ ಗೊತ್ತಾಯಿತು' ಎಂದು ತಿಳಿಸಿದ್ದಾರೆ.

'ಶಿಕ್ಷಕಿ ಇದೇ ಶಾಲೆಯಲ್ಲಿ ಸೇರಿದ್ದರು. ಇಲ್ಲಿಯೇ ನಿವೃತ್ತಿ ಹೊಂದಿದ್ದಾರೆ. ಹೀಗಾಗಿ, ನಾವೆಲ್ಲ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಇಟ್ಟುಕೊಂಡಿದ್ದೇವೆ. ಊರಿನ ತುಂಬಾ ಇದನ್ನು ಹಬ್ಬದಂತೆ ಮಾಡುತ್ತಿದ್ದೇವೆ. ಎಲ್ಲರೂ ಸೇರಿ ಈ ಕಾರ್ಯಕ್ರಮ ನಡೆಸಿಕೊಡುತ್ತೇವೆ. ಸನ್ಮಾನ ಕಾರ್ಯಕ್ರಮ ಹಾಗೂ ಊರ ತುಂಬಾ ಪುಷ್ಪಾರ್ಚನೆಯನ್ನು ಇರಿಸಿಕೊಂಡಿದ್ದೇವೆ. ಊಟದ ವ್ಯವಸ್ಥೆಯೂ ಇದೆ. ಈ ಕಾರ್ಯಕ್ರಮಕ್ಕೆ ಹಳೆಯ ವಿದ್ಯಾರ್ಥಿಗಳನ್ನು ಕರೆಸಿದ್ದೇವೆ' ಎಂದು ಹಳೆ ವಿದ್ಯಾರ್ಥಿ ಗೋಪಾಲ ಶಿಂಧೆ ಅವರು ಹೇಳಿದ್ದಾರೆ.
ಇದನ್ನೂ ಓದಿ : ಸಮಾಜದಲ್ಲಿ ಬದಲಾವಣೆ ತರಬೇಕಾದರೆ ವಿದ್ಯಾವಂತರಾಗಲೇಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

