ಗ್ಯಾರಂಟಿ ಯೋಜನೆಗಳ ಪರಿಶೀಲನೆಗೆ ಗ್ರಾಮ ಗ್ಯಾರಂಟಿ ಸಮಿತಿ ರಚನೆ: ಗೃಹಲಕ್ಷ್ಮಿ ಸಮೀಕ್ಷೆ ನಡೆಸಲು ನಿರ್ಧಾರ- ಹೆಚ್.ಎಂ.ರೇವಣ್ಣ
ಗ್ಯಾರಂಟಿ ಯೋಜನೆಗಳ ಪರಿಶೀಲನೆಗೆ ಗ್ರಾಮ ಗ್ಯಾರಂಟಿ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ.ರೇವಣ್ಣ ತಿಳಿಸಿದ್ದಾರೆ.


Published : September 1, 2026 at 9:55 PM IST
ಮಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳ ಪಾರದರ್ಶಕ ಅನುಷ್ಠಾನ ಮತ್ತು ಸಮಗ್ರ ಮರುಪರಿಶೀಲನೆಗಾಗಿ (ರೀ-ವೆರಿಫಿಕೇಶನ್) ಪ್ರತಿ ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ‘ಗ್ರಾಮ ಗ್ಯಾರಂಟಿ ಸಮಿತಿ’ ರಚಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ.ರೇವಣ್ಣ ತಿಳಿಸಿದರು.
ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಮಂಗಳವಾರ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದ ಗ್ಯಾರಂಟಿ ಸಮಿತಿಗಳ ನಂತರ ಇದೀಗ ತಳಮಟ್ಟದಲ್ಲಿ ಪರಿಶೀಲನೆ ಚುರುಕುಗೊಳಿಸಲು ಗ್ರಾಮ ಮತ್ತು ವಾರ್ಡ್ ಸಮಿತಿಗಳನ್ನು ರಚಿಸಲಾಗುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 6 ಮಂದಿ ಕಾರ್ಯಕರ್ತರ ಸಮಿತಿ ರಚನೆಯಾಗಲಿದೆ. ಇದರಲ್ಲಿ ಇಬ್ಬರು ಮಹಿಳೆಯರು, ಒಬ್ಬರು ಪರಿಶಿಷ್ಟ ಜಾತಿ (SC), ಒಬ್ಬರು ಅಲ್ಪಸಂಖ್ಯಾತ, ಒಬ್ಬರು ಹಿಂದುಳಿದ ವರ್ಗ (OBC) ಹಾಗೂ ಒಬ್ಬರು ಸಾಮಾನ್ಯ ವರ್ಗದ ಸದಸ್ಯರು ಇರಲಿದ್ದಾರೆ. ಈಗಾಗಲೇ ಸರ್ಕಾರಿ ಆದೇಶ ಹೊರಬಿದ್ದಿದ್ದು, ಜಿಲ್ಲಾ ಸಮಿತಿಯು ಪಟ್ಟಿ ಸಿದ್ಧಪಡಿಸಿ ಜಿಲ್ಲಾ ಉಸ್ತುವಾರಿ ಸಚಿವರ ಅನುಮೋದನೆ ಪಡೆದು ಶೀಘ್ರವೇ ನೇಮಕ ಅಂತಿಮಗೊಳಿಸಲಿದೆ ಎಂದರು.
ಮನೆ-ಮನೆ ಗೃಹಲಕ್ಷ್ಮಿ ಸಮೀಕ್ಷೆ: ಫಲಾನುಭವಿಗಳು ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಸಮಿತಿಯ ಸದಸ್ಯರು ಅಂಗನವಾಡಿ ಕಾರ್ಯಕರ್ತೆಯರು, ಪಿಡಿಒ, ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿಯೊಂದಿಗೆ ನೇರವಾಗಿ ಮನೆಗಳಿಗೆ ತೆರಳಿ ಫಲಾನುಭವಿಗಳ ನೈಜ ಮಾಹಿತಿ, ಆಧಾರ್, ಫೋಟೋ ಮತ್ತಿತರ ವಿವರಗಳನ್ನು ಸ್ಥಳದಲ್ಲೇ ಪರಿಶೀಲಿಸಿ ಅಪ್ಲಿಕೇಶನ್ ಭರ್ತಿ ಮಾಡಿಕೊಳ್ಳಲಿದ್ದಾರೆ ಎಂದರು.
ಗೃಹಲಕ್ಷ್ಮಿ 2 ಕಂತು ಬಾಕಿ: ಗೃಹಲಕ್ಷ್ಮಿ ಯೋಜನೆಯಲ್ಲಿ ಕಳೆದ ವರ್ಷ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಕಂತುಗಳು ಪಾವತಿಯಾಗದಿರುವ ಬಗ್ಗೆ ಸ್ಪಷ್ಟನೆ ನೀಡಿದ ರೇವಣ್ಣ, ಈ ಹಣ ದುರುಪಯೋಗವಾಗಿಲ್ಲ ಅಥವಾ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಸರ್ಕಾರಿ ಖಜಾನೆಯಿಂದಲೇ ಹಣ ಬಿಡುಗಡೆಯಾಗಿಲ್ಲ. ಡಿಬಿಟಿ ಮೂಲಕ ನೇರವಾಗಿ ಫಲಾನುಭವಿಯ ಖಾತೆಗೆ ಜಮೆಯಾಗುವುದರಿಂದ ಮಧ್ಯವರ್ತಿಗಳಿಗೆ ಜಾಗವಿಲ್ಲ. ರಾಜ್ಯದ 1.23 ಕೋಟಿ ಮಹಿಳೆಯರ ಪೈಕಿ ಅರ್ಹರಿಗೆ ಈ ಎರಡು ಕಂತುಗಳ ಬಾಕಿ ಹಣವನ್ನು ಶೀಘ್ರದಲ್ಲೇ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದರು.
ರಾಜ್ಯಾದ್ಯಂತ ನಡೆಸಿದ ಪರಿಶೀಲನೆಯಲ್ಲಿ ಮೃತಪಟ್ಟವರ ಖಾತೆಗಳಿಗೆ ಹಣ ಜಮೆಯಾಗಿರುವುದು ಪತ್ತೆಯಾಗಿದೆ. ರಾಜ್ಯ ಮಟ್ಟದಲ್ಲಿ ಮೃತರ ಖಾತೆಗಳಿಗೆ ಒಟ್ಟು 117 ಕೋಟಿ ರೂ. ಜಮೆಯಾಗಿದ್ದು, ಈಗಾಗಲೇ 30 ಕೋಟಿ ರೂ.ಗಳನ್ನು ಸರ್ಕಾರಕ್ಕೆ ವಾಪಸ್ ಪಡೆಯಲಾಗಿದೆ. ಉಳಿದ ಮೊತ್ತವನ್ನು ಬ್ಯಾಂಕ್ ಮತ್ತು ಅಂಚೆ ಕಚೇರಿಗಳಿಂದ ಮರುಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೃತರ ಖಾತೆಗಳಿಗೆ ಜಮೆಯಾಗಿದ್ದ 3.34 ಕೋಟಿ ರೂ. ಪೈಕಿ 1.43 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೃತಪಟ್ಟ ಮಹಿಳೆಯ ಕುಟುಂಬದಲ್ಲಿರುವ ಮತ್ತೊಬ್ಬ ಅರ್ಹ ಮಹಿಳಾ ಸದಸ್ಯರಿಗೆ ಯೋಜನೆಯ ಸೌಲಭ್ಯವನ್ನು ವರ್ಗಾಯಿಸಿಕೊಳ್ಳಲು ಸರ್ಕಾರ ಅವಕಾಶ ನೀಡಿದೆ ಎಂದರು.
ಗ್ಯಾರಂಟಿ ಯೋಜನೆಗಳ ಸಮಗ್ರ ಅಂಕಿ-ಅಂಶಗಳು: ರಾಜ್ಯದಲ್ಲಿ ಈವರೆಗೆ ಐದು ಗ್ಯಾರಂಟಿಗಳ ಮೂಲಕ ಡಿಬಿಟಿ ಮುಖಾಂತರ ಒಟ್ಟು 1,47,000 ಕೋಟಿ ರೂ.ಗಳನ್ನು ನೇರವಾಗಿ ಜನರಿಗೆ ತಲುಪಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿ ರಾಜ್ಯದಲ್ಲಿ 1.23 ಕೋಟಿ ಮಹಿಳೆಯರಿಗೆ 76,951 ಕೋಟಿ ರೂ. ಜಮೆಯಾಗಿದೆ. ಮಂಗಳೂರಿನಲ್ಲಿ 3.53 ಲಕ್ಷ ಫಲಾನುಭವಿಗಳಿಗೆ 2,230.65 ಕೋಟಿ ರೂ. ಸಂದಾಯವಾಗಿದೆ. ಗೃಹಜ್ಯೋತಿ ಯೋಜನೆಯಲ್ಲಿ ರಾಜ್ಯದಲ್ಲಿ 1.64 ಕೋಟಿ ಗ್ರಾಹಕರಿಗೆ 28,759.54 ಕೋಟಿ ರೂ. ಸಬ್ಸಿಡಿ ನೀಡಲಾಗಿದೆ. ವಾಣಿಜ್ಯ ಬಳಕೆಯ ಸಂಪರ್ಕಗಳನ್ನು ಪರಿಶೀಲಿಸಲು ಮರುಪರಿಶೀಲನೆ ನಡೆಯುತ್ತಿದೆ. ಯುವನಿಧಿ ಯೋಜನೆಯಲ್ಲಿ ರಾಜ್ಯದಲ್ಲಿ 3.99 ಲಕ್ಷ ಯುವಕರು ನೋಂದಾಯಿಸಿಕೊಂಡಿದ್ದು, 1,203 ಕೋಟಿ ರೂ. ವೆಚ್ಚವಾಗಿದೆ. ಮಂಗಳೂರಿನಲ್ಲಿ 7,542 ನಿರುದ್ಯೋಗಿ ಯುವಕರಿಗೆ 21.48 ಕೋಟಿ ರೂ. ನೀಡಲಾಗಿದೆ. ಶಕ್ತಿ ಯೋಜನೆಯಲ್ಲಿ ರಾಜ್ಯದಲ್ಲಿ ಮಹಿಳೆಯರು 807 ಕೋಟಿ ಉಚಿತ ಟ್ರಿಪ್‌ಗಳನ್ನು ಕೈಗೊಂಡಿದ್ದು, 21,233 ಕೋಟಿ ರೂ. ವೆಚ್ಚ ಭರಿಸಲಾಗಿದೆ. ಮಂಗಳೂರಿನಲ್ಲಿ 16.06 ಕೋಟಿ ಪ್ರಯಾಣಗಳು ನಡೆದಿದ್ದು, 554.13 ಕೋಟಿ ರೂ. ವೆಚ್ಚವಾಗಿದೆ ಎಂದರು.
ಅನ್ನಭಾಗ್ಯ ಬದಲಿಗೆ ಶೀಘ್ರವೇ ‘ಇಂದಿರಾ ಕಿಟ್’ ವಿತರಣೆ: ಅನ್ನಭಾಗ್ಯ ಯೋಜನೆಯಲ್ಲಿ ಕೇಂದ್ರ ಸರ್ಕಾರ ಅಕ್ಕಿ ನೀಡದ ಕಾರಣ 5 ಕೆಜಿ ಅಕ್ಕಿಯ ಬದಲಾಗಿ ಹಣ ನೀಡಲಾಗುತ್ತಿತ್ತು. ಆ ಬಳಿಕ 10 ಕೆಜಿ ಅಕ್ಕಿ ನೀಡಲಾಗುತ್ತಿದೆ. ಆದರೆ ಫಲಾನುಭವಿಗಳು ಕಾಳಸಂತೆಯಲ್ಲಿ ಅಕ್ಕಿ ಮಾರಾಟ ಮಾಡುವುದನ್ನು ತಡೆಯಲು ಹಾಗೂ ಪೌಷ್ಟಿಕ ಆಹಾರ ಒದಗಿಸಲು ಸರ್ಕಾರ ಶೀಘ್ರದಲ್ಲೇ ‘ಇಂದಿರಾ ಕಿಟ್’ ನೀಡಲಿದೆ. ಈ ಕಿಟ್‌ನಲ್ಲಿ ಸಕ್ಕರೆ, ಬೇಳೆ, ಎಣ್ಣೆ, ಉಪ್ಪು ಸೇರಿದಂತೆ ಅಗತ್ಯ ದಿನಸಿ ಪದಾರ್ಥಗಳಿರಲಿವೆ. ಪಾರದರ್ಶಕತೆ ಕಾಯ್ದುಕೊಳ್ಳಲು ರಾಜ್ಯ ಮಟ್ಟದ ಬದಲಿಗೆ ಜಿಲ್ಲಾವಾರು ಟೆಂಡರ್ ಪ್ರಕ್ರಿಯೆ ನಡೆಸಿ ಅರ್ಹರಿಗೆ ವಿತರಿಸಲಾಗುವುದು ಎಂದರು.
ಕರಾವಳಿಯಲ್ಲಿ ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್‌ಗಳು: ಶಕ್ತಿ ಯೋಜನೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಬಸ್‌ಗಳ ಕೊರತೆ ಉಂಟಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಕರಾವಳಿ ಭಾಗದಲ್ಲಿ ಖಾಸಗಿ ಬಸ್‌ಗಳ ಸಂಖ್ಯೆ ಹೆಚ್ಚಿದೆ. ಕೆಎಸ್‌ಆರ್‌ಟಿಸಿ ವತಿಯಿಂದ ಹೆಚ್ಚುವರಿ ಬಸ್‌ಗಳನ್ನು ಓಡಿಸಲು ಅಗತ್ಯ ಪರವಾನಗಿ ಪಡೆಯುವಂತೆ ಆರ್‌ಟಿಒ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶೀಘ್ರದಲ್ಲೇ ಮಂಗಳೂರು ಹಾಗೂ ಉಡುಪಿಗೆ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗುವುದು" ಎಂದರು.
ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಗೃಹ ಜ್ಯೋತಿ ಗ್ಯಾರಂಟಿ ಯೋಜನೆ: ಮನೆ ಮನೆ ಸಮೀಕ್ಷೆ ಅವಧಿ ಸೆ.30ರ ತನಕ ವಿಸ್ತರಿಸಿದ ಸರ್ಕಾರ

